ನಮ್ಮೂರ ಶಾಲೆ ಮುಚ್ಚಲು ಬಿಡೆವು

ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿ ವಿರೋಧಿಸಿ ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಗ್ರಾಮಸ್ಥರು, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್‌ಒ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಧು ತೊಗಲೇರಿ, ಮಹಾದೇವಪ್ಪ, ರಂಗಸ್ವಾಮಿ, ಶಿವಲಿಂಗಪ್ಪ, ನಾಗರಾಜ್, ದೇವೇಂದ್ರಪ್ಪ ಇತರರಿದ್ದರು.
ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿ ವಿರೋಧಿಸಿ ದಾವಣಗೆರೆ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಗ್ರಾಮಸ್ಥರು, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್‌ಒ ನೇತೃತ್ವದಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು. ಮಧು ತೊಗಲೇರಿ, ಮಹಾದೇವಪ್ಪ, ರಂಗಸ್ವಾಮಿ, ಶಿವಲಿಂಗಪ್ಪ, ನಾಗರಾಜ್, ದೇವೇಂದ್ರಪ್ಪ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಪಿಎಸ್ ಮ್ಯಾಗ್ನೆಟ್ ಯೋಜನೆಗೆ ವಿರೋಧ
  • ನಲ್ಕುಂದ ಗ್ರಾಮದಲ್ಲಿ ಜನರ ಪ್ರತಿಭಟನೆ
  • ಶಿಕ್ಷಕರು, ಮೂಲ ಸೌಕರ್ಯ ಕಲ್ಪಿಸಲು ಆಗ್ರಹ
ದಾವಣಗೆರೆ: ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಜಾರಿ ವಿರೋಧಿಸಿ ತಾಲೂಕಿನ ನಲ್ಕುಂದ ಗ್ರಾಮದಲ್ಲಿ ಗ್ರಾಮಸ್ಥರು, ಶಾಲಾಭಿವೃದ್ಧಿ ಸಮಿತಿ ಹಾಗೂ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಹಾಗೂ ಎಐಡಿಎಸ್‌ಒ ನೇತೃತ್ವದಲ್ಲಿ ಮಂಗಳವಾರ ದಿಢೀರ್ ಪ್ರತಿಭಟನೆ ನಡೆಸಿದರು.
ಗ್ರಾಮದಲ್ಲಿ ನಮ್ಮೂರ ಶಾಲೆ ನಮ್ಮ ಕಣ್ಮಣಿ, 2026- 27ನೇ ಶೈಕ್ಷಣಿಕ ವರ್ಷಕ್ಕೆ ಸ್ವಾಗತ ಎಂಬ ಬರಹದ ಬ್ಯಾನರ್ ಕಟ್ಟಿದ ಗ್ರಾಮಸ್ಥರು ಯಾವುದೇ ಕಾರಣಕ್ಕೂ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ. ಕೆಪಿಎಸ್ ಮ್ಯಾಗ್ನೆಟ್ ಯೋಜನೆ ಅನುಷ್ಠಾನಗೊಳಿಸಬಾರದು. ಯಾವುದೇ ಶಾಲೆಯನ್ನೂ ವಿಲೀನ ಮಾಡಬಾರದು ಎಂದು ಆಗ್ರಹಿಸಿದರು.
ಪ್ರತಿಭಟನಾ ಸಭೆಯಲ್ಲಿ ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿ ಜಿಲ್ಲಾ ಉಪಾಧ್ಯಕ್ಷ ಮಧು ತೊಗಲೇರಿ ಮಾತನಾಡಿ, ಸರ್ಕಾರ ಕೊಡುವ ಗ್ಯಾರಂಟಿಗಳು ಬಡಜನರ ಬದುಕನ್ನು ಹಸನು ಮಾಡುವುದಿಲ್ಲ. ಒಂದನೇ ತರಗತಿಯಿಂದ ಕಂಪ್ಯೂಟರ್ ಮತ್ತು ಎಐ ಶಿಕ್ಷಣ ಯಾರಿಗೆ ಬೇಕು? ಅಕ್ಷರ ಜ್ಞಾನ, ಭಾಷಾ ಕಲಿಕೆ, ಕನ್ನಡ ಮತ್ತು ಇಂಗ್ಲಿಷ್ ವ್ಯಾಕರಣ, ವಿಜ್ಞಾನ, ರಸಾಯನಶಾಸ್ತ್ರ, ಗಣಿತದ ಮೂಲ ನಿಯಮಗಳನ್ನು ಕಲಿಯಬೇಕೆ ಹೊರತು ಆ ಮಕ್ಕಳಿಗೆ ಕಂಪ್ಯೂಟರ್ ಅಗತ್ಯವಿಲ್ಲ ಎಂದರು.
40 ವರ್ಷದಿಂದ ಬಸ್ಸು ಕಾಣದ ಹಳ್ಳಿಗಳಿಗೆ ಬಸ್ಸು ಬರಲು ಸಾಧ್ಯವೆ? ಕೌಶಲಾಭಿವೃದ್ಧಿ ಹೆಸರಿನಲ್ಲಿ ಮಕ್ಕಳಿಗೆ ಟೈಲರಿಂಗ್ ಕಲಿಸುವುದು ಹತ್ತಿ ಬಿಡಿಸುವುದು, ಅಡಿಕೆ ಸುಲಿಯುವುದು ಇತ್ಯಾದಿ ಕೆಲಸವನ್ನು ಕಲಿಸಲು ಹೊರಟಿರುವ ಸರ್ಕಾರ, ಒಂದೆಡೆ ಬಾಲಕಾರ್ಮಿಕ ಪದ್ಧತಿ ನಿಷೇಧಿಸಿ, ಇನ್ನೊಂದೆಡೆ ಶಾಲೆಯಲ್ಲಿ ಇಂತಹ ಕೌಶಲ ನೀಡಿ ಬಾಲಕಾರ್ಮಿಕರನ್ನು ಕಾನೂನುಬದ್ಧ ಮಾಡಲು ಹೊರಟಿದ್ದೀರಿ. ಶಾಲೆಗೆ ಸಮರ್ಪಕ ಕಟ್ಟಡ ಒದಗಿಸಿ ಹೆಚ್ಚುವರಿ ಶಿಕ್ಷಕರನ್ನು ನೇಮಿಸಿ ಎಂದು ಆಗ್ರಹಿಸಿದರು.
ಸಮಿತಿಯ ಉಪಾಧ್ಯಕ್ಷ ಮಹಾದೇವಪ್ಪ ಮಾತನಾಡಿ ಜೈಲಿಗೆ ಹೋದರೂ ಸರಿಯೇ ನಮ್ಮೂರ ಶಾಲೆ ಮುಚ್ಚಲು ಬಿಡುವುದಿಲ್ಲ. ಸರ್ಕಾರ ನೀಡುವ ಪೊಳ್ಳು ಆಶ್ವಾಸನೆಗಳು ನಮಗೆ ಬೇಕಿಲ್ಲ. ನಮ್ಮೂರ ಶಾಲೆಯನ್ನೇ ಅಭಿವೃದ್ಧಿಪಡಿಸಿ, ಶಿಕ್ಷಕರನ್ನು ಕೊಡಿ. ಮೂಲ ಸೌಕರ್ಯವನ್ನು ಕೊಟ್ಟು ಬಲಪಡಿಸಿ ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಪಂ ಸದಸ್ಯರಾದ ರಂಗಸ್ವಾಮಿ, ಶಿವಲಿಂಗಪ್ಪ, ಎಸ್‌ಡಿಎಂಸಿ ಅಧ್ಯಕ್ಷ ನಾಗರಾಜ್, ಸಾರ್ವಜನಿಕ ಶಿಕ್ಷಣ ಉಳಿಸಿ ಸಮಿತಿಯ ಅಧ್ಯಕ್ಷ ದೇವೇಂದ್ರಪ್ಪ ಮತ್ತು ಕಾರ್ಯದರ್ಶಿ ಆಂಜನೇಯ, ಹನುಮಂತಪ್ಪ ಹಾಗೂ ಎಐಕೆಎಂಎಸ್ ದ್ಯಾಮೇನಹಳ್ಳಿ ಮತ್ತು ನಲ್ಕುಂದ ಘಟಕದ ಸದಸ್ಯರು ಪಾಲ್ಗೊಂಡಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net