ಸಿರಿಧಾನ್ಯ ಖಾದ್ಯಗಳ ಸವಿ ಲೋಕ

ದಾವಣಗೆರೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪ್ರದರ್ಶನವನ್ನು ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ವೀಕ್ಷಿಸಿದರು. ಜಿಯಾವುಲ್ಲಾ ಕೆ, ಅಶೋಕ್, ಶ್ರೀಧರಮೂರ್ತಿ, ಶಿವಪ್ಪ ಇದ್ದರು.
ದಾವಣಗೆರೆಯ ಸಹಾಯಕ ಕೃಷಿ ನಿರ್ದೇಶಕರ ಕಚೇರಿ ಆವರಣದಲ್ಲಿ ಬುಧವಾರ ಆಯೋಜಿಸಿದ್ದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪ್ರದರ್ಶನವನ್ನು ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲ ರಾವ್ ವೀಕ್ಷಿಸಿದರು. ಜಿಯಾವುಲ್ಲಾ ಕೆ, ಅಶೋಕ್, ಶ್ರೀಧರಮೂರ್ತಿ, ಶಿವಪ್ಪ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೃಷಿ ಇಲಾಖೆಯಿಂದ ಆಯೋಜನೆ
  • ಜಿಲ್ಲೆಯ 70 ಸ್ಪರ್ಧಿಗಳು ಭಾಗಿ
  • ಬಾಯಲ್ಲಿ ನೀರೂರಿಸಿದ ಪದಾರ್ಥಗಳು
ದಾವಣಗೆರೆ : ನವಣೆ, ಸಜ್ಜೆ, ಸಾಮೆ, ರಾಗಿ. ಹೀಗೆ ತರಹೇವಾರಿ ಸಿರಿಧಾನ್ಯಗಳು ನಮ್ಮ ಹಿರಿಯರ ಆಹಾರ ಪದ್ಧತಿಯ ಭಾಗವಾಗಿದ್ದವು. ಅದೇ ಅವರ ಆರೋಗ್ಯದ ಗುಟ್ಟಾಗಿತ್ತು. ಈಗಿನ ಪೀಳಿಗೆಗೆ ಅವುಗಳ ಪರಿಚಯವೇ ಇಲ್ಲ. ಫಾಸ್ಟ್‌ಫುಡ್ ಸಂಸ್ಕೃತಿಗೆ ಅವರು ಮಾರುಹೋಗಿದ್ದಾರೆ.
ಮರೆತು ಹೋದ ಖಾದ್ಯಗಳನ್ನು ಮತ್ತೆ ನೆನಪಿಸುವ, ಅರಿವು ಮೂಡಿಸುವ ಪ್ರಯತ್ನವಾಗಿ, ಕೃಷಿ ಇಲಾಖೆ ವತಿಯಿಂದ ಸಿರಿಧಾನ್ಯ ಮತ್ತು ಸಾವಯವ ಅಂತಾರಾಷ್ಟ್ರೀಯ ವಾಣಿಜ್ಯ ಮೇಳ-2026ರ ಅಂಗವಾಗಿ ಜಿಲ್ಲಾ ಮಟ್ಟದಲ್ಲಿ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಇಲ್ಲಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯ ಆವರಣದಲ್ಲಿ ಬುಧವಾರ ಹಮ್ಮಿಕೊಳ್ಳಲಾಗಿತ್ತು.
ಮೂರು ವಿಭಾಗದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ 70 ಸ್ಪರ್ಧಿಗಳು ಎಲ್ಲ ತಾಲೂಕುಗಳಿಂದ ಪಾಲ್ಗೊಂಡಿದ್ದರು. ಅವರು ತಯಾರಿಸಿದ ಸಿರಿಧಾನ್ಯದ ಸಿಹಿ, ಖಾರ ಮತ್ತು ಮರೆತು ಹೋದ ಖಾದ್ಯಗಳನ್ನು ಆಸಕ್ತಿಯಿಂದ ಪ್ರದರ್ಶಿಸಿದರು.
ಈ ಪ್ರದರ್ಶನದ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಕಚೇರಿಯ ಆವರಣದಲ್ಲಿ ಗ್ರಾಮೀಣ ಪರಿಸರವನ್ನು ಸೃಷ್ಟಿಸಲಾಗಿತ್ತು. ಅಂಗಳದಲ್ಲಿ ರಂಗೋಲಿ ಬಿಡಿಸಲಾಗಿತ್ತು. ಬಾಳೆ ಕಂದುಗಳನ್ನು ಕಟ್ಟಿ ಸಿಂಗರಿಸಲಾಗಿತ್ತು. ಹಳ್ಳಿ ಬದುಕಿನ ವಿವಿಧ ದೃಶ್ಯಗಳು ಅಲ್ಲಿ ಕಂಡವು.
ವಿದ್ಯಾರ್ಥಿಗಳು, ರೈತರು, ಸಾರ್ವಜನಿಕರು ಪ್ರದರ್ಶನವನ್ನು ವೀಕ್ಷಿಸಿ ಮಾಹಿತಿ ಪಡೆದುಕೊಂಡರು. ಹಿರಿಯರು ತಮ್ಮ ಕಾಲದ ಖಾದ್ಯಗಳನ್ನು ಮೆಲುಕು ಹಾಕಿದರು. ಮನೆಯಿಂದ ತಯಾರಿಸಿಕೊಂಡು ತಂದಿದ್ದ ಪದಾರ್ಥಗಳ ಬಗ್ಗೆ ಸ್ಪರ್ಧಿಗಳು ಉತ್ಸಾಹದಿಂದ ವಿವರಿಸಿದರು. ಅವುಗಳ ವಿಶೇಷತೆಯ ಪರಿಚಯ ಮಾಡಿಕೊಟ್ಟರು. ತೀರ್ಪುಗಾರರು ಖಾದ್ಯಗಳನ್ನು ವೀಕ್ಷಿಸಿ ವಿಜೇತರನ್ನು ಆಯ್ಕೆ ಮಾಡಿದರು.
ಕೃಷಿ ಇಲಾಖೆ 2017 ರಿಂದ ಸಿರಿಧಾನ್ಯ ಮತ್ತು ಮರೆತು ಹೋದ ಖಾದ್ಯಗಳ ಪಾಕ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದೆ. ಇದರಿಂದ ನಮ್ಮ ಹಳೆದ ಆಹಾರ ಧಾನ್ಯಗಳು, ಅವುಗಳಿಂದ ಸಿದ್ಧಪಡಿಸುವ ಖಾದ್ಯಗಳ ಪರಿಚಯ ಸಮಾಜಕ್ಕೆ ಆಗುತ್ತಿದೆ.
ಜಂಟಿ ಕೃಷಿ ನಿರ್ದೇಶಕ ಜಿಯಾವುಲ್ಲಾ ಕೆ, ಉಪ ನಿರ್ದೇಶಕರಾದ ಅಶೋಕ್, ತಿಪ್ಪೇಸ್ವಾಮಿ, ರೇವಣಸಿದ್ದನಗೌಡ, ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಶಿವಪ್ಪ, ಬಿಐಇಟಿ ನಿರ್ದೇಶಕ ಪ್ರೊ. ವೈ. ವೃಷಭೇಂದ್ರಪ್ಪ ಇದ್ದರು.

ಆಹಾ ರುಚಿಕರ

ಸಿರಿಧಾನ್ಯದ ಮಾಲದಿ, ಸಾವಯವ ಬೆಲ್ಲ ಮತ್ತು ಹಸುವಿನ ತುಪ್ಪದಿಂದ ತಯಾರಿಸಿದ ನವಣೆ ಉಂಡೆಗಳು ಸ್ವಾಗತಿಸಿದವು. ರಾಗಿ ಪ್ರಿಯರಿಗೆ ರುಚಿಕರ ಖೀಲ್ಸಾ ಮತ್ತು ಹಲ್ವಾ ಆಕರ್ಷಿಸಿದವು. ನವಣೆ ಮತ್ತು ಸಜ್ಜೆಯ ಚಕ್ಲಿ, ಹಪ್ಪಳ, ನಿಪ್ಪಟ್ಟುಗಳು ಸದ್ದು ಮಾಡಿದವು. ಜತೆಗೆ ಸಾಮೆ ಉಪ್ಪಿಟ್ಟಿನ ಘಮ ಆವರಿಸಿತ್ತು.
ಸಾಮೆ ಫ್ರೈಡ್‌ರೈಸ್ ಇಡಲಾಗಿತ್ತು. ರಾಗಿ ರೊಟ್ಟಿ, ಸಜ್ಜೆ ರೊಟ್ಟಿಗಳು ಮನ ಸೆಳೆದವು. ನವಣೆ ಪಲಾವ್‌ನ ವಾಸನೆ ಹರಡಿತ್ತು. ಸಿರಿಧಾನ್ಯದ ಬಿಸಿಬೇಳೆಬಾತ್, ರಾಗಿ ಶಾವಿಗೆ ಉಪ್ಪಿಟ್ಟು, ನವಣೆ ದೋಸೆ ಆಹಾರ ಪ್ರಿಯರನ್ನು ಕೈಬೀಸಿ ಕರೆದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net