ದಾವಣಗೆರೆ ವಿವಿಯಲ್ಲಿ ಶುಕ್ರವಾರ ನಡೆದ 13ನೇ ವಾರ್ಷಿಕ ಘಟಿಕೋತ್ಸವದಲ್ಲಿ ಎಂ.ಕಾಂ. ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಪಡೆದ ನಯನ ಎನ್.ಬಿ, ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರಿಂದ 7 ಸ್ವರ್ಣ ಪದಕಗಳನ್ನು ಸ್ವೀಕರಿಸಿದರು. ಕುಲಪತಿ ಪ್ರೊ. ಬಿ.ಡಿ. ಕುಂಬಾರ ಇದ್ದರು.
Published on:
Copied
Follow Us
ಪ್ರಮುಖ ಮುಖ್ಯಾಂಶಗಳು
ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಸೀಮಿತವಾಗದಿರಿ
ರಾಜ್ಯಪಾಲ ಥಾವರಚಂದ್ ಗೆಹಲೋತ್ ಸಲಹೆ
ದಾವಣಗೆರೆ :ಕೃತಕ ಬುದ್ಧಿಮತ್ತೆ ಮತ್ತು ಡೇಟಾ ಸೈನ್ಸ್‌ನಂತಹ ಸುಧಾರಿತ ತಂತ್ರಜ್ಞಾನಗಳ ಈ ಡಿಜಿಟಲ್ ಯುಗದಲ್ಲಿ ವಿದ್ಯಾರ್ಥಿಗಳು ಕೇವಲ ಕ್ಯಾಂಪಸ್ ಪ್ಲೇಸ್‌ಮೆಂಟ್‌ಗೆ ಸೀಮಿತವಾಗದೇ ನಾವೀನ್ಯತೆ ಮತ್ತು ಸ್ಟಾರ್ಟ್‌ಅಪ್‌ಗಳ ಮೂಲಕ ಹೊಸ ಬದಲಾವಣೆ ತರಬೇಕು ಎಂದು ರಾಜ್ಯಪಾಲ ಥಾವರಚಂದ್ ಗೆಹಲೋತ್ ಹೇಳಿದರು.
ದಾವಣಗೆರೆ ವಿಶ್ವವಿದ್ಯಾಲಯದ ಶಿವಗಂಗೋತ್ರಿ ಆವರಣದಲ್ಲಿ ಶುಕ್ರವಾರ, 13ನೇ ವಾರ್ಷಿಕ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಶಿಕ್ಷಣವು ಉದ್ಯೋಗಕ್ಕಾಗಿ ಮಾತ್ರವಲ್ಲ ಅದು ನೈತಿಕತೆ, ಸಹಾನುಭೂತಿ ಮತ್ತು ಸಾಮಾಜಿಕ ಜವಾಬ್ದಾರಿಯನ್ನು ಕಲಿಸುತ್ತದೆ. ಸುಶಿಕ್ಷಿತ ಯುವಕರು ಸಮಾಜದಲ್ಲಿ ಸಕಾರಾತ್ಮಕ ಬದಲಾವಣೆ ತರಬಲ್ಲರು ಎಂದರು.
ಸ್ವಾಮಿ ವಿವೇಕಾನಂದರು ಹೇಳಿದಂತೆ ಯುವಶಕ್ತಿಯೇ ವಿಕಸಿತ ರಾಷ್ಟ್ರದ ಅಡಿಪಾಯ. ಭಾರತವು ವಿಶ್ವದಲ್ಲೇ ಅತಿ ಹೆಚ್ಚು ಯುವ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಿದೆ. 2047ರಲ್ಲಿ ಭಾರತವು ಸ್ವಾತಂತ್ರ್ಯದ ನೂರನೇ ವರ್ಷವನ್ನು ಆಚರಿಸುವಾಗ ದೇಶದ ನಾಯಕತ್ವ ನಿಮ್ಮ ಕೈಯಲ್ಲಿರುತ್ತದೆ ಎಂದು ತಿಳಿಸಿದರು.
ವಿದ್ಯಾರ್ಥಿಗಳು ಈ ಹಂತಕ್ಕೆ ಬರಲು ತಾಯಿಯ ಪ್ರಾರ್ಥನೆ, ತಂದೆಯ ತ್ಯಾಗ ಮತ್ತು ಶಿಕ್ಷಕರ ನಂಬಿಕೆ ಕಾರಣ. ಜೀವನದಲ್ಲಿ ಮುಂದೆ ಸಾಗುವಾಗ ಈ ಋಣವನ್ನು ಸೇವೆಯ ಮೂಲಕ ತೀರಿಸಬೇಕು ಎಂದು ಸಲಹೆ ನೀಡಿದರು.
ಸೋಲಿಗೆ ಹೆದರಬೇಡಿ, ಸ್ಟಾರ್ಟ್‌ಅಪ್ ಲೋಕದಲ್ಲಿ ಸೋಲೆಂಬುದು ಅಮೂಲ್ಯವಾದ ಪಾಠವಿದ್ದಂತೆ. ಪದವಿ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಇದು ಅತ್ಯಂತ ಮಹತ್ವದ ದಿನ. ವರ್ಷಗಳ ಕಠಿಣ ಪರಿಶ್ರಮ ಮತ್ತು ಶಿಸ್ತಿನ ಫಲವಾಗಿದೆ ಎಂದು ಸ್ಫೂರ್ತಿ ತುಂಬಿದರು.
ದಾವಣಗೆರೆ ವಿಶ್ವವಿದ್ಯಾಲಯವು ಅಲ್ಪಾವಧಿಯಲ್ಲಿ ಶೈಕ್ಷಣಿಕವಾಗಿ ಉತ್ತಮ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದರು.
ಘಟಿಕೋತ್ಸವ ಭಾಷಣ ಮಾಡಬೇಕಿದ್ದ ಡಿಆರ್‌ಡಿಒ ಮಾಜಿ ನಿರ್ದೇಶಕ ಪದ್ಮವಿಭೂಷಣ ಡಾ. ವಾಸುದೇವ್ ಕೆ. ಆತ್ರೆ ಅವರ ಅನುಪಸ್ಥಿತಿಯಲ್ಲಿ ಅವರ ಭಾಷಣವನ್ನು ಸಮಾಜಶಾಸ್ತ್ರ ವಿಭಾಗದ ಡೀನ್ ಪ್ರೊ. ಲೋಕೇಶ್ ಓದಿದರು. ಸಮ ಕುಲಾಧಿಪತಿಯೂ ಆಗಿರುವ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ. ಸುಧಾಕರ್ ಗೈರು ಹಾಜರಾಗಿದ್ದರು.
ಕುಲಸಚಿವರಾದ ಎಸ್.ಬಿ. ಗಂಟಿ, ಪ್ರೊ. ರಮೇಶ್ ಸಿ.ಕೆ.(ಮೌಲ್ಯಮಾಪನ), ವಿವಿಧ ನಿಕಾಯಗಳ ಮುಖ್ಯಸ್ಥರು, ಸಿಂಡಿಕೇಟ್ ಸದಸ್ಯರು, ಪಾಲಕರು, ವಿವಿಧ ಕ್ಷೇತ್ರಗಳ ಪ್ರಮುಖರು ಭಾಗವಹಿಸಿದ್ದರು.
ಮೂವರಿಗೆ ಗೌರವ ಡಾಕ್ಟರೇಟ್
ವಿಶ್ರಾಂತ ಐ.ಪಿ.ಎಸ್ ಅಧಿಕಾರಿ ಎಲ್. ರೇವಣ್ಣಸಿದ್ಧಯ್ಯ, ಶೈಕ್ಷಣಿಕ ಸಂಘಟಕ, ಹೋರಾಟಗಾರ ಮತ್ತು ಹಿರಿಯ ಪ್ರಾಧ್ಯಾಪಕ ಪ್ರೊ.ಸಿ.ಎಚ್. ಮುರಿಗೇಂದ್ರಪ್ಪ ಮತ್ತು ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಸಮಾಜ ಸೇವಕ ಎಂ. ರಾಮಪ್ಪ ಅವರಿಗೆ ಡಿ.ಲಿಟ್- ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಯಿತು.
ರೈತಾಪಿ ಕುಟುಂಬದ ಹಿನ್ನೆಲೆಯ ನಯನ ಎನ್.ಬಿ, ಎಂ.ಕಾಂ. ಪರೀಕ್ಷೆಯಲ್ಲಿ ಪ್ರಥಮ ರ‌್ಯಾಂಕ್ ಪಡೆಯುವ ಜತೆಗೆ 7 ಸ್ವರ್ಣ ಪದಕಗಳೊಂದಿಗೆ ‘ಚಿನ್ನದ ಹುಡುಗಿ’ ಎನಿಸಿದರು.
ಎಂ.ಎ. ಪತ್ರಿಕೋದ್ಯಮ ವಿಭಾಗದಲ್ಲಿ ಚಿತ್ರದುರ್ಗ ಜಿಲ್ಲೆ ಐಮಂಗಲದ ವಿಜಯವಾಣಿಯ ಪತ್ರಿಕಾ ವಿತರಕನ ಪುತ್ರ ವಿ.ಎಂ. ಚಂದನ್ ಪ್ರಥಮ ರ‌್ಯಾಂಕ್ ಪಡೆದು 2 ಚಿನ್ನದ ಪದಕಗಳನ್ನು ಗಳಿಸಿದರು.
ಹೊಸ ನೀತಿಗಳ ಅನುಷ್ಠಾನ
ಉನ್ನತ ಶಿಕ್ಷಣದಲ್ಲಿ ಬದಲಾವಣೆ ತರಲು 2024ರಿಂದ ರಾಜ್ಯ ಶಿಕ್ಷಣ ನೀತಿಯನ್ನು ವಿವಿ ಜಾರಿಗೊಳಿಸಿದೆ. ಇದರ ಅನ್ವಯ ಸ್ನಾತಕ ಪಠ್ಯಕ್ರಮವನ್ನು ಅಳವಡಿಸಿಕೊಂಡ ಮೊದಲ ವಿಶ್ವವಿದ್ಯಾಲಯ ಎಂಬ ಹೆಗ್ಗಳಿಕೆಗೆ ದಾವಣಗೆರೆ ವಿವಿ ಪಾತ್ರವಾಗಿದೆ ಎಂದು ಕುಲಪತಿ ಪ್ರೊ. ಬಿ.ಡಿ. ಕುಂಬಾರ ಹೇಳಿದರು.
ಸ್ವಾಗತ ಭಾಷಣ ಮಾಡಿದ ಅವರು, ಸಾರ್ವಜನಿಕ ಖಾಸಗಿ ಸಹಭಾಗಿತ್ವದ ಅಡಿಯಲ್ಲಿ 1,200 ವಿದ್ಯಾರ್ಥಿಗಳಿಗೆ ಉದ್ಯೋಗಾಧಾರಿತ ಕೌಶಲ ತರಬೇತಿ ನೀಡಲಾಗುತ್ತಿದೆ. ವಿಶ್ವವಿದ್ಯಾಲಯ ವ್ಯಾಪ್ತಿಯ 10 ಗ್ರಾಮಗಳನ್ನು ದತ್ತು ಪಡೆದು ಅವುಗಳ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗಿದೆ. ಎಂ.ಸಿ.ಎ ವಿಭಾಗಕ್ಕಾಗಿ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ಹಾಗೂ ಸ್ಮಾರ್ಟ್ ತರಗತಿಗಳ ಹೊಸ ಕಟ್ಟಡ ಸ್ಥಾಪಿಸಲಾಗಿದೆ ಎಂದರು.