ಹೊಸ ಇತಿಹಾಸ ಬರೆಯಲಿದೆ ದಾವಣಗೆರೆ ಸಮಾವೇಶ

dvg-maha-sangama-18-1.jpg
Published on

ದಾವಣಗೆರೆ : ಮಾ. 25ರಂದು ದಾವಣಗೆರೆಯಲ್ಲಿ ನಡೆಯಲಿರುವ ವಿಜಯ ಸಂಕಲ್ಪ ಯಾತ್ರೆಯ ಮಹಾ ಸಂಗಮವು ಹೊಸ ಇತಿಹಾಸ ಬರೆಯಲಿದೆ ಎಂದು, ಬಿಜೆಪಿಯ ವಿಧಾನಸಭಾ ಚುನಾವಣೆಯ ಪ್ರಭಾರಿ, ಕೇಂದ್ರದ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದರು.
 ಮಹಾ ಸಂಗಮ ಸಮಾವೇಶ ನಡೆಯಲಿರುವ ನಗರದ ಜಿಎಂಐಟಿ ಕಾಲೇಜು ಪಕ್ಕದ ಮೈದಾನಕ್ಕೆ ಶನಿವಾರ ಭೇಟಿ ನೀಡಿದ ನಂತರ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡಿ, ಈ ಸಮಾವೇಶವು ರಾಜ್ಯದ, ಭಾರತದ ಪ್ರಗತಿಯ ಮೇಳವಾಗಲಿದೆ ಎಂದರು.
 ಪ್ರಧಾನಿ ಮೋದಿ ಅವರ ಬಗ್ಗೆ ವಿಶ್ವದಾದ್ಯಂತ ಭರವಸೆ ಮೂಡಿದೆ. ಜಗತ್ತಿನ ಸಮಸ್ಯೆಗಳಿಗೆ ಮೋದಿ ಅವರ ಬಳಿ ಉತ್ತರವಿದೆ ಎಂದು ಇಟಲಿಯ ಪ್ರಧಾನಿ ನೀಡಿರುವ ಹೇಳಿಕೆ ಇದಕ್ಕೆ ಸಾಕ್ಷಿಯಾಗಿದೆ ಎಂದು ಹೇಳಿದರು.
 ಅದೇ ಭರವಸೆಯ ಆಧಾರದ ಮೇಲೆ ರಾಜ್ಯದಲ್ಲಿ ಹಿಂದೆಂದಿಗಿಂತ ಹೆಚ್ಚು ಜನರು ಬಿಜೆಪಿಗೆ ಆಶೀರ್ವಾದ ಮಾಡಲಿದ್ದು ಡಬಲ್ ಇಂಜಿನ್ ಸರ್ಕಾರ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
 ಕೇಂದ್ರ, ರಾಜ್ಯ ಸರ್ಕಾರಗಳ ಸಾಧನೆಯನ್ನು ಜನರಿಗೆ ತಿಳಿಸುವ ಕೆಲಸವನ್ನು ಕಾರ್ಯಕರ್ತರು ಮಾಡಬೇಕು. ಮಾ. 25ರ ಸಮಾವೇಶಕ್ಕೆ ದಾವಣಗೆರೆ ಮತ್ತು ಹರಿಹರದ ಪ್ರತಿ ಮನೆಯಿಂದ ಕನಿಷ್ಠ ಇಬ್ಬರನ್ನಾದರೂ ಕರೆ ತರಬೇಕು ಎಂದು ಸೂಚಿಸಿದರು.
 ಯುವ ಮೊರ್ಚಾ ಕಾರ್ಯಕರ್ತರು ಬೆಳಗ್ಗೆ ಪ್ರಭಾತ್‌ಫೇರಿ ನಡೆಸಬೇಕು. ಸಂಜೆ ಬೈಕ್‌ಗಳಲ್ಲಿ ತೆರಳಿ ತಿಂಡಿ ಅಂಗಡಿ, ಚಹಾ ಅಂಗಡಿ, ಬೀದಿ ವ್ಯಾಪಾರಸ್ಥರು ಸೇರಿ ಜನಸಾಮಾನ್ಯರನ್ನು ಸಮಾವೇಶಕ್ಕೆ ಬರುವಂತೆ ಆಹ್ವಾನಿಸಿ ಎಂದು ಹೇಳಿದರು.
 ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಮಾತನಾಡಿ, ದಾವಣಗೆರೆಯಲ್ಲಿ ನಡೆಯಲಿರುವ ಸಮಾವೇಶ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಲಿದ್ದು, ಚುನಾವಣೆಯಲ್ಲಿ 150 ಸೀಟುಗಳನ್ನು ಗೆಲ್ಲಲು ಬಿಜೆಪಿಗೆ ಶಕ್ತಿ ತುಂಬಲಿದೆ ಎಂದು ತಿಳಿಸಿದರು.
 ಬಿಜೆಪಿ ನಡೆಸಿದ ಬೂತ್ ವಿಜಯ ಅಭಿಯಾನ, ವಿಜಯ ಸಂಕಲ್ಪ ಅಭಿಯಾನಗಳು ಯಶಸ್ವಿಯಾಗಿವೆ. 4 ರಥಯಾತ್ರೆಗಳಿಗೆ ಜನರ ಪ್ರತಿಕ್ರಿಯೆ ಅದ್ಭುತವಾಗಿದೆ. ಇದನ್ನು ನೋಡಿ ಕಾಂಗ್ರೆಸ್‌ಗೆ ದಿಕ್ಕು ತೋಚದಂತಾಗಿದೆ ಎಂದು ಹೇಳಿದರು.
 ರಾಜ್ಯದ ಇತಿಹಾಸದಲ್ಲಿ ಅತಿದೊಡ್ಡ ಸಮಾವೇಶ ದಾವಣಗೆರೆಯಲ್ಲಿ ನಡೆಯಲಿದ್ದು ಇದರ ಯಶಸ್ಸಿಗೆ ಕಾರ್ಯಕರ್ತರು ಹಗಲಿರುಳು ಶ್ರಮಿಸಬೇಕು, ಅಗತ್ಯ ವ್ಯವಸ್ಥೆ ಮಾಡಬೇಕು ಎಂದು ಸೂಚನೆ ನೀಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net