ಮನಸ್ಸಿನ ಸಮತೋಲನವೇ ಯೋಗ

ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ.
ದಾವಣಗೆರೆಯ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಂದ ಯೋಗ ಪ್ರದರ್ಶನ.
Published on

ಪ್ರಮುಖ ಮುಖ್ಯಾಂಶಗಳು

  • ಶಿಕ್ಷಕ ಸುಮನ್ ಎನ್.ಎಸ್. ಹೇಳಿಕೆ
  • ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ದಾವಣಗೆರೆ : ದೈನಂದಿನ ಬದುಕಿನ ಒತ್ತಡದ ನಡುವೆ ಮನಸ್ಸಿನ ಸಮತೋಲನ ಕಾಪಾಡಿಕೊಳ್ಳುವುದೇ ಯೋಗ ಎಂದು ದಾವಣಗೆರೆ ವಿಶ್ವವಿದ್ಯಾಲಯದ ಯೋಗ ವಿಜ್ಞಾನ ಅಧ್ಯಯನ ವಿಭಾಗದ ಶಿಕ್ಷಕ ಸುಮನ್ ಎನ್.ಎಸ್. ಹೇಳಿದರು.
ನಂ. 1 ಕನ್ನಡ ದಿನಪತ್ರಿಕೆ ವಿಜಯವಾಣಿ ಸಹಯೋಗದಲ್ಲಿ ನಗರದ ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಆವರಣದಲ್ಲಿ ಶನಿವಾರ ಆಯೋಜಿಸಿದ್ದ 12ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಹ, ಪ್ರಾಣ ಮತ್ತು ಮನಸನ್ನು ಸರಿಯಾಗಿಟ್ಟುಕೊಳ್ಳಬೇಕು. ಯೋಗಾಸನ ಮಾಡುವುದರಿಂದ ದೇಹವು ಶಕ್ತಿಯುತವಾಗುತ್ತದೆ. ನಮ್ಮ ಉಸಿರಾಟ ಕ್ರಿಯೆಯ ಮೇಲೆ ಗಮನವಿರಬೇಕು. ಪ್ರಾಣಾಯಾಮದ ಮೂಲಕ ಮನಸನ್ನು ಹಿಡಿತದಲ್ಲಿಡಬೇಕು ಎಂದು ಸಲಹೆ ನೀಡಿದರು.
ಆಸನಗಳನ್ನು ಮಾಡುವುದು, ಧ್ಯಾನ ಅಷ್ಟೇ ಯೋಗವಲ್ಲ, ಅದೂ ಒಂದು ಭಾಗವಷ್ಟೆ. ಆದರೆ ಯೋಗಕ್ಕೆ ವಿಶಾಲ ವ್ಯಾಪ್ತಿಯಿದೆ. ಯೋಗ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯದ ಅಭ್ಯಾಸವಾಗಬೇಕು ಎಂದು ತಿಳಿಸಿದರು.
ವಿದ್ಯಾರ್ಥಿಗಳು ಓದಿಗೆ ಸಂಬಂಧಿಸಿದಂತೆ ಒತ್ತಡದಲ್ಲಿರುತ್ತಾರೆ. ಸಮಯವನ್ನು ಸರಿದೂಗಿಸಿಕೊಂಡು ವಿವಿಧ ವಿಷಯಗಳನ್ನು ಕಲಿಯಬೇಕಾಗುತ್ತದೆ. ಮನಸ್ಸನ್ನು ಕೇಂದ್ರೀಕರಿಸುವ ಮೂಲಕ ವಿಷಯಗಳನ್ನು ಮನದಟ್ಟು ಮಾಡಿಕೊಳ್ಳಲು ಸಾಧ್ಯ ಎಂದು ಪ್ರತಿಪಾದಿಸಿದರು.
ನಾವು ಮಾಡುವ ಕರ್ಮ ಕೌಶಲಪೂರ್ಣವಾಗಿದ್ದರೆ ಉತ್ತಮ ಫಲಿತಾಂಶ ಪಡೆಯುತ್ತೇವೆ. ಆಂತರಿಕವಾಗಿ ಶಿಸ್ತು ಮೂಡಬೇಕು, ಅದರಿಂದ ಬದಲಾವಣೆ ಸಾಧ್ಯ. ಚಿನ್ಮುದ್ರೆಯಲ್ಲಿ ಕುಳಿತು ಧ್ಯಾನಿಸಿದಾಗ ಮನಸ್ಸಿಗೆ ಬಲ ಬರುತ್ತದೆ ಎಂದು ಹೇಳಿದರು.
ವಿಜಯವಾಣಿ ಸ್ಥಾನಿಕ ಸಂಪಾದಕ ನವೀನ್ ಎಂ.ಬಿ. ಮಾತನಾಡಿ, ಇಂದಿನ ಒತ್ತಡದ ಜೀವನ ಶೈಲಿಯ ನಡುವೆ ದೈಹಿಕ, ಮಾನಸಿಕ ಸ್ವಾಸ್ಥೃ ಕಾಪಾಡಿಕೊಳ್ಳಬೇಕು. ಯೋಗವನ್ನು ರೂಢಿಸಿಕೊಂಡರೆ ಔಷಧರಹಿತವಾಗಿ ಬದುಕಬಹುದು. ಆದರೆ ಯೋಗ ಸಾಧನೆ ಒಂದೇ ದಿನಕ್ಕೆ ಸೀಮಿತವಾಗದೇ ನಿರಂತರವಾಗಿರಬೇಕು ಎಂದು ಅಭಿಪ್ರಾಯಪಟ್ಟರು.
ರಾಷ್ಟ್ರೋತ್ಥಾನ ವಿದ್ಯಾಕೇಂದ್ರದ ಸಂಚಾಲಕ ಶಂಭುಲಿಂಗಪ್ಪ ವಿ, ಸಂಸ್ಥೆಯ ಸದಸ್ಯರಾದ ವಿನಾಯಕ ರಾನಡೆ, ಭಾರತಿ ಹೆಗಡೆ, ಪ್ರಾಚಾರ್ಯರಾದ ಸುಗುಣಾ, ಉಮೇಶ್, ಶಾಲೆಯ ಶಿಕ್ಷಕರು ಇದ್ದರು. ಪವಿತ್ರಾ ಜಿ.ಸಿ. ವಂದಿಸಿದರು.

ಆಕರ್ಷಕ ಪ್ರದರ್ಶನ

ಚಿನ್ಮುದ್ರೆಯಲ್ಲಿ ಶಿಸ್ತುಬದ್ಧವಾಗಿ ಕುಳಿತಿದ್ದ 1500ಕ್ಕೂ ಹೆಚ್ಚು ಮಕ್ಕಳು ಓಂಕಾರ ನಾದ ಮಾಡುವುದರೊಂದಿಗೆ ಯೋಗ ಪ್ರದರ್ಶನ ಆರಂಭವಾಯಿತು. ಕೆಂಪು ಮತ್ತು ನೀಲಿ ಟಿಶರ್ಟ್ ಧರಿಸಿದ್ದ ವಿದ್ಯಾರ್ಥಿಗಳು ಯೋಗಾ ಮ್ಯಾಟ್ ಜತೆಗೆ ಬಂದಿದ್ದರು. ಸೂರ್ಯನ ಕಿರಣಗಳ ಶಾಖವನ್ನು ಲೆಕ್ಕಿಸದೇ ಯೋಗ ಶಿಕ್ಷಕರ ಮಾರ್ಗದರ್ಶನದಲ್ಲಿ ಯೋಗಾಸನದ ವಿವಿಧ ಭಂಗಿಗಳನ್ನು ಪ್ರದರ್ಶಿಸಿದರು.
ಯೋಗೇನ ಚಿತ್ತಸ್ಯ ಮಂತ್ರ, ಸೂರ್ಯ ಮಂತ್ರವನ್ನು ಜಪಿಸುವ ಮೂಲಕ ಯೋಗದ ಚಮತ್ಕಾರವನ್ನು ಒಂದೊಂದಾಗಿ ತೋರಿದರು. ಜತೆ ಜತೆಗೆ ಉಸಿರಾಟ ಕ್ರಿಯೆಯ ಮೇಲೆ ಗಮನ ಹರಿಸಿದರು.
ಪಾದ ಹಸ್ತಾಸನ, ದಂಡಾಸನ, ಭುಜಂಗಾಸನ, ಪರ್ವತಾಸನ, ಅಶ್ವ ಸಂಚಲನಾಸನ, ನಮಸ್ಕಾರ ಸ್ಥಿತಿ, ಊರ್ಧ್ವ ನಮನಾಸನ, ಅಷ್ಟಾಂಗಾಸನ, ಅರ್ಧಕಟಿ ಚಕ್ರಾಸನ, ತ್ರಿಕೋನಾಸನ, ಪದ್ಮಾಸನ, ವಕ್ರಾಸನ, ಶವಾಸನ, ಭ್ರಮರಿ ಪ್ರಾಣಾಯಾಮ ಹೀಗೆ ಅರ್ಧ ಗಂಟೆ ಕಾಲ ವಿವಿಧ ಆಸನಗಳನ್ನು ಪ್ರದರ್ಶಿಸಿದರು. ಶಾಂತಿ ಮಂತ್ರದೊಂದಿಗೆ ಪ್ರದರ್ಶನ ಮುಕ್ತಾಯವಾಯಿತು.
ಇದಕ್ಕೂ ಮೊದಲು ಶಾಲೆಯ ಆಯ್ದ ಮಕ್ಕಳು ಲಯಬದ್ಧವಾಗಿ ಯೋಗಾಸನದ ಭಂಗಿಗಳನ್ನು ಆಕರ್ಷಕವಾಗಿ ಪ್ರದರ್ಶಿಸಿದರು. ಗೀತಾ ಬಿ. ಅವರು ಯೋಗದ ಸಂಕಲ್ಪ ಮಾಡಿಸಿದರು. ಯೋಗ ಪ್ರದರ್ಶನಕ್ಕೆ ಶಿಕ್ಷಕ ಪ್ರವೀಣ್ ಗೌಡ ಮಾರ್ಗದರ್ಶನ ನೀಡಿದರು.

ಸಂಗೀತ ಸುಧೆ

ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಂದೇ ಅಂತಾರಾಷ್ಟ್ರೀಯ ಸಂಗೀತ ದಿನವೂ ರುವ ಹಿನ್ನೆಲೆಯಲ್ಲಿ ಮಕ್ಕಳು ವಿಶೇಷ ಸಂಗೀತ ಕಾರ್ಯಕ್ರಮವನ್ನೂ ನಡೆಸಿಕೊಟ್ಟರು.
ತಬಲಾ, ಹಾರ್ಮೋನಿಯಂ ಮತ್ತು ವೀಣೆಯ ಜತೆಗೆ ರಾಗಬದ್ಧವಾಗಿ ಹಾಡುವ ಮೂಲಕ ವಿದ್ಯಾರ್ಥಿಗಳು ಸಂಗೀತ ರಸದೌತಣ ನೀಡಿದರು. ಮಕ್ಕಳ ಗಾಯನ ಪ್ರತಿಭೆಯ ಬಗ್ಗೆ ಮೆಚ್ಚುಗೆ ವ್ಯಕ್ತವಾಯಿತು. ವಿದ್ಯಾರ್ಥಿನಿ ಖುಷಿ ಟಿ.ಪಿ. ಅಂತಾರಾಷ್ಟ್ರೀಯ ಸಂಗೀತ ದಿನದ ಹಿನ್ನೆಲೆ, ಸಂಗೀತದ ಮಹತ್ವ ಕುರಿತು ಮಾತನಾಡಿದಳು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net