ಟೊಮ್ಯಾಟೊ ದರ ಏರು ಮುಖದಲ್ಲಿ Tomatoes

 ಟೊಮ್ಯಾಟೊ ಬಳ್ಳಿಯಲ್ಲಿ ಹೇರಳವಾಗಿ ಬಿಟ್ಟಿರುವ ಟೊಮ್ಯಾಟೊ ಕಾಯಿಗಳು.Tomatoes
ಟೊಮ್ಯಾಟೊ ಬಳ್ಳಿಯಲ್ಲಿ ಹೇರಳವಾಗಿ ಬಿಟ್ಟಿರುವ ಟೊಮ್ಯಾಟೊ ಕಾಯಿಗಳು.Tomatoes
Published on

ಪ್ರಮುಖ ಮುಖ್ಯಾಂಶಗಳು

  • ರೈತರ ಮೊಗದಲ್ಲಿ ಮಂದಹಾಸ
  • ಪ್ರತಿ ಕೆಜಿಗೆ 40- 50 ರೂ.
  • ಹೆಚ್ಚಾಯಿತು ಬೇಡಿಕೆ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಕಳೆದ ಒಂದೂವರೆ ತಿಂಗಳಿನಿಂದ ಕುಸಿತ ಕಂಡಿದ್ದ ಟೊಮ್ಯಾಟೊ, ಮೆಣಸಿನಕಾಯಿ ಸೇರಿ ವಿವಿಧ ತರಕಾರಿಗಳ ಬೆಲೆಯು ಮಾರುಕಟ್ಟೆಯಲ್ಲಿ ದಿಢೀರ್ ಏರಿಕೆ ಕಂಡಿದ್ದು, ತರಕಾರಿ ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ದಾವಣಗೆರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಪ್ರತಿ 25 ಕೆಜಿ ಬಾಕ್ಸ್‌ಗೆ ಹೋಲ್ಸೇಲ್ ದರ 950 ರಿಂದ 1,000 ರೂ. ವರೆಗೆ ವಹಿವಾಟು ನಡೆಯುತ್ತಿದೆ.
ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ ಗ್ರಾಮದ ಯುವ ಪ್ರಗತಿಪರ ಕೃಷಿಕ ಹರೀಶ್ ಅವರು ತಮ್ಮ ಒಂದೂವರೆ ಎಕರೆ ಜಮೀನಿನಲ್ಲಿ ಸುಮಾರು 12 ಸಾವಿರ ಟೊಮ್ಯಾಟೊ ಸಸಿ ನಾಟಿ ಮಾಡಿದ್ದು, ಪ್ರಸ್ತುತ ಮಾರುಕಟ್ಟೆಯಲ್ಲಿನ ದರ ಏರಿಕೆಯಿಂದಾಗಿ 6 ಲಕ್ಷಕ್ಕೂ ಹೆಚ್ಚು ಲಾಭ ಗಳಿಸುವ ನಿರೀಕ್ಷೆಯಲ್ಲಿದ್ದಾರೆ.
ಚಿಲ್ಲರೆ ಮಾರುಕಟ್ಟೆಯಲ್ಲಿ ಟೊಮ್ಯಾಟೊ ಬೆಲೆ ಕೆಜಿಗೆ 40 ರಿಂದ 50 ರೂ.ಗೆ ತಲುಪಿದೆ. ಟೊಮ್ಯಾಟೊ ಮಾತ್ರವಲ್ಲದೆ ಮೆಣಸಿನಕಾಯಿ, ಹೀರೆಕಾಯಿ, ಬೀನ್ಸ್, ಬದನೆ ಮತ್ತು ಬೆಂಡೆಕಾಯಿಗಳ ದರವು ಏರುಗತಿಯಲ್ಲಿದೆ. ದಾವಣಗೆರೆ ತಾಲೂಕಿನ ಆನಗೋಡು, ಮಾಯಕೊಂಡ, ಅಣಜಿ ಹೋಬಳಿಗಳ ವ್ಯಾಪ್ತಿಯ ಗ್ರಾಮಗಳಾದ ನೇರ್ಲಿಗೆ, ಸುಲ್ತಾನಿಪುರ, ಈಚಗಟ್ಟ, ಕೊಡಗನೂರು ಜಿಲ್ಲೆಯ ತರಕಾರಿ ಕಣಜ ಎಂದೇ ಖ್ಯಾತಿ ಪಡೆದಿದೆ. ಇಲ್ಲಿನ ರೈತರು ಬೋರ್‌ವೆಲ್ ನೀರಾವರಿ ನಂಬಿ ತರಕಾರಿ ಬೆಳೆಯುತ್ತಿದ್ದು, ಪ್ರಸ್ತುತ ಮಾರುಕಟ್ಟೆಗೆ ಹೊರ ಜಿಲ್ಲೆಯ ವರ್ತಕರು ಆಗಮಿಸುತ್ತಿರುವುದರಿಂದ ದರದಲ್ಲಿ ಚೇತರಿಕೆ ಕಂಡುಬಂದಿದೆ.
ತರಕಾರಿ, ಹಣ್ಣು ಹಾಗೂ ಹೂವು ಬೆಳೆಗಾರರಿಗೆ ಸರ್ಕಾರವು ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕು. ತರಕಾರಿ ಬೆಳೆಯುವ ಪ್ರಮುಖ ಕೇಂದ್ರಗಳಾದ ಆನಗೋಡು ಮತ್ತು ಮಾಯಕೊಂಡ ಭಾಗದಲ್ಲಿ ಹೈಟೆಕ್ ತರಕಾರಿ ಮಾರುಕಟ್ಟೆಗಳನ್ನು ಸ್ಥಾಪಿಸಬೇಕು ಎಂದು ಸುಲ್ತಾನಿಪುರ ನಟರಾಜ್, ಮಂಜುನಾಥ್ ಬಾಬರ್ ಸೇರಿ ಹಲವು ರೈತರು ಒತ್ತಾಯಿಸಿದ್ದಾರೆ.

ಜಿಲ್ಲೆಯಲ್ಲಿ 500 ಹೆಕ್ಟೇರ್‌ಗೂ ಹೆಚ್ಚು ಪ್ರದೇಶದಲ್ಲಿ ಟೊಮ್ಯಾಟೊ ಬೆಳೆಯಲಾಗಿದೆ. ಮಾರುಕಟ್ಟೆಯಲ್ಲಿ ದರ ಹೆಚ್ಚುತ್ತಿರುವುದು ರೈತರಿಗೆ ಅನುಕೂಲಕರವಾಗಿದೆ. ಈಗಾಗಲೇ ಹೊಸದಾಗಿ 400 ಹೆಕ್ಟೇರ್‌ನಲ್ಲಿ ನಾಟಿ ಕಾರ್ಯ ನಡೆದಿದೆ.

ಒಂದೂವರೆ ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು ಸಸಿ, ಗೂಟ, ತಂತಿ, ಗೊಬ್ಬರ, ಕೀಟನಾಶಕ ಹಾಗೂ ಕೂಲಿ ಸೇರಿ ಸುಮಾರು 1.20 ಲಕ್ಷ ರೂ. ಖರ್ಚಾಗುತ್ತದೆ. ಈಗಾಗಲೇ 500 ಬಾಕ್ಸೃ್ ಕಟಾವು ಮಾಡಿದ್ದು, ಪ್ರತಿ ಬಾಕ್ಸ್ 600 ರಿಂದ 850 ರೂ. ವರೆಗೆ ಮಾರಾಟವಾಗಿದೆ. ಇನ್ನೂ 700-800 ಬಾಕ್ಸೃ್ ಇಳುವರಿ ಬರುವ ನಿರೀಕ್ಷೆಯಿದ್ದು, ಒಟ್ಟು 5 ಲಕ್ಷಕ್ಕೂ ಅಧಿಕ ಲಾಭ ಸಿಗಬಹುದು.

ಬೇರೆ ಕಡೆಯಿಂದ ಹೋಲ್‌ಸೇಲ್ ವರ್ತಕರು ಮಾರುಕಟ್ಟೆಗೆ ಬರುತ್ತಿದ್ದು ತರಕಾರಿಗಳ ಬೆಲೆ ಏರಿಕೆ ಕಂಡಿದೆ. ಮುಂದಿನ ದಿನಗಳಲ್ಲಿ ಇನ್ನೂ ಉತ್ತಮವಾಗಿ ದರ ಏರಿಕೆ ಆಗುವ ನಿರೀಕ್ಷೆ ಇದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net