ಬಾಲಭವನದಲ್ಲಿ ಪುಟಾಣಿ ರೈಲು ಮರು ಆರಂಭ

ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಬಾಲಭವನದಲ್ಲಿ ಮಂಗಳವಾರ ಪುಟಾಣಿ ರೈಲಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರಿದರು. ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ರಾಜಾನಾಯ್ಕ್, ಇಲಾಖೆಯ ಇನ್ನಿತರ ಅಧಿಕಾರಿಗಳು ಇದ್ದರು.
ದಾವಣಗೆರೆಯ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಬಾಲಭವನದಲ್ಲಿ ಮಂಗಳವಾರ ಪುಟಾಣಿ ರೈಲಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರಿದರು. ಜಿ.ಎಂ. ಗಂಗಾಧರ ಸ್ವಾಮಿ, ಗಿತ್ತೆ ಮಾಧವ ವಿಠ್ಠಲರಾವ್, ರಾಜಾನಾಯ್ಕ್, ಇಲಾಖೆಯ ಇನ್ನಿತರ ಅಧಿಕಾರಿಗಳು ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಹಸಿರು ನಿಶಾನೆ ತೋರಿದ ಸಂಸದೆ
  • ಇಲಾಖೆಯ ಆಂಬುಲೆನ್ಸ್ ಲೋಕಾರ್ಪಣೆ
ದಾವಣಗೆರೆ : ನಗರದ ಜೆ.ಎಚ್. ಪಟೇಲ್ ಬಡಾವಣೆಯಲ್ಲಿರುವ ಬಾಲಭವನದಲ್ಲಿ ಹಲವು ದಿನಗಳಿಂದ ಸ್ಥಗಿತಗೊಂಡಿದ್ದ ಪುಟಾಣಿ ರೈಲಿನ (ಟಾಯ್ ಟ್ರೇನ್) ಸಂಚಾರವನ್ನು ಮಂಗಳವಾರ ಮರು ಆರಂಭ ಮಾಡಲಾಯಿತು. ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹಸಿರು ನಿಶಾನೆ ತೋರಿದರು.
ಬಡಾವಣೆಯ 3.8 ಎಕರೆ ಪ್ರದೇಶದಲ್ಲಿ 2014-15ರಲ್ಲಿ ನಿರ್ಮಾಣಗೊಂಡಿರುವ ಜಿಲ್ಲಾ ಬಾಲಭವನದಲ್ಲಿ ಮಕ್ಕಳ ಮನರಂಜನೆಗಾಗಿ ಪುಟಾಣಿ ರೈಲು ಅಳವಡಿಸಲಾಗಿತ್ತು. ಕೋವಿಡ್ ನಂತರ ರೈಲು ಹಾಗೂ ಹಳಿಗಳು ದುರಸ್ತಿಗೆ ಬಂದ ಪರಿಣಾಮ ಸಂಚಾರ ಸ್ಥಗಿತಗೊಂಡಿತ್ತು.
ಟಾಯ್ ಟ್ರೇನ್ ಪುನಾರಂಭಿಸಲು ಮಕ್ಕಳಿಂದ ಹಾಗೂ ಪಾಲಕರಿಂದ ಬೇಡಿಕೆ ಬಂದ ಹಿನ್ನೆಲೆಯಲ್ಲಿ ಡಾ. ಪ್ರಭಾ ಮಲ್ಲಿಕಾರ್ಜುನ್ ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರ ಬರೆದು ಹಳಿ ದುರಸ್ತಿಗೆ ಮನವಿ ಸಲ್ಲಿಸಿದ್ದರು.
ಅವರ ನಿರಂತರ ಪ್ರಯತ್ನದ ಫಲವಾಗಿ 3.09 ಲಕ್ಷ ರೂ. ಅನುದಾನ ಬಿಡುಗಡೆಯಾಗಿ ಹಳಿ ದುರಸ್ತಿ ಕಾಮಗಾರಿ ಪೂರ್ಣಗೊಂಡಿದೆ. ಟ್ರ್ಯಾಕ್‌ನಲ್ಲಿದ್ದ ಮರದ ಸ್ಲೀಪರ್‌ಗಳನ್ನು ಬದಲಿಸಿ ಸಿಮೆಂಟ್ ಸ್ಲೀಪರ್‌ಗಳನ್ನು ಅಳವಡಿಸಲಾಗಿದ್ದು, ಅಗತ್ಯ ವೆಚ್ಚವನ್ನು ಜಿಲ್ಲಾಡಳಿತದ ನೆರವಿನಿಂದ ಭರಿಸಲಾಗಿದೆ. ಇದರಿಂದ ಟಾಯ್ ಟ್ರೇನ್ ಸಂಚಾರ ಮತ್ತಷ್ಟು ಸುರಕ್ಷಿತ ಹಾಗೂ ಸುಗಮವಾಗಿದೆ.
ಜಿಲ್ಲಾ ಬಾಲಭವನವು ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಹೊರತಂದು ಆತ್ಮವಿಶ್ವಾಸ, ವ್ಯಕ್ತಿತ್ವ ವಿಕಸನ ಹಾಗೂ ಸೃಜನಶೀಲತೆಯನ್ನು ಬೆಳೆಸುವ ಉದ್ದೇಶದಿಂದ ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದೆ. ರಾಜ್ಯ ಬಾಲಭವನ ಸೊಸೈಟಿ ಮಾರ್ಗದರ್ಶನದಲ್ಲಿ ಸಾಂಸ್ಕೃತಿಕ, ಸೃಜನಾತ್ಮಕ ಕಲೆ, ಬರವಣಿಗೆ ಸೇರಿ ವಿವಿಧ ಸ್ಪರ್ಧಾತ್ಮಕ ಕಾರ್ಯಕ್ರಮಗಳನ್ನು ವರ್ಷಪೂರ್ತಿ ಆಯೋಜಿಸಲಾಗುತ್ತಿದೆ.
ಟಾಯ್ ಟ್ರೇನ್ ಪುನಾರಂಭದಿಂದ ಮಕ್ಕಳಲ್ಲಿ ಸಂತಸ ಮನೆಮಾಡಿದ್ದು, ಬಾಲಭವನದ ಆಕರ್ಷಣೆ ಮತ್ತಷ್ಟು ಹೆಚ್ಚಾಗಿದೆ. ಮುಂದಿನ ದಿನಗಳಲ್ಲಿ ಮಕ್ಕಳ ಕಲಿಕೆ, ಮನರಂಜನೆ ಹಾಗೂ ಸೃಜನಶೀಲತೆಗೆ ಪೂರಕವಾಗುವ ಇನ್ನಷ್ಟು ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಡಾ. ಪ್ರಭಾ ತಿಳಿಸಿದರು. ಕಾರ್ಯಕ್ರಮಕ್ಕೂ ಮುನ್ನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಆಂಬುಲೆನ್ಸ್ನ್ನು ಲೋಕಾರ್ಪಣೆ ಮಾಡಿದರು.
ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ, ಜಿ.ಪಂ. ಸಿಇಒ ಗಿತ್ತೆ ಮಾಧವ ವಿಠ್ಠಲರಾವ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜಾನಾಯ್ಕ್, ತೋಟಗಾರಿಕೆ ಇಲಾಖೆ ಜಂಟಿ ನಿರ್ದೇಶಕ ರಾಘವೇಂದ್ರ ಪ್ರಸಾದ್, ಮಹಾನಗರ ಪಾಲಿಕೆ ಆಯುಕ್ತ ಡಾ. ಎನ್. ಮಹಾಂತೇಶ ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net