ಗರ್ಭಿಣಿಯರ ವಿವರ ಅಪ್‌ಡೇಟ್ ಕಡ್ಡಾಯ

ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್, ಡಿಎಚ್‌ಒ ಡಾ. ಷಣ್ಮುಖಪ್ಪ, ಡಾ. ಎನ್.ಕೆ. ಕಾಳಪ್ಪನವರ್,ಡಾ.ಮಂಜುನಾಥ ಪಾಟೀಲ್, ಡಾ. ಸುಮಿತ್ರಾ, ಸತ್ಯನಾರಾಯಣ್ ಇದ್ದರು.
ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯಲ್ಲಿ ಉಪವಿಭಾಗಾಧಿಕಾರಿ ಸಂತೋಷ್‌ಕುಮಾರ್, ಡಿಎಚ್‌ಒ ಡಾ. ಷಣ್ಮುಖಪ್ಪ, ಡಾ. ಎನ್.ಕೆ. ಕಾಳಪ್ಪನವರ್,ಡಾ.ಮಂಜುನಾಥ ಪಾಟೀಲ್, ಡಾ. ಸುಮಿತ್ರಾ, ಸತ್ಯನಾರಾಯಣ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಪಾಲಿಸದ ಸ್ಕಾೃನಿಂಗ್ ಕೇಂದ್ರಗಳ ವಿರುದ್ಧ ಕೇಸ್
  • ತಪ್ಪು ಮಾಹಿತಿ ನೀಡಿದ್ರೆ ಆಸ್ಪತ್ರೆ ಮುಖ್ಯಸ್ಥರೇ ಹೊಣೆ
  • ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಎಚ್ಚರಿಕೆ
ದಾವಣಗೆರೆ: ಸ್ಕ್ಯಾನಿಂಗ್ ಕೇಂದ್ರಗಳು ಗರ್ಭಿಣಿಯರ ಸಂಪೂರ್ಣ ವಿವರಗಳನ್ನು ಕಡ್ಡಾಯವಾಗಿ ಆನ್‌ಲೈನ್‌ನಲ್ಲಿ ಅಪ್‌ಡೇಟ್ ಮಾಡಬೇಕು. ಇಲ್ಲದಿದ್ದರೆ ಪರವಾನಗಿ ರದ್ದುಗೊಳಿಸಿ, ಕ್ರಿಮಿನಲ್ ಮೊಕದ್ದಮೆ ಹೂಡಲಾಗುವುದು ಎಂದು ದಾವಣಗೆರೆ ಉಪವಿಭಾಗಾಧಿಕಾರಿ ಸಂತೋಷ್ ಕುಮಾರ್ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಏರ್ಪಡಿಸಿದ್ದ ಉಪವಿಭಾಗಾಧಿಕಾರಿ ಕಚೇರಿಯಲ್ಲಿ ಶನಿವಾರ ಹಮ್ಮಿಕೊಂಡಿದ್ದ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಜಿಲ್ಲಾ ಮಟ್ಟದ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಲವು ಆಸ್ಪತ್ರೆಗಳು ಗರ್ಭಿಣಿಯರ ಸ್ಕ್ಯಾನಿಂಗ್ ಸಂದರ್ಭದಲ್ಲಿ ಕಡ್ಡಾಯವಾಗಿ ಭರ್ತಿ ಮಾಡಬೇಕಾದ ಫಾರ್ಮ್ ಎಫ್ ದಾಖಲೆಗಳನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ಕೆಲವು ಪ್ರಕರಣಗಳಲ್ಲಿ ಅಪೂರ್ಣ ಮಾಹಿತಿ ತುಂಬಲಾಗುತ್ತಿದ್ದು, ಗರ್ಭಧಾರಣೆಯ ವಾರ ಮತ್ತು ನಿಖರ ವಿವರಗಳನ್ನು ನಮೂದಿಸುತ್ತಿಲ್ಲ.
ಡೇಟಾ ಎಂಟ್ರಿ ಆಪರೇಟರ್‌ಗಳ ಕೊರತೆ ನೆಪವಾಗಿಸಿ ತಪ್ಪು ಮಾಹಿತಿ ದಾಖಲಿಸುವುದನ್ನು ಒಪ್ಪಲು ಸಾಧ್ಯವಿಲ್ಲ. ತಪ್ಪು ಮಾಹಿತಿಗೆ ಆಯಾ ರೇಡಿಯಾಲಜಿಸ್ಟ್ ಹಾಗೂ ಆಸ್ಪತ್ರೆಯ ಮುಖ್ಯಸ್ಥರೇ ನೇರ ಹೊಣೆಗಾರರಾಗಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.
ಪ್ರಸವಪೂರ್ವ ಲಿಂಗ ಪತ್ತೆ ಹಚ್ಚುವಿಕೆ ತಡೆ (ಪಿಸಿಪಿಎನ್‌ಡಿಟಿ) ಹಾಗೂ ಎಂಟಿಪಿ ಕಾಯ್ದೆಗಳನ್ನು ಉಲ್ಲಂಘಿಸುತ್ತಿರುವ ಆಸ್ಪತ್ರೆ ಹಾಗೂ ಸ್ಕ್ಯಾನಿಂಗ್ ಕೇಂದ್ರಗಳ ವಿರುದ್ಧ ಆರೋಗ್ಯ ಇಲಾಖೆ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕು. ದಾಖಲೆಗಳ ಪರಿಶೀಲನೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಿದ ಹಾಗೂ ಲೋಪ ಕಂಡುಬಂದ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಾನೂನು ರೀತ್ಯ ಕ್ರಮವಹಿಸಿ ಕಡತ ಸಲ್ಲಿಸಿ ಎಂದೂ ಸೂಚಿಸಿದರು.
ಇನ್ಮುಂದೆ ಗುರುತಿನ ಚೀಟಿ ಕಡ್ಡಾಯ
ಗರ್ಭಧಾರಣೆಯ ಮೊದಲ ತ್ರೈಮಾಸಿಕದಲ್ಲಿ (10 ವಾರಗಳದೊಳಗಾಗಿ ) ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇನ್ನು ಮುಂದೆ ಖಾಸಗಿ ಅಥವಾ ಸರ್ಕಾರಿ ಸ್ಕ್ಯಾನಿಂಗ್ ಸೆಂಟರ್‌ಗಳಲ್ಲಿ ಸ್ಕ್ಯಾನಿಂಗ್‌ಗೆ ತಾಯಿ ಕಾರ್ಡ್ ಮತ್ತು ಆಧಾರ್ ಕಾರ್ಡ್ ಕಡ್ಡಾಯಗೊಳಿಸಲಾಗುವುದು ಎಂದು ತಿಳಿಸಿದರು.
ಸೂಕ್ತ ಗುರುತಿನ ಚೀಟಿ ಇಲ್ಲದೆ ಸ್ಕ್ಯಾನಿಂಗ್ ಮಾಡಲು ಅವಕಾಶ ನೀಡಬಾರದು. ಗರ್ಭಾವಸ್ಥೆಯ ಅವಧಿಯಲ್ಲಿ ಸಾಮಾನ್ಯವಾಗಿ ಶಿಫಾರಸು ಮಾಡಲಾಗುವ ಎನ್‌ಟಿ, ಅನಾಮಲಿ ಹಾಗೋ ಗ್ರೋತ್ ಸ್ಕಾೃನಿಂಗ್ ಹೊರತಾಗಿಸಿ ವೈದ್ಯಕೀಯ ತುರ್ತು ಸಂದರ್ಭಗಳನ್ನು ಬಿಟ್ಟು ಅನಗತ್ಯ ಸ್ಕ್ಯಾನಿಂಗ್‌ಗಳಿಗೆ ಕಡಿವಾಣ ಹಾಕುವಂತೆ ತಿಳಿಸಿದರು.
ಗರ್ಭಪಾತ ಮಾತ್ರೆಗೆ ಪ್ರಿಸ್ಕ್ರಿಪ್ಷನ್ ಮಸ್ಟ್
ವೈದ್ಯರ ಅಧಿಕೃತ ಚೀಟಿ (ಪ್ರಿಸ್ಕ್ರಿಪ್ಷನ್) ಇಲ್ಲದೆ ಎರಡನೇ ತ್ರೈಮಾಸಿಕದ ಗರ್ಭಪಾತಕ್ಕೆ ಬಳಸಲಾಗುವ ಮಾತ್ರೆಗಳನ್ನು ಔಷಧ ಅಂಗಡಿಗಳಲ್ಲಿ ಕಾನೂನುಬಾಹಿರ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ತೀವ್ರ ರಕ್ತಸ್ರಾವದಿಂದ ಆಸ್ಪತ್ರೆಗೆ ದಾಖಲಾಗುವ ಪ್ರಕರಣಗಳು ಹೆಚ್ಚುತ್ತಿದ್ದು, ಇದರ ಹೊಣೆಗಾರಿಕೆ ಪತ್ತೆ ಹಚ್ಚುವುದು ಕಷ್ಟವಾಗುತ್ತಿದೆ ಎಂದು ಡಿಎಚ್‌ಒ ಡಾ.ಷಣ್ಮುಖಪ್ಪ ಹೇಳಿದರು.
ವೈದ್ಯರ ಅಧಿಕೃತ ಚೀಟಿ ಇಲ್ಲದೆ ಗರ್ಭಪಾತ ಮಾತ್ರೆ ಸೇರಿ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುವ ಔಷಧ ಮಾರದಂತೆ ಔಷಧ ಕೇಂದ್ರಗಳಿಗೆ ಕಟ್ಟುನಿಟ್ಟಿನ ಮಾಹಿತಿ ನೀಡಬೇಕು. ಅನುಮಾನ ಬಂದ ಔಷಧದಂಗಡಿಗಳನ್ನು ಪರಿಶೀಲಿಸಿ ಕಾನೂನು ಕ್ರಮ ವಹಿಸಬೇಕೆಂದು ಎಸಿ ಸೂಚಿಸಿದರು.
ಮಾಹಿತಿ ನೀಡಿದವರಿಗೆ ಬಹುಮಾನ
ಜಿಲ್ಲೆಯಲ್ಲಿ ಲಿಂಗಾನುಪಾತದಲ್ಲಿ ಪ್ರಗತಿಯಾಗಿದೆ. ಪ್ರಸ್ತುತ ಅನುಪಾತವು 954ಕ್ಕೆ ತಲುಪಿದೆ. ಕಾನೂನುಬಾಹಿರ ಹೆಣ್ಣು ಭ್ರೂಣ ಹತ್ಯೆ ತಡೆಯಲು ನಿಗಾ ವಹಿಸಲಾಗುತ್ತಿದೆ. ಅಕ್ರಮವಾಗಿ ಲಿಂಗಪತ್ತೆ ಅವಾ ಭ್ರೂಣಹತ್ಯೆ ನಡೆಯುತ್ತಿದ್ದಲ್ಲಿ ಮಾಹಿತಿ ನೀಡುವವರ ಹೆಸರು ಗೌಪ್ಯವಾಗಿಡುವ ಜತೆಗೆ ಸೂಕ್ತ ಬಹುಮಾನ ನೀಡಲಾಗುವುದು. ರಾಜ್ಯ ಮಟ್ಟದ ಅಧಿಕಾರಿಗಳ ಸಹಯೋಗದೊಂದಿಗೆ ದಾಳಿ ನಡೆಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಡಿಎಚ್‌ಒ ಡಾ. ಷಣ್ಮುಖಪ್ಪ ಹೇಳಿದರು.
ಸರ್ಕಾರಿ ಆಸ್ಪತ್ರೆಗಳಲ್ಲದೆ, ಎಲ್ಲಾ ಖಾಸಗಿ ಕ್ಲಿನಿಕ್, ಸ್ಕ್ಯಾನಿಂಗ್ ಸೆಂಟರ್‌ಗಳು ಪಿಸಿಪಿಎನ್‌ಡಿಟಿ ಕಾಯ್ದೆಯಡಿ ಕಡ್ಡಾಯವಾಗಿ ನೋಂದಾವಣೆಯಾಗಬೇಕು. ಸ್ಕ್ಯಾನಿಂಗ್ ವರದಿಗಳಲ್ಲಿ ಲಿಂಗ ಪತ್ತೆ ಮಾಡುವುದಿಲ್ಲ ಎಂಬ ಘೋಷಣಾ ಪತ್ರ ನಮೂದಿಸುವುದು ಕಡ್ಡಾಯ ಎಂದು ತಿಳಿಸಿದರು.
ಸಭೆಯಲ್ಲಿ ಸಮಿತಿ ಸದಸ್ಯರಾದ ಡಾ. ಎನ್.ಕೆ. ಕಾಳಪ್ಪನವರ್, ಕುಟುಂಬ ಯೋಜನೆ ಪ್ರಭಾರ ಅಧಿಕಾರಿ ಡಾ.ಮಂಜುನಾಥ ಪಾಟೀಲ್, ಸ್ತ್ರೀರೋಗ ತಜ್ಞೆ ಡಾ. ಸವಿತಾ, ರೇಡಿಯಾಲಜಿಸ್ಟ್ ಡಾ. ಸುಮಿತ್ರಾ, ಸತ್ಯನಾರಾಯಣ್ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net