

ದಾವಣಗೆರೆ : ಬೆಳಗಾವಿಯಿಂದ ಆರಂಭವಾಗಿರುವ ಕಾಂಗ್ರೆಸ್‌ನ ಪ್ರಜಾಧ್ವನಿ ಬಸ್ ಯಾತ್ರೆಯು ಜ. 19ರಂದು ಸಂಜೆ 4 ಗಂಟೆಗೆ ನಗರಕ್ಕೆ ಆಗಮಿಸಲಿದ್ದು ಸಮಾವೇಶ ನಡೆಯಲಿದೆ ಎಂದು ವಿಧಾನ ಪರಿಷತ್‌ನ ಪ್ರತಿಪಕ್ಷದ ಮುಖ್ಯ ಸಚೇತಕ ಪ್ರಕಾಶ್ ರಾಥೋಡ್ ಹೇಳಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ವಿಧಾನಸಭೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲ ಸೇರಿ ನಾಯಕರ ಡಂಡೇ ಆಗಮಿಸಲಿದೆ ಎಂದು ತಿಳಿಸಿದರು.
ಬೆಳಗಾವಿಯ ವೀರಸೌಧದಲ್ಲಿ ಈ ಯಾತ್ರೆ ಆರಂಭವಾಯಿತು. ಬೆಳಗಾವಿ ಹಾಗೂ ಚಿಕ್ಕೋಡಿಯಲ್ಲಿ ಯಶಸ್ಸು ಕಂಡಿದ್ದು, ದಾವಣಗೆರೆಯಲ್ಲೂ ಬೃಹತ್ ಮಟ್ಟದಲ್ಲಿ ಹಮ್ಮಿಕೊಳ್ಳಲಾಗುವುದು ಎಂದರು.
ಯಾತ್ರೆಯು ಜ. 17ರಂದು ಹೊಸಪೇಟೆ ಮತ್ತು ಕೊಪ್ಪಳ, 18ರಂದು ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ತೆರಳಿ, 19ರಂದು ಬೆಳಗ್ಗೆ ಹಾವೇರಿಗೆ ಆಗಮಿಸಲಿದೆ. ಅಲ್ಲಿಂದ ಹೊರಟು ಸಂಜೆ 4ಕ್ಕೆ ದಾವಣಗೆರೆ ತಲುಪಲಿದೆ ಎಂದು ಹೇಳಿದರು.
ನಗರದಲ್ಲಿ ಕಾರ್ಯಕ್ರಮ ನಡೆಯುವ ಸ್ಥಳದ ಬಗ್ಗೆ ಒಂದೆರಡು ದಿನಗಳಲ್ಲಿ ಮಾಹಿತಿ ನೀಡಲಾಗುವುದು. ನಗರದಲ್ಲಿ ಪಕ್ಷದ ವತಿಯಿಂದ ಈ ಹಿಂದೆ ಆಯೋಜಿಸಿದ್ದ ಪ್ರತಿಯೊಂದು ಕಾರ್ಯಕ್ರಮವೂ ಯಶಸ್ವಿಯಾಗಿವೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ 75ನೇ ವರ್ಷದ ಜನ್ಮ ದಿನಾಚರಣೆಗೆ ಜನಸಾಗರವೇ ಹರಿದು ಬಂದಿತ್ತು ಎಂದು ಸ್ಮರಿಸಿದರು.
ಜಿಲ್ಲೆಯಲ್ಲಿ ಪಕ್ಷದ 42 ಆಕಾಂಕ್ಷಿಗಳಿದ್ದು, ಕನಿಷ್ಠ 10 ಸಾವಿರ ಜನರನ್ನು ಸಮಾವೇಶಕ್ಕೆ ಕರೆದುಕೊಂಡು ಬರುವಂತೆ ಸೂಚಿಸಲಾಗಿದೆ. ನಗರದಿಂದ 25 ಸಾವಿರಕ್ಕೂ ಹೆಚ್ಚು ಮಂದಿ ಬರಬೇಕು ಎಂದು ಹೇಳಿದರು.