ಡಿಕೆಶಿ ಸಂಪುಟದಲ್ಲಿ ಯಾರಿಗೆ ಒಲಿಯುತ್ತೆ ಅದೃಷ್ಟ?

ಎಸ್.ಎಸ್. ಮಲ್ಲಿಕಾರ್ಜುನ್
ಎಸ್.ಎಸ್. ಮಲ್ಲಿಕಾರ್ಜುನ್
Published on

ಪ್ರಮುಖ ಮುಖ್ಯಾಂಶಗಳು

  • ಎಸ್ಸೆಸ್ಸೆಂ ಮತ್ತೆ ಮಂತ್ರಿಯಾಗುವ ಸಾಧ್ಯತೆ ಹೆಚ್ಚು
  • ಉಳಿದ ಶಾಸಕರಲ್ಲಿ ಶಾಂತನ ಗೌಡರೊಬ್ಬರೇ ಹಿರಿಯರು
ರಮೇಶ ಜಹಗೀರದಾರ್ ದಾವಣಗೆರೆ : ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಪ್ರಮಾಣವಚನ ಸ್ವೀಕರಿಸುವ ಮುಹೂರ್ತ ನಿಗದಿಯಾಗುತ್ತಿದ್ದಂತೆ ರಾಜ್ಯದಲ್ಲಿ ಸಚಿವ ಸ್ಥಾನದ ಆಕಾಂಕ್ಷಿಗಳ ಲಾಬಿ ಜೋರಾಗಿದೆ. ಈ ನಡುವೆ ದಾವಣಗೆರೆ ಜಿಲ್ಲೆಯಿಂದ ಯಾರು ಸಚಿವರಾಗುತ್ತಾರೆಂಬ ಕುತೂಹಲ ರಾಜಕೀಯ ವಲಯದಲ್ಲಿ ಮನೆಮಾಡಿದೆ.
ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ನೀಡಿದ ರಾಜೀನಾಮೆ ರಾಜ್ಯಪಾಲರಿಂದ ಅಂಗೀಕಾರವಾದ ನಂತರ, ಅವರ ಸಂಪುಟದಲ್ಲಿ ಗಣಿ ಮತ್ತು ಭೂವಿಜ್ಞಾನ ಸಚಿವರಾಗಿದ್ದ ಎಸ್.ಎಸ್. ಮಲ್ಲಿಕಾರ್ಜುನ್ ಕೂಡಾ ಮಾಜಿ ಮಂತ್ರಿಯಾಗಿದ್ದಾರೆ. ಹೊಸದಾಗಿ ಅಸ್ತಿತ್ವಕ್ಕೆ ಬರಲಿರುವ ಡಿಕೆಶಿ ಕ್ಯಾಬಿನೆಟ್ ಮೇಲೆ ಎಲ್ಲರ ಗಮನ ಕೇಂದ್ರೀಕೃತವಾಗಿದೆ.
ಜಿಲ್ಲೆಯ 7 ವಿಧಾನಸಭಾ ಕ್ಷೇತ್ರಗಳ ಪೈಕಿ ಹರಿಹರ ಬಿಟ್ಟು ಉಳಿದ 6ರಲ್ಲಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಶಾಸಕರಿದ್ದಾರೆ. ಅವರಲ್ಲಿ ಯಾರಿಗೆ ಸಚಿವ ಸ್ಥಾನ ಒಲಿಯಲಿದೆ ಎಂಬ ಲೆಕ್ಕಾಚಾರ ನಡೆಯುತ್ತಿದೆ.
ಆರು ಶಾಸಕರಲ್ಲಿ ನಾಲ್ವರು ಮೊದಲ ಬಾರಿಗೆ ವಿಧಾನಸಭೆ ಪ್ರವೇಶಿಸಿದವರು. ದಾವಣಗೆರೆ ಉತ್ತರ ಕ್ಷೇತ್ರದ ಎಸ್.ಎಸ್. ಮಲ್ಲಿಕಾರ್ಜುನ್ (4 ಬಾರಿ), ಹೊನ್ನಾಳಿಯ ಡಿ.ಜಿ. ಶಾಂತನಗೌಡ (3 ಬಾರಿ) ಹಿರಿಯ ಶಾಸಕರು. ಸಹಜವಾಗಿಯೆ ಇವರಿಬ್ಬರ ಹೆಸರು ಚರ್ಚೆಯಲ್ಲಿದೆ.
ಶಾಂತನಗೌಡರ ಹಿರಿತನವನ್ನು ಪರಿಗಣಿಸಿ ಅವಕಾಶ ನೀಡಬೇಕು ಎಂಬ ಒತ್ತಾಯ ಅವರ ಅಭಿಮಾನಿಗಳಿಂದ ಕೇಳಿಬಂದಿದೆ. ಆದರೆ ಶಾಂತನಗೌಡರು ಪ್ರಬಲ್ ಲಾಬಿಯನ್ನೇನೂ ಮಾಡುತ್ತಿಲ್ಲ. ವರಿಷ್ಠರ ಗಮನಕ್ಕೆ ತಂದಿದ್ದಾರೆ, ಅವರು ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂಬ ಮನಸ್ಥಿತಿಯಲ್ಲಿದ್ದಾರೆ.
ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಮತ್ತೊಮ್ಮೆ ಮಂತ್ರಿಯಾಗುವ ಸಾಧ್ಯತೆಯೇ ಹೆಚ್ಚು. ಹೈಕಮಾಂಡ್ ಮಟ್ಟದಲ್ಲಿ ಇರುವ ಸಂಪರ್ಕ, ಜಿಲ್ಲೆಯಲ್ಲಿ ಕುಟುಂಬದ ಪ್ರಭಾವ ಮತ್ತು ಹಿಡಿತ, ಜಾತಿ ಲೆಕ್ಕಾಚಾರ ಇದಕ್ಕೆ ಪುಷ್ಟಿ ನೀಡುತ್ತವೆ.
ಮಲ್ಲಿಕಾರ್ಜುನ್ 1998ರಿಂದ ಇಲ್ಲಿಯ ವರೆಗೆ 4 ಬಾರಿ ಶಾಸಕರಾಗಿ ಆಯ್ಕೆಯಾಗಿ, 3 ಬಾರಿ ಸಚಿವರಾದವರು. ಅವರಿಗಿರುವ ಕಾರ್ಯಕರ್ತರ, ಬೆಂಬಲಿಗರ ಜಾಲ, ಸಂಪನ್ಮೂಲ ಎಲ್ಲವೂ ಪರಿಗಣನೆಗೆ ಬರುತ್ತವೆ. 2028ರಲ್ಲಿ ನಡೆಯುವ ವಿಧಾನಸಭಾ ಚುನಾವಣೆಯ ದೃಷ್ಟಿಯಿಂದ ಜಿಲ್ಲೆಯಲ್ಲಿ ಪಕ್ಷಕ್ಕೆ ಬಲ ತುಂಬಲು ಮಲ್ಲಿಕಾರ್ಜುನ್ ಮುಖ್ಯವಾಗುತ್ತಾರೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ದಿ. ಡಾ. ಶಾಮನೂರು ಶಿವಶಂಕರಪ್ಪ ಬಹಳ ಆಪ್ತರಾಗಿದ್ದರು. ಆ ನಂಟು ಮಲ್ಲಿಕಾರ್ಜುನ್ ವಿಚಾರದಲ್ಲೂ ನೆರವಿಗೆ ಬರುತ್ತದೆ. ಅಲ್ಲದೆ ಡಿಕೆಶಿ ಜತೆಗೆ ಎಸ್ಸೆಸ್ಸೆಂ ಸಂಬಂಧ ಉತ್ತಮವಾಗಿದೆ.
ಚನ್ನಗಿರಿ ಶಾಸಕ ಶಿವಗಂಗಾ ಬಸವರಾಜ್ ಡಿಕೆಶಿ ಪರವಾಗಿ ಬ್ಯಾಟಿಂಗ್ ಮಾಡುತ್ತ ಬಂದವರು. ಆದರೆ ಆ ಕಾರಣಕ್ಕೆ ಅವರನ್ನು ಸಂಪುಟಕ್ಕೆ ತೆಗೆದುಕೊಳ್ಳುತ್ತಾರೆ ಎಂದು ಹೇಳುವ ಸ್ಥಿತಿ ಇಲ್ಲ. ಅವರು ಮೊದಲ ಬಾರಿ ಶಾಸಕರಾದವರು.
ಜಗಳೂರು ಶಾಸಕ ದೇವೇಂದ್ರಪ್ಪ ಅವರಿಗೂ ಈ ಮಾತು ಅನ್ವಯಿಸುತ್ತದೆ. ದಾವಣಗೆರೆ ದಕ್ಷಿಣದಲ್ಲಿ ಇತ್ತೀಚೆಗೆ ನಡೆದ ಉಪ ಚುನಾವಣೆಯಲ್ಲಿ ಆಯ್ಕೆಯಾಗಿರುವ ಸಮರ್ಥ್ ಶಾಮನೂರು ಅತ್ಯಂತ ಕಿರಿಯ ಶಾಸಕ. ಅವರ ಹೆಸರು ಪರಿಗಣಿಸುವ ಪ್ರಶ್ನೆ ಉದ್ಭವಿಸುವುದಿಲ್ಲ.
ಇನ್ನು ಮಾಯಕೊಂಡ ಶಾಸಕ ಕೆ.ಎಸ್. ಬಸವಂತಪ್ಪ ಅವರ ಲೆಕ್ಕಾಚಾರ ಬೇರೆ ಇದ್ದಂತಿದೆ. ಅವರೂ ಮೊದಲ ಬಾರಿ ಶಾಸಕರಾದವರು. ಆದರೆ ಪರಿಶಿಷ್ಟ ಜಾತಿಯ ಎಡಗೈ ಸಮುದಾಯದ ಕೋಟಾದಲ್ಲಿ ಅವಕಾಶ ದೊರೆಯಬಹುದೆ ಎಂಬ ನಿರೀಕ್ಷೆಯಲ್ಲಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net