ಅಂಧರ ಬಂಧು ಈ ಸ್ಮಾರ್ಟ್ ಗ್ಲಾಸ್

ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ನಿರ್ಮಾಣ 6.0’ನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ‘ಸ್ಮಾರ್ಟ್ ಗ್ಲಾಸ್’ ಪ್ರಾಜೆಕ್ಟ್ ಪ್ರದರ್ಶಿಸಿದರು. ಸಿ.ಪಿ. ಮಂಜುನಾಥ್, ರಮಾನಂದ, ಸೀತಾ, ಯುವರಾಜ್, ಡಾ. ಆರ್. ನಾಸೀರ್ (ಪ್ರಾಜೆಕ್ಸ್ ಗೈಡ್) ಇದ್ದರು.
ದಾವಣಗೆರೆಯ ಬಿಐಇಟಿ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ ‘ನಿರ್ಮಾಣ 6.0’ನಲ್ಲಿ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ‘ಸ್ಮಾರ್ಟ್ ಗ್ಲಾಸ್’ ಪ್ರಾಜೆಕ್ಟ್ ಪ್ರದರ್ಶಿಸಿದರು. ಸಿ.ಪಿ. ಮಂಜುನಾಥ್, ರಮಾನಂದ, ಸೀತಾ, ಯುವರಾಜ್, ಡಾ. ಆರ್. ನಾಸೀರ್ (ಪ್ರಾಜೆಕ್ಸ್ ಗೈಡ್) ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಬಿಐಇಟಿ ವಿದ್ಯಾರ್ಥಿಗಳ ಪ್ರಾಜೆಕ್ಟ್
  • ಹಲವು ಆವಿಷ್ಕಾರಗಳ ಪ್ರದರ್ಶನ
ದಾವಣಗೆರೆ : ಅಂಧರು ಸುರಕ್ಷಿತವಾಗಿ ಮತ್ತು ಸ್ವತಂತ್ರವಾಗಿ ಸಂಚರಿಸಲು ನೆರವಾಗುವ ಕನ್ನಡಕ ‘ಸ್ಮಾರ್ಟ್ ಗ್ಲಾಸ್’ನ್ನು ನಗರದ ಬಿಐಇಟಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದಾರೆ.
ಕಾಲೇಜಿನ ಎಸ್‌ಎಸ್‌ಎಂ ಸಾಂಸ್ಕೃತಿಕ ಕೇಂದ್ರದಲ್ಲಿ ಶನಿವಾರ ಆಯೋಜಿಸಿದ್ದ, ವಿದ್ಯಾರ್ಥಿಗಳು ರೂಪಿಸಿದ ಪ್ರಾಜೆಕ್ಟ್‌ಗಳ ಪ್ರದರ್ಶನ ‘ನಿರ್ಮಾಣ 6.0’ನಲ್ಲಿ ಈ ಪ್ರಾಜೆಕ್ಟ್ ಗಮನ ಸೆಳೆಯಿತು.
ಈ ಕನ್ನಡಕದಲ್ಲಿ ಕೃತಕ ಬುದ್ಧಿಮತ್ತೆಯನ್ನು ಬಳಸಲಾಗಿದೆ. ಕ್ಯಾಮರಾ, ಅಲ್ಟ್ರಾಸೋನಿಕ್ ಸೆನ್ಸರ್‌ಗಳನ್ನು ಅಳವಡಿಸಲಾಗಿದೆ. ಇದು ಕಡಿಮೆ ವೆಚ್ಚದಲ್ಲಿ ಪರಿಣಾಮಕಾರಿಯಾಗಿ ನೆರವಾಗುತ್ತದೆ ಎನ್ನುತ್ತಾರೆ ಇದನ್ನು ಅಭಿವೃದ್ಧಿಪಡಿಸಿದ ವಿದ್ಯಾರ್ಥಿಗಳು.
ಅಂಧರು ಸಂಚರಿಸುವಾಗ ಮಾರ್ಗದಲ್ಲಿ ಬರುವ ಅಡಚಣೆಗಳನ್ನು ಗುರುತಿಸುವ ವ್ಯವಸ್ಥೆ ಇದರಲ್ಲಿದೆ. ಪಾದಚಾರಿಗಳು, ವಾಹನಗಳು, ಇನ್ಯಾವುದಾದರೂ ವಸ್ತು ಎದುರಿಗೆ ಬಂದಾಗ ಧ್ವನಿಯ ಮೂಲಕ ಸೂಚನೆಗಳನ್ನು ನೀಡಲಾಗುತ್ತದೆ. ಇದರಿಂದ ಸುರಕ್ಷಿತವಾಗಿ ಸಂಚರಿಸಲು ಸಾಧ್ಯ.
ಒಟ್ಟು 64 ಪ್ರಾಜೆಕ್ಟ್‌ಗಳನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು. ಒಂದಕ್ಕಿಂತ ಒಂದು ಸಮಾಜಕ್ಕೆ ಉಪಯುಕ್ತವಾದ ಪರಿಕಲ್ಪನೆಗಳನ್ನು ಹೊಂದಿದ್ದವು.

ರೋಗ ಪತ್ತೆಹಚ್ಚುವ ವಿಧಾನ

ರೋಗ ಪತ್ತೆಹಚ್ಚುವ ಕೆಲವು ವಿಧಾನಗಳನ್ನು ವಿದ್ಯಾರ್ಥಿಗಳು ಪ್ರಸ್ತುತಪಡಿಸಿದರು. ಬಾಯಿ ಕ್ಯಾನ್ಸರ್ ಪತ್ತೆ, ಎಲುಬಿನ ರಚನೆಯನ್ನು 3ಡಿ ಎಕ್ಸ್‌ರೇ ಮೂಲಕ ತಿಳಿಯುವುದು, ಇಇಜಿ ಮಾಡುವ ವಿಧಾನದಲ್ಲಿ ರೋಗಿಗಳಿಗೆ ಉಪಯುಕ್ತವಾಗಬಲ್ಲ ಸಲಹೆಗಳನ್ನು ಈ ಪ್ರಾಜೆಕ್ಟ್‌ಗಳು ನೀಡಿದವು.
ಎಲೆಕ್ಟ್ರಿಕ್ ವಾಹನಗಳನ್ನು ಚಾರ್ಜ್ ಮಾಡಲು ಸೌರಶಕ್ತಿ ಮತ್ತು ಪವನ ಶಕ್ತಿಯನ್ನು ಬಳಸುವ ಹೈಬ್ರಿಡ್ ಪವರ್ ಸ್ಟೇಷನ್‌ನ ಪರಿಕಲ್ಪನೆಯನ್ನು ವಿದ್ಯಾರ್ಥಿಗಳು ರೂಪಿಸಿದ್ದರು. ವಿದ್ಯುತ್ ಮಾರ್ಗಗಳ ದುರಸ್ತಿ ಮಾಡುವ ಲೈನ್‌ಮನ್‌ಗಳಿಗೆ ಜೀವರಕ್ಷಿಸುವ ಘಟಕ, ಹೆಲ್ಮೆಟ್ ಧರಿಸದೆ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರನ್ನು ಗುರುತಿಸುವ ಪ್ರಾಜೆಕ್ಟ್ ಇದ್ದವು.
ಧ್ವನಿ ಮತ್ತು ಚಿತ್ರದ ಆಧಾರದ ಮೇಲೆ ಹಕ್ಕಿಗಳನ್ನು ಗುರುತಿಸುವ ತಂತ್ರಜ್ಞಾನ, ಸಂಧಿವಾತ ಇರುವವರಿಗೆ ರೋಗ ಪತ್ತೆ ಹಚ್ಚುವ ಎಐ ಆಧಾರಿತ ವಿಧಾನವನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದರು.
ಹಳೆಗನ್ನಡ ಲಿಪಿಯ ಶಿಲಾಶಾಸನಗಳ ಬರಹವನ್ನು ಸುಲಭವಾಗಿ ಓದಲು ಅನುಕೂಲವಾಗುವ ಎಐ ಆಧಾರಿತ ಮತ್ತೊಂದು ಪ್ರಾಜೆಕ್ಟ್ ಗಮನ ಸೆಳೆಯಿತು. ಕೊಳಚೆ ನೀರಿನಿಂದ ನ್ಯಾನೋ ರಸಗೊಬ್ಬರ ಉತ್ಪಾದಿಸುವ ರೈತಸ್ನೇಹಿ ಯೋಜನೆಯ ಪರಿಕಲ್ಪನೆಯನ್ನು, ಅಡಿಕೆ ಸಿಪ್ಪೆ, ಬಾಳೆ ದಿಂಡು, ಕಬ್ಬಿನ ಸಿಪ್ಪೆಯಿಂದ ಕಾಗದ ತಯಾರಿಸುವ ವಿಧಾನವನ್ನು ಪ್ರದರ್ಶಿಸಲಾಯಿತು.
ರೆಸ್ಟೋರೆಂಟ್ಗಳಲ್ಲಿ ಆಹಾರ ಸೇವಾ ಕಾರ್ಯಾಚರಣೆಗಳನ್ನು ಸುಧಾರಿಸಲು ವಿನ್ಯಾಸಗೊಳಿಸಲಾದ ಸ್ವಯಂಚಾಲಿತ ರೋಬೋಟ್, ಅಡುಗೆ ಮನೆಯಿಂದ ನಿಗದಿತ ಮೇಜುಗಳಿಗೆ ಆಹಾರ ಮತ್ತು ಪಾನೀಯಗಳನ್ನು ತಲುಪಿಸುತ್ತದೆ. ಎಂಪಿಯು ಸಂವೇದಕವನ್ನು ಬಳಸಿಕೊಂಡು ಪಾರ್ಶ್ವವಾಯು ರೋಗಿಯ ಆರೋಗ್ಯ ಮೇಲ್ವಿಚಾರಣಾ ವ್ಯವಸ್ಥೆಯನ್ನು ವಿದ್ಯಾರ್ಥಿಗಳು ಅಭಿವೃದ್ಧಿಪಡಿಸಿದ್ದರು.
ಇದಕ್ಕೂ ಮೊದಲು ನಡೆದ ಸಮಾರಂಭದಲ್ಲಿ ಬೆಸ್ಕಾಂ ಅಧೀಕ್ಷಕ ಇಂಜಿನಿಯರ್ ಎಸ್.ಕೆ. ಪಟೇಲ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಸಂಚಾಲಕ ಡಾ. ಎ.ಜಿ. ಶಂಕರಮೂರ್ತಿ, ಪ್ರಾಧ್ಯಾಪಕಿ ಡಾ. ಜಿ.ಎಸ್. ಸುನಿತಾ ಇದ್ದರು.
"

ಕೃತಕ ಬುದ್ಧಿಮತ್ತೆಯಿಂದ (ಎಐ) ಉದ್ಯೋಗಗಳು ಕಡಿತವಾಗುತ್ತವೆ ಎಂಬ ಭಾವನೆ ಬೇಡ. ಆರಂಭದಲ್ಲಿ ಹಾಗೆ ಅನಿಸಿದರೂ, ಕ್ರಮೇಣ ಹೆಚ್ಚು ಕೆಲಸಗಳು ಸೃಷ್ಟಿಯಾಗುತ್ತವೆ. ಕಾಲೇಜಿನ ಸಂಶೋಧನಾ ಚಟುವಟಿಕೆಗಳಿಗೆ ಕೆಎಸ್‌ಸಿಎಸ್‌ಟಿ, ಎಐಸಿಟಿಇ, ವಿಜಿಎಸ್‌ಟಿ, ನೇನ್ ಮುಂತಾದ ಸಂಸ್ಥೆಗಳಿಂದ ಅನುದಾನ ಬಿಡುಗಡೆಯಾಗಿದೆ.

— ಡಾ.ಎಚ್.ಬಿ. ಅರವಿಂದ್, ಬಿಐಇಟಿ ಪ್ರಾಚಾರ್ಯ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net