ಸಾರಿಗೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಸಿದ್ಧತೆ

ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್‌ ಯೂನಿಯನ್ ದಾವಣಗೆರೆ ವಿಭಾಗದ ಅಧ್ಯಕ್ಷ ಎಚ್.ಜಿ. ಉಮೇಶ್ ಆವರಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಿರ್ಜಾ ರಹಮತ್ ಉಲ್ಲಾ, ಆನಂದನಾಯ್ಕ, ಪ್ರಕಾಶ್, ಈಶ್ವರ ಬಣವಿ ಇದ್ದರು.
ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್‌ ಯೂನಿಯನ್ ದಾವಣಗೆರೆ ವಿಭಾಗದ ಅಧ್ಯಕ್ಷ ಎಚ್.ಜಿ. ಉಮೇಶ್ ಆವರಗೆರೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಮಿರ್ಜಾ ರಹಮತ್ ಉಲ್ಲಾ, ಆನಂದನಾಯ್ಕ, ಪ್ರಕಾಶ್, ಈಶ್ವರ ಬಣವಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • 12 ತಿಂಗಳ ಹಿಂಬಾಕಿ ವೇತನ ಬಿಡುಗಡೆಗೆ ಆಗ್ರಹ
  • 2024ರ ಜನವರಿಯಿಂದ್ಲೇ ವೇತನ ಪರಿಷ್ಕರಣೆಯಾಗಲಿ
  • ತಿಂಗಳೊಳಗಾಗಿ ಇತರೆ ಸಮಸ್ಯೆಗಳನ್ನು ಇತ್ಯರ್ಥಪಡಿಸಿ
ದಾವಣಗೆರೆ: ಹಿಂಬಾಕಿ ವೇತನ ಬಿಡುಗಡೆ ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಾರಿಗೆ ಇಲಾಖೆಯ ನಾಲ್ಕೂ ವಿಭಾಗದ ನೌಕರರು ಮತ್ತು ಕಾರ್ಮಿಕರು ಮೇ 20ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಸ್ಟಾಪ್ ಆ್ಯಂಡ್ ವರ್ಕರ್ಸ್‌ ಯೂನಿಯನ್ ದಾವಣಗೆರೆ ವಿಭಾಗದ ಅಧ್ಯಕ್ಷ ಎಚ್.ಜಿ. ಉಮೇಶ್ ಆವರಗೆರೆ ತಿಳಿಸಿದರು.
ಕೆಎಸ್‌ಆರ್‌ಟಿಸಿ, ಕಲ್ಯಾಣ ಕರ್ನಾಟಕ, ವಾಯವ್ಯ ಕರ್ನಾಟಕ ಹಾಗೂ ಬೆಂಗಳೂರು ಮಹಾನಗರ ಸಾರಿಗೆ ನಿಗಮಗಳಿಂದ ಒಟ್ಟು 1.05 ಲಕ್ಷ ನೌಕರರು, ಕಾರ್ಮಿಕರು ಈ ಹೋರಾಟದಲ್ಲಿ ಭಾಗಿಯಾಗಲಿದ್ದಾರೆ. ರಾಜ್ಯ ಸರ್ಕಾರ ಮೇ 20ರಂದು ತುಮಕೂರಿನಲ್ಲಿ ಹಮ್ಮಿಕೊಂಡ ಸಾಧನಾ ಸಮಾವೇಶವನ್ನು ಸಹ ಸಾರಿಗೆ ನೌಕರರು ಬಹಿಷ್ಕರಿಸಿದ್ದಾರೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಹಿಂದೆ 38 ತಿಂಗಳ ಹಿಂಬಾಕಿಯನ್ನು ಸರ್ಕಾರ ನೀಡಬೇಕಿತ್ತು. ಏ.29ರಂದು ಸಾರಿಗೆ ಸಚಿವರ ಅಧ್ಯಕ್ಷತೆಯ ಸಭೆಯಲ್ಲಿ ಸರ್ಕಾರ 26 ತಿಂಗಳ ಬಾಕಿ ಹಣವನ್ನು ಬಿಡುಗಡೆ ಮಾಡಿತ್ತು. ಇನ್ನುಳಿದ 12 ತಿಂಗಳ ಹಿಂಬಾಕಿಯನ್ನು ಕೂಡಲೆ ನೀಡಬೇಕು.
2025ರ ಏ.1ರಿಂದ ಅನ್ವಯವಾಗುವಂತೆ ವೇತನ ಪರಿಷ್ಕರಣೆ ಕುರಿತು 2026ರ ಫೆ. 18ರಂದು ಸರ್ಕಾರ ಹೊರಡಿಸಿದ ಏಕಪಕ್ಷೀಯವಾದ ಆದೇಶದ ತಿದ್ದುಪಡಿಗೆ ಒತ್ತಾಯಿಸುತ್ತಲೇ ಬಂದಿದ್ದೇವೆ. 2024ರ ಜ.1ರಿಂದಲೇ ವೇತನ ಹೆಚ್ಚಳಕ್ಕೆ ವಾದ ಮಂಡಿಸಲಾಯಿತು. ಆದರೆ ಇದಕ್ಕೆ ಸರ್ಕಾರ ಸ್ಪಂದಿಸಿಲ್ಲ. ಹೀಗಾಗಿ ಸಾರಿಗೆ ನಿಗಮಗಳ ಎಂಡಿ ಅವರಿಗೆ ನೀಡಿದ ನೋಟಿಸ್ ಅನ್ವಯ ಮುಷ್ಕರ ಹಮ್ಮಿಕೊಳ್ಳಲಾಗುತ್ತಿದೆ ಎಂದು ಸ್ಪಷ್ಟಪಡಿಸಿದರು.
ಸರ್ಕಾರ ಹೊರಡಿಸಿದ ಏಕಪಕ್ಷೀಯ ಆದೇಶ ತಿದ್ದುಪಡಿ ಮಾಡಿ 2023ರ ಡಿ.12ರಂದು ಚಾಲ್ತಿಯಲ್ಲಿದ್ದ ಮೂಲ ವೇತನದ ಶೇ.25ರಷ್ಟು ಹೆಚ್ಚಿಸಿ 2024ರ ಜ.1ರಿಂದ ನಾಲ್ಕು ವರ್ಷದವಧಿಗೆ ಜಾರಿಗೊಳಿಸಬೇಕು. ಕೈಗಾರಿಕಾ ಒಪ್ಪಂದದ ಪ್ರಕಾರ 2022ರ ಜು.1ರಲ್ಲಿದ್ದ ಶೇ.31 ತುಟ್ಟಿಭತ್ಯೆಯನ್ನು ಮೂಲ ವೇತನದಲ್ಲಿ ವಿಲೀನಗೊಳಿಸಿ ವಾರ್ಷಿಕ ಬಡ್ಡಿಯನ್ನು ಹೆಚ್ಚಿಸಿ ವೇತನಶ್ರೇಣಿ ರಚಿಸಬೇಕು.
ಬಾಟಾ ಮತ್ತಿತರೆ ಭತ್ಯೆಗಳನ್ನು ಹೆಚ್ಚಿಸಬೇಕು. 2020ರ ಜ.1ರಿಂದ ಡಿಸೆಂಬರ್ ಅಂತ್ಯದವರೆಗೆ ಉಳದಿ ಬಾಕಿ ಹಣ ಸೇವೆಯಲ್ಲಿರುವ ಹಾಗೂ ನಿವೃತ್ತ ನೌಕರರಿಗೆ ಪಾವತಿಸಬೇಕು. ಬಾಕಿ 1272 ಕೋಟಿ ರೂ.ಗಳನ್ನು ಒಂದೇ ಕಂತಿನಲ್ಲಿ ಪಾವತಿಸಬೇಕು. ಇತರೆ ಬೇಡಿಕೆಗಳನ್ನು ಜಂಟಿ ಕ್ರಿಯಾ ಸಮಿತಿಯ ಜತೆ ಚರ್ಚಿಸಿ ಒಂದು ತಿಂಗಳ ಕಾಲಮಿತಿಯಲ್ಲಿ ಬಗೆಹರಿಸಬೇಕು ಎಂದು ಆಗ್ರಹಿಸಿದರು.
ಒಬ್ಬ ಚಾಲಕನಿಗೆ ನಿರ್ವಾಹಕರ ಹೊರೆಯನ್ನೂ ನೀಡಲಾಗಿದೆ. ಆದರೆ ವಿಭಾಗಗಳಲ್ಲಿ ಅಧಿಕಾರಿಗಳ ಸಂಖ್ಯೆ ಹೆಚ್ಚಿಸಲಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಸರ್ಕಾರ ನಮ್ಮ ಬೇಡಿಕೆಗಳ ಈಡೇರಿಕೆಗೆ ಸ್ಪಂದಿಸಬೇಕು. ಎಸ್ಮಾ ಜಾರಿ ಮಾಡಿದರೆ ಬಗ್ಗುವುದಿಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ಮಿರ್ಜಾ ರಹಮತ್ ಉಲ್ಲಾ, ಸಂಘಟನಾ ಕಾರ್ಯದರ್ಶಿ ಆನಂದನಾಯ್ಕ, ಪ್ರಕಾಶ್, ಈಶ್ವರ ಬಣವಿ, ದಿಳ್ಯೆಪ್ಪ ಕಾಂಬ್ಳಿ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net