ದಾವಣಗೆರೆ: ಸಂಭಾಷಣೆಯ ಆಡಿಯೋ ವೈರಲ್ ಆದ ಹಿನ್ನೆಲೆಯಲ್ಲಿ ಜಮೀರ್ ಅಹ್ಮದ್ ಅವರನ್ನು ಪಕ್ಷದಿಂದ ಉಚ್ಚಾಟನೆಗೊಳಿಸಿ, ವಿಧಿವಿಜ್ಞಾನ ಇಲ್ಲವೇ ಮಂಪರು ಪರೀಕ್ಷೆ ನಡೆಸಬೇಕು ಎಂದು ಕೆಪಿಸಿಸಿ ವಕ್ತಾರ ಡಿ. ಬಸವರಾಜ್ ಆಗ್ರಹಿಸಿದರು.
ದಾವಣಗೆರೆ ದಕ್ಷಿಣ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸೋಲಿಸುವ ಕುರಿತಂತೆ ಮಾಜಿ ಸಚಿವ ಜಮೀರ್ ಅಹ್ಮದ್ ಹಾಗೂ ಕಾಂಗ್ರೆಸ್‌ನಿಂದ ಉಚ್ಚಾಟಿತ ಸಿರಾಜ್ ಅಹ್ಮದ್ ನಡುವೆ ನಡೆದಿತ್ತು ಎನ್ನಲಾದ ಆಡಿಯೋ ವೈರಲ್ ಆಗಿದೆ. ಅಧಿಕೃತ ಅಭ್ಯರ್ಥಿ ಸಮರ್ಥ್ ಶಾಮನೂರು ವಿರುದ್ಧ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದು ಬಯಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ದೂರಿದರು.
ಪಕ್ಷದ ಹಿರಿಯ ನಾಯಕರಾಗಿ, ಜವಾಬ್ದಾರಿಯುತ ಸಚಿವರಾಗಿದ್ದೂ ಉಪಚುನಾವಣೆ ವೇಳೆ ಕಾಂಗ್ರೆಸ್ ಸೋಲಿಗೆ ಷಡ್ಯಂತ್ರ ನಡೆಸಿದ್ದು ಹೆತ್ತ ತಾಯಿಗೆ ಮಾಡಿದ ದ್ರೋಹವಾಗಿದೆ. ಎಲ್ಲ ತಪ್ಪು ಮಾಡಿ ಇದೀಗ ಎಐ ಸೃಷ್ಟಿ ಎಂದು ಸಬೂಬು ಹೇಳಲಾಗುತ್ತಿದೆ. ಕೆಪಿಸಿಸಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಬೇಕು. ಜಮೀರ್ ಅಹ್ಮದ್ ಅವರಿಗೆ ಯಾವುದೇ ಅಧಿಕಾರ ಹುದ್ದೆ ನೀಡಬಾರದು ಎಂದ ಅವರು ಈಗಾಗಲೆ ಈ ಸಂಬಂಧ ಹೈಕಮಾಂಡ್‌ಗೆ ಪತ್ರ ಬರೆಯಲಾಗಿದೆ ಎಂದರು.
ಎಸ್‌ಡಿಪಿಐ ಪರ ಜಮೀರ್ ಬೆಂಬಲಿಗರ ಪ್ರಚಾರ
ಮಾಜಿ ಮೇಯರ್ ಚಮನ್‌ಸಾಬ್ ಮಾತನಾಡಿ ಚುನಾವಣೆ ಆರಂಭಕ್ಕೂ ಮುನ್ನವೇ ಕೆಲವರಿಂದ ಗೊಂದಲ ಸೃಷ್ಟಿಸಲಾಗಿತ್ತು. ಜಮೀರ್ ಅಹ್ಮದ್ ಕ್ಷೇತ್ರ ಬೆಂಗಳೂರು ಚಾಮರಾಜಪೇಟೆಯಿಂದ ಬಂದ ಕೆಲವು ಕಾರ್ಯಕರ್ತರು ಎಸ್‌ಡಿಪಿಐ ಪರ ಪ್ರಚಾರ ಮಾಡಿದರು. ಅಲ್ಲಿನ ಮಾಜಿ ಕಾರ್ಪೋರೇಟರ್ ಕೂಡ ಇಲ್ಲಿಗೆ ಬಂದು ಕಾಂಗ್ರೆಸ್ ಹಾಗೂ ಸ್ಥಳೀಯ ಸಚಿವರ ವಿರುದ್ಧ ದೂರಿದರು. ಮತದಾರರಲ್ಲಿ ಗೊಂದಲ ಮೂಡಿಸಿದರು ಎಂದು ದೂರಿದರು.
ಎಸ್‌ಡಿಪಿಐನಂತಹ ಮುಸ್ಲಿಂ ಜಾತಿವಾದಿ ಪಕ್ಷಗಳಿಗೆ ಮುಸ್ಲಿಂ ನಾಯಕತ್ವ ಕೊಲೆ ಮಾಡಿ ಬಿಜೆಪಿ ಗೆಲ್ಲಿಸುವುದೇ ಏಕೈಕ ಅಜೆಂಡಾ ಆಗಿದೆ. ದಾವಣಗೆರೆ ದಕ್ಷಿಣದಲ್ಲಿ ಎಸ್‌ಡಿಪಿಐ ಇಷ್ಟು ಮತ ಪಡೆದು ಸಾಧಿಸಿದ್ದಾರೂ ಏನು? ಬಿಜೆಪಿಗೆ ಬೆಂಬಲಿಸಿ ಮುಸ್ಲಿಂ ಮತಗಳನ್ನು ವಿಭಜನೆ ಮಾಡುವವರೇ ಬಿಜೆಪಿ ಸ್ನೇಹಿತರು. ಇಲ್ಲವಾಗಿದ್ದರೆ ಕೋಟಿ ಒಡೆಯ ಅಸಾಸುದ್ದೀನ್ ಓವೈಸಿ, ಫಕ್ರದ್ದೀನ್ ಅಜ್ಮಲ್ ಅಂಥವರ ಮನೆ ಮೇಲೆ ಇದುವರೆಗೆ ಇಡಿ ದಾಳಿ ಏಕೆ ನಡೆದಿಲ್ಲ? ಎಂದೂ ಪ್ರಶ್ನಿಸಿದರು.
ಸಿಒಡಿ/ ಸಿಬಿಐ ತನಿಖೆ ಆಗಲಿ
ವೈರಲ್ ಆದ ಆಡಿಯೋ ಪ್ರಕರಣದ ಬಗ್ಗೆ ವಿಧಿವಿಜ್ಞಾನ ಪರೀಕ್ಷೆ ನಡೆಸಲಿ. ಇಲ್ಲವೇ ಸಿಒಡಿ ಅಥವಾ ಸಿಬಿಐ ತನಿಖೆಗೆ ವಹಿಸಲಿ. ಜಮೀರ್ ಅಹ್ಮದ್ ಸೇರಿ ಪಕ್ಷಕ್ಕೆ ದ್ರೋಹ ಮಾಡಿಲ್ಲ ಎಂದೆನ್ನುವ ಅವರ ಬೆಂಬಲಿಗರು ನಾವು ಹೇಳುವ ಪವಿತ್ರ ಜಾಗಕ್ಕೆ ಬಂದು ಪ್ರಮಾಣ ಮಾಡಲಿ. ಆ ಜಾಗಕ್ಕೆ ತೆರಳುವ ವೆಚ್ಚವನ್ನೂ ನಾವೇ ವಹಿಸಿಕೊಳ್ಳುತ್ತೇವೆ ಎಂದೂ ಸವಾಲು ಹಾಕಿದರು.
ಜಮೀರ್ ಅಹ್ಮದ್ ಅವರು ಸಿದ್ದರಾಮಯ್ಯ ಅವರ ಆಪ್ತ ಎಂಬುದಾದರೆ ಕಾಂಗ್ರೆಸ್ ಸೋಲಿಸಿದರೆ ಅವರಿಗೆ ಗೌರವ ಬರುತ್ತಿತ್ತಾ? ಪಕ್ಷದಲ್ಲಿ ಬೇಕಾದಷ್ಟು ಹೊಸ ನಾಯಕರಿದ್ದಾರೆ. ಗೆದ್ದಲು ತಿನ್ನುವಂತೆ ಪಕ್ಷಕ್ಕೆ ದ್ರೋಹ ಮಾಡುವ ಇಂಥಹ ಮುಖಂಡರನ್ನು ಕೈಬಿಡಿ ಎಂದು ವರಿಷ್ಠರಲ್ಲಿ ಮನವಿ ಮಾಡಿದ್ದೇವೆ ಎಂದ ಅವರು, ಜಮೀರ್ ಅಹ್ಮದ್ ಆರೋಪಮುಕ್ತರಾಗುವವರಿಗೆ ಅವರಿಗೆ ಯಾವುದೇ ಅಧಿಕಾರ ಸ್ಥಾನ ನೀಡಬಾರದು ಎಂದೂ ಆಗ್ರಹಿಸಿದರು.
ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಆರ್.ಎಚ್.ನಾಗಭೂಷಣ್, ಜಾಕೀರ್ ಅಲಿ, ರಹೀಂಸಾಬ್ ಇದ್ದರು.