ಸಾಧನೆಯ ಬಲದಿಂದ ಅಧಿಕಾರಕ್ಕೆ ಬರುವ ಸಂಕಲ್ಪ

dvg-bjp-samavesha-06-1.jpg
Published on

ದಾವಣಗೆರೆ : ಡಬಲ್ ಇಂಜಿನ್ ಸರ್ಕಾರ ರೈತರ ಬದುಕಿಗೆ ಭದ್ರತೆ ಒದಗಿಸುವ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈ ಸಾಧನೆಯ ರಿಪೋರ್ಟ್ ಕಾರ್ಡನ್ನು ಮನೆ ಮನೆಗೆ ತಲುಪಿಸಿ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರವನ್ನು ತರಲು, ನಗರದಲ್ಲಿ ಗುರುವಾರ ನಡೆದ ಪಕ್ಷದ ರೈತ ಸಮಾವೇಶದಲ್ಲಿ ಸಂಕಲ್ಪ ಮಾಡಲಾಯಿತು.
 ಹದಡಿ ರಸ್ತೆಯ ಮಾಗನೂರು ಬಸಪ್ಪ ಮೈದಾನದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಮಾತನಾಡಿದ ಪಕ್ಷದ ಮುಖಂಡರು ಕೇಂದ್ರ, ರಾಜ್ಯ ಸರ್ಕಾರಗಳ ರೈತಪರ ಯೋಜನೆಗಳ ಬಗ್ಗೆ ಪ್ರಸ್ತಾಪಿಸಿ, ಅವುಗಳ ಬಲದಿಂದಲೇ ಮತದಾರರ ಮನಸ್ಸನ್ನು ಗೆಲ್ಲಬೇಕು ಎಂದರು.
 ರಾಜ್ಯ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ, ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ದೇಶದಲ್ಲಿ ರೈತರೆಂದರೆ ಮೂಗು ಮುರಿಯುವ ಪರಿಸ್ಥಿತಿ ಇದೆ. ದೇಶದ ಜನಸಂಖ್ಯೆಯ ಅರ್ಧದಷ್ಟಿರುವ ಕೃಷಿಕರ ಬಾಳನ್ನು ಹಸನು ಮಾಡಲು ಡಬಲ್ ಇಂಜಿನ್ ಸರ್ಕಾರ ಹೆಜ್ಜೆ ಇಟ್ಟಿದೆ ಎಂದು ಹೇಳಿದರು.
 ರೈತರ ಆದಾಯ ದ್ವಿಗುಣ ಮಾಡುವ ಗುರಿಯನ್ನು ಕೇಂದ್ರ ಸರ್ಕಾರ ಹೊಂದಿದ್ದು ಆ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದೆ. ಕೃಷಿ ಕ್ಷೇತ್ರವನ್ನು ಆತ್ಮನಿರ್ಭರವಾಗಿಸುವ ನಿಟ್ಟಿನಲ್ಲಿ ಸಾಗಿದೆ. ಕಿಸಾನ್ ಸಮ್ಮಾನ್, ಯೂರಿಯಾ ಸಬ್ಸಿಡಿ, ನ್ಯಾನೋ ಯೂರಿಯಾ, ಮಣ್ಣಿನ ಆರೋಗ್ಯ ಕಾರ್ಡ್ ವಿತರಣೆ, ಕೃಷಿ ಸಿಂಚಾಯಿ, ಕಿಸಾನ್ ಮಾನ್ ಧನ್ ಮುಂತಾದ ಯೋಜನೆಗಳನ್ನು ನೀಡಿದೆ ಎಂದರು.
 ದಾವಣಗೆರೆಯಲ್ಲಿ ಪ್ರತಿಪಕ್ಷದವರು ಮತದಾರರಿಗೆ ಕುಕ್ಕರ್, ಸೀರೆಗಳನ್ನು ಹಂಚುತ್ತಿದ್ದಾರೆ ಎಂಬ ವಿಚಾರವನ್ನು ಪ್ರಸ್ತಾಪಿಸಿದ ಅವರು, ‘ಗಂಡಸರು ಲಿಕ್ಕರ್, ಹೆಂಗಸರು ಕುಕ್ಕರ್‌ನ ಆಮಿಷಕ್ಕೆ ಒಳಗಾಗಿ ಅಯೋಗ್ಯರಿಗೆ ಮತ ಹಾಕಿದರೆ ಮುಂದೊಂದು ದಿನ ನಮ್ಮ ಮಕ್ಕಳಿಗೆ ನಿಕ್ಕರ್‌ಗೂ ಗತಿ ಇಲ್ಲದಂತಾಗಬಹುದು’ ಎಂದು ಲೇವಡಿ ಮಾಡಿದರು.
 ಶಾಸಕ ಎಸ್.ಎ. ರವೀಂದ್ರನಾಥ್ ಮಾತನಾಡಿ, ಈ ಹಿಂದೆ ಬಿಜೆಪಿಯ ಕಾರ್ಯಕ್ರಮಗಳಾದರೆ ಕಡಿಮೆ ಸಂಖ್ಯೆಯಲ್ಲಿ ಜನರು ಸೇರುತ್ತಿದ್ದರು. ಒಂದೆರಡು ಸಮುದಾಯಗಳ ಪಕ್ಷ ಎನ್ನುವ ಮಾತಿತ್ತು. ಆದರೆ ಬಿ.ಎಸ್. ಯಡಿಯೂರಪ್ಪ ಅವರ ರೈತಪರ ಹೋರಾಟದಿಂದ ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬರುವಂತಾಯಿತು ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net