

ದಾವಣಗೆರೆ : ಇಂಜಿನಿಯರಿಂಗ್ ವಿದ್ಯಾರ್ಥಿಗಳು ತಮ್ಮ ಜ್ಞಾನದಿಂದ ಕೃಷಿಯ ಸಮಸ್ಯೆಗಳನ್ನು ಬಗೆಹರಿಸಲು ಆದ್ಯತೆ ನೀಡಬೇಕು ಎಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಡಾ.ಬಿ.ಇ. ರಂಗಸ್ವಾಮಿ ಹೇಳಿದರು.
ನಗರದ ಗುಂಡಿ ಮಹಾದೇವಪ್ಪ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಲಾಗಿದ್ದ ಜೈನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ಪದವಿ ದಿನಾಚರಣೆಯಲ್ಲಿ ಮಾತನಾಡಿದರು.
ದೇಶದಲ್ಲಿ ಕೃಷಿಯೇ ಪ್ರಧಾನವಾಗಿದೆ. ಕೃಷಿ ತಂತ್ರಜ್ಞಾನ ಸ್ಥಳೀಯರಿಗೆ ಅನುಕೂಲವಾಗುವ ರೀತಿಯಲ್ಲಿ ವಿದ್ಯಾರ್ಥಿಗಳು ನೆರವಾಗಬೇಕು ಎಂದು ಕರೆ ನೀಡಿದರು.
ಜಾಗತಿಕ ಆವಿಷ್ಕಾರ ಸೂಚ್ಯಂಕದಲ್ಲಿ ಭಾರತ 2013ರಲ್ಲಿ 86ನೇ ಸ್ಥಾನದಲ್ಲಿತ್ತು. 2022ರಲ್ಲಿ 40ನೇ ಸ್ಥಾನಕ್ಕೆ ಬಂದಿದೆ. 2023ರ ಸೂಚ್ಯಂಕದಲ್ಲಿ 35ನೇ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ. 2047ರ ವೇಳೆಗೆ ಅನ್ವೇಷಣೆಯಲ್ಲಿ ಮೊದಲ ಹತ್ತು ಸ್ಥಾನಗಳಲ್ಲಿ ಬರುವಂತಾಗಬೇಕು ಎಂದು ಆಶಿಸಿದರು.
ಕರ್ನಾಟಕ ಆವಿಷ್ಕಾರದಲ್ಲಿ ಭಾರತದಲ್ಲೇ ಮೊದಲ ಸ್ಥಾನದಲ್ಲಿದೆ. ಕಳೆದ ಮೂರು ವರ್ಷಗಳಿಂದ ಈ ಸ್ಥಾನ ಉಳಿಸಿಕೊಂಡಿದೆ. ನವೋದ್ಯಮಗಳಿಂದಾಗಿ ಆವಿಷ್ಕಾರಕ್ಕೆ ಹೆಚ್ಚಿನ ಒತ್ತು ಸಿಗುತ್ತಿದೆ ಎಂದು ಹೇಳಿದರು.
ಭಾರತಕ್ಕೆ ಸ್ವಾತಂತ್ರ್ಯ ದೊರೆತು 2047ಕ್ಕೆ 100 ವರ್ಷಗಳು ತುಂಬಲಿದ್ದು, ಆ ವೇಳೆಗೆ ಭಾರತ ಬೌದ್ಧಿಕ ಹಕ್ಕಿನ ಸೂಪರ್ ಪವರ್ ಆಗಿರಬೇಕು ಎಂದು ಅಭಿಪ್ರಾಯಪಟ್ಟರು.
ಭಾರತ ಆರ್ಥಿಕ ಇಲ್ಲವೇ ಸೈನಿಕ ಶಕ್ತಿಯಾಗುವುದು ಬೇಡ, ಬೌದ್ಧಿಕ ಹಾಗೂ ಮಾನವ ಶಕ್ತಿಯಲ್ಲಿ ಬಲಿಷ್ಠವಾಗಬೇಕು. ಮಾನವ ಶಕ್ತಿಯಿಂದ ದೇಶ ನಿರ್ಮಾಣ ಸಾಧ್ಯ ಎಂದು ತಿಳಿಸಿದರು.
ಜ್ಞಾನ ಶಕ್ತಿಯಿಂದಾಗಿ ಕರೊನಾ ಪರಿಸ್ಥಿತಿ ಎದುರಿಸಲು ಭಾರತಕ್ಕೆ ಸಾಧ್ಯವಾಯಿತು. ಜ್ಞಾನದ ಬಲದಿಂದಲೇ ಬಲಿಷ್ಠವಾಗಿರುವ ಕಾರಣ ಭಾರತದ ಮೇಲೆ ಯಾರೂ ಸಮರ ಸಾರುತ್ತಿಲ್ಲ ಎಂದು ಹೇಳಿದರು.
ನೂತನ ಶಿಕ್ಷಣ ನೀತಿಯಿಂದಾಗಿ ಅಧ್ಯಯನದ ವಿವಿಧ ಶಾಖೆಗಳ ನಡುವಿನ ಗೋಡೆಗಳು ಕುಸಿದಿವೆ. ಒಂದು ಶಾಖೆಯ ಪದವೀಧರರು ಇನ್ನೊಂದು ಶಾಖೆಯ ವಿಷಯದ ಬಗ್ಗೆ ಅಧ್ಯಯನ ಮಾಡಬಹುದು. ಇದು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ಹೊಸ ಬಾಗಿಲು ತೆರೆದಿದೆ ಎಂದು ತಿಳಿಸಿದರು.