ಸುಸಂಸ್ಕೃತ ಸಮಾಜ ನಿರ್ಮಾಣದ ಶಕ್ತಿ ಶರಣರ ತತ್ವದಲ್ಲಿದೆ

dvg-madivala-22-1.jpg
Published on

ದಾವಣಗೆರೆ: ಸುಸಂಸ್ಕೃತ ಸಮಾಜ ನಿರ್ಮಾಣದ ಶಕ್ತಿ ಶರಣರ ತತ್ವದಲ್ಲಿ ಅಡಗಿದೆ ಎಂದು ಚಿತ್ರದುರ್ಗದ ಮಾಚಿದೇವ ಮಹಾಮಠದ ಡಾ.ಶ್ರೀ ಬಸವ ಮಾಚಿದೇವ ಸ್ವಾಮೀಜಿ ಹೇಳಿದರು.
ಇಲ್ಲಿನ ವಿನೋಬ ನಗರದಲ್ಲಿರುವ ಶ್ರೀ ಮಡಿವಾಳ ಮಾಚಿದೇವ ಸಂಘದ ಶ್ರೀ ಮಾಚಿದೇವ ಸಮುದಾಯ ಭವನದಲ್ಲಿ ಸೋಮವಾರ ಶ್ರೀ ಮಡಿವಾಳ ಮಾಚಿದೇವರ ಶ್ರಾವಣ ಮಾಸದ ಸ್ಮರಣೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಸಾಮಾನ್ಯರಾಗಿದ್ದ ಶರಣರೇ ಎಲ್ಲ ಬದಲಾವಣೆ ತಂದರು. ಅಂದಿನ ಅವರ ಆದರ್ಶ ಮತ್ತು ತತ್ವಗಳೇ 800 ವರ್ಷ ಕಳೆದರೂ ಇಂದಿಗೂ ಪ್ರಸ್ತುತವಾಗಿವೆ. ಉಳ್ಳವರೇ ಜಗತ್ತನ್ನು ಆಳುತ್ತಾರೆ ಎನ್ನುವುದು ಸುಳ್ಳು. ವಿದ್ಯಾವಂತರು, ಪ್ರತಿಭಾವಂತರೇ ಜಗತ್ತನ್ನು ಆಳುತ್ತಾರೆ ಎಂದರು.
ಇಂದಿನ ಯುವ ಪೀಳಿಗೆಯಲ್ಲಿ ಸಂಸ್ಕಾರದ ಕೊರತೆ ಇದೆ. ದೇಶದೆಲ್ಲೆಡೆ ವೃದ್ಧಾಶ್ರಮಗಳು ಹೆಚ್ಚಾಗುತ್ತಿವೆ. ಶಿಕ್ಷಣ ಪಡೆದಂತೆ ನಾವು ಸಂಸ್ಕಾರವನ್ನು ಕಳೆದುಕೊಳ್ಳುತ್ತಿದ್ದೇವೆ. ಸಂಬಂಧಗಳ ಅರ್ಥವೇ ಗೊತ್ತಿಲ್ಲದಂತೆ ಇದ್ದೇವೆ ಎಂದು ವಿಷಾದಿಸಿದರು.
ಶೋಷಿತ ಮತ್ತು ತಳ ಸಮುದಾಯಗಳು ಸಿರಿವಂತಿಕೆಯೇ ಎಲ್ಲವೂ ಎನ್ನುವ ಹುಚ್ಚಿನಲ್ಲಿ ಅದರ ಬೆನ್ನತ್ತಿ ಹೋಗುತ್ತಿವೆ, ಜ್ಞಾನವನ್ನು ಮರೆಯುತ್ತಿದ್ದೇವೆ. ಆದರೆ ಮುಂದುವರಿದ ಸಮುದಾಯಗಳು ಜ್ಞಾನದ ಬೆನ್ನು ಹತ್ತಿರುವ ಕಾರಣ ಎಲ್ಲವೂ ಅವರಿಗೆ ಸಿಗುತ್ತದೆ ಎಂದು ಹೇಳಿದರು.
ಜ್ಞಾನದ ಸಿರಿವಂತಿಕೆ ಮುಂದೆ ಎಲ್ಲವೂ ಶೂನ್ಯ. ಬಾಹ್ಯವಾಗಿ ಕಾಣುವ ಸಂಪತ್ತಿನ ಬದಲು ಜ್ಞಾನದ ಬೆಳಕನ್ನು ಹಚ್ಚಿಕೊಂಡು ಆಂತರಿಕವಾಗಿ ಸಿರಿವಂತರಾಗಬೇಕಿದೆ ಎಂದು ಕರೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net