ದಾವಣಗೆರೆ :ಕರ್ನಾಟಕ ಯುರಾಲಜಿ ಅಸೋಸಿಯೇಷನ್ ವತಿಯಿಂದ ಮಾ. 14 ಮತ್ತು 15ರಂದು ಕ್ರೀಡೋತ್ಸವವನ್ನು (ಕೆಯುಎ ಯುಪಿಎಲ್) ಎಸ್‌ಎಸ್ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಅಸೋಸಿಯೇಷನ್ ಅಧ್ಯಕ್ಷ ಡಾ. ನವೀನ್ ಎಚ್.ಎನ್. ಹೇಳಿದರು.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಎಸ್‌ಎಸ್‌ಐಎಂಎಸ್‌ನ ಯುರಾಲಜಿ ವಿಭಾಗ, ಎಸ್‌ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸಹಯೋಗದಲ್ಲಿ ಈ ಕ್ರೀಡೋತ್ಸವ ಆಯೋಜಿಸಿದ್ದು, ರಾಜ್ಯದ ನೂರಾರು ಮೂತ್ರಕೋಶ ಶಸ್ತ್ರಚಿಕಿತ್ಸಾ ವೈದ್ಯರು ಪಾಲ್ಗೊಳ್ಳುವರು ಎಂದು ತಿಳಿಸಿದರು.
ಮಾ. 14ರಂದು ಟೇಬಲ್ ಟೆನಿಸ್, ಷಟಲ್ ಬ್ಯಾಡ್ಮಿಂಟನ್ ಆಯೋಜಿಸಲಾಗುವುದು. 15ರಂದು ಕ್ರಿಕೆಟ್ ಪಂದ್ಯಾವಳಿಯಲ್ಲಿ ಬೆಂಗಳೂರು ಕ್ಯಾಪಿಟಲ್ಸ್, ವೆಸ್ಟರ್ನ್ ವಾರಿಯರ್ಸ್, ನಾರ್ತ್ ಕರ್ನಾಟಕ ಜೈಂಟ್ಸ್, ರಾಯಲ್ ಚಾಲೆಂಜರ್ಸ್ ಮೈಸೂರು ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿವೆ ಎಂದು ಮಾಹಿತಿ ನೀಡಿದರು.
ಕ್ರೀಡೋತ್ಸವದ ಉದ್ಘಾಟನಾ ಸಮಾರಂಭ ಮಾ. 15ರಂದು ಎಸ್‌ಎಸ್ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯದ ಮೈದಾನದಲ್ಲಿ ನಡೆಯಲಿದೆ. ಎಸ್‌ಎಸ್‌ಐಎಂಎಸ್‌ನ ಪ್ರಾಚಾರ್ಯ ಡಾ. ಪ್ರಸಾದ್ ಬಿ.ಎಸ್, ವೈದ್ಯಕೀಯ ನಿರ್ದೇಶಕ ಡಾ. ಅರುಣ್ ಅಜ್ಜಪ್ಪ, ಎಸ್‌ಎಸ್ ನಾರಾಯಣ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯ ಸುನೀಲ್ ಪಾಲ್ಗೊಳ್ಳಲಿದ್ದು ತಾವು ಅಧ್ಯಕ್ಷತೆ ವಹಿಸುವುದಾಗಿ ತಿಳಿಸಿದರು.