

ದಾವಣಗೆರೆ : ಶ್ರೀಮಂತಿಕೆ ಮತ್ತು ಅಧಿಕಾರವನ್ನು ಪೂಜಿಸುವ ಸಮಾಜದಲ್ಲಿ ನಾವಿದ್ದೇವೆ. ಈ ವ್ಯವಸ್ಥೆ ಬದಲಾಗಬೇಕಿದೆ ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಹೇಳಿದರು.
ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಶಾಖೆಯಿಂದ ಜಿಲ್ಲಾಡಳಿತ ಭವನದ ತುಂಗಭದ್ರಾ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ವಿಚಾರ ಸಂಕಿರಣ, ಕ್ಯಾಲೆಂಡರ್ ಬಿಡುಗಡೆ, ಪ್ರತಿಭಾ ಪುರಸ್ಕಾರ, 2021-22ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಮಹಾಸಭೆ ಸಮಾರಂಭದಲ್ಲಿ ಮಾತನಾಡಿದರು.
ಪ್ರಾಮಾಣಿಕರಿಗೆ ಇಲ್ಲಿ ಬೆಲೆ ಇಲ್ಲ. ಜೈಲಿಗೆ ಹೋಗಿ ಜಾಮೀನು ಪಡೆದು ಬಂದವರಿಗೆ ಸಲಾಂ ಹೊಡೆಯುವ ಸಮಾಜದಲ್ಲಿ ನಾವಿದ್ದೇವೆ. ಇದೇ ಪರಿಸ್ಥಿತಿ ಮುಂದುವರಿದರೆ ಶಾಂತಿ, ಸೌಹಾರ್ದ ಇಲ್ಲವಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ದೇಶದಲ್ಲಿ ದುರಾಸೆ ಹೆಚ್ಚಾಗಿದೆ. ಬೋಫೋರ್ಸ್, ಕಾಮನ್‌ವೆಲ್ತ್, 2ಜಿ, ಕಲ್ಲಿದ್ದಲು, ರಫೇಲ್ ಮುಂತಾದ ಹಗರಣಗಳ ಸರಮಾಲೆಯೇ ನಡೆದಿದೆ. ತೃಪ್ತಿಯೇ ದುರಾಸೆಗೆ ಮದ್ದು, ಇದ್ದುದರಲ್ಲೇ ಸಂತೋಷ ಹೊಂದಬೇಕು ಎಂದು ತಿಳಿಸಿದರು.
ಭ್ರಷ್ಟಾಚಾರ ಇಲ್ಲದ ಸಂಸ್ಥೆಯೇ ಇಲ್ಲ. ಈ ಹಿಂದಿನ ಸಮಾಜದಲ್ಲೂ ದುರಾಸೆ ಇತ್ತು, ಜತೆಗೆ ಪ್ರಾಮಾಣಿಕತೆಯೂ ಇತ್ತು. ಈಗ ಮೌಲ್ಯಗಳ ಪತನವಾಗಿದೆ ಎಂದು ವಿಷಾದಿಸಿದರು.
ಸರ್ಕಾರಿ ನೌಕರರು ಜನತಾ ಸೇವಕರು. ರಾಷ್ಟ್ರಪತಿಯಿಂದ ಹಿಡಿದು ಜವಾನನ ವರೆಗೆ ಎಲ್ಲವೂ ಸಾರ್ವಜನಿಕ ಸೇವೆಯಾಗಿದೆ. ಲಕ್ಷಾಂತರ ಜನರು ನಿಮ್ಮ ಮಟ್ಟಕ್ಕೂ ಬಾರದವರಿದ್ದಾರೆ. ಇದನ್ನು ಅರ್ಥ ಮಾಡಿಕೊಂಡು ಜವಾಬ್ದಾರಿ ನಿಭಾಯಿಸಬೇಕು ಎಂದು ಹೇಳಿದರು.
ಕಳೆದ 75 ವರ್ಷಗಳಲ್ಲಿ ನಮ್ಮ ದೇಶ ಬಹಳಷ್ಟು ಅಭಿವೃದ್ಧಿಯಾಗಿದೆ. ಆದರೆ ಸಂವಿಧಾನದ ಸಂಸ್ಥೆಗಳು ವಿಶ್ವಾಸ ಉಳಿಸಿಕೊಂಡಿವೆಯೆ ಎಂದು ಪ್ರಶ್ನಿಸಿದರು.
ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ಈ ಮೂರೂ ಸಂಸ್ಥೆಗಳಲ್ಲಿ ಬಹಳಷ್ಟು ಬದಲಾವಣೆಯಾಗಬೇಕಿದೆ ಎಂದು ಅಭಿಪ್ರಾಯಪಟ್ಟರು.
ಸಮಾರಂಭದಲ್ಲಿ 187 ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.
ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಎಂ.ಎಸ್. ಕೌಲಾಪೂರೆ, ಸಂಘದ ಪದಾಧಿಕಾರಿಗಳಾದ ಸಿ. ಗುರುಮೂರ್ತಿ, ಡಾ. ಎಸ್. ರಂಗನಾಥ್, ಬಿ. ಕುಮಾರ್, ಎಂ.ಕೆ. ಶಶಿಧರ, ಬಿ.ಆರ್. ತಿಪ್ಪೇಸ್ವಾಮಿ, ಡಾ.ಡಿ. ಉಮೇಶ್, ಜಿ.ಬಿ. ವಿಜಯ್ ಕುಮಾರ್, ಬಿ.ಆರ್. ಚಂದ್ರಪ್ಪ, ಎ.ಕೆ. ಭೂಮೇಶ್ ಇದ್ದರು.