ಮತ ಮೌಲ್ಯ ಉಳಿಸಿಕೊಳ್ಳದಿದ್ದರೆ ಸ್ವಾತಂತ್ರೃಕ್ಕಿದೆ ಗಂಡಾಂತರ
ವಿದ್ಯಾರ್ಥಿ ಒಕ್ಕೂಟದ ರಾಜ್ಯಾಧ್ಯಕ್ಷ ರಮೇಶ್ ಹೇಳಿಕೆ
ದಾವಣಗೆರೆಯಲ್ಲಿ ವಿಚಾರ ಸಂಕಿರಣ
ದಾವಣಗೆರೆ: ಕ್ರಿಮಿನಲ್ ಹಿನ್ನೆಲೆ, ತೀವ್ರ ಅಪರಾಧಿಕ ಕೃತ್ಯಗಳಲ್ಲಿ ಭಾಗಿಯಾದ ಜನಪ್ರತಿನಿಧಿಗಳ ಪ್ರಮಾಣ ಶಾಸನಸಭೆಗಳಲ್ಲಿ ಹೆಚ್ಚುತ್ತಿದೆ. ಇಂಥವರಿಂದ ದೇಶದ ಅಭಿವೃದ್ಧಿ ನಿರೀಕ್ಷಿಸುವುದು ಮೂರ್ಖತನ ಎಂದು ಕರ್ನಾಟಕ ವಿದ್ಯಾರ್ಥಿ ಒಕ್ಕೂಟದ ಅಧ್ಯಕ್ಷ ರಮೇಶ್ ವಿಷಾದಿಸಿದರು.
ಜನತಂತ್ರ ಉಳಿಸಿ ಆಂದೋಲನ-ಕರ್ನಾಟಕ ವತಿಯಿಂದ ಇಲ್ಲಿನ ರೋಟರಿ ಬಾಲಭವನದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ವಿಚಾರ ಸಂಕಿರಣದಲ್ಲಿ ಜನತಂತ್ರಕ್ಕೆ ಎದುರಾಗಿರುವ ಸವಾಲುಗಳು ವಿಷಯದ ಬಗ್ಗೆ ಮಂಡಿಸಿದರು.
ಅಸೋಸಿಯೇಷನ್ ಆಫ್ ಡೆಮಾಕ್ರಟಿಕ್ ರಿಫಾರ್ಮ್ಸ್ ವರದಿ ಪ್ರಕಾರ 2019ರ ಲೋಕಸಭೆಗೆ ಆಯ್ಕೆಯಾದ ಸದಸ್ಯರ ಪೈಕಿ ಶೇ. 43 ಮಂದಿ ತಮ್ಮ ವಿರುದ್ಧದ ಕ್ರಿಮಿನಲ್ ಮೊಕದ್ದಮೆ ಇರುವುದಾಗಿ ತಮ್ಮ ಉಮೇದುವಾರಿಕೆ ಪತ್ರದಲ್ಲಿ ಘೋಷಿಸಿಕೊಂಡಿದ್ದರು. 2024ರ ಚುನಾವಣೆಯಲ್ಲಿ ಇದರ ಪ್ರಮಾಣ ಶೇ. 46ರಷ್ಟು ಹೆಚ್ಚಿದೆ.
ಅಂದರೆ ಒಟ್ಟು 543 ಸಂಸದರ ಪೈಕಿ 251 ಸಂಸದರು ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದಾರೆ. ಇದರಲ್ಲಿ ಕಾಂಗ್ರೆಸ್‌ನ ಶೇ.49, ಬಿಜೆಪಿಯವರು ಶೇ.39ರಷ್ಟಿದ್ದಾರೆ. 2018ರ ಕರ್ನಾಟಕ ವಿಧಾನಸಭೆ ಚುನಾವಣೆಗೆ ಆಯ್ಕೆಯಾದ ಶಾಸಕರ ಪೈಕಿ ಶೇ.35ರಷ್ಟು ಕ್ರಿಮಿನಲ್ ಹಿನ್ನೆಲೆಯುಳ್ಳವರಿದ್ದರು. 2023ರ ಚುನಾವಣೆಯಲ್ಲಿ ಇದರ ಸಂಖ್ಯೆ ಶೇ.55ಕ್ಕೆ ತಲುಪಿದೆ ಎಂದು ವಿಷಾದಿಸಿದರು.
ಬಹುತೇಕ ಜನಪ್ರತಿನಿಧಿಗಳು ಅತ್ಯಾಚಾರ, ಕೊಲೆ ಮೊದಲಾದ ಗಂಭೀರ ಅಪರಾಧ ಪ್ರಕರಣಗಳನ್ನು ಎದುರಿಸುತ್ತಿದ್ದಾರೆ. ನಾಗರಿಕನಾದ ನಾವು ನಮ್ಮ ಮತದಾನದ ಹಕ್ಕನ್ನು ಸರಿಯಾಗಿ ನಿಭಾಯಿಸಿದ್ದರೆ ಇಂತಹ ವರದಿ ಬರುತ್ತಿರಲಿಲ್ಲ. ಇಂತಹ ಜನಪ್ರತಿನಿಧಿಗಳಿಂದ ಪ್ರಜಾಪ್ರಭುತ್ವ ಮತ್ತು ಸಂವಿಧಾನ ಎರಡರ ರಕ್ಷಣೆ ನಿರೀಕ್ಷಿಸಲಾಗದು ಎಂದು ಹೇಳಿದರು.
‘ಸಂವಿಧಾನವು ಎಷ್ಟೇ ಉತ್ತಮವಾಗಿದ್ದರೂ ಕೆಟ್ಟ ಜನಪ್ರತಿನಿಧಿಗಳಿಂದ ಕೆಟ್ಟ ಫಲಿತಾಂಶ ಕಾಣಲಿದೆ. ಆದರೆ, ಸಂವಿಧಾನ ಕೆಟ್ಟದ್ದಾದರೂ ಒಳ್ಳೆಯ ಜನಪ್ರತಿನಿಧಿಗಳ ಮೂಲಕ ಉತ್ತಮ ಫಲಿತಾಂಶ ನಿರೀಕ್ಷಿಸಬಹುದು’ ಎಂಬುದಾಗಿ ಅಂಬೇಡ್ಕರ್ ಅವರು ಕರಡು ಸಂವಿಧಾನ ರಚನಾ ಸಭೆ ವೇಳೆ ಮಾತನಾಡಿದ್ದು ಇಂದಿನ ದಿನಮಾನಕ್ಕೆ ಸಾಂದರ್ಭಿಕವಾಗಿದೆ ಎಂದು ತಿಳಿಸಿದರು.
ಜನರೇ ರೂಪಿಸಿಕೊಂಡ ವ್ಯವಸ್ಥೆಯೇ ಪ್ರಜಾತಂತ್ರವಾಗಿದೆ. ಆದರೆ ಅದು ಅಷ್ಟಕ್ಕೇ ನಿಲ್ಲದು. ಸರ್ಕಾರದ ಉತ್ತಮ ಕೆಲಸ ನಿರ್ವಹಿಸುತ್ತಿಲ್ಲ ಎಂದು ಹೇಳುವ ಜನರಲ್ಲೂ ಹೊಣೆಗಾರಿಕೆ ಇದೆ. ಇಂದಿನ ಪ್ರಜಾತಂತ್ರದ ಮೇಲೆ ಸಾಮಾಜಿಕ ಮತ್ತು ಆರ್ಥಿಕ ಸವಾಲು, ಅನಕ್ಷರತೆ, ರಾಜಕೀಯ ಸಂಸ್ಥೆಗಳ ಸವಾಲುಗಳಿವೆ. ಅಂಬೇಡ್ಕರ್ ಅವರ ಆಶಯದಂತೆ ನಮ್ಮ ಮತ ಮೌಲ್ಯ ಉಳಿಸಿಕೊಳ್ಳದೇ ಹೋದರೆ ಸ್ವಾತಂತ್ರೃಕ್ಕೆ ಗಂಡಾಂತರ ಎದುರಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ರಾಜಕೀಯ ಭಕ್ತಿ ಅಥವಾ ವ್ಯಕ್ತಿಪೂಜೆಯು ಖಂಡಿತವಾಗಿಯೂ ಅವನತಿ, ಮಾನಹಾನಿ ಹಾಗೂ ಅಂತಿಮವಾಗಿ ಸರ್ವಾಧಿಕಾರಕ್ಕೂ ಕಾರಣವಾಗಲಿದೆ ಎಂಬುದಾಗಿ ಅಂಬೇಡ್ಕರ್ ಹೇಳಿದ್ದರು ಎಂದೂ ಅವರು ಸ್ಮರಿಸಿದರು.
ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದ ನಿವೃತ್ತ ಎಸ್ಪಿ ರವಿನಾರಾಯಣ್, ರಾಜಕಾರಣ ಕ್ಷೇತ್ರದಲ್ಲಿದ್ದ ಭ್ರಷ್ಟಾಚಾರ ಇಂದು ನ್ಯಾಯಾಂಗಕ್ಕೂ ವ್ಯಾಪಿಸಿದೆ. ಹಣ ಮಾತ್ರವಲ್ಲದೆ ಮಾನಸಿಕ ಭ್ರಷ್ಟತೆಯೂ ನಡೆಯುತ್ತಿದೆ ಎಂದು ವಿಷಾದಿಸಿದರು.
ವಿಧಾನಸಭೆ ಮೊಗಸಾಲೆಯಲ್ಲಿ ಜ್ವಲಂತ ಸಮಸ್ಯೆಗಳ ಚರ್ಚೆಯ ಬದಲಾಗಿ ಜಾತಿ-ಧರ್ಮದ ಆಧಾರಿತ ಹೋರಾಟಗಳೇ ಹೆಚ್ಚಿವೆ. ನಿರುದ್ಯೋಗ, ಆಹಾರ, ವಸತಿ ಸಮಸ್ಯೆಗಳ ಕುರಿತಂತೆ ಆಂದೋಲನ ನಡೆಯುತ್ತಿಲ್ಲ ಎಂದರು.
ಚಿಂತಕ ಮಲ್ಲಿಕಾರ್ಜುನ ಹಲಸಂಗಿ ಮಾತನಾಡಿ ಹಿಂದು ಧರ್ಮದ ಹೆಸರಿನಲ್ಲಿ ಬ್ರಾಹ್ಮಣ್ಯದ ಪುನರುತ್ಥಾನಕ್ಕಾಗಿ ಸಂವಿಧಾನವನ್ನೇ ಬದಲಿಸುವ ಪ್ರಯತ್ನ ನಡೆದಿದೆ. ಇದನ್ನು ವಿರೋಧಿಸದಿದ್ದರೆ ಪರಿಸ್ಥಿತಿ ಗಂಭೀರವಾಗಲಿದೆ ಎಂದು ಹೇಳಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಜನತಂತ್ರ ಉಳಿಸಿ ಆಂದೋಲನದ ಸಂಚಾಲಕ ಇಮ್ತಿಯಾಜ್ ಹುಸೇನ್, ಸಂವಿಧಾನ, ಪ್ರಜಾತಂತ್ರ ಉಳಿಸದೇ ಹೋದರೆ ಅಲ್ಪಸಂಖ್ಯಾತರು, ದಲಿತರ ಅಸ್ತಿತ್ವವೇ ಇರುವುದಿಲ್ಲ. ಕಳೆದ 78 ವರ್ಷದಲ್ಲಿ ದಲಿತರು, ಅಲ್ಪಸಂಖ್ಯಾತರು ವಿಧಾನ ಪರಿಷತ್‌ಗೆ ಸ್ಪರ್ಧಿಸಲಾಗಿಲ್ಲ. ಇನ್ನಾದರೂ ಅವಕಾಶ ಬಳಸಿಕೊಳ್ಳಬೇಕಿದೆ ಎಂದು ಆಶಿಸಿದರು.
ಕಾರ್ಯಕ್ರಮದಲ್ಲಿ ನವಯಾನ ಸಾಹಿತ್ಯ- ಸಾಂಸ್ಕೃತಿಕ ಘಟಕ ರಾಜ್ಯ ಸಂಚಾಲಕ ಡಾ.ವಿ. ಬಸವರಾಜ್, ಸಾಮಾಜಿಕ ಸಂಘರ್ಷ ಸಮಿತಿ ರಾಜ್ಯ ಕಾರ್ಯಾಧ್ಯಕ್ಷ ರಾಮು ಗೋಸಾಯಿ, ಎಸ್.ಎಚ್. ಗುರುಮೂರ್ತಿ, ಬಾಲೇನಹಳ್ಳಿ ರಾಮಣ್ಣ, ಚೌಡಪ್ಪ, ದುರ್ಗೇಶ್ ಗುಡಗೇರಿ, ಸಿ.ಎ ಚಿಕ್ಕಣ್ಣ, ಡಾ. ಕೃಷ್ಣಮೂರ್ತಿ, ಎಚ್. ಮಲ್ಲೇಶಿ ಇತರರಿದ್ದರು.
ಸಂವಿಧಾನ, ಪ್ರಜಾತಂತ್ರ ಉಳಿಸದೇ ಹೋದರೆ ಅಲ್ಪಸಂಖ್ಯಾತರು, ದಲಿತರ ಅಸ್ತಿತ್ವವೇ ಇರುವುದಿಲ್ಲ. ಕಳೆದ 78 ವರ್ಷದಲ್ಲಿ ದಲಿತರು, ಅಲ್ಪಸಂಖ್ಯಾತರು ವಿಧಾನ ಪರಿಷತ್‌ಗೆ ಸ್ಪರ್ಧಿಸಲಾಗಿಲ್ಲ. ಇನ್ನಾದರೂ ಅವಕಾಶ ಬಳಸಿಕೊಳ್ಳಬೇಕಿದೆ.