ಒಂದು ದಿನದ ಅಧ್ಯಯನ ಪ್ರವಾಸದ ಅಂಗವಾಗಿ ಯಕ್ಕೆಗುಂದಿ ಗ್ರಾಮದ ಜ್ಞಾನ ವಿಕಾಸ ಕೇಂದ್ರದ ಸದಸ್ಯರು ಬುಧವಾರ ಚನ್ನಗಿರಿ ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪೊಲೀಸ್ ಅಧಿಕಾರಿ ಶ್ರೀನಿವಾಸ್, ಸಮನ್ವಯಾಧಿಕಾರಿ ಶಶಿಕಲಾ ಈಶ್ವರ್, ನಾಗಮ್ಮ, ರಂಗಮ್ಮ ಇತರರಿದ್ದರು. Women
ಚನ್ನಗಿರಿ:ಇಂದಿನ ದಿನಗಳಲ್ಲಿ ಪುರುಷರಿಗೆ ಸಮಾನವಾಗಿ ಎಲ್ಲ ಕ್ಷೇತ್ರಗಳಲ್ಲೂ ಗುರುತಿಸಿಕೊಂಡಿರುವ ಮಹಿಳೆಯರು, ಮಗಳಾಗಿ, ತಾಯಿಯಾಗಿ, ಹೆಂಡತಿಯಾಗಿ, ಅಜ್ಜಿಯಾಗಿ ಇಡೀ ಕುಟುಂಬವನ್ನು ಸುಲಭವಾಗಿ ನಿರ್ವಹಿಸುವ ಅಪಾರ ಶಕ್ತಿ ಹೊಂದಿದ್ದಾರೆ ಎಂದು ಪೊಲೀಸ್ ಅಧಿಕಾರಿ ಶ್ರೀನಿವಾಸ್ ಹೇಳಿದರು.
ತಾಲೂಕಿನ ಸಂತೇಬೆನ್ನೂರು ಯೋಜನಾ ವ್ಯಾಪ್ತಿಯ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಯಕ್ಕೆಗುಂದಿ ಗ್ರಾಮದ ಜ್ಞಾನೋದಯ ಜ್ಞಾನ ವಿಕಾಸ ಕೇಂದ್ರದ ಮಹಿಳೆಯರಿಗೆ ಬುಧವಾರ ಆಯೋಜಿಸಿದ್ದ ಸ್ವಉದ್ಯೋಗ, ಧಾರ್ಮಿಕ ಕ್ಷೇತ್ರ ಮತ್ತು ಸರ್ಕಾರಿ ಇಲಾಖೆಗಳ ಪರಿಚಯದ ಒಂದು ದಿನದ ಅಧ್ಯಯನ ಪ್ರವಾಸದ ಅಂಗವಾಗಿ, ಚನ್ನಗಿರಿ ಪೊಲೀಸ್ ಠಾಣೆಯ ಕಾರ್ಯವೈಖರಿ ಪರಿಚಯಿಸಿ ಮಾತನಾಡಿದರು.
ಕುಟುಂಬದ ನಿರ್ವಹಣೆ, ಉತ್ತಮ ಸಂಸ್ಕಾರ ಹಾಗೂ ಶಿಕ್ಷಣವನ್ನು ಮಹಿಳೆಗೆ ನೀಡಿದರೆ, ಅದು ಇಡೀ ಕುಟುಂಬ ಮತ್ತು ಸಮಾಜದ ಸುಧಾರಣೆಗೆ ಗಟ್ಟಿ ನೆಲೆಯಾಗುತ್ತದೆ. ಮಹಿಳೆಯರು ತಮ್ಮ ಮೇಲಿಟ್ಟ ನಂಬಿಕೆ ಮತ್ತು ಬದ್ಧತೆಗೆ ಸದಾ ನ್ಯಾಯ ಒದಗಿಸುತ್ತಾರೆ. ತಾಯಿಯ ಮೂಲಕವೇ ಮಕ್ಕಳಿಗೆ ಲೌಕಿಕ ಶಿಕ್ಷಣ ದೊರೆಯುತ್ತದೆ ಎಂದರು.
ಮಹಿಳೆಯರು ಹೆಚ್ಚಾಗಿ ಕಾರ್ಯನಿರ್ವಹಿಸುವ ಸ್ಥಳಗಳಲ್ಲಿ ಪ್ರಾಮಾಣಿಕತೆ, ನಿಷ್ಠೆ ಹಾಗೂ ಶ್ರದ್ಧೆ ಹೆಚ್ಚಿರುತ್ತದೆ. ಒಂದು ಕಾಲದಲ್ಲಿ ಅಡುಗೆ ಮನೆಗಷ್ಟೇ ಸೀಮಿತವಾಗಿದ್ದ ಹೆಣ್ಣುಮಕ್ಕಳು ಇಂದು ಪರ್ವತಾರೋಹಣದಿಂದ ಹಿಡಿದು ವಿಮಾನ ಹಾರಿಸುವವರೆಗೆ ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿದ್ದಾರೆ. ತಾಯಿಯನ್ನು ದೇವರೆಂದು ಗೌರವಿಸುವ ನಾವು, ಆ ಸ್ಥಾನವನ್ನು ಉಳಿಸಿಕೊಂಡು ಹೋದಾಗ ಮಾತ್ರ ದೈವತ್ವಕ್ಕೆ ಅರ್ಥ ಬರುತ್ತದೆ ಎಂದು ಹೇಳಿದರು.
ಜ್ಞಾನ ವಿಕಾಸ ಕೇಂದ್ರದ ಸದಸ್ಯರಿಗೆ ಚನ್ನಗಿರಿ ಪೊಲೀಸ್ ಠಾಣೆ ಜತೆಗೆ ಸ್ಥಳೀಯ ನ್ಯಾಯಾಲಯ, ಅಗ್ನಿಶಾಮಕ ದಳ ಕಚೇರಿ, ಗಾಣದಕಟ್ಟೆ ಗ್ರಾಮದ ಸ್ವಉದ್ಯೋಗ ತರಬೇತಿ ಕೇಂದ್ರ ಹಾಗೂ ಪ್ರಮುಖ ದೇವಸ್ಥಾನಗಳ ಪರಿಚಯ ಮಾಡಿಕೊಡಲಾಯಿತು.
ಪೊಲೀಸ್ ಸಿಬ್ಬಂದಿ ಮಾಲತೇಶ್, ಜ್ಞಾನ ವಿಕಾಸ ಸಮನ್ವಯಾಧಿಕಾರಿ ಶಶಿಕಲಾ ಈಶ್ವರ್, ಒಕ್ಕೂಟದ ಅಧ್ಯಕ್ಷೆ ನಾಗಮ್ಮ, ಸೇವಾಪ್ರತಿನಿಧಿ ರಂಗಮ್ಮ, ಸಾವಿತ್ರಮ್ಮ, ಸುಲೋಚನಮ್ಮ, ಸುನಂದಾ, ಮಂಜಮ್ಮ, ಶ್ವೇತಾ, ಪುಷ್ಪಾ, ರೇಣುಕಾ, ರೇಖಾ, ನಾಗವೇಣಿ ಇತರರಿದ್ದರು.
"
ಹೆಣ್ಣು ಅಬಲೆಯಲ್ಲ, ಸಬಲೆ ಎನ್ನುವುದಕ್ಕೆ ನೂರಾರು ನಿದರ್ಶನಗಳಿವೆ. ಪುರುಷರ ಯಶಸ್ಸಿನ ಹಿಂದೆ ಯಾವಾಗಲೂ ಹೆಣ್ಣಿನ ಕಾಣದ ಕೈ ಇರುತ್ತದೆ. ಮನೆಯಲ್ಲಿ ಉತ್ತಮ ಸಂಸ್ಕಾರ ನೀಡುವವಳೇ ಹೆಣ್ಣು. ಮನೆ ಮತ್ತು ಮನದಲ್ಲಿ ಅವಳಿಗೆ ಮುಕ್ತ ಸ್ವಾತಂತ್ರ್ಯ ನೀಡಿದರೆ ಸಾಕು, ಅವಳು ಏನನ್ನಾದರೂ ಸಾಧಿಸಿ ತೋರಿಸುತ್ತಾಳೆ.
— ಬಿ.ಎನ್. ನೇತ್ರಾವತಿ, ಮಹಿಳಾ ಸಾಂತ್ವನ ಕೇಂದ್ರದ ಆಪ್ತ ಸಮಾಲೋಚಕಿ.