ಹೊನ್ನಾಳಿ: ಪ್ರಧಾನಿ ವಾಜಪೇಯಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಪಾಕಿಸ್ತಾನದೊಂದಿಗೆ ಸ್ನೇಹ ಹಸ್ತ ಚಾಚುವ ಉದ್ದೇಶದಿಂದ ದಿಲ್ಲಿಯಿಂದ ಲಾಹೋರ್‌ಗೆ ಬಸ್ ಸಂಚಾರ ಆರಂಭಿಸಿದ್ದರು. ದೇಶ ಶಾಂತಿಗೆ ಅವರ ಸೇವೆ ಗಣನೀಯ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಹೇಳಿದರು.
ಪಟ್ಟಣದ ಗುರುಭವನದಲ್ಲಿ ಶನಿವಾರ ತಾಲೂಕು ಬಿಜೆಪಿ ಘಟಕ ಹಮ್ಮಿಕೊಂಡಿದ್ದ ಅಟಲ್ ಸ್ಮತಿ ವರ್ಷ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವಾಜಪೇಯಿ ಅವರು 1996ರಲ್ಲಿ ಪಕ್ಷ ಸಂಘಟನೆಗಾಗಿ ಹೊನ್ನಾಳಿಗೆ ಬಂದಿದ್ದಾಗ, ನಾನು ಅವರೊಂದಿಗೆ ವೇದಿಕೆ ಹಂಚಿಕೊಂಡಿದ್ದೆ ಎಂದರು.
ಹೊನ್ನಾಳಿ ಎಪಿಎಂಸಿಯಲ್ಲಿ ರೈತರು ಬೆಳೆದ ಮೆಕ್ಕೆಜೋಳವನ್ನು ಸರ್ಕಾರ ಖರೀದಿ ಮಾಡಬೇಕು ಎಂದು 3 ತಿಂಗಳ ಕಾಲ ನಡೆಸಿದ ಹೋರಾಟದ ಸಂದರ್ಭದಲ್ಲಿ ಗುಜರಾತ್ ಭೂಕಂಪ ಸಂಭವಿಸಿತ್ತು. ಆಗ ನಾನು ರೈತರಿಂದ ದೇಣಿಗೆಯಾಗಿ ಪಡೆದ 1.70 ಲಕ್ಷ ರೂ. ಗಳನ್ನು ನ್ಯಾಮತಿಯ ಮನೋಹರ್ ಅವರನ್ನು ಕರೆದುಕೊಂಡು ದೆಹಲಿಗೆ ಹೋಗಿ ಪ್ರಧಾನಿ ವಾಜಪೇಯಿ ಅವರಿಗೆ ಗುಜರಾತ್ ಭೂಕಂಪ ಪರಿಹಾರ ನಿಧಿಗೆ ಕೊಟ್ಟು ಬಂದಿದ್ದೆ ಎಂದು ಸ್ಮರಿಸಿದರು. ಮುಂಬರುವ ಮಾರ್ಚ್, ಏಪ್ರಿಲ್ ತಿಂಗಳಲ್ಲಿ ತಾಲೂಕು ಪಂಜಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಹೊನ್ನಾಳಿ ಪುರಸಭೆ ಮತ್ತು ನ್ಯಾಮತಿ ಪಟ್ಟಣ ಪಂಚಾಯಿತಿಗೆ ಚುನಾವಣೆ ನಡೆಯಲಿದ್ದು, ಕಾರ್ಯಕರ್ತರು ಪಕ್ಷವನ್ನು ಅಧಿಕಾರಕ್ಕೆ ತರುವ ಮೂಲಕ ಸಾರ್ವತ್ರಿಕ ಚುನಾವಣೆಗೂ ಸಜ್ಜಾಗಬೇಕು ಎಂದು ಹೇಳಿದರು.
ಹಿಂದುಳಿದ ವರ್ಗಗಳ ರಾಜ್ಯ ಬಿಜೆಪಿ ಉಪಾಧ್ಯಕ್ಷ ಕೆ.ಪಿ. ಕುಬೇಂದ್ರಪ್ಪ, ಜಿಲ್ಲಾ ಕಾರ್ಯದರ್ಶಿ ಕಡ್ಲೆಬಾಳು ಧನಂಜಯ, ತಾಲೂಕಾಧ್ಯಕ್ಷ ನಾಗರಾಜ್, ಮಾಜಿ ಅಧ್ಯಕ್ಷ ಜೆ.ಕೆ. ಸುರೇಶ್, ಕೊನಾಯಕನಹಳ್ಳಿ ಮಂಜುನಾಥ್, ತರಗನಹಳ್ಳಿ ರಮೇಶ್‌ಗೌಡ, ಎಸ್.ಎಸ್. ಬೀರಪ್ಪ, ದೊಡ್ಡೇರಿ ರಾಜಣ್ಣ, ಸುರೇಂದ್ರನಾಯ್ಕ, ಮಾರುತಿನಾಯ್ಕ, ದೊಡ್ಡೇರಿ ಗಿರೀಶ್ ಉಪಸ್ಥಿತರಿದ್ದರು.
ಮಗುವಿನಂಥ ಮುಗ್ಧ ಮನಸ್ಸಿನ ವ್ಯಕ್ತಿತ್ವವನ್ನು ವಾಜಪೇಯಿ ಹೊಂದಿದ್ದರು. ಯಾರಿಗೂ ಕೇಡನ್ನುಂಟು ಮಾಡದೇ ರಾಜಕಾರಣ ಅಂದರೆ ಏನು ಎನ್ನುವುದನ್ನು ತಮ್ಮ ನಡೆ, ನುಡಿಗಳಲ್ಲಿ ತೋರಿಸಿಕೊಟ್ಟವರು. ಅಲ್ಲದೇ ರಾಜಕಾರಣದಲ್ಲಿ ಸೇವಾ ಮನೋಭಾವ ಇರಬೇಕು ಎಂಬುದನ್ನು ಸಾರಿದರು.