ಹಿಂದು ಕಾರ್ಯಕರ್ತರ ರಕ್ಷಣೆಗೆ ಆಗ್ರಹ

IMG-20230110-WA0029.jpg
Published on

ದಾವಣಗೆರೆ : ರಾಜ್ಯದಲ್ಲಿ ಹಿಂದು ಕಾರ್ಯಕರ್ತರ ಮೇಲೆ ಪದೇ ಪದೇ ಹಲ್ಲೆಗಳಾಗುತ್ತಿದ್ದು ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರಕ್ಷಣೆ ನೀಡಬೇಕು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಜೆ. ಅರುಣ್ ಕುಮಾರ್ ಆಗ್ರಹಿಸಿದರು.
ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹೊರಗೆ ಹೋದವರು ಮನೆಗೆ ವಾಪಸ್ ಬರುತ್ತಾರೋ ಇಲ್ಲವೋ ಎನ್ನುವ ಭಯದ ವಾತಾವರಣ ಸೃಷ್ಟಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಬೆಳಗಾವಿಯಲ್ಲಿ ಶ್ರೀರಾಮಸೇನೆ ಮತ್ತು ಹಿಂದೂ ರಾಷ್ಟ್ರಸೇನೆಯ ಜಿಲ್ಲಾಧ್ಯಕ್ಷ ರವಿ ಅವರ ಮೇಲೆ ನಡೆದ ಗುಂಡಿನ ದಾಳಿಯ ಬಗ್ಗೆ ಪ್ರಸ್ತಾಪಿಸಿ, ಈ ಘಟನೆ ನಡೆದ ನಂತರ ಅವರ ಚಿಕಿತ್ಸೆಯ ವೆಚ್ಚವನ್ನು ರಾಜ್ಯ ಸರ್ಕಾರವೇ ಭರಿಸುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉಡಾಫೆಯ ಹೇಳಿಕೆ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಇತ್ತೀಚೆಗೆ ಬಜರಂಗ ದಳದ ಕಾರ್ಯಕರ್ತನ ಮೇಲೆ, ಸಾಗರದಲ್ಲಿ ಹಿಂದು ಕಾರ್ಯಕರ್ತನ ಮೇಲೆ ನಡೆದ ಹಲ್ಲೆ ನಡೆದಿದೆ. ಈ ಹಿಂದೆಯೂ ಶಿವಮೊಗ್ಗ, ಮಂಗಳೂರು, ಮಡಿಕೇರಿ, ಬೆಳಗಾವಿ ಇನ್ನೂ ಅನೇಕ ಕಡೆಗಳಲ್ಲಿ ಪದೇ ಪದೇ ದಾಳಿಗಳಾಗುತ್ತಿದ್ದು ಆರೋಪಿಗಳ ವಿರುದ್ಧ ಕಠುಣ ಕ್ರಮ ತೆಗೆದುಕೊಂಡಿಲ್ಲ ಎಂದು ಹೇಳಿದರು.
ಹಿಂದು ಕಾರ್ಯಕರ್ತರ ತ್ಯಾಗ, ಬಲಿದಾನದಿಂದಲೇ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಿದೆ ಎಂಬುದನ್ನು ಮರೆಯಬಾರದು ಎಂದರು. ಘಟನೆ ನಡೆದ ಸ್ವಲ್ಪ ಸಮಯದಲ್ಲೇ ಸರ್ಕಾರ ಆರೋಪಿಗಳನ್ನು ಬಂಧಿಸಿರುವುದು ಪ್ರಶಂಸನೀಯ. ಆದರೆ ಅವರ ಮೇಲೆ ಕಾನೂನು ಕ್ರಮ ಜರುಗಿಸಿ ತಕ್ಕ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಮುಂದಿನ ದಿನಗಳಲ್ಲಿ ಇದೇ ರೀತಿ ಹಲ್ಲೆಗಳು ಮುಂದುವರಿದರೆ ಉಗ್ರ ಹೋರಾಟ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸಂಘಟನೆಯ ಮುಖಂಡರಾದ ಎಸ್. ಪ್ರಕಾಶ್, ಎಸ್. ಅರುಣ್ ಕುಮಾರ್, ನವೀನ್ ಕುಮಾರ್, ದರ್ಶನ್, ವಿಜಯ್ ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net