ಡಿಸೆಂಬರ್‌ನಲ್ಲಿ ವಿಶ್ವ ಆರ್ಯವೈಶ್ಯ ಸಮಾವೇಶ

ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿಯಿಂದ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆರ್ಯವೈಶ್ಯ ಸಮಾವೇಶವನ್ನು ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಗಿಡಕ್ಕೆ ನೀರೆರೆವ ಮೂಲಕ ಉದ್ಘಾಟಿಸಿದರು. ಎಂಎಲ್ಸಿ ಡಿ.ಎಸ್. ಅರುಣ್, ಆರ್.ಎಲ್. ಪ್ರಭಾಕರ, ಆರ್.ಜಿ. ನಾಗೇಂದ್ರ ಪ್ರಕಾಶ್, ಆರ್.ಜಿ. ಶ್ರೀನಿವಾಸ ಮೂರ್ತಿ, ಕೆ.ವಿ. ಅಮರೇಶ್, ಉಮಾ ಸಾಯಿರಾಂ, ಹೇಮಾ ಶ್ರೀನಿವಾಸ್, ಶುಭಶ್ರೀ ಇತರರಿದ್ದರು.
ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿಯಿಂದ ದಾವಣಗೆರೆಯಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆರ್ಯವೈಶ್ಯ ಸಮಾವೇಶವನ್ನು ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ಗಿಡಕ್ಕೆ ನೀರೆರೆವ ಮೂಲಕ ಉದ್ಘಾಟಿಸಿದರು. ಎಂಎಲ್ಸಿ ಡಿ.ಎಸ್. ಅರುಣ್, ಆರ್.ಎಲ್. ಪ್ರಭಾಕರ, ಆರ್.ಜಿ. ನಾಗೇಂದ್ರ ಪ್ರಕಾಶ್, ಆರ್.ಜಿ. ಶ್ರೀನಿವಾಸ ಮೂರ್ತಿ, ಕೆ.ವಿ. ಅಮರೇಶ್, ಉಮಾ ಸಾಯಿರಾಂ, ಹೇಮಾ ಶ್ರೀನಿವಾಸ್, ಶುಭಶ್ರೀ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಯುವಜನರಿಗೆ ಉದ್ಯಮ ಮಾರ್ಗದರ್ಶನ
  • 2.5 ಲಕ್ಷ ಮಂದಿಗೆ ಉದ್ಯೋಗ ನೀಡಿದ ಸಮಾಜ
  • ಮಹಾಸಭಾ ರಾಜ್ಯಾಧ್ಯಕ್ಷ ಆರ್.ಪಿ. ರವಿಶಂಕರ್ ಮಾಹಿತಿ

ದಾವಣಗೆರೆ: ನಮ್ಮ ಸಮಾಜದ ಯುವಜನರಲ್ಲಿ ಉದ್ಯಮಶೀಲತೆಯ ಉತ್ತೇಜನ ನೀಡಲು ಬೆಂಗಳೂರಿನಲ್ಲಿ ಡಿಸೆಂಬರ್ 25ರಿಂದ ಮೂರು ದಿನಗಳ ಕಾಲ ವಿಶ್ವ್ವ ಆರ್ಯವೈಶ್ಯ ಸಮಾವೇಶ ಆಯೋಜಿಸಲಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಸಭಾ ಅಧ್ಯಕ್ಷ ಆರ್.ಪಿ. ರವಿಶಂಕರ್ ತಿಳಿಸಿದರು.

ಕರ್ನಾಟಕ ಆರ್ಯವೈಶ್ಯ ಮಹಾಸಭಾದ ಜಿಲ್ಲಾ ಸಮಿತಿಯಿಂದ ಇಲ್ಲಿನ ಎಸ್.ಎಸ್. ಮಲ್ಲಿಕಾರ್ಜುನ ಸಾಂಸ್ಕೃತಿಕ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾ ಆರ್ಯವೈಶ್ಯ ಸಮಾವೇಶ ಉದ್ಘಾಟಿಸಿ ದಿಕ್ಸೂಚಿ ಭಾಷಣ ಮಾಡಿದರು.
ವಿಶ್ವದೆಲ್ಲೆಡೆಯ ಸಮಾಜದ ಸಾಧಕರ ಸಮಾಗಮ ಆಗುತ್ತಿದೆ. ಲೋಕಸಭಾ ಸ್ಪೀಕರ್ ಓಂಬಿರ್ಲಾ, ಆಂಧ್ರಪ್ರದೇಶದ ಕೈಗಾರಿಕಾ ಸಚಿವ ಟಿ.ಜಿ.ಭಗತ್, ಆಂಧ್ರಪ್ರದೇಶ, ಮಹಾರಾಷ್ಟ್ರ, ದೆಹಲಿ, ತೆಲಂಗಾಣ, ತಮಿಳುನಾಡು, ಕರ್ನಾಟಕ ಸರ್ಕಾರದ ಜನಪ್ರತಿನಿಧಿಗಳು, 40 ಮಂದಿ ಭಾಷಣಕಾರರು ಭಾಗವಹಿಸುವರು. ಉದ್ಯಮಾಸಕ್ತರಿಗೆ ಸಂಪನ್ಮೂಲ ಕ್ರೋಡೀಕರಣ, ಇಂದಿನ ಉದ್ಯಮದ ಉನ್ನತೀಕರಣ, ಉತ್ಪನ್ನಗಳ ರಫ್ತು, ಬ್ಯಾಂಕಿಂಗ್ ನೆರವಿಗೆ ಮಹಾಸಭಾ ಒದಗಿಸಲಿದೆ ಎಂದರು.
ವ್ಯಾಪಾರ, ಆರ್ಯವೈಶ್ಯ ಸಮಾಜದ ರಕ್ತದ ಕಣಕಣದಲ್ಲಿದೆ. ಮನೆ ಕಟ್ಟುವುದಾದಲ್ಲಿ ಒಳ್ಳೆಯ ಉದ್ಯೋಗ ಮಾಡಿ. ಒಂದು ಸಾಮ್ರಾಜ್ಯ ಕಟ್ಟುವುದಾದಲ್ಲಿ ಉದ್ಯಮ ಸ್ಥಾಪಿಸಿ ಎಂದು ಸಲಹೆ ನೀಡಿದ ಅವರು, ಇಂದಿನ ಯುವಕರು ಜಾಗತೀಕರಣದ ಶಕ್ತಿಯನ್ನು ಸಮರ್ಥವಾಗಿ ಬಳಸಿಕೊಳ್ಳಬೇಕು. ಉದ್ಯೋಗದಾತರಾಗಬೇಕು. ಜಾತಿ ಹಾಗೂ ಸರ್ಕಾರದ ಹಂಗಿಲ್ಲದೆ ಸಾಮರ್ಥ್ಯದ ಆಧಾರದಡಿ ಗುರುತಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ವಿಶ್ವದ 37 ದೇಶದಲ್ಲಿ ಆರ್ಯವೈಶ್ಯ ಸಮಾಜದವರಿದ್ದೇವೆ. ನಮ್ಮವರೇ ಸ್ಥಾಪಿಸಿದ ರ‌್ಯಾಪಿಡೋ ಕಂಪನಿ ಮೂಲಕ 9 ಸಾವಿರ ಜನರಿಗೆ ಉದ್ಯೋಗ ನೀಡಲಾಗಿದೆ. ಕರ್ನಾಟಕದ ಜನಸಂಖ್ಯೆಯಲ್ಲಿ ನಮ್ಮ ಪಾಲು ಶೇ.0.66ರಷ್ಟಿದೆ. ಅಷ್ಟು ಸಣ್ಣ ಸಮಾಜವಾದಾಗ್ಯೂ ಇದುವರೆಗೆ 2.5 ಲಕ್ಷ ಜನರಿಗೆ ಉದ್ಯೋಗ ಕಲ್ಪಿಸಲಾಗಿದೆ. ಮುಂದಿನ ವರ್ಷಗಳಲ್ಲಿ 10 ಲಕ್ಷಕ್ಕೆ ಏರಬೇಕೆಂದು ಆಶಿಸಿದರು.
2047ರ ವೇಳೆಗೆ ವಿಕಸಿತ ಭಾರತ ಮಾಡಬೇಕೆಂಬುದು ಕೇಂದ್ರ ಸರ್ಕಾರದ ಕನಸು. ಆಗ ಆರ್ಯವೈಶ್ಯ ಶ್ರೇಷ್ಠ ಸಮಾಜವಾಗಿ ನಿಲ್ಲಬೇಕಿದೆ. ಕನಿಷ್ಠ 10 ಸಾವಿರ ನವೋದ್ಯಮಗಳು ಆರಂಭವಾಗಬೇಕು. ದೇಶದ ಜಿಡಿಪಿಗೆ ಶೇ.2ರಷ್ಟು ಜಿಡಿಪಿಗೆ ಕೊಡುಗೆ ನೀಡಬೇಕು ಎಂದು ಆಶಿಸಿದರು.
119 ವರ್ಷಕ್ಕೆ ಪದಾರ್ಪಣೆ ಮಾಡಿದ ಆರ್ಯವೈಶ್ಯ ಮಹಾಸಭಾ 700 ಕೋಟಿ ರೂ.ಗಳ ಆಸ್ತಿ ಮಾಡಿ ಪ್ರತಿ ತಿಂಗಳಿಗೆ 60 ಕೋಟಿ ರೂ. ಆದಾಯ ಗಳಿಸುತ್ತಿದೆ. ಜನೋಪಯೋಗಿ ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಸಮಾಜಕ್ಕಿರುವ ಸಂಘಟನಾ ಶಕ್ತಿ ಬಗ್ಗೆ ಕೀಳರಿಮೆ ಬೇಕಿಲ್ಲ ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ ಆರ್ಯವೈಶ್ಯರಲ್ಲಿ ವ್ಯಾಪಾರೋದ್ಯಮದ ಪ್ರಮಾಣ ಇಳಿಕೆಯಾಗಿದೆ. ಹಿಂದಿದ್ದ ಕೌಟುಂಬಿಕ ಉದ್ಯಮಗಳು ಇಳಿಮುಖವಾಗುತ್ತಿರುವ ಬಗ್ಗೆ ಚಿಂತನೆ ಆಗಬೇಕಿದೆ. ವಹಿವಾಟಿಗೆ ಸಹೋದರರ ಬದಲಾಗಿ ಅನ್ಯರನ್ನೇ ನೆಚ್ಚಲಾಗುತ್ತಿದೆ. ಆನ್‌ಲೈನ್ ಉದ್ಯಮದಿಂದ ಕೌಟುಂಬಿಕ ಉದ್ಯಮಗಳಿಗೆ ಹಿನ್ನಡೆಯಾಗಿರುವ ಮಾತಿದೆ ಎಂದರು.
ಸರ್ಕಾರಕ್ಕೆ ಹೆಚ್ಚಿನ ಜಿಎಸ್‌ಟಿ ನೀಡುವ ಆನ್‌ಲೈನ್ ಉದ್ಯಮ ಯಾವ ಕಾರಣಕ್ಕೂ ಬದಲಾಗದು. ಸುಲಭದ ನೆಪಕ್ಕೆ ಮಕ್ಕಳು ಆನ್‌ಲೈನ್ ಖರೀದಿಗೆ ಒತ್ತು ನೀಡುತ್ತಿದ್ದಾರೆ. ಇಂದಿನ ವೇಗಕ್ಕೆ ತಕ್ಕಂತೆ ಕೌಟುಂಬಿಕ ಉದ್ಯಮ ಬೆಳೆಯಲಿಲ್ಲ ಎಂದ ಅವರು, ಜೆನ್ ಜೀ ಪೀಳಿಗೆಯನ್ನು ಉದ್ಯಮಿಗಳನ್ನಾಗಿ ಬೆಳೆಸುವ ಹೊಣೆ ಕುಟುಂಬಗಳ ಮೇಲಿದೆ ಎಂದರು.
ಪ್ರಾಸ್ತಾವಿಕ ಮಾತನಾಡಿದ ರಾಜ್ಯ ವಾಸವಿ ದೇವಾಲಯಗಳ ಒಕ್ಕೂಟದ ಅಧ್ಯಕ್ಷ ಆರ್.ಎಲ್. ಪ್ರಭಾಕರ, ಸಮಸ್ಯೆ ಬಂದಾಗ ಸಂಘಟನೆ ಆಗದೆ. ಅದಕ್ಕೂ ಪೂರ್ವದಲ್ಲೇ ಸಂಘಟಿತರಾಗಬೇಕಿದೆ. ಸಮಾಜದ ಜಾಗೃತಿಗಾಗಿ ಸಮಾವೇಶ ನಡೆಸಲಾಗುತ್ತಿದೆ ಎಂದರು. ಶಿಕ್ಷಣ, ಉದ್ಯಮ ಹಾಗೂ ಸಮಾಜ ಸೇವೆಯಲ್ಲಿ ಮಹಾಸಭಾ ನಡೆಸುತ್ತಿರುವ ಸೇವಾ ಚಟುವಟಿಕೆಗಳನ್ನು ವಿವರಿಸಿದರು.
ಆಹಾರೋದ್ಯಮಿ ರಾಘವೇಂದ್ರ ಶ್ರೇಷ್ಠಿ ಅವರನ್ನು ಸನ್ಮಾನಿಸಲಾಯಿತು. ಮಹಾಸಭಾದ ಜಿಲ್ಲಾಧ್ಯಕ್ಷ ಆರ್.ಜಿ. ನಾಗೇಂದ್ರ ಪ್ರಕಾಶ್, ರಾಜ್ಯ ಕೋ ಆಪ್ ಬ್ಯಾಂಕ್‌ಮತ್ತು ಸೊಸೈಟಿಗಳ ಒಕ್ಕೂಟದ ಅಧ್ಯಕ್ಷ ಆರ್.ಜಿ. ಶ್ರೀನಿವಾಸ ಮೂರ್ತಿ, ರಾಜ್ಯ ವಿದ್ಯಾಸಂಸ್ಥೆಗಳ ಒಕ್ಕೂಟದ ಅಧ್ಯಕ್ಷ ಕೆ.ವಿ. ಅಮರೇಶ್, ಮಹಾಸಭಾ ಸಂಘಟನಾ ಕಾರ್ಯದರ್ಶಿ ಎ.ಆರ್.ರವಿಕುಮಾರ್, ಮಹಾಸಭಾ ಮಹಿಳಾ ವಿಭಾಗದ ರಾಜ್ಯಾಧ್ಯಕ್ಷೆ ಉಮಾ ಸಾಯಿರಾಂ, ಹೇಮಾ ಶ್ರೀನಿವಾಸ್, ಸಿಇಒ ಶುಭಶ್ರೀ, ಮುಖಂಡರಾದ ಬಿ.ಎಸ್.ನಟರಾಜ್, ಕೆ.ವಿ. ಪ್ರಸನ್ನಕುಮಾರ್, ಬಿ.ಟಿ. ಅಶ್ವಥರಾಜ್, ಗುಂಡಾಲ್ ಮಂಜುನಾಥ್, ಕಾಸಲ್ ವಿ. ಸತೀಶ್, ಎಸ್. ಕಿರಣ್‌ಕುಮಾರ್, ಬಿ.ಗೀತಾ ಪ್ರಸಾದ್, ಮಾಕಂ ನಾಗರಾಜ ಗುಪ್ತ, ಎಸ್.ಟಿ. ಕುಸುಮ ಶ್ರೇಷ್ಠಿ, ಡಿ.ಜಿ. ಜಯರಾಮ ಶ್ರೇಷ್ಠಿ, ಸುನೀಲ್ ಕುಮಾರ್ ಇತರರಿದ್ದರು.
ವಾಸವಿ ನಾದಾಮೃತ ತಂಡ ಪ್ರಾರ್ಥನೆ ನಡೆಸಿಕೊಟ್ಟರೆ, ಬಿ.ಎಚ್. ಅಶೋಕ್ ಸ್ವಾಗತಿಸಿದರು. ದೇವಿಕಾ ಸುನೀಲ್ ನಿರೂಪಿಸಿದರು.

ದೆಹಲಿಯ ಪ್ರತಿಭಟನೆಯಲ್ಲಿ ಭಾಗಿಯಾದ ವಿದ್ಯಾರ್ಥಿಳೀಗ ಸಾಮಾಜಿಕ ಮಾಧ್ಯಮಗಳಲ್ಲಿ ಕ್ಷಮೆ ಕೇಳುತ್ತಿದ್ದಾರೆ. ಮಕ್ಕಳು ತಪ್ಪೆಸಗಿದ್ದಾರೆ, ಅವರಿಗೆ ಹೇಳಬೇಕಾದ್ದನ್ನು ತಿಳಿಸಲಾಗದೆ ತಪ್ಪಾಗಿದೆ ಎಂಬ ಭಾವನೆ ಪಾಲಕರಲ್ಲಿ ಕಾಡುತ್ತಿದೆ. ಮನೆಗಳಲ್ಲೇ ಜೆನ್ ಜೀಗೆ ಸರಿಯಾದ ದಿಕ್ಕು ತೋರಿಸಬೇಕಿದೆ.

— ಡಿ.ಎಸ್.ಅರುಣ್, ವಿಧಾನ ಪರಿಷತ್ ಸದಸ್ಯ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net