ಕನ್ನಡದ ಅಸ್ಮಿತೆ ಉಳಿಸಿದ ಹಿರಿಯ ವರನಟ

ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ವರನಟ ಡಾ.ರಾಜ್‌ಕುಮಾರ್ ಜನ್ಮದಿನದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ರವಿಚಂದ್ರ, ಬಿ.ವಾಮದೇವಪ್ಪ, ಕೆ.ಜಿ. ಯಲ್ಲಪ್ಪ, ಕೆ.ಜಿ. ಶಿವಕುಮಾರ್  ಮುಖಂಡರಿದ್ದರು.
ದಾವಣಗೆರೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ವರನಟ ಡಾ.ರಾಜ್‌ಕುಮಾರ್ ಜನ್ಮದಿನದ ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್, ರವಿಚಂದ್ರ, ಬಿ.ವಾಮದೇವಪ್ಪ, ಕೆ.ಜಿ. ಯಲ್ಲಪ್ಪ, ಕೆ.ಜಿ. ಶಿವಕುಮಾರ್ ಮುಖಂಡರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ನಟಿಸಿದ ಎಲ್ಲ ಚಿತ್ರಕ್ಕೂ ಸಿಗದ ಎ ಪ್ರಮಾಣಪತ್ರ!
  • ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಬಣ್ಣನೆ
  • ದಾವಣಗೆರೆ ಡಿಸಿ ಕಚೇರಿಯಲ್ಲಿ ಡಾ.ರಾಜ್ ಜಯಂತ್ಯುತ್ಸವ
ದಾವಣಗೆರೆ: ವರನಟ ಡಾ.ರಾಜ್‌ಕುಮಾರ್ ಅವರಿಗೆ ಪರಭಾಷೆಗಳಲ್ಲಿ ನಟಿಸುವ ಅವಕಾಶಗಳಿದ್ದವು. ಆದರೆ, ಕನ್ನಡ ಹೊರತಾಗಿ ಇತರೆ ಭಾಷೆಗಳ ಚಿತ್ರಗಳಲ್ಲಿ ನಟಿಸದಿರುವ ದೃಢಸಂಕಲ್ಪದ ಮೂಲಕ ಕನ್ನಡದ ಅಸ್ಮಿತೆ ಎತ್ತಿ ಹಿಡಿದರು ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ, ವರನಟ ಡಾ.ರಾಜ್‌ಕುಮಾರ್ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಡಾ. ರಾಜ್‌ಕುಮಾರ್ ಅವರು ನಟಿಸಿದ ಎಲ್ಲ 212 ಚಿತ್ರಕ್ಕೂ ಸಹ ಎ ಸರ್ಟಿಫಿಕೇಟ್ ದೊರಕಿಲ್ಲ ಎಂಬುದೇ ಅಚ್ಚರಿಯ ಸಂಗತಿ. ಅವರ ಪ್ರತಿ ಚಿತ್ರವೂ ಕೂಡ ಕುಟುಂಬ ಸಮೇತ ನೋಡಬಹುದಾದ ಚಿತ್ರಗಳಾಗಿವೆ. ಸದಾ ಶ್ವೇತ ವಸ್ತ್ರಧಾರಿಯಾಗಿದ್ದ ಅವರಂತೆಯೇ ಅವರ ಸಿನಿಮಾಗಳು ಸಹ ಅಷ್ಟೇ ಸ್ವಚ್ಛ ಮತ್ತು ಸ್ಫುಟವಾಗಿದ್ದವು ಎಂದು ಹೇಳಿದರು.
ಅವರ ಜೀವಮಾನ ಸಾಧನೆಗಾಗಿ ಕರ್ನಾಟಕ ಸರ್ಕಾರವು ‘ಕರ್ನಾಟಕ ರತ್ನ’, ಕೇಂದ್ರ ಸರ್ಕಾರವು ’ಪದ್ಮಭೂಷಣ’ ಮತ್ತು ಚಿತ್ರರಂಗದ ಅತ್ಯುನ್ನತ ‘ದಾದಾಸಾಹೇಬ್ ಫಾಲ್ಕೆ’ ಪ್ರಶಸ್ತಿ ನೀಡಿ ಗೌರವಿಸಿದೆ. ಅವರು ನಟರಾಗಿ ಉಳಿಯದೆ ಕೋಟ್ಯಂತರ ಜನರ ಮನಸ್ಸಿನಲ್ಲಿ ಶಾಶ್ವತ ಸ್ಥಾನ ಗಳಿಸಿದ್ದಾರೆ ಎಂದರು.
ಡಾ. ರಾಜ್‌ಕುಮಾರ್ ಅವರು ಕರ್ನಾಟಕ ಹಾಗೂ ಹಿಂದೂಸ್ತಾನಿ ಸಂಗೀತವಲ್ಲದೆ ಹಾರ್ಮೋನಿಯಂ, ಸಿತಾರ್, ತಬಲಾ ವಾದನ ಬಲ್ಲವರಾಗಿದ್ದರು. ಹಿಂದೆಲ್ಲ ಕಂಪನಿ ನಾಟಕದ ಕಲಾವಿದರಿಗೆ ಕಡ್ಡಾಯವಿದ್ದ ಸಂಗೀತ ಕಲಿಯುವುದು ಅನಿವಾರ್ಯವಾಗಿತ್ತು. ಹೀಗಾಗಿ ರಾಜ್ ಅವರಿಗೆ ಆ ಕಲೆ ಸಹಜವಾಗಿಯೇ ಬಂದಿತ್ತು ಎಂದು ಹೇಳಿದರು.
ಕನ್ನಡಿಗರಾಗಿ ಹುಟ್ಟಿ, ಕನ್ನಡ ಭಾಷೆ-ಸಂಸ್ಕೃತಿಯನ್ನು ಜಾಗತಿಕ ಮಟ್ಟದಲ್ಲಿ ಉನ್ನತ ಸ್ಥಾನಕ್ಕೆ ಏರಿಸಿದ ಕೀರ್ತಿ ನಟಸಾರ್ವಭೌಮ ಡಾ.ರಾಜ್‌ಕುಮಾರ್ ಅವರಿಗೆ ಸಲ್ಲಲಿದೆ. ಅವರ ಪ್ರತಿ ಚಲನಚಿತ್ರವೂ ಸಮಾಜಕ್ಕೆ ಉತ್ತಮ ಸಂದೇಶ ನೀಡುತ್ತಿತ್ತು. ನೈಜ ನಟನೆ ಮತ್ತು ಪಾತ್ರಗಳಲ್ಲಿ ಅವರು ಹೊಂದುತ್ತಿದ್ದ ತಾದಾತ್ಮ್ಯದ ಕಾರಣದಿಂದಾಗಿ ಹಳೆಯ ತಲೆಮಾರಿನ ಪ್ರೇಕ್ಷಕರು ಅವರ ಚಿತ್ರಗಳನ್ನು ನೋಡಿ ಭಾವುಕರಾಗುತ್ತಾರೆ ಎಂದು ತಿಳಿಸಿದರು.
ಡಾ.ರಾಜ್ ದೊಡ್ಡ ವ್ಯಕ್ತಿತ್ವದಷ್ಟೇ ಸರಳತೆಯ ಸಾಕಾರಮೂರ್ತಿ. ಪ್ರತಿ ಅಗಳು ಅನ್ನವನ್ನೂ ಕೂಡ ಭಕ್ತಿ-ಭಾವದಿಂದಲೇ ಆಸ್ವಾದಿಸುತ್ತಿದ್ದರು. ಪ್ರತಿ ಅಗುಳಿನ ಹಿಂದೆ ರೈತನ ಶ್ರಮವಿದ್ದು, ವ್ಯರ್ಥ ಮಾಡಬಾರದು ಎನ್ನುತ್ತಿದ್ದರು. ಚಿತ್ರೀಕರಣದ ಸಂದರ್ಭದಲ್ಲಿ ಸೆಟ್‌ನಲ್ಲಿ ಎಲ್ಲರೊಂದಿಗೆ ಬೆರೆತೇ ಊಟ ಮಾಡುತ್ತಿದ್ದುದು ಅವರ ವಿಶೇಷವಾಗಿತ್ತು ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ, ವಾರ್ತಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಆರ್. ಮಾರುತಿ, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ವಾಮದೇವಪ್ಪ, ಜಿಲ್ಲಾ ಪತ್ರಕರ್ತರ ಒಕ್ಕೂಟದ ಅಧ್ಯಕ್ಷರಾದ ನಾಗರಾಜ್ ಬಡದಾಳ್, ವಿಶ್ವ ಕರವೇ ಅಧ್ಯಕ್ಷ ಕೆ.ಜಿ. ಯಲ್ಲಪ್ಪ, ಕಲಾವಿದ ಎನ್.ಎಸ್. ರಾಜು, ಡಾ.ರಾಜ್ ಅಭಿಮಾನಿ ಬಳಗದ ಕೆ.ಜಿ. ಶಿವಕುಮಾರ್, ಕದಳಿ ವೇದಿಕೆಯ ಮಮತಾ, ಅವನಿಕಾ ಟ್ರಸ್ಟ್‌ನ ಶಾಂತಕುಮಾರಿ, ಹರಿಹರದ ಗೀತಾ ನಾಗರಾಜ್ ಹಾಗೂ ಕನ್ನಡಪರ ಸಂಘಟನೆಗಳ ಮುಖಂಡರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net