ಕಾಲುವೆಗೆ ಹಾರಿದ್ದ ಲೈಸೆನ್ಸ್ ಸರ್ವೇಯರ್ ಶವ ಸೊರಟೂರು ಬಳಿ ಪತ್ತೆ
ಡೆತ್ ನೋಟ್‌ನಲ್ಲಿ ಹಲವು ಸಂಗತಿ ಬೆಳಕಿಗೆ
ಹೊನ್ನಾಳಿ:ಇಲ್ಲಿನ ತುಂಗಾ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ನ್ಯಾಮತಿಯ ಲೈಸನ್ಸ್ ಸರ್ವೇಯರ್ ಮಣಿಕಂಠ ಅವರ ಶವ ಶನಿವಾರ ಬೆಳಗ್ಗೆ ತಾಲೂನಿನ ಸೊರಟೂರು ಸಮೀಪ ಪತ್ತೆಯಾಗಿದ್ದು, ಆತನ ಸಾವಿಗೆ ಪತ್ನಿ ಮತ್ತು ಅವಳ ಪ್ರಿಯಕರ ಕಾರಣ ಎಂಬ ಶಂಕೆ ವ್ಯಕ್ತವಾಗಿದೆ. suicide
ಮಣಿಕಂಠ ಬರೆದಿರುವ ಡೆತ್ ನೋಟ್‌ನಲ್ಲಿ ತಾನು ಆತ್ಮಹತ್ಯೆಯಂತಹ ನಿರ್ಧಾರ ಕೈಗೊಳ್ಳಲು ಏನು ಕಾರಣ? ಎಂಬ ಅಂಶವನ್ನು ಬರೆದಿದ್ದಾನೆ. ಆರಂಭದಲ್ಲಿ ನನ್ನ ಸಾವಿಗೆ ನಾನೇ ಕಾರಣ. ನನಗೇ ನಾನು ಮಾಡಿಕೊಂಡ ಮೋಸದಿಂದ ಈ ನಿರ್ಧಾರಕ್ಕೆ ಬಂದಿದ್ದೇನೆ. ಜೀವಿಸಲು ಮನಸ್ಸಾಕ್ಷಿ ಒಪ್ಪುತ್ತಿಲ್ಲ ಎಂದು ಬರೆದಿದ್ದಾನೆ.
ಇಲ್ಲಿಗೆ ನನ್ನನ್ನು ಮರೆತುಬಿಡಿ, ನನ್ನ ಆಯಸ್ಸು ಮುಗಿಯಿತು. ನಾನು ಸರಿಯಲ್ಲ . ಬಾಬು ನೀನೇ ಅಮ್ಮ ಮತ್ತು ಅಕ್ಕನ ಜವಾಬ್ದಾರಿ ನೋಡಿಕೊಳ್ಳಬೇಕು ಎಂದು ಹೇಳಿದ್ದಾನೆ.
ಕೊನೆಯ ಎರಡು ಸಾಲುಗಳು ಆತ್ಮಹತ್ಯೆಯ ಕಾರಣವನ್ನು ಅನಾವರಣ ಮಾಡಿವೆ. ಮದುವೆಯಾದ ಮೇಲೆ ಪತ್ನಿ ಮತ್ತು ಅವಳ ಪ್ರಿಯಕರನಿಂದ ಹಿಂಸೆ ಅನುಭವಿಸಿದ್ದೇನೆ ಎಂದು ಬರೆದಿರುವುದು ಅನುಮಾನಗಳಿಗೆ ಆಸ್ಪದೆ ನೀಡಿದೆ.
ಮೃತನ ತಾಯಿ ಡೆತ್ ನೋಟ್‌ನಲ್ಲಿ ಬರೆಯಲಾಗಿದೆ ಎಂಬ ಮಾಹಿತಿಯನ್ನೇ ಹಂಚಿಕೊಂಡಿದ್ದು, ಮಗನ ಸಾವಿಗೆ ನ್ಯಾಯ ಕೊಡಿಸಿ ಎಂದು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.
ಎರಡೂವರೆ ತಿಂಗಳ ಹಿಂದಷ್ಟೇ ನನ್ನ ಮಗನಿಗೆ ಮದುವೆ ಮಾಡಲಾಗಿತ್ತು. ಮದುವೆಯ ಖುಷಿಯಲ್ಲಿರಬೇಕಾಗಿದ್ದ ಮಗ ಹೆಂಡತಿಯಿಂದ ಹಿಂಸೆ ಅನುಭವಿಸಿದ್ದ. ಸೊಸೆಗೆ ನನ್ನ ಮಗನನ್ನು ಮದುವೆಯಾಗುವ ಇಷ್ಟ ಇರಲಿಲ್ಲ ಎಂಬ ಮಾಹಿತಿ ನಮಗೆ ಬಂದಿದೆ. ನನ್ನ ಮಗ ಇಷ್ಟ ಇಲ್ಲದಿದ್ದರೆ ಸ್ಪಷ್ಟವಾಗಿ ನಿರಾಕರಿಸಿದ್ದರೆ ಅವನು ಇಂದು ಬದುಕಿರುತ್ತಿದ್ದ. ಮತ್ತೊಬ್ಬರನ್ನು ಇಷ್ಟ ಪಟ್ಟ ಮೇಲೆ ನನ್ನ ಮಗನನ್ನು ಯಾಕೆ ಮದುವೆಯಾಗಬೇಕಿತ್ತು ಎಂದು ಮೃತನ ತಾಯಿ ಅಳಲು ತೋಡಿಕೊಂಡಿದ್ದಾರೆ.
ಕೈಹಿಡಿದ ಪತ್ನಿ ಮತ್ತು ಮದುವೆಗೆ ಮೊದಲು ಅವಳನ್ನು ಇಷ್ಟಪಟ್ಟಿದ್ದ ಯುವಕ ಇಬ್ಬರಿಂದಲೂ ನನ್ನ ಮಗ ನೋವು ಅನುಭವಿಸಿದ್ದಾನೆ. ಇದೇ ಕಾರಣಕ್ಕೆ ಅವನು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇಬ್ಬರಿಂದಲೂ ಹಿಂಸೆ ಅನುಭವಿಸುತ್ತಿರುವುದಾಗಿ ನನ್ನ ಮಗ ಡೆತ್‌ನೋಟ್ ಬರೆದಿಟ್ಟಿದ್ದಾನೆ. ನನ್ನ ಮಗನ ಸಾವಿಗೆ ಕಾರಣರಾದ ಸೊಸೆ, ಆಕೆಯ ಪ್ರಿಯಕರ, ಆಕೆಯ ತಂದೆ, ತಾಯಿ ಹಾಗೂ ಸಹೋದರ ವಿರುದ್ಧ ಕ್ರಮಕೈಗೊಂಡು ನನ್ನ ಮಗನ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ
ಮೃತನ ತಾಯಿ ಹೊನ್ನಾಳಿ ಠಾಣೆಗೆ ದೂರು ನೀಡಿದ್ದಾರೆ.
ಶವ ಪತ್ತೆ: ಇಲ್ಲಿನ ತುಂಗಾ ಕಾಲುವೆಗೆ ಹಾರಿ ಆತ್ಮಹತ್ಯೆಗೆ ಶರಣಾಗಿದ್ದ ನ್ಯಾಮತಿಯ ಲೈಸನ್ಸ್ ಸರ್ವೇಯರ್ ಮಣಿಕಂಠ ಅವರ ಶವ ಶನಿವಾರ ಬೆಳಗ್ಗೆ ತಾಲೂನಿನ ಸೊರಟೂರು ಸಮೀಪ ಪತ್ತೆಯಾಗಿದೆ. ಗುರುವಾರ ಸಂಜೆ ಎಚ್. ಕಡದಕಟ್ಟೆ ಸಮೀಪ ಇರುವ ತುಂಗಾ ಚಾನೆಲ್ ಬಳಿ ಮಣಿಕಂಠ ಅವರ ಬುಲೆಟ್ ಬೈಕ್, ಚಪ್ಪಲಿ ಹಾಗೂ ಬ್ಯಾಗ್ ಸಿಕ್ಕಿದ್ದು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಆತ್ಮಹತ್ಯೆಗೂ ಮುನ್ನಾ ತನ್ನ ವಾಟ್ಸಪ್‌ನ ಡಿಪಿಯಲ್ಲಿ ಬುಲೆಟ್ ಚಿತ್ರ ಹಾಕಿ ನಾಲೆಗೆ ಹಾರಿದ್ದಾನೆ ಎಂದು ಹೇಳಲಾಗಿದೆ. ಅಂದು ಹೊನ್ನಾಳಿ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಈಜು ತಜ್ಞರು ಹಾಗೂ ಅಗ್ನಿಶಾಮಕದಳ ಅಧಿಕಾರಿಗಳು ಶವ ಹುಡುಕಾಟದಲ್ಲಿ ನಿರತರಾಗಿದ್ದರು ಪ್ರಯೋಜನವಾಗಿರಲಿಲ್ಲ, ಶನಿವಾರ ಬೆಳಗ್ಗೆ ಸೊರಟುರು ಬಳಿ ಮೃತನ ಶವ ಪತ್ತೆಯಾಗಿದೆ.