ಕೆರೆಗಳಿಗೆ ಪ್ರಾಯೋಗಿಕ ನೀರು ಯಶಸ್ವಿ

ಗ್ರಾಮಸ್ಥರಲ್ಲಿ ಮನೆ ಮಾಡಿದ ಸಂಭ್ರಮ, ಕಾನೂನು ತೊಡಕುಗಳ ಪರಿಹಾರ
Water for Lake
ಗುರುಸಿದ್ದಾಪುರ ಕೆರೆಗೆ ಹರಿದು ಬರುತ್ತಿರುವ ನೀರು.Water for Lake
Published on: 

ಜಗಳೂರು: ಹಿಂದುಳಿದ ಹಾಗೂ ಬರಪೀಡಿತ ತಾಲೂಕಿನ ಮಹತ್ವಾಕಾಂಕ್ಷಿ ಯೋಜನೆಯಾದ 57 ಕೆರೆಗಳಿಗೆ ನೀರು ತುಂಬಿಸುವ ಯೋಜನೆಯಡಿ ಕೆಲ ಕಾನೂನು ತೊಡಕಿನಿಂದ ವಂಚಿತ ವಾಗಿದ್ದ ಗುರುಸಿದ್ದಾಪುರ ಸೇರಿ 4 ಕೆರೆಗಳಿಗೆ ನೀರು ತುಂಬಿಲು ಅನುಮತಿ ಸಿಕ್ಕಿದ್ದು, ಪ್ರಾಯೋಗಿಕವಾಗಿ ನೀರು ಬಿಟ್ಟಿರುವುದು ಗ್ರಾಮಸ್ಥರಲ್ಲಿ ಸಂತಸ ತಂದಿದೆ.

ರಂಗಯ್ಯದುರ್ಗ ಕೊಂಡು ಕುರಿ ಅರಣ್ಯ ವಾಪ್ತಿಯ ಗುರುಸಿದ್ದಾಪುರ ಗ್ರಾಮದ ಕೆರೆಗೆ ನೀರು ತುಂಬಿಸುವುದು ತುಂಬ ಅವಶ್ಯಕವಾಗಿದೆ. ಸುತ್ತಮುತ್ತಲು ಅರಣ್ಯದಿಂದ ತುಂಬಿದ್ದು, ಕಾಡು ಪ್ರಾಣಿ, ಪಕ್ಷಿ, ಜೀವ ಜಂತುಗಳು ಸೇರಿ ಜಾನುವಾರುಗಳಿಗೆ ಕೆರೆಯೇ ಜೀವಾಳವಾಗಿದೆ. ಪ್ರಸಕ್ತ ಸಾಲಿನಲ್ಲಿ ಮಳೆಯ ಕೊರತೆಯಿಂದ ಕೆರೆಯಲ್ಲಿ ನೀರಿಲ್ಲದೇ ಖಾಲಿಯಾಗಿದೆ. ಈ ಬಗ್ಗೆ ಗ್ರಾಮಸ್ಥರು ಅನೇಕ ಬಾರಿ ಶಾಸಕರು, ಅಧಿಕಾರಿಗಳಿಗೆ ಮನವಿ ಮಾಡಿದ್ದರು. ಆದರೆ ಇದೀಗ ಕೆರೆಗೆ ಪೈಪ್‌ಲೈನ್ ಮೂಲಕ ನೀರು ಹರಿದು ಬರುತ್ತಿರುವುದು ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.

ಕೊನೆಗೂ ಕೆರೆಗೆ ನೀರು

ಏಷ್ಯಾ ಖಂಡದಲ್ಲಿಯೇ ಅಪರೂಪ ಕೊಂಡುಕುರಿಗಳು ಈ ಭಾಗದ ಅರಣ್ಯ ಪ್ರದೇಶದಲ್ಲಿ ವಾಸವಿರುವುದರಿಂದ ಈ ಭಾಗವನ್ನು ಸೂಕ್ಷ್ಮವಲಯವೆಂದು ಪರಿಗಣಿಸಲಾಗಿದ್ದು ಅರಣ್ಯಕ್ಕೆ ಪ್ರವೇಶವಿಲ್ಲ. ಯಾವುದೇ ಕೆಲಸ, ಕಾಮಗಾರಿ ನಡೆಸಲು ಅವಕಾಶವಿಲ್ಲ. ಹಾಗಾಗಿ ಕೆರೆಗೆ ನೀರು ಬರಲು ಪೈಪ್‌ಲೈನ್ ತೆಗೆಯಬೇಕು. 2.6 ಕಿ.ಮೀ. ವ್ಯಾಪ್ತಿಯ ಪೈಪ್ ಲೈನ್ ಅಳವಡಿಕೆಗೆ ರಾಜ್ಯ ಮತ್ತು ಕೇಂದ್ರ ಅರಣ್ಯ ಇಲಾಖೆ ಜತೆ ನೀರಾವರಿ ಇಲಾಖೆ ದೊಡ್ಡ ಹೋರಾಟವನ್ನೆ ನಡೆಸಿತ್ತು. ಆದರೆ ಅರಣ್ಯ ಇಲಾಖೆ ಮಾತ್ರ ಅವಕಾಶ ನೀಡಿರಲಿಲ್ಲ. ಶಾಸಕರ ಹಾಗೂ ಅಧಿಕಾರಿಗಳ ಪರಿಶ್ರಮದಿಂದ ಗುರುಸಿದ್ದಾಪುರ, ರಂಗಯ್ಯನದುರ್ಗ, ಅಗಸನಹಳ್ಳಿ ಮಾಗಡಿ ಕೆರೆಗಳಿಗೆ ನೀರು ಹರಿಸಲು ಪೈಪ್‌ಲೈನ್ ಕಾಮಗಾರಿ ಮುಗಿಸಿದ್ದರಿಂದ ಮೊದಲ ಕೆರೆ ಗುರುಸಿದ್ದಾಪುರಕ್ಕೆ ಪ್ರಾಯೋಗಿಕವಾಗಿ ನೀರು ಬಿಡಲಾಗಿದ್ದು, ಹಂತ ಹಂತವಾಗಿ ಎಲ್ಲ 4 ಕೆರೆಗಳಿಗೂ ನೀರು ಬಿಡಲಾಗುವುದು ಎಂದು ನಿಗಮದ ಇಂಜಿನಿಯರ್ ಎಇಇ ಶ್ರೀಧರ್ ತಿಳಿಸಿದ್ದಾರೆ.

ಕಾನೂನು ತೊಡಕು ಇತ್ಯರ್ಥ

ಜಗಳೂರು ತಾಲೂಕಿನ 46 ಕೆರೆಗಳು ಹಾಗೂ ಅರಸಿಕೆರೆಯ 11 ಕೆರೆ ಸೇರಿ 57 ಕೆರೆಗಳನ್ನೊಳಗೊಂಡ ಯೋಜನೆ ಇದಾಗಿದ್ದು, ನಾಲ್ಕು ಕೆರೆಗಳು ಹೊರತುಪಡಿಸಿ 53 ಕೆರೆಗಳಿಗೆ ಕಳೆದ ಮೂರು ವರ್ಷಗಳಿಂದಲೂ ನೀರು ತುಂಬಿಸಲಾಗುತ್ತಿದೆ. ಕಳೆದ ವರ್ಷ ಎಲ್ಲ ಕೆರೆಗಳು ತುಂಬಿ, ಕೆಲವು ಕೆರೆಗಳು ಕೋಡಿ ಸಹ ಬಿದ್ದಿದ್ದವು. ಆದರೆ ಈ ಬಾರಿ ಮಳೆಯ ಅಭಾವದಿಂದ ಕೆರೆಗಳಿಗೆ ನೀರು ಬಂದಿಲ್ಲ. ಆದರೆ ತುಂಗಾಭದ್ರಾ ನದಿಯಿಂದ ಏತ ನೀರಾವರಿ ಯೋಜನೆಯಡಿ ಕೆರೆಗಳಿಗೆ ನೀರು ಬಿಡಲಾಗಿದೆ. ಆದರೆ ಗುರುಸಿದ್ದಾಪುರ ಸೇರಿ ನಾಲ್ಕು ಕೆರೆಗಳಿಗೆ ಪೈಪ್‌ಲೈನ್ ಮಾಡಲು ಕೇಂದ್ರ, ರಾಜ್ಯ ಅರಣ್ಯ ಇಲಾಖೆ ಒಪ್ಪಿಗೆ ಪಡೆಯಲೇಬೇಕು. ಈ ಬಗ್ಗೆ 3 ವರ್ಷಗಳಿಂದಲೂ ಶಾಸಕ ಬಿ. ದೇವೇಂದ್ರಪ್ಪ, ಕರ್ನಾಟಕ ನೀರಾವರಿ ನಿಗಮದ ಅಧಿಕಾರಿಗಳು ಹಾಗೂ ಜಲ ಸಂಪನ್ಮೂಲ ಮತ್ತು ಅರಣ್ಯ ಇಲಾಖೆ ಜತೆ ಮಾತುಕತೆ ನಡೆಸಿ, ಕಾನೂನು ತೊಡಕುಗಳನ್ನು ಸರಿಪಡಿಸಿಕೊಂಡು ನೀರು ಬಿಡಲು ಅನುಮತಿ ಸಿಕ್ಕಿರುವುದು ಹೆಮ್ಮೆಯ ಸಂಗತಿಯಾಗಿದೆ. ಕೆರೆಗೆ ನೀರು ಹರಿದು ಬರಲು ಕಾರಣರಾದ ಶಾಸಕ ಬಿ. ದೇವೇಂದ್ರಪ್ಪ ಅವರಿಗೆ ಗ್ರಾಮಸ್ಥರು ಕೃತಜ್ಞತೆ ಸಲ್ಲಿಸಿದ್ದಾರೆ.

ಜಗಳೂರು ಹಾಗೂ ಅರಸಿಕೆರೆ ಹೋಬಳಿ ಸೇರಿ 57 ಕೆರೆಗಳಿವೆ. ಕೆರೆಗಳು ರೈತರಿಗೆ ಜೀವನಾಡಿ ಯಾಗಿವೆ. ಆದರೆ ಸತತ ಬರಗಾಲದಿಂದ ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಹಾಹಾಕಾರ, ಪ್ರಾಣಿ, ಪಕ್ಷಿಗಳಿಗೆ ನೀರಿಲ್ಲದೇ ಯಮಯಾತನೆ ಅನುಭವಿಸಿವೆ. ಆದರೆ 2018ರ ತರಳಬಾಳು ಹುಣ್ಣಿಮೆ ಕಾರ್ಯಕ್ರಮದಲ್ಲಿ ಸಿರಿಗೆರೆ ಡಾ. ಶಿವಮೂರ್ತಿ ಶ್ರೀಗಳ ದೂರದೃಷ್ಟಿಯಿಂದ ಅಂದಿನ ಸಿಎಂ ಮೇಲೆ ಒತ್ತಡ ತಂದ ಫಲವಾಗಿ ಕೆರೆ ತುಂಬಿಸುವ ಯೋಜನೆ ಯಶಸ್ಸು ಕಂಡಿದೆ. ಇದರಲ್ಲಿ ಮಾಜಿ ಶಾಸಕರಿಬ್ಬರು ಹಾಗೂ ನನ್ನ ನಿರಂತರ ಪರಿಶ್ರಮದಿಂದ ಎಲ್ಲ ಕೆರೆಗಳಿಗೂ ನೀರು ಬಂದಿದೆ. ಕಾನೂನು ತೊಡಕಿಗೆ ಒಳಗಾಗಿದ್ದ ನಾಲ್ಕು ಕೆರೆಗಳಿಗೂ ನೀರು ಬಿಡಲು ಅನುಮತಿ ದೊರಕಿದೆ. ಇದರ ಮೂಲಕ ರೈತರ ಬೇಡಿಕೆ ಶಾಶ್ವತವಾಗಿ ಪರಿಹರಿಸಲಾಗಿದೆ.
ಬಿ. ದೇವೇಂದ್ರಪ್ಪ ಶಾಸಕರು