ಡಿಸಿಆರ್‌ಇ ಬಲವೇ ಅಟ್ರಾಸಿಟಿ ಕಾಯ್ದೆಗೆ ಶಕ್ತಿ

ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ.
ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ.
Published on

ಪ್ರಮುಖ ಮುಖ್ಯಾಂಶಗಳು

  • ರಾಜ್ಯ ಸರ್ಕಾರಕ್ಕೆ ಆಯೋಗದ ಸೂಕ್ತ ನಿರ್ದೇಶನ
  • ದೌರ್ಜನ್ಯ ಕೇಸ್‌ಗಳ ಬಗ್ಗೆ ಜಾಗೃತಿ ಅವಶ್ಯಕ
  • ಎಸ್ಸಿ ಎಸ್ಟಿ ಆಯೋಗದ ಅಧ್ಯಕ್ಷ ಡಾ.ಮೂರ್ತಿ ಮಾಹಿತಿ
ದಾವಣಗೆರೆ: ಎಸ್ಸಿ-ಎಸ್ಟಿ ದೌರ್ಜನ್ಯ ತಡೆ ಕಾಯ್ದೆ ಬಲಿಷ್ಠಗೊಳ್ಳಲು ಪೌರ ಹಕ್ಕುಗಳ ಜಾರಿ ನಿರ್ದೇಶನಾಲಯ (ಡಿಸಿಆರ್‌ಇ) ಬಲವರ್ಧನೆ ಅಗತ್ಯವಿದೆ. ಈ ಬಗ್ಗೆ ಆಯೋಗವು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಲಿದೆ ಎಂದು ಎಸ್ಸಿ-ಎಸ್ಟಿ ಆಯೋಗದ ಅಧ್ಯಕ್ಷ ಡಾ. ಎಲ್. ಮೂರ್ತಿ ಹೇಳಿದರು.
ದಾವಣಗೆರೆಯಲ್ಲಿ ಮಂಗಳವಾರ ಕುಂದುಕೊರತೆ ಸಭೆ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ದೌರ್ಜನ್ಯ ಪ್ರಕರಣಗಳಲ್ಲಿ ಶಿಕ್ಷೆ ಪ್ರಮಾಣ ಕಡಿಮೆಯಾಗಿದೆ. ಎಫ್‌ಐಆರ್ ದಾಖಲಾದ ನಂತರ ಡಿಸಿಆರ್‌ಇಗೆ ಕಳಿಸಲಾಗುತ್ತದೆ. ದೋಷಾರೋಪ ಸಲ್ಲಿಸುವ ವೇಳೆ ಕೆಲವೊಮ್ಮೆ ಸಾಕ್ಷೃ ನಾಶವಾಗುವ ಸಾಧ್ಯತೆ ಇದೆ. ಸಿಬ್ಬಂದಿ ಕೊರತೆಯೂ ಇದೆ. ಇದು ನಿವಾರಣೆ ಆಗಬೇಕಿದೆ ಎಂದರು.
ದೌರ್ಜನ್ಯ ಪ್ರಕರಣಗಳ ಹಿನ್ನೆಲೆಯಲ್ಲಿ ಗ್ರಾಮೀಣ ಜನರಲ್ಲಿ ಕಾನೂನಾತ್ಮಕವಾಗಿ ಜಾಗೃತಿ ಮೂಡಿಸಬೇಕಿದೆ. ಅಧಿಕಾರಿಗಳು ಕರಪತ್ರಗಳ ಮೂಲಕವಾಗಿ ಜಿಲ್ಲಾಧಿಕಾರಿಗಳು ಕನಿಷ್ಠ 6 ತಿಂಗಳಿಗೊಮ್ಮೆ ಜಾಗೃತಿ ಸಭೆ ನಡೆಸಬೇಕಿದೆ ಎಂದು ಹೇಳಿದರು.
ಶೋಷಿತ ಸಮುದಾಯಗಳ ಹಿತರಕ್ಷಣೆ ಮತ್ತು ದೌರ್ಜನ್ಯ ತಡೆಗೆ ಆಯೋಗವು ಬದ್ಧವಾಗಿದೆ. ಈ ನಿಟ್ಟಿನಲ್ಲಿ ಎಲ್ಲ 31 ಜಿಲ್ಲಾ ಪ್ರವಾಸ ಬಳಿಕ 3-4 ತಿಂಗಳಲ್ಲಿ ಸರ್ಕಾರಕ್ಕೆ ಮಧ್ಯಂತರ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಆಯೋಗಕ್ಕೆ ಸಲ್ಲಿಕೆಯಾದ ಒಟ್ಟು 3,688 ಪ್ರಕರಣಗಳ ಪೈಕಿ 208 ಕೇಸ್ ಇತ್ಯರ್ಥಪಡಿಸಲಾಗಿದೆ. ಸಂಬಂಧಪಟ್ಟ ಇಲಾಖಾ ಕಾರ್ಯದರ್ಶಿಗಳು ಮತ್ತು ಆಯುಕ್ತರನ್ನು ಕರೆಸಿ ಪ್ರಕರಣಗಳ ಕುರಿತು ಚರ್ಚೆ ನಡೆಸಿ ಇತ್ಯರ್ಥಕ್ಕೆ ಕ್ರಮ ವಹಿಸಲಾಗಿದೆ ಎಂದರು.
ದೌರ್ಜನ್ಯ ಮತ್ತು ಜಮೀನು ವಿವಾದದಡಿ ಸಮುದಾಯದ ಮೇಲಾಗುತ್ತಿರುವ ದೌರ್ಜನ್ಯಗಳು, ಪಿಟಿಸಿಎಲ್ ಕಾಯ್ದೆ ಅಡಿ ಎದುರಾಗುವ ವ್ಯಾಜ್ಯಗಳು, ಸರ್ವೇ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ಡೀಮ್ಡ್ ಅರಣ್ಯ ಇಲಾಖೆ ಜಮೀನಿನಲ್ಲಿ ವಾಸವಿರುವ ಸಮುದಾಯದ ಜನರನ್ನು ಒಕ್ಕಲೆಬ್ಬಿಸದಿರಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.
ನಗರ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಿಟ್ಟ ಶೇ. 24.70 ಅನುದಾನವನ್ನು ಅದೇ ಸಮುದಾಯದ ಅಭಿವೃದ್ಧಿ ಗೆ ಬಳಸಬೇಕು. ಇದನ್ನು ಮೀರಿದ ಅಧಿಕಾರಿಗಳ ಮೇಲೆ ಆಯೋಗವು ನಿರ್ದಾಕ್ಷಿಣ್ಯವಾಗಿ ಶಿಸ್ತುಕ್ರಮ ಕೈಗೊಳ್ಳಲಿದೆ. ಹಾಸ್ಟೆಲ್‌ಗಳ ನಿರ್ವಹಣೆಯಲ್ಲಿ ಲೋಪವಾದಲ್ಲಿ ವಾರ್ಡನ್‌ಗಳ ವಿರುದ್ಧವೂ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಮರ್ಯಾದೆ ಹತ್ಯೆ ಪ್ರಕರಣಗಳಲ್ಲಿ ಸಂತ್ರಸ್ತ ಕುಟುಂಬಕ್ಕೆ ಸರ್ಕಾರಿ ಉದ್ಯೋಗ, ಆರ್ಥಿಕ ನೆರವು ನೀಡಬೇಕಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net