ತಾಲೂಕಿನ ಎಚ್. ಕಡದಕಟ್ಟೆ ನಾಡಕಚೇರಿ ಮುಂಭಾಗದಲ್ಲಿ ರಾತ್ರಿ ಯಿಂದಲೇ ಮಳೆಯಲ್ಲಿ ಸರದಿ ಸಾಲಿನಲ್ಲಿ ನಿಂತರೂ ಪ್ರಮಾಣಪತ್ರಗಳು ಸಕಾಲಕ್ಕೆ ಸಿಗುತ್ತಿಲ್ಲ ಎಂದು ಪಾಲಕರು ಹಾಗೂ ವೃದ್ಧರು ತಾಲೂಕು ಆಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ನಾಡಕಚೇರಿ ವ್ಯಾಪ್ತಿಗೆ ಕತ್ತಿಗೆ, ಜೀನಹಳ್ಳಿ, ಎಚ್. ಕಡದಕಟ್ಟೆ, ಬೇಲಿಮಲ್ಲೂರು, ಕೋಟೆಮಲ್ಲೂರು, ಕೋಣನತಲೆ ಸೇರಿ ಸುಮಾರು 17 ಗ್ರಾಮಗಳು ಒಳಪಡುತ್ತವೆ. ಮಳೆ ಯನ್ನೂ ಲೆಕ್ಕಿಸದೆ ಮಂಗಳವಾರ ಬೆಳಗಿನ ಜಾವ 3 ಗಂಟೆಯಿಂದಲೇ ಸಾರ್ವಜನಿಕರು ಕಚೇರಿ ಮುಂದೆ ಕ್ಯೂ ನಿಂತಿದ್ದು, ಕೆಲವರು ನೆಲದಲ್ಲೇ ಮಲಗಿದ್ದ ದೃಶ್ಯ ಕಂಡುಬಂತು.