ದಾರಿ ಯಾವುದಯ್ಯ ದವಾಖಾನೆ ವೆಚ್ಚಕೆ..?

ದಾವಣಗೆರೆ ಚಾಮರಾಜಪೇಟೆಯ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ.
ದಾವಣಗೆರೆ ಚಾಮರಾಜಪೇಟೆಯ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆ.
Published on

ಪ್ರಮುಖ ಮುಖ್ಯಾಂಶಗಳು

  • ಶುಲ್ಕದ ಮೊರೆ ಹೋದ ದಾವಣಗೆರೆ ಮಹಿಳಾ ಸರ್ಕಾರಿ ಆಸ್ಪತ್ರೆ
  • ಹೊಸ ವರ್ಷಕೆ ಸ್ವಾಗತಿಸುತಿದೆ ಅನುಭೋಗ ಶುಲ್ಕ
  • ವಾರ್ಷಿಕ ವೆಚ್ಚ 87 ಲಕ್ಷ, ಸರ್ಕಾರದ ನೆರವು ಮಾಯ
ದಾವಣಗೆರೆ: ಇಲ್ಲಿನ ಚಾಮರಾಜಪೇಟೆಯ ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆ, ಚಿಕಿತ್ಸಾ ಕ್ರಮಗಳಿಗೆ ವಿಧಿಸಲಾದ ಶುಲ್ಕ ವಿಚಾರ ಹೊಸ ವರ್ಷದಿಂದ ಸದ್ದು ಮಾಡುತ್ತಿದೆ! ಆಸ್ಪತ್ರೆ ಬರುವ ರೋಗಿಗಳ ಸಂಬಂಧಿಕರಿಗೆ ನೋಂದಣಿ ವಿಭಾಗದ ಸಿಬ್ಬಂದಿ, ಶುಲ್ಕ ಪಟ್ಟಿ ಬಗ್ಗೆ ಮನವರಿಕೆ ಮಾಡುತ್ತಿದ್ದಾರೆ.
ಬಡತನ ರೇಖೆಗಿಂತ ಕೆಳಗಿನವರೂ ಒಳಗೊಂಡು ಎಪಿಎಲ್‌ನವರಿಗೂ ಇದುವರೆಗೆ ಇಲ್ಲಿ ಉಚಿತವಾಗಿಯೇ ವಿವಿಧ ಚಿಕಿತ್ಸಾ ಕ್ರಮಗಳಿಗೆ ಸೇವೆ ಒದಗಿಸಲಾಗುತ್ತಿತ್ತು. ಇನ್ನು ಮುಂದೆ ಎಪಿಎಲ್ ವರ್ಗದವರಿಗೆ ಇಲ್ಲಿ ಎಲ್ಲದಕ್ಕೂ ಅನುಭೋಗ ಶುಲ್ಕ ಅನ್ವಯವಾಗಲಿದೆ.
ದಾವಣಗೆರೆ ಅಲ್ಲದೆ ಪಕ್ಕದ ಬಳ್ಳಾರಿ, ಹಾವೇರಿ ಇನ್ನಿತರೆ ಜಿಲ್ಲೆಗಳ ಜನರೂ ಇಲ್ಲಿಗೆ ಬಂದು ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊರರೋಗಿ ವಿಭಾಗದಲ್ಲಿ ಕನಿಷ್ಠ 110ರಿಂದ 150 ರೋಗಿಗಳಿದ್ದರೆ 18ರಿಂದ 30 ಮಂದಿ ಒಳರೋಗಿಗಳು ಇರುತ್ತಾರೆ. ದಿನದಲ್ಲಿ 15ರಿಂದ 20 ಗರ್ಭಿಣಿಯರು ಒಳರೋಗಿ ಆಗುತ್ತಿದ್ದಾರೆ. ಮೊದಲೆಲ್ಲ ಈ ಆಸ್ಪತ್ರೆಯಲ್ಲಿ ತಿಂಗಳೊಂದಕ್ಕೆ ಸುಮಾರು 350 ಹೆರಿಗೆ ಆಗುತ್ತಿದ್ದರೆ, ಕಳೆದ ಕೆಲವು ತಿಂಗಳಿಂದ ಇದರ ಸಂಖ್ಯೆ 630 ದಾಟಿದೆ!
ಒಟ್ಟು ಹೆರಿಗೆಗಳ ಪೈಕಿ ಶೇ.55ರಷ್ಟು ಸಹಜ ಪ್ರಸೂತಿ ಉಚಿತವಾಗಿ ನಡೆಯುತ್ತಿದ್ದವು. ಶೇ.45ರಷ್ಟು ಆಗುತ್ತಿದ್ದ ಸಿಜೇರಿಯನ್ ಹೆರಿಗೆ ಪ್ರಕರಣಗಳಲ್ಲಿ ಎಬಿಎಆರ್‌ಕೆ ಯೋಜನೆಯಡಿ ಹಣ ಬರಬೇಕಿದ್ದರೆ ಇದರಲ್ಲಿ ಶೇ.15ರಷ್ಟು ಪ್ರಕರಣಗಳಲ್ಲಿ ಸಮರ್ಪಕ ದಾಖಲಾತಿಗಳ ಕೊರತೆ ಕಾರಣಕ್ಕೆ ಆಸ್ಪತ್ರೆಗೆ ಹಣ ಸಂದಾಯವಾಗುತ್ತಿರಲಿಲ್ಲ ಎಂಬುದು ಮೂಲಗಳ ಮಾತು.
ಆಸ್ಪತ್ರೆಯಲ್ಲಿ ದೈನಂದಿನ ನಿರ್ವಹಣೆ, ಅವಶ್ಯಕ ಸಾಮಗ್ರಿ ಖರೀದಿ ಹಾಗೂ ಎಬಿಎಆರ್‌ಕೆ ನಿಯಮಾನುಸಾರ ಆಸ್ಪತ್ರೆಯ ವೈದ್ಯರು-ಸಿಬ್ಬಂದಿಗೆ ಅವಶ್ಯಕ ಪ್ರೋತ್ಸಾಹಧನ ನೀಡಲು ಆರ್ಥಿಕ ತೊಂದರೆ ಆಗುತ್ತಿದೆ. ಎಬಿಎಆರ್‌ಕೆ ಅನುದಾನ ಒಂದರಿಂದಲೇ ಆಸ್ಪತ್ರೆ ನಿರ್ವಹಣೆಗೆ ಸಮಸ್ಯೆಯಾಗಿದೆ. ಹೀಗಾಗಿ ಸರ್ಕಾರ ಮತ್ತು ಜಿಲ್ಲಾಧಿಕಾರಿ ಆದೇಶದನ್ವಯ ನಿರ್ಧರಿಸಿದಂತೆ ಜ.1ರಿಂದಲೇ ಅನುಭೋಗ ಶುಲ್ಕ ಸಂಗ್ರಹಿಸಲಾಗುತ್ತಿದೆ ಎಂಬುದು ಆಸ್ಪತ್ರೆ ಅಧೀಕ್ಷಕರ ಮಾತು.
ಅದರಂತೆ ಒಪಿಡಿ ಕಾರ್ಡ್, ಅಡ್ಮಿಷನ್ ಕೇಸ್ ಶೀಟ್, ಎಕ್ಸರೇ , ಅಲ್ಟ್ರಾಸೌಂಡ್ ಸ್ಕಾೃನಿಂಗ್‌ಗೆ ವಿಧಿಸಲಾದ ಶುಲ್ಕವನ್ನು ಬಡವರೂ ಕಟ್ಟಬೇಕಾದ್ದು ಹೊಸ ವರ್ಷದ ಲಿಖಿತ!
ಅನುದಾನದ ಅಡಚಣೆ:
ಪ್ರಸೂತಿ ಸಂಬಂಧ ರೋಗಿಗೆ ನೀಡುವ 32 ಪುಟಗಳುಳ್ಳ ಕೇಸ್ ಶೀಟ್ ಪ್ರತಿಗಳನ್ನು ಸರ್ಕಾರ ಹಲವು ವರ್ಷದಿಂದ ಆಸ್ಪತ್ರೆಗೆ ಪೂರೈಸುತ್ತಿಲ್ಲ. ಹೀಗಾಗಿ ಆಸ್ಪತ್ರೆಯಿಂದಲೇ ಇದನ್ನು ಸ್ಥಳೀಯವಾಗಿಯೇ ಕಾಲಕಾಲಕ್ಕೆ ಮುದ್ರಿಸಲಾಗುತ್ತಿದೆ. ವರ್ಷದಲ್ಲಿ 2 ಲಕ್ಷ ರೂ. ವೆಚ್ಚವಾಗಿದ್ದು, ಮುದ್ರಕರಿಗೆ ಬಾಕಿ ನೀಡಲಾಗಿಲ್ಲ!
ಮಹಿಳೆಯರ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಮೂಲಗಳ ಪ್ರಕಾರ ಒಂದು ವರ್ಷದಲ್ಲಿ 87 ಲಕ್ಷ ರೂ.ಗಳಷ್ಟು ವೆಚ್ಚವಾಗಿದೆ. ಇದರಲ್ಲಿ ಎಬಿಎಆರ್‌ಕೆ ಮೂಲದಿಂದ ಬರುವ ಹಣದ ಮೊತ್ತವೇ 69.39 ಲಕ್ಷ ರೂ.ಗಳಿದೆ. ವೈದ್ಯರ ಕೊಠಡಿಯ ಶೌಚಗೃಹಗಳ ದುರಸ್ತಿಗೆ ಬೇರೊಂದು ಮೂಲದ ಹಣ ಬಳಸಬೇಕಾಯಿತು ಎನ್ನುತ್ತವೆ ಆಸ್ಪತ್ರೆ ಮೂಲಗಳು.
ಇನ್ನು ಆಸ್ಪತ್ರೆಯ ಒಂದು ಬದಿಯಿಂದ ಚಾಮರಾಜಪೇಟೆಯ ನವೀಕೃತ ಮಾರುಕಟ್ಟೆ ಸಂಕೀರ್ಣಕ್ಕೆ ತೆರಳಲು ರಸ್ತೆ ಮಾರ್ಗ ನಿರ್ಮಿಸಬೇಕಿದೆ. ಇದರ ಕಾಮಗಾರಿಗೆ ಆಸ್ಪತ್ರೆಗೆ ಸೀಮಿತವಿರುವ ಕೊಳವೆಬಾವಿ ಹೊರತುಪಡಿಸಿ, ಜಲಸಿರಿ ನೀರನ್ನು ಬಳಸುವ ಇರಾದೆಯೇನೋ ಇದೆ. ಆದರೆ ಅದರ ಬಿಲ್ ಕಟ್ಟುವವರ‌್ಯಾರು? ಎಂಬುದು ಕೂಡ ಕನ್ನಡಿಯೊಳಗಿನ ಗಂಟು!
ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಆಸ್ಪತ್ರೆ ನಿರ್ವಹಣೆಗೆ ಬರಬೇಕಿರುವ 45 ಲಕ್ಷ ರೂ. ಕೂಡ ತಲುಪಿಲ್ಲ. ನವಜಾತ ಶಿಶು ಘಟಕದಲ್ಲಿನ ಪ್ರತಿ ಶಿಶುವಿನ ನಿರ್ವಹಣೆಗೆ ದಿನವೊಂದಕ್ಕೆ 1 ಸಾವಿರ ರೂ. ವೆಚ್ಚವಾಗುತ್ತಿದೆ. ಪ್ರತಿ 5 ಶಿಶುಗಳಿಗೆ 15 ದಿನಕ್ಕೆ ಆಕ್ಸಿಜನ್ ಸಿಲಿಂಡರ್ ನೀಡಬೇಕಿದೆ. 40 ಸಿಲಿಂಡರ್ ಲಭ್ಯವಿದ್ದರೂ ಆಕ್ಸಿಜನ್‌ಗಾಗಿ ಟೆಂಡರ್ ಕರೆಯಬೇಕು. ಗುತ್ತಿಗೆದಾರರಿಗೆ ಕೊಡುವುದು ಮಾತ್ರವಲ್ಲದೆ ವಿದ್ಯುತ್ ಇನ್ನಿತರೆ ಬಾಕಿ ಬಿಲ್ ಉಳಿದಿವೆ ಎನ್ನುತ್ತವೆ ಆಸ್ಪತ್ರೆ ಮೂಲಗಳು.
ಚುಚ್ಚುಮದ್ದು ಅಲಭ್ಯ
ಅವಧಿಪೂರ್ವ ಜನಿಸಿದ ಮಗುವಿಗೆ ಶ್ವಾಸಕೋಶ ಸಂಬಂಧಿತ ಚಿಕಿತ್ಸೆಗೆ ಸರ್ಫೆಕ್‌ಟ್ಯಾಂಟ್ ಚುಚ್ಚುಮದ್ದು ಸಕಾಲಕ್ಕೆ ನೀಡದಿದ್ದರೆ ಪ್ರಾಣಾಪಾಯವಾಗುವ ಸಾಧ್ಯತೆ ಹೆಚ್ಚು. 17 ಸಾವಿರ ರೂ. ವೆಚ್ಚದ ಈ ಚುಚ್ಚುಮದ್ದನ್ನು ಮಗುವಿನ ವಯಸ್ಸಿಗೆ ತಕ್ಕಂತೆ 2 ವಯಲ್ ನೀಡಬಹುದು. ಇದರ ಲಭ್ಯತೆ ಆಸ್ಪತ್ರೆಯಲ್ಲಿಲ್ಲ. ಅದನ್ನೂ ಹೊರಗಿನಿಂದು ತಂದು ನವಜಾತ ಶಿಶು ನಿಗಾ ಘಟಕದಲ್ಲಿನ ಮಗುವಿಗೆ ನೀಡಿದರೂ ಅದರ ಹಣ ವಾಪಾಸ್ ಬರುವುದೂ ಕಷ್ಟಕರ ಎನ್ನುತ್ತಾರೆ ಅಲ್ಲಿನ ವೈದ್ಯರು.
ಪುರಸ್ಕಾರದ ಮೊತ್ತವೂ ಬರಲಿಲ್ಲ!
ಕೇಂದ್ರ ಸರ್ಕಾರದ ಲಕ್ಷೃ ಮಾತೃ ಆರೋಗ್ಯ ಕಾರ್ಯಕ್ರಮದಡಿ ರಾಜ್ಯದ 12 ಆಸ್ಪತ್ರೆಗಳ ಪೈಕಿ ರಾಷ್ಟ್ರೀಯ ಗುಣಮಟ್ಟ ಪ್ರಮಾಣಪತ್ರವನ್ನು ಈ ಆಸ್ಪತ್ರೆಯೂ ಕಳೆದೊಂದು ವರ್ಷದ ಹಿಂದೆ ಪಡೆದಿತ್ತು. ವಿಚಿತ್ರ ಎಂದರೆ ಈ ಪುರಸ್ಕಾರ ರೂಪದಲ್ಲಿ ಬರಬೇಕಿದ್ದ 6 ಲಕ್ಷ ರೂ. ಕೂಡ ಆಸ್ಪತ್ರೆಗೆ ತಲುಪಿಲ್ಲ. ಎಬಿಎಆರ್‌ಕೆ ಕಾರ್ಯಕ್ರಮದಡಿ ಕೆಲಸ ನಿರ್ವಹಿಸಿದ ಆಸ್ಪತ್ರೆ ವೈದ್ಯರು ಹಾಗೂ ಸಿಬ್ಬಂದಿಗೆ ಒಂದೂವರೆ ವರ್ಷದಿಂದ ಇನ್‌ಸೆಂಟಿವ್ ಕೂಡ ತಲುಪಿಲ್ಲ!
ಹಳೆಯ ಆಂಬುಲೆನ್ಸೇ ಗತಿ!
ಆಸ್ಪತ್ರೆಗೆ ಬರುವ ರೋಗಿಗಳ ಹೆಚ್ಚಿನ ಚಿಕಿತ್ಸೆಗಾಗಿ ಇತರೆ ಸರ್ಕಾರಿ, ಖಾಸಗಿ ಆಸ್ಪತ್ರೆಗೆ ಕರದೊಯ್ಯಲು ಹೊಸ ಆಂಬುಲೆನ್ಸ್ ಆಸ್ಪತ್ರೆಗೆ ಅಗತ್ಯವಿದೆ. ಸಿಎಸ್‌ಆರ್ ನಿಧಿಯಡಿ ಕೇಳಿದರೂ ಆಸ್ಪತ್ರೆ ಮೊರೆ ಯಾರಿಗೂ ಕೇಳುತ್ತಿಲ್ಲ. ಎಫ್‌ಸಿ ಅವಧಿ ಮುಗಿದಿದ್ದರೂ ಸೀಮಿತ ಅವಧಿಗೆ ಆರ್‌ಟಿಒ ಇಲಾಖೆಯ ಅನುಮತಿ ಪಡೆದು ಹಳೆಯ ಆಂಬುಲೆನ್ಸ್ ಸದ್ಯಕ್ಕೆ ಓಡಾಡುತ್ತಿದೆ ಎಂಬುದು ಸಿಬ್ಬಂದಿಯ ಗುಸುಗುಸು ಮಾತು.
-----
ಸೇವಾ ವಿವರ ನಿಗದಿತ ಶುಲ್ಕ
ಒಪಿಡಿ ಕಾರ್ಡ್ 10 ರೂ.
ಅಡ್ಮಿಷನ್ ಕೇಸ್ ಶೀಟ್ 100 ರೂ.
ವಿಭಾಗ/ ಇತರೆ ಶಸ್ತ್ರಚಿಕಿತ್ಸೆಗಳು
(ಎಬಿಎಆರ್‌ಕೆ ರಹಿತ) 1000 ರೂ.
ಸಹಜ ಹೆರಿಗೆ 500 ರೂ.
ಎಕ್ಸರೇ 100 ರೂ.
ಅಲ್ಟ್ರಾಸೌಂಡ್ ಸ್ಕಾೃನಿಂಗ್ 200 ರೂ.
ರಕ್ತ (ಮಧುಮೇಹ) ಪರೀಕ್ಷೆ 20 ರೂ.
ಒಜಿಟಿಟಿ 50 ರೂ.
ಲಿವರ್ ಫಂಕ್ಷನ್ ಟೆಸ್ಟ್ 100 ರೂ.
ಆರ್‌ಎಫ್‌ಟಿ 100 ರೂ.
ಸಮಗ್ರ ರಕ್ತಕಣಗಳ ಪರೀಕ್ಷೆ 50 ರೂ.
ರಕ್ತ ಗುಂಪಿನ ಪರೀಕ್ಷೆ 20 ರೂ.
ಮೂತ್ರ ಪರೀಕ್ಷೆ 10 ರೂ.
ಯುಪಿಟಿ 50 ರೂ.

ರೋಗಿಗಳ ಅನುಕೂಲ ಹಾಗೂ ಆಸ್ಪತ್ರೆ ನಿರ್ವಹಣೆಗಾಗಿ ಸರ್ಕಾರದ ಮಾನದಂಡದಂತೆ ಹಾಗೂ ಜಿಲ್ಲಾಧಿಕಾರಿ ಆದೇಶದಂತೆ ವಿವಿಧ ಸೇವಾ ಶುಲ್ಕ ವಿಧಿಸಲಾಗಿದೆ. ಶುಕ್ರವಾರದಿಂದಲೇ ಜಾರಿಯಾಗಿದೆ. ಸಾರ್ವಜನಿಕರು ಸಹಕರಿಸಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net