ಜಿಲ್ಲಾದ್ಯಂತ ಕೃಷ್ಣ ಜನ್ಮಾಷ್ಟಮಿ ಸಂಭ್ರಮ

dvg-iscon.jpg
Published on

ದಾವಣಗೆರೆ : ಅಂತಾರಾಷ್ಟ್ರೀಯ ಕೃಷ್ಣ ಭಾವನಾಮೃತ ಸಂಘದ (ಇಸ್ಕಾನ್) ವತಿಯಿಂದ ಇಲ್ಲಿನ ವಿನೋಬ ನಗರದ ಅರ್ಬನ್ ಬ್ಯಾಂಕ್ ಸಮುದಾಯ ಭವನದಲ್ಲಿ ಸೋಮವಾರ ಶ್ರೀಕೃಷ್ಣ ಜನ್ಮಾಷ್ಟಮಿ ಮಹೋತ್ಸವವನ್ನು ಭಕ್ತಿ, ಸಂಭ್ರಮದೊಂದಿಗೆ ಆಚರಿಸಲಾಯಿತು.  ಸಭಾಂಗಣದ ತುಂಬ ಕೃಷ್ಣ ನಾಮ ಸ್ಮರಣೆ ತುಂಬಿತ್ತು. ಸುಂದರವಾದ ವೇದಿಕೆಯಲ್ಲಿ ನವನೀತ ಚೋರನ ಚಿತ್ರಗಳಿದ್ದವು. ತೊಟ್ಟಿಲನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು.  ವಾದ್ಯಗಳ ಹಿನ್ನೆಲೆಯಲ್ಲಿ ‘ಹರೇ ಕೃಷ್ಣ, ಹರೇ ರಾಮ...’ ಎಂದು ಭಕ್ತರು ಭಗವಂತನ ನಾಮಸ್ಮರಣೆ ಮಾಡುತ್ತಿದ್ದರೆ ವೇದಿಕೆಯ ಮುಂಭಾಗದಲ್ಲಿ ಮಹಿಳೆಯರು ಸಂಗೀತದ ಲಯಕ್ಕೆ ತಕ್ಕಂತೆ ಹೆಜ್ಜೆ ಹಾಕಿದರು.  ನೀರು, ಎಳನೀರು, ಫಲ, ಪುಷ್ಪಗಳಿಂದ ಶ್ರೀ ರಾಧಾಕೃಷ್ಣ ಅಭಿಷೇಕ ಮಾಡಲಾಯಿತು. ನೆರೆದಿದ್ದ ಭಕ್ತರು ಆ ದೃಶ್ಯವನ್ನು ಕಣ್ತುಂಬಿಕೊಂಡರು. ಮಂಗಳಾರತಿ, ಸಂಕೀರ್ತನೆ, ಭಜನೆ ನಂತರ ನೃತ್ಯರೂಪಕಗಳನ್ನು ಪ್ರಸ್ತುತಪಡಿಸಲಾಯಿತು.  ಇಸ್ಕಾನ್ ಸಂಸ್ಥೆಯ ದಾವಣಗೆರೆ ಶಾಖೆಯ ಮುಖ್ಯಸ್ಥ ಅವಧೂತ ಚಂದ್ರದಾಸ್ ಮಹಾರಾಜ್, ಶ್ರೀಕೃಷ್ಣನ ಮಹಿಮೆ ಹಾಗೂ ಭಗವದ್ಗೀತೆಯ ಸಂದೇಶದ ಕುರಿತು ಪ್ರವಚನ ನೀಡಿದರು. ಕೃಷ್ಣನು ಪರಮ ಸತ್ಯನಾಗಿದ್ದು ಎಲ್ಲರೂ ಕೃಷ್ಣ ಪ್ರಜ್ಞೆಯನ್ನು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.  ಕೆ.ಬಿ. ಶಂಕರನರಾಯಣ, ಮಹಾನಗರ ಪಾಲಿಕೆ ವಿಪಕ್ಷ ನಾಯಕ ಪ್ರಸನ್ನ ಕುಮಾರ್, ಪಿ. ಸತ್ಯನಾರಾಯಣ ರೆಡ್ಡಿ, ಗೌರ ಹರಿದಾಸ್ ಇದ್ದರು. ಭಕ್ತರಿಗೆ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net