ಆದಿಕರ್ನಾಟಕ ಸಂಘದಲ್ಲಿ ನಡೆದಿಲ್ಲ ಅವ್ಯವಹಾರ

ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ, ಕೆ. ಚಂದ್ರಪ್ಪ, ಬಿ.ಎಂ.ರಾಮಸ್ವಾಮಿ, ಮಂಜಪ್ಪ ಹಲಗೇರಿ ಇತರರಿದ್ದರು.
ದಾವಣಗೆರೆಯಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ, ಕೆ. ಚಂದ್ರಪ್ಪ, ಬಿ.ಎಂ.ರಾಮಸ್ವಾಮಿ, ಮಂಜಪ್ಪ ಹಲಗೇರಿ ಇತರರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಾಲ್ವರ ಗಡಿಪಾರಿಗೆ ಆಗ್ರಹಿಸಿ ಬುಧವಾರ ಪ್ರತಿಭಟನೆ
  • ಸಂಘದ ಹಣ ವೈಯಕ್ತಿಕ ಕಾರಣಕ್ಕೆ ಬಳಸಿಲ್ಲ
  • ಅಧ್ಯಕ್ಷ ಎಲ್.ಎಂ.ಎಚ್, ಬಿ.ಎಚ್.ವೀರಭದ್ರಪ್ಪ ಮಾಹಿತಿ
ದಾವಣಗೆರೆ: ಆದಿಕರ್ನಾಟಕ ವಿದ್ಯಾಭಿವೃದ್ಧಿ ಸಂಘದಲ್ಲಿ ಯಾವುದೇ ಅವ್ಯವಹಾರ ನಡೆದಿಲ್ಲ. ಇಲ್ಲಿನ ಅಭಿವೃದ್ಧಿ ಕಾರ್ಯಗಳ ಬಗ್ಗೆ ಸಹಿಸದೆ ಕೆಲವರು ಸಂಘದ ಬಗ್ಗೆ ಅಪಪ್ರಚಾರ ಮಾಡುತ್ತಿದ್ದಾರೆ. ಅವರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜು.1ರಂದು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಸಂಘದ ಅಧ್ಯಕ್ಷ ಎಲ್.ಎಂ. ಹನುಮಂತಪ್ಪ, ಕಾರ್ಯದರ್ಶಿ ಬಿ.ಎಚ್.ವೀರಭದ್ರಪ್ಪ ತಿಳಿಸಿದರು.
ಆಲೂರು ನಿಂಗರಾಜು, ಎಂ. ಹಾಲೇಶ್, ದುಗ್ಗಪ್ಪ, ಚೇತನ್ ಅವರು ಬೇರೆ ಬೇರೆ ಕೇಸ್‌ಗಳಲ್ಲಿ ಅವ್ಯವಹಾರ ಮಾಡಿದ್ದಾರೆ. ದಂಪತಿ ಜಗಳ, ಜಾತಿ ನಿಂದನೆ ಕೇಸ್‌ಗಳ ಹೆಸರಲ್ಲಿ ಜನರಿಂದ ಹಣ ಸುಲಿಗೆ ಮಾಡಿದ್ದಾರೆ. ಅನೇಕ ಕ್ರಿಮಿನಲ್ ಕೇಸ್ ಎದುರಿಸುತ್ತಿದ್ದಾರೆ. ಇವರನ್ನು ಜಿಲ್ಲೆಯಿಂದಲೇ ಗಡಿಪಾರು ಮಾಡುವಂತೆ ಜಿಲ್ಲಾಡಳಿತಕ್ಕೆ ಒತ್ತಾಯಿಸಲಾಗುವುದು ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸಂಘದ ಪದಾಧಿಕಾರಿಗಳು, ನಿರ್ದೇಶಕರಿಂದ ಯಾವುದೇ ಹಣ ಲೂಟಿಯಾಗಿಲ್ಲ. ಅನುದಾನವೂ ದುರ್ಬಳಕೆಯಾಗಿಲ್ಲ. ನಾವು ನಮ್ಮದೇ ಆದ ವೃತ್ತಿಯಿಂದ ಜೀವನ ನಡೆಸುತ್ತಿದ್ದೇವೆಯೇ ಹೊರತು ಸಂಘದ ಹಣ ವೈಯಕ್ತಿಕವಾಗಿ ಬಳಸಿಲ್ಲ. ಈ ಬಗ್ಗೆ ಆರೋಪಿಸುವಾಗ ಎಚ್ಚರಿಕೆಯಿಂದ ಮಾತನಾಡಬೇಕು.
ನಾವು ತಪ್ಪೆಸಗಿಲ್ಲ. ತಪ್ಪು ಮಾಡಿದ್ದೇ ಆಗಿದ್ದಲ್ಲಿ ನೇರವಾಗಿ ಕೇಳಬೇಕಿತ್ತು. ಇತ್ತೀಚೆಗೆ ಹಮ್ಮಿಕೊಂಡಿದ್ದ ಸಾಮಾನ್ಯ ಸಭೆಯಲ್ಲಿ ಬಂದು ಪ್ರಶ್ನಿಸಬಹುದಿತ್ತು. ಆರೋಪ ಮಾಡುವವರು ಯಾಕೆ ಬರಲಿಲ್ಲ ಎಂದು ಪ್ರಶ್ನಿಸಿದರು.
ಹಳೆಯ ಪದಾಧಿಕಾರಿಗಳು ರಚಿಸಿದ ಬೈಲಾದಂತೆ ಸಂಘದಲ್ಲಿ 201 ಸದಸ್ಯರಿಗೆ ಅವಕಾಶವಿದೆ. 1ಸಾವಿರ ರೂ.ಗೆ ಒಂದು ವರ್ಷ ಹಾಗೂ 5 ಸಾವಿರ ರೂ.ಗೆ ಆಜೀವ ಸದಸ್ಯತ್ವ ನೀಡಲಾಗುತ್ತದೆ. ಸದಸ್ಯರ ಸಂಖ್ಯೆ ಹೆಚ್ಚಿಸಲು ಇದು ಪಕ್ಷದ ಸಂಘಟನೆಯಲ್ಲ. ಸದಸ್ಯತ್ವ ಹೆಚ್ಚಳ ಮಾಡಬೇಕಿದ್ದರೆ ಐದು ವರ್ಷಕ್ಕೊಮ್ಮೆ ನಡೆಯುವ ಸಾಮಾನ್ಯ ಸಭೆಯಲ್ಲಿ ಚರ್ಚೆಯಾಗಬೇಕು ಎಂದೂ ಆರೋಪಕ್ಕೆ ಪ್ರತಿಕ್ರಿಯಿಸಿದರು.
ಆದಿಕರ್ನಾಟಕ ಶಿಕ್ಷಣ ಸಂಸ್ಥೆಯ ಕಟ್ಟಡವನ್ನು ಎಲ್ಲಿಯೂ ಒಡೆದಿಲ್ಲ. ಊಟದ ಸಭಾಂಗಣ ಸೋರುತ್ತಿರುವ ಕಾರಣಕ್ಕೆ ಪ್ರತ್ಯೇಕ ಕಟ್ಟಡ ಕಟ್ಟಲಾಗಿದೆ. ಹಾಸ್ಟೆಲ್,ಭೋಜನಾಲಯಕ್ಕೆ ಸಮಾಜ ಕಲ್ಯಾಣ ಇಲಾಖೆಯಿಂದ 1 ಕೋಟಿ ರೂ. ಮಂಜೂರಾಗಿತ್ತಯ. ಇದರಲ್ಲಿ 50 ಲಕ್ಷ ರೂ. ಮಾತ್ರವೇ ಬಿಡುಗಡೆಯಾಗಿದೆ.
ಇನ್ನೂ 50 ಲಕ್ಷ ರೂ. ಬರಬೇಕಿದೆ. ಕೆಲಸ ಸ್ಥಗಿತವಾಗದಿರಲು 81 ಲಕ್ಷ ರೂ.ಗಳ ಬ್ಯಾಂಕ್ ಸಾಲ ಪಡೆದಿದ್ದೇವೆ. ಇದುವರೆಗೆ 2 ಕೋಟಿ ರೂ. ಅಧಿಕ ಹಣವನ್ನು ಸಂಘದಿಂದಲೇ ಬಳಸಿದ್ದೇವೆ. ಈ ಕ್ಯಾಂಪಸ್‌ನಲ್ಲಿ ಪ್ಯಾರಾ ಮೆಡಿಕಲ್, ಪಿಯು ಸೇರಿ ಒಟ್ಟು 336ಕ್ಕೂ ಹೆಚ್ಚು ವಿದ್ಯಾರ್ಥಿಗಳಿದ್ದಾರೆ.
ಹಾಸ್ಟೆಲ್‌ನಲ್ಲಿ 103 ಮಕ್ಕಳಿಗೆ ಪ್ರವೇಶಾತಿ ಇದ್ದರೂ 120 ವಿದ್ಯಾರ್ಥಿಗಳಿದ್ದು ಹೆಚ್ಚುವರಿ ಇದ್ದವರಿಗೂ ಬೇರೆ ಮೂಲದಿಂದ ಹಣ ವ್ಯಯಿಸಲಾಗುತ್ತಿದೆ. 2010ರಿಂದ 2025ರವರೆಗೆ 15 ವರ್ಷದ ಆಡಿಟ್ ವರದಿ ಇದೆ. ಆಡಳಿತದಲ್ಲಿ ಪಾರದರ್ಶಕತೆ ಕಾಯ್ದುಕೊಂಡು ಬರಲಾಗಿದೆ. ಅಪಪ್ರಚಾರದಿಂದಾಗಿ ವಿದ್ಯಾರ್ಥಿಗಳ ದಾಖಲಾತಿಯೂ ಕುಸಿಯುತ್ತಿದೆ ಎಂದರು.
ಮಹಾತ್ಮ ಗಾಂಧೀಜಿ ಬಂದುಹೋದ ಐತಿಹಾಸಿಕ ಸ್ಥಳವಾದ್ದರಿಂದ ತೆರಿಗೆ ವಿನಾಯ್ತಿ ಇದೆ. ಹಳೇ ಕಟ್ಟಡದ ಜಾಗದಲ್ಲೇ ಹೆಚ್ಚುವರಿ ಕೊಠಡಿಗಳ ಕಾಮಗಾರಿ ಮಾಡಿದ್ದೇವೆ. ರಸ್ತೆ ಬದಿಗೆ ಹೊಂದಿಕೊಂಡಿದ್ದ ಅನುಪಯಕ್ತ ಜಾಗದಲ್ಲಿ ಸಾಮಾನ್ಯ ಸಭೆ ನಿರ್ಧಾರದಂತೆ ಕೆಳಭಾಗದಲ್ಲಿ 20 ಮಳಿಗೆ, ಮೇಲ್ಭಾಗದಲ್ಲಿ ಹಾಸ್ಟೆಲ್ ಕೊಠಡಿಗಳನ್ನು ಕಟ್ಟುತ್ತಿದ್ದೇವೆ. ಕೆಳಗಿನ ಮಳಿಗೆಗಳನ್ನು ಬಾಡಿಗೆ ನೀಡುವುದಾಗಿ ಹೇಳಿ ಸಂಘದ ಪದಾಧಿಕಾರಿಗಳು ಯಾರಿಂದಲೂ ಮುಂಗಡ ಹಣ ಪಡೆದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಂಘದ ಬಗ್ಗೆ ಅಪಪ್ರಚಾರ ಮಾಡುವವರು ಸಂಘದ ಸದಸ್ಯತ್ವದಿಂದ ಹೊರಗುಳಿದಿದ್ದೇಕೆ? ಅವರ ಅವಧಿಯಲ್ಲೇಕೆ ಮಳಿಗೆ ಇತರೆ ಅಭಿವೃದ್ಧಿ ಕಾರ್ಯ ಮಾಡಲಿಲ್ಲ? ಕೆಲವರು ಸಂಘದ ಅಭಿವೃದ್ಧಿ ಸಹಿಸದೆ ವೈಯಕ್ತಿಕ ಹಿತಾಸಕ್ತಿಗಾಗಿ ಸಮಾಜವನ್ನು ವಿಭಜಿಸುತ್ತಿದ್ದಾರೆ ಎಂದೂ ದೂರಿದರು.
ಆರೋಪಿಸಲಾದ ನಾಲ್ವರನ್ನು ಗಡಿಪಾರು ಮಾಡಬೇಕು. ಈ ಸಂಬಂಧ ಜು. 1ರಂದು ಬೆಳಗ್ಗೆ 11 ಗಂಟೆಗೆ ಅಂಬೇಡ್ಕರ್ ವೃತ್ತದಿಂದ ಉಪವಿಭಾಗಾಧಿಕಾರಿ ಕಚೇರಿವರೆಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಲಾಗುವುದು. ಬೇಡಿಕೆ ಈಡೇರುವವರೆಗೆ ಉಪವಾಸ ಧರಣಿ, ಉಗ್ರ ಹೋರಾಟ, ದಾವಣಗೆರೆ ಬಂದ್ ಕರೆ ನೀಡಬೇಕಾಗಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಂಟಿ ಕಾರ್ಯದರ್ಶಿ ಕೆ. ಚಂದ್ರಪ್ಪ, ಉಪಾಧ್ಯಕ್ಷ ಬಿ.ಎಂ.ರಾಮಸ್ವಾಮಿ, ನಿರ್ದೇಶಕರಾದ ಮಂಜಪ್ಪ ಹಲಗೇರಿ, ನಾಗರಾಜಪ್ಪ ಆದಾಪುರ, ಮಲ್ಲೇಶ್, ರಂಗನಾಥ ಸ್ವಾಮಿ, ಎಲ್.ಎಂ.ಎಚ್.ಸಾಗರ್, ಸಂತೋಷ್ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net