

ಜಗಳೂರು: ಪೈಪ್‌ಲೈನ್ ಮೂಲಕ 57 ಕೆರೆಗಳಿಗೆ ನೀರು ಹರಿಸುವ ಯೋಜನೆ ಅನುಷ್ಠಾನಗೊಂಡಿರುವುದು ಒಂದು ಕಡೆ ಸಂಭ್ರಮವಾದರೆ, ಮತ್ತೊಂದೆಡೆ ರೈತರು ತಮ್ಮ ಊರಿನ ಕೆರೆಗಳು ಮೊದಲು ತುಂಬಲಿ ಎಂದು ಪೈಪ್‌ಲೈನ್ ವಾಲ್ವ್ ಬಂದ್ ಮಾಡಿ ನೀರು ಪೋಲು ಮಾಡುತ್ತಿದ್ದಾರೆ.
ತಾಲೂಕಿನಲ್ಲಿ ಅಂತರ್ಜಲ ವೃದ್ಧಿ, ಕುಡಿಯುವ ಹಾಗೂ ಕೃಷಿಗೆ ನೀರು ಒದಗಿಸಲು ಜಾರಿಗೆ ತಂದ ಏತ ನೀರಾವರಿ ಯೋಜನೆ ರೂಪಿಸಿದ್ದು, ಈ ಯೋಜನೆಯ ಲವಾಗಿ 5 ದಶಕಗಳಿಂದ ಕೋಡಿ ಬೀಳದ ಕೆಲ ಕೆರೆಗಳು ಕೋಡಿ ಬಿದ್ದಿವೆ. 3 ವರ್ಷಗಳಿಂದ ಕೆರೆಗಳಲ್ಲಿ ನೀರು ಕಾಣುವಂತಾಗಿದೆ. ಕೆರೆಗಳಿಗೆ ಜೀವ ಕಳೆ ನೀಡಲು ನೀರಾವರಿ ನಿಗಮದ ಅಧಿಕಾರಿಗಳು ಶ್ರಮಿಸುತ್ತಿರುವಾಗಲೇ ವಿವಿಧ ಗ್ರಾಮಗಳ ರೈತರು, ತಮ್ಮ ಕೆರೆ ಮೊದಲು ತುಂಬಲಿ ಎಂಬ ಉದ್ದೇಶದಿಂದ ವಾಲ್ವ್ ಬಂದ್ ಮಾಡುತ್ತಿದ್ದಾರೆ. ಇದರಿಂದಾಗಿ ಒತ್ತಡ ಹೆದ್ದಾಗಿ ಪೈಪ್‌ಗಳು ಒಡೆದು ನೀರು ಪೋಲಾಗುತ್ತಿದೆ.
ಮೂರು ವರ್ಷ ಕಾನೂನು ತೊಡಕಿನಿಂದ ನೀರು ಕಾಣದ ಗುರುಸಿದ್ದಾಪುರ ಸೇರಿ ನಾಲ್ಕು ಕೆರೆಗಳಿಗೆ 3 ದಿನಗಳಿಂದ ಪ್ರಾಯೋಗಿಕವಾಗಿ ನೀರು ಬೀಡಲಾಗಿದೆ. ಆದರೆ, ತುಪ್ಪದಹಳ್ಳಿ ಕೆರೆಯ ವ್ಯಾಪ್ತಿಯ ರೈತರು ತಮ್ಮ ಕೆರೆ ತುಂಬಲಿ ಎಂದು ತಮಗೆ ಇಚ್ಚೆ ಬಂದಂತೆ ನೀರಿನ ವಾಲ್ವ್ ತಿರುಗಿಸಿದರಿಂದ ನೀರಿನ ಪೈಪ್ ಹೊಡೆದು ಆಕಾಶದೆತ್ತರಕ್ಕೆ ನೀರು ಚಿಮ್ಮುತ್ತಿದೆ ಎಂದು ಇಂಜಿನಿಯರ್ ಆನಂದ್ ತಿಳಿಸಿದ್ದಾರೆ.
ಯೋಜನೆಯ ಗುತ್ತಿಗೆ ಪಡೆದಿರುವ ಏಜನ್ಸಿಯ ಅಧಿಕಾರಿಗಳು ಮತ್ತು ನೀರಾವರಿ ನಿಗಮದ ಅಧಿಕಾರಿಗಳು ವಾಲ್ವ್ ಅಡ್ಜಸ್ಟ್ ಮಾಡಿ ಬರುವಷ್ಟರಲ್ಲಿ ಕೆಲವರು ವಾಲ್ವ್ ಬಂದ್ ಮಾಡುತ್ತಿದ್ದಾರೆ. ಕಲ್ಲು, ಕಬ್ಬಿಣದ ಸಾಧನಗಳನ್ನು ಬಳಸಿ ಹಾನಿ ಮಾಡುತ್ತಿದ್ದಾರೆ. ರಿಪೇರಿ ಮಾಡಿ ನಮಗೂ ಸಾಕಾಗಿದೆ. ಶಾಸಕ ಬಿ. ದೇವೇಂದ್ರಪ್ಪ ಅವರಿಗೂ ಮಾಹಿತಿ ನೀಡಲಾಗಿದೆ. ಆದರೂ ಕೆಲ ಯುವಕರು ಸ್ವಾರ್ಥ ಸಾಧನೆಗೆ ಯೋಜನೆಯ ಉದ್ದೇಶವನ್ನೇ ಹಾಳು ಮಾಡುತ್ತಿರುವುದು ಬೇಸರ ತಂದಿದೆ ಎಂದು ಎಇ ಆನಂದ್ ಮತ್ತು ಎಇಇ ಶ್ರೀಧರ್ ಬೇಸರ ವ್ಯಕ್ತಪಡಿಸಿದ್ದಾರೆ.
2022ರಲ್ಲಿ ಅಂದಿನ ಶಾಸಕ ಎಸ್.ವಿ. ರಾಮಚಂದ್ರ ತುಪ್ಪದಹಳ್ಳಿ ಕೆರೆಗೆ ನೀರು ಹರಿಸುವ ಮೂಲಕ ಯೋಜನೆ ಯಶಸ್ಸು ಕಂಡಿತ್ತು. ಅಂದಿನಿಂದ ತುಪ್ಪದಹಳ್ಳಿ ಕೆರೆಯಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿಲ್ಲ. ಆದರೂ ಈ ಭಾಗದ ಕೆಲ ರೈತರು ಪದೇಪದೆ ವಾಲ್ವ್ ಬಂದ್ ಮಾಡುವುದು ಎಷ್ಟು? ಎಲ್ಲ ಕೆರೆಗಳಿಗೂ ನೀರಿನ ಅವಶ್ಯಕತೆ ಇಲ್ಲವೇ? ಮುಂದಿನ ಕೆರೆಗಳಿಗೆ ನೀರು ಹರಿದು ಹೋಗಲು ಸಹಕಾರ ನೀಡಬೇಕು ಎಂದು ನೀರಾವರಿ ಅಧಿಕಾರಿಗಳು ಮನವಿ ಮಾಡಿದ್ದಾರೆ.