ಜನರ ಸಮಸ್ಯೆ ಆಲಿಸಿದ ಜಿಲ್ಲಾ ಪಂಚಾಯಿತಿ ಸಿಇಒ Campaign

ಜಗಳೂರು ಪಲ್ಲಾಗಟ್ಟೆ ಗ್ರಾಮದ ಜೆಜೆಎಂ ಯೋಜನೆ ಓವರ್‌ಹೆಡ್ ಟ್ಯಾಂಕ್ ಪರಿಶೀಲಿಸಿದ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ಜೆಜೆಎಂ ಎಇಇ ಸೋಮ್ಲಾನಾಯ್ಕ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್‌ವುಲ್ಲಾ, ಎಇ ಮರಿಯಪ್ಪ, ಮಹಾಂತೇಶ್, ಸಚಿನ್ ಇದ್ದರು. Campaign
ಜಗಳೂರು ಪಲ್ಲಾಗಟ್ಟೆ ಗ್ರಾಮದ ಜೆಜೆಎಂ ಯೋಜನೆ ಓವರ್‌ಹೆಡ್ ಟ್ಯಾಂಕ್ ಪರಿಶೀಲಿಸಿದ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್, ಜೆಜೆಎಂ ಎಇಇ ಸೋಮ್ಲಾನಾಯ್ಕ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾಧಿಕ್‌ವುಲ್ಲಾ, ಎಇ ಮರಿಯಪ್ಪ, ಮಹಾಂತೇಶ್, ಸಚಿನ್ ಇದ್ದರು. Campaign
Published on

ಪ್ರಮುಖ ಮುಖ್ಯಾಂಶಗಳು

  • ಬೆಳೆಗಿನ ನಡೆ ಹಳ್ಳಿ ಕಡೆ ಅಭಿಯಾನ
  • ಅಸಗೋಡು, ಪಲ್ಲಾಗಟ್ಟೆ ಗ್ರಾಪಂಗೆ ಭೇಟಿ
  • ಜೆಜೆಎಂ ಯೋಜನೆ ಕಾಮಗಾರಿ ಪರಿಶೀಲನೆ
ಜಗಳೂರು: ತಾಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ದಾವಣಗೆರೆ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್‌ರಾವ್ ಬೆಳಗಿನ ನಡೆ ಹಳ್ಳಿಯ ಕಡೆ ಎಂಬ ವಿನೂತನ ಅಭಿಯಾನದ ಮೂಲಕ ಮಂಗಳವಾರ ಜನರ ಸಮಸ್ಯೆ ಆಲಿಸಿದರು.
ಜನರ ಸಮಸ್ಯೆ ಆಲಿಸಿ ಸ್ಥಳದಲ್ಲಿಯೇ ಪರಿಹಾರ ಒದಗಿಸಲು ಹಾಗೂ ಸರ್ಕಾರಿ ಆಸ್ಪತ್ರೆ, ಶಾಲಾ -ಕಾಲೇಜು, ಅಂಗನವಾಡಿ ಕೇಂದ್ರಗಳ ಪರಿಸ್ಥಿತಿಯನ್ನು ಅವಲೋಕಿಸಲು ದಾವಣಗೆರೆಯಿಂದ ಬೆಳಗ್ಗೆ 6 ಗಂಟೆಗೆ ಅಧಿಕಾರಿಗಳ ತಂಡದೊಂದಿಗೆ ಹೊರಟರು. ಹಾಲೇಕಲ್ಲು ಗ್ರಾಮದಲ್ಲಿ ಜಲಜೀವನ್ ಮಿಷನ್ ಯೋಜನೆಯ ಕಾಮಗಾರಿ ಪರಿಶೀಲಿಸಿದರು. ನಂತರ ಬಿಳಿಚೋಡು, ಅಸಗೋಡು, ಪಲ್ಲಾಗಟ್ಟೆ ಗ್ರಾಪಂಗೆ ಭೇಟಿ ನೀಡಿದರು.
ಪಲ್ಲಾಗಟ್ಟೆ ಗ್ರಾಮದ ಜೆಜೆಎಂ ಯೋಜನೆಯ ಓವರ್‌ಹೆಡ್ ಟ್ಯಾಂಕ್ ಪರಿಶೀಲಿಸಿದರು. ಈ ವೇಳೆ ಗ್ರಾಮಸ್ಥ ನಾಗರಾಜ್ ಜೆಜೆಎಂ ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಎರಡ್ಮೂರು ವರ್ಷಗಳಾದರೂ ರಸ್ತೆಯಲ್ಲಿ ತೆಗೆದ ಗುಂಡಿ ಮುಚ್ಚಿಲ್ಲ, ನಳಗಳಿಗೆ ಸಂಪರ್ಕ ಕಲ್ಪಿಸಿಲ್ಲ. ಅಧಿಕಾರಿಗಳು ಸುಳ್ಳು ಹೇಳುತ್ತ ಜನರಿಗೆ, ಮೇಲಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿದ್ದಾರೆ ಎಂದು ದೂರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಕೂಡಲೇ ಕಾಮಗಾರಿ ಪೂರ್ಣಗೊಳಿಸಿ ನೀರು ಪೂರೈಸದಿದ್ದರೆ ಗುತ್ತಿಗೆದಾರನ ವಿರುದ್ಧ ಕ್ರಮ ಕೈಗೊಳ್ಳುವಂತೆ ಎಇಇಗೆ ತಾಕೀತು ಮಾಡಿದರು.
ಸರ್ಕಾರಿ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು. ಔಷಧ ಕೊಠಡಿಯಲ್ಲಿ ಕೊರತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಆಗ ವೈದ್ಯರು ಹಾವಿನ ಚುಚ್ಚು ಮದ್ದು, ನಾಯಿ ಚುಚ್ಚು ಮದ್ದು ಪೂರೈಕೆಯಲ್ಲಿ ವಿಳಂಬವಾಗುತ್ತಿದೆ. ಇದರಿಂದ ಜನರಿಗೆ ತೊಂದರೆಯಾಗುತ್ತಿದೆ ಎಂದು ಗಮನಕ್ಕೆ ತಂದರು.
ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಪಿಯು ಕಾಲೇಜುಗಳಿಗೆ ಮತ್ತು ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿ, ವಿದ್ಯಾರ್ಥಿಗಳ ಜತೆ ಕೆಲ ಸಮಯ ಕಳೆದರು.
ನಂತರ ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲರಾವ್ ಮಾತನಾಡಿ, ದಾವಣಗೆರೆ ಜಿಲ್ಲೆಯ ಪ್ರತಿ ಗ್ರಾಪಂ ಮತ್ತು ಸಂಬಂಧಿಸಿದ ಹಳ್ಳಿಗಳಿಗೆ ಹೋಗಿ ಜನರ ಸಮಸ್ಯೆ ಆಲಿಸಲಾಗುವುದು. ಬೆಳಗ್ಗೆ 6 ಗಂಟೆಗೆ ಅಭಿಯಾನ ಶುರು ಮಾಡುವುದರಿಂದ ಹಳ್ಳಿಗಳಲ್ಲಿ ಎಲ್ಲ ವರ್ಗದ ಜನರು ಸಿಗುತ್ತಾರೆ. ಪ್ರತಿ ದಿನ ಮೂರ‌್ನಾಲ್ಕು ಗ್ರಾಪಂಗಳಿಗೆ ಭೇಟಿ ನೀಡಲಾಗುತ್ತದೆ ಎಂದರು.
ನಮ್ಮ ಜತೆ ವಿವಿಧ ಅಧಿಕಾರಿಗಳನ್ನು ಕರೆದುಕೊಂಡು ಹೋಗುವುದರಿಂದ ಸ್ಥಳದಲ್ಲಿಯೇ ಸಮಸ್ಯೆಗಳಿಗೆ ಪರಿಹಾರ ನೀಡಲು ಸಾಧ್ಯವಾಗುತ್ತದೆ ಎಂದು ತಿಳಿಸಿದರು.
ಅಸಗೋಡಿನಲ್ಲಿ ಗ್ರಾಪಂಗೆ ಸ್ವಂತ ಕಟ್ಟಡವಿಲ್ಲದೆ ಸಮುದಾಯ ಭವನದಲ್ಲಿ ಆಡಳಿತ ನಡೆಯುತ್ತಿದೆ. ಬಿಳಿಚೋಡು ಗ್ರಾಮದ ಪಶು ಆಸ್ಪತ್ರೆಯಲ್ಲಿ ಔಷಧ ಸಿಗುವುದಿಲ್ಲ ಎಂದು ಗ್ರಾಮಸ್ಥರು ದೂರಿದಾಗ ಕೂಡಲೇ ಸಂಬಂಧಿಸಿದ ಡಿಡಿಗೆ ಕರೆ ಮಾಡಿ ಔಷಧ ಪೂರೈಕೆಗೆ ಸೂಚಿಸಿದರು.
ಜೆಜೆಎಂ ಎಇಇ ಸೋಮ್ಲಾನಾಯ್ಕ, ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಎಇಇ ಸಾದಿಕ್‌ವುಲ್ಲಾ, ಎಇ ಮರಿಯಪ್ಪ, ಮಹಾಂತೇಶ್, ಸಚಿನ್, ಮಂಜುನಾಥ್‌ನಾಯ್ಕ, ಪಿಡಿಒ ರಾಘವೇಂದ್ರಪ್ಪ, ಮುಖಂಡ ಗೋಡೆ ಪ್ರಕಾಶ್, ಹನುಮಂತಪ್ಪ ಮತ್ತಿತರರಿದ್ದರು.

ಪಿಡಿಒ ವಿರುದ್ಧ ಕ್ರಮ

ಗ್ರಾಪಂ ಉಪಾಧ್ಯಕ್ಷ ಆತ್ಮಹತ್ಯೆಗೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ತಾಪಂ ಇಒ ಅವರಿಂದ ಮಾಹಿತಿ ಪಡೆದುಕೊಂಡಿದ್ದೇನೆ. ಬಿಲ್ ತಡೆಗೆ ಕಾರಣವೇನು ಎಂಬುವುದನ್ನು ಪಿಡಿಒಗೆ ಸ್ಪಷ್ಟನೆ ಕೇಳಲಾಗಿದೆ. ಆದರೆ ಪಿಡಿಒ ಎಫ್‌ಟಿಒ ಆಗಿಲ್ಲ, ಹಾಗಾಗಿ ಖಜಾನೆಯಿಂದ ತಿರಸ್ಕಾರವಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ. ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಲಾಗಿದ್ದು ತನಿಖೆ ನಡೆಯುತ್ತಿದೆ. ತಪ್ಪು ಮಾಡಿದ ಇಬ್ಬರು ಪಿಡಿಒಗಳನ್ನು ನನ್ನ ಅವಧಿಯಲ್ಲಿ ಅಮಾನತುಗೊಳಿಸಿದ್ದೇನೆ. ತನಿಖೆಯಲ್ಲಿ ಅಧಿಕಾರಿಯ ತಪ್ಪು ಕಂಡುಬಂದರೆ ಮುಲಾಜಿಲ್ಲದೆ ಕ್ರಮ ಕೈಗೊಳ್ಳುತ್ತೇನೆ ಎಂದು ಎಚ್ಚರಿಕೆ ನೀಡಿದರು.

ರಾಜ್ಯಕ್ಕೆ ದಾವಣಗೆರೆ ಮಾದರಿ

ಜೆಜೆಎಂ ಯೋಜನೆಯು ಕರ್ನಾಟಕ ರಾಜ್ಯದಲ್ಲಿಯೇ ದಾವಣಗೆರೆ ಮಾದರಿ ಜಿಲ್ಲೆಯಾಗಿದೆ. ದೆಹಲಿಯಲ್ಲಿ ಸುಜಲಾಮ್ ಸಮಿತಿಯ ವಿಡಿಯೋ ಕಾನ್ಫರೆನ್ಸ್‌ನಲ್ಲಿ ಕರ್ನಾಟಕದಲ್ಲಿ ದಾವಣಗೆರೆ ಜಿಲ್ಲೆ ಆಯ್ಕೆಯಾಗಿದೆ. ಜೆಜೆಎಂ ಕಾಮಗಾರಿ ಕೆಲವು ಕಡೆ ಸಮಸ್ಯೆಯಾಗಿವೆ. ಕಾಮಗಾರಿ ವಿಳಂಬ ಸೇರಿ ಸಣ್ಣಪುಟ್ಟ ಸಮಸ್ಯೆಗಳಿವೆ. ಹಾಗಾಗಿ ಪರಿಶೀಲಿಸಿ ಸಮಸ್ಯೆ ಇರುವ ಕಡೆ ಕೂಡಲೇ ಪರಿಹರಿಸುವಂತೆ ಸಂಬಂಧಿಸಿದ ಗುತ್ತಿಗೆದಾರರಿಗೆ ಸೂಚನೆ ನೀಡಲಾಗಿದೆ. ಕೆಲವೇ ದಿನಗಳಲ್ಲಿ ಎಲ್ಲ ಕಡೆ ಮನೆ ಮನೆಗೆ ನೀರು ಸಿಗಲಿದೆ ಎಂದು ಜಿಪಂ ಸಿಇಒ ಗಿತ್ತೆ ಮಾಧವ ವಿಠ್ಠಲ್ ರಾವ್ ತಿಳಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net