ಹರಿಹರದಲ್ಲಿ ಏತ ನೀರಾವರಿ ಯೋಜನೆ ಬಂದ್ ಬೆದರಿಕೆ

ಹರಿಹರ ತಾಲೂಕಿನ ಕೆರೆಗಳಿಗೆ ನೀರು ಹರಿಸದಿದ್ದರೆ ಪ್ರತಿಭಟನೆ ಅನಿವಾರ್ಯ
meeting
ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಶಾಸಕ ಬಿ.ಪಿ. ಹರೀಶ್ ಮಾತನಾಡಿದರು. ಜಿ. ಸಂತೋಷ್‌ಕುಮಾರ್, ಸುಮಲತಾ ಎಸ್.ಪಿ., ವಿ. ಈರಮ್ಮ ಇತರರಿದ್ದರು.meeting
Published on: 

ಹರಿಹರ: ತಾಲೂಕಿನಲ್ಲಿರುವ ಕೆರೆಗಳಿಗೆ ನದಿ ನೀರು ಹರಿಸುವುದು ಹಾಗೂ ಕುಡಿಯುವ ನೀರಿಗಾಗಿ ನದಿಯಲ್ಲಿ ಬ್ಯಾರೇಜ್ ನಿರ್ಮಿಸಲು ಸರ್ಕಾರ ಕ್ರಮ ಕೈಗೊಳ್ಳದೆ ಇದ್ದರೆ ತಾಲೂಕಿನ ನದಿಯಿಂದ ಕೆರೆಗಳಿಗೆ ನೀರು ಹರಿಸುವ ಯೋಜನೆಗಳನ್ನು ಬಂದ್ ಮಾಡುವ ಚಳವಳಿ ಆರಂಭಿಸಲಾಗುವುದೆಂದು ಶಾಸಕ ಬಿ.ಪಿ. ಹರೀಶ್ ಖಡಕ್ ಎಚ್ಚರಿಕೆ ನೀಡಿದರು.

ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದ ಅವರು, ಸಮುದ್ರದ ನೆಂಟಸ್ತನ, ಉಪ್ಪಿಗೆ ಬಡತನ ಎಂಬ ಗಾದೆ ಮಾತಿನಂತೆ 30 ಕಿ.ಮೀ. ನದಿ ದಡವನ್ನು ಹೊಂದಿದ್ದರೂ ತಾಲೂಕಿನ ರೈತರ ಜಮೀನಿಗೆ ಹಾಗೂ ಜನತೆ ಕುಡಿಯುವ ನೀರಿಗಾಗಿ ಹಾಹಾಕಾರ ಪಡುವಂತಾಗಿದೆ ಎಂದರು.

ಮಳೆಗಾಲದ ಅವಧಿಯ ಭತ್ತ ಬೆಳೆಯಲು ನಮಗೆ ನೀರು ಸಿಗಲಿಲ್ಲ, ಇನ್ನು ಬೇಸಿಗೆ ಬೆಳೆಗೆ ನೀರು ಕನಸಿನ ಮಾತೇ ಸರಿ. ತಾಲೂಕಿನ ರೈತರ ಹಾಗೂ ಜನರ ನೈಜ ಸ್ಥಿತಿಯನ್ನು ಮನವಿ ಸಲ್ಲಿಸುವ ಮೂಲಕ ಸರ್ಕಾರದ ಗಮನಕ್ಕೆ ತರುತ್ತೇವೆ. ಸ್ಪಂದನೆ ಸಿಗದಿದ್ದರೆ ಜಿಲ್ಲೆಯ ವಿವಿಧ ತಾಲೂಕುಗಳ ಕೆರೆಗಳಿಗೆ ನೀರು ಹರಿಸುವ ಯೋಜನೆಗಳ ಮುಂದೆ ಪ್ರತಿಭಟನೆ ನಡೆಸಿ ನೀರೆತ್ತುವುದನ್ನು ತಡೆಯುವ ಚಳವಳಿ ನಡೆಸುತ್ತೇವೆಂದು ಘೋಷಿಸಿದರು.

ಕೊಂಡಜ್ಜಿ, ಸಮೀಪದ ಬಾತಿ ಕೆರೆ, ಅಗಸನಕಟ್ಟೆ, ಚಂದಾಪುರ, ದೇವರಬೆಳೆಕೆರೆ ಸೇರಿ ತಾಲೂಕಿನ ಕೆರೆಗಳಿಗೆ ಮಳೆಗಾಲದಲ್ಲಿ ನೀರು ಹರಿಸಿದರೆ ಕನಿಷ್ಟ ಆ ಭಾಗದ ಜಮೀನುಗಳ ಕೊಳವೆ ಬಾವಿಗಳಿಗೆ ಅಂತರ್ಜಲ ಸಿಗುತ್ತದೆ. ರೈತರಂತೆಯೆ ನಗರದ ಹಾಗೂ ಗ್ರಾಮೀಣ ಭಾಗದ ಜನತೆಗೆ ಕುಡಿಯುವ ನೀರು ಸರಬರಾಜು ಮಾಡುವ ಜಲಸಿರಿ ಯೋಜನೆಗಳಿಗೂ ಮಳೆ ಬಾರದಿದ್ದರೆ ಗರ ಬಡಿಯಲಿದೆ. ಕುಡಿಯುವ ನೀರೆತ್ತುವ ಸ್ಥಳಗಳಲ್ಲಿ ನದಿಗೆ ಬ್ಯಾರೇಜ್ ನಿರ್ಮಿಸುವುದೂ ಅತ್ಯಗತ್ಯವಾಗಿದೆ ಎಂದು ಹೇಳಿದರು.

ಸಭೆಯಲ್ಲಿ ತಹಸೀಲ್ದಾರ್ ಜಿ. ಸಂತೋಷ್‌ಕುಮಾರ್, ಇಒ ಸುಮಲತಾ ಎಸ್.ಪಿ., ಪೌರಾಯುಕ್ತೆ ವಿ. ಈರಮ್ಮ, ನೀರಾವರಿ ಇಲಾಖೆಯ ಇಂಜಿನಿಯರ್‌ಗಳಾದ ಚನ್ನಬಸಪ್ಪ, ಕೃಷ್ಣಮೂರ್ತಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಎಸ್. ನಟರಾಜ್, ಪಶುಪಾಲನ ಇಲಾಖೆ ಮುಖ್ಯ ವೈದ್ಯಾಧಿಕಾರಿ ಎಸ್. ತಿಪ್ಪೇಸ್ವಾಮಿ, ಪಿಡಬ್ಲುೃಡಿ ಎಇಇ ಮರಿಸ್ವಾಮಿ, ಬೆಸ್ಕಾಂ ಎಇಇ ಲಕ್ಷ್ಮಪ್ಪ, ಕಂದಾಯ ನಿರೀಕ್ಷಕ ಸಮೀರ್ ಅಹ್ಮದ್ ಇದ್ದರು.

ತಾಲೂಕಿನ ರೈತರ ಹಿತ ಕಾಪಾಡಿ

ಅನ್ಯ ತಾಲೂಕುಗಳ ಕೆರೆಗಳಿಗೆ ನೀರು ಹರಿಸುವುದರಿಂದ ಆ ಭಾಗದ ರೈತರಿಗೆ ಆಗುತ್ತಿರುವ ಅನುಕೂಲದ ಬಗ್ಗೆ ನಮಗೆ ಹೊಟ್ಟೆಕಿಚ್ಚಿಲ್ಲ, ಆದರೆ ಆ ಭಾಗದ ರೈತರ ಹಿತ ಕಾಯುತ್ತಿರುವಂತೆಯೆ ಹರಿಹರ ತಾಲೂಕಿನ ರೈತರ ಹಿತವನ್ನು ಕಾಯುವುದು ಸರ್ಕಾರದ ಕರ್ತವ್ಯವಲ್ಲವೇ ಎಂದು ಶಾಸಕ ಬಿ.ಪಿ. ಹರೀಶ್ ಪ್ರಶ್ನಿಸಿದರು. ಭದ್ರಾ ಜಲಾಶಯದಿಂದ ಜಿಲ್ಲೆಯೆಡೆಗೆ ನೀರು ಹರಿಸುವ ನಾಲೆಗಳ ನೀರನ್ನು ಬೇರೆ ಯೋಜನೆಗಳ ಮೂಲಕ ಚಿತ್ರದುರ್ಗದಿಂದ ಕೋಲಾರದವರೆಗೂ ಹರಿಸಲಾಗುತ್ತಿದೆ. ಇದರಿಂದಾಗಿ ಅಚ್ಚುಕಟ್ಟು ಪ್ರದೇಶದ ಜಮೀನುಗಳಿಗೆ ನೀರು ಸಿಗದಾಗಿದೆ. ನಮ್ಮ ರೈತರಿಗಾಗುತ್ತಿರುವ ಅನ್ಯಾಯವನ್ನು ಇನ್ನು ಮುಂದೆ ಸಹಿಸಲಾಗುವುದಿಲ್ಲ ಎಂದು ಹೇಳಿದರು.

ಕೆರೆಗಳಿಗೆ ನೀರು ಹರಿಸುವ ಯೋಜನೆಗಳನ್ನು ಬಂದ್ ಮಾಡುವ ಚಳವಳಿಯನ್ನು ಪ್ರಬಲವಾಗಿ ಮಾಡಬೇಕಿದೆ, ಈ ಚಳವಳಿಗೆ ಯಾವುದೇ ರಾಜಕೀಯ, ಗುಂಪಿನ ಬಣ್ಣವಿಲ್ಲ, ಇಡೀ ತಾಲೂಕಿನ ಜನ ಒಂದಾಗಿ ಈ ಹೋರಾಟಕ್ಕಿಳಿಯಬೇಕಿದೆ.
ಬಿ.ಪಿ. ಹರೀಶ್ ಶಾಸಕ.