ಕೃಷಿಕರ ಕಣ್ಣೀರಿಗೆ ರಾಜ್ಯ ಸರ್ಕಾರವೇ ಹೊಣೆ

ಹೊನ್ನಾಳಿ  ಎಪಿಎಂಸಿ ಆವರಣದಲ್ಲಿ ಸೋಮವಾರ ಮೆಕ್ಕೆಜೋಳದ ಸ್ಥಿರ ಬೆಲೆಗೆ ಆಗ್ರಹಿಸಿ ಹೊನ್ನಾಳಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಸಂಕಷ್ಟವನ್ನು ಆಲಿಸಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯರು ಮಾತನಾಡಿದರು. ಅರಕೆರೆ ನಾಗರಾಜ್, ರಂಗನಾಥ್, ಬಾಬು ಹೋಬಳದಾರ್, ನವೀನ್ ಇಂಚರಾ, ಮಹೇಶ್ ಹುಡೇದ್, ಪೇಟೆ ಪ್ರಶಾಂತ್, ಸುರೇಶ್, ಶ್ರೀನಿವಾಸ್ ಇದ್ದರು.
ಹೊನ್ನಾಳಿ ಎಪಿಎಂಸಿ ಆವರಣದಲ್ಲಿ ಸೋಮವಾರ ಮೆಕ್ಕೆಜೋಳದ ಸ್ಥಿರ ಬೆಲೆಗೆ ಆಗ್ರಹಿಸಿ ಹೊನ್ನಾಳಿಯಲ್ಲಿ ಪ್ರತಿಭಟಿಸುತ್ತಿರುವ ರೈತರ ಸಂಕಷ್ಟವನ್ನು ಆಲಿಸಿ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯರು ಮಾತನಾಡಿದರು. ಅರಕೆರೆ ನಾಗರಾಜ್, ರಂಗನಾಥ್, ಬಾಬು ಹೋಬಳದಾರ್, ನವೀನ್ ಇಂಚರಾ, ಮಹೇಶ್ ಹುಡೇದ್, ಪೇಟೆ ಪ್ರಶಾಂತ್, ಸುರೇಶ್, ಶ್ರೀನಿವಾಸ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ವೈಜ್ಞಾನಿಕ ದರ ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿ
  • ಎಂ.ಪಿ. ರೇಣುಕಾಚಾರ್ಯ ಆರೋಪ
  • ಎಪಿಎಂಸಿ ಆವರಣದಲ್ಲಿ ಬೆಳೆಗಾರರ ಪ್ರತಿಭಟನೆ
ಹೊನ್ನಾಳಿ: ಮೆಕ್ಕೆಜೋಳ ಬೆಲೆ ಪಾತಾಳಕ್ಕೆ ಕುಸಿದಿದ್ದು, ಬೆಳಗಾರರು ವೈಜ್ಞಾನಿಕ ದರ ಸಿಗದೆ ಕಣ್ಣೀರು ಹಾಕುವ ಪರಿಸ್ಥಿತಿಗೆ ರಾಜ್ಯ ಕಾಂಗ್ರೆಸ್ ಸರ್ಕಾರವೇ ಹೊಣೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಆರೋಪಿಸಿದರು.
ಪಟ್ಟಣದ ಎಪಿಎಂಸಿ ಆವರಣದಲ್ಲಿ ಸೋಮವಾರ ಮೆಕ್ಕೆಜೋಳ ಸುರಿದುಕೊಂಡು ಸ್ಥಿರ ಬೆಲೆಗಾಗಿ ಪ್ರತಿಭಟಿಸುತ್ತಿರುವ ರೈತರ ಸಂಕಷ್ಟವನ್ನು ಆಲಿಸಿ ಮಾತನಾಡಿದರು.
ಕೇಂದ್ರ ಸರ್ಕಾರ ಮೆಕ್ಕೆಜೋಳಕ್ಕೆ 2400 ರೂ. ಬೆಂಬಲ ಬೆಲೆ ಘೋಷಿಸಿದರೂ ರಾಜ್ಯ ಸರ್ಕಾರ ತನ್ನ ಪಾಲಿನ ಬೆಂಬಲ ಬೆಲೆ ನೀಡುತ್ತಿಲ್ಲ ಮತ್ತು ಖರೀದಿ ಕೇಂದ್ರ ತೆರೆಯುತ್ತಿಲ್ಲ. ಇದರಿಂದ ರೈತರು ದಲ್ಲಾಳಿಗೂ ಕೇಳಿದ ಬೆಲೆಗೆ ಮಾರಾಟ ಮಾಡುವ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ರಾಜ್ಯ ಸರ್ಕಾರವನ್ನು ದೂರಿದರು.
ರಾಜ್ಯ ಸರ್ಕಾರ ಪ್ರತಿ ಬಾರಿಯೂ ಬೆಂಬಲ ಬೆಲೆ ವಿಚಾರದಲ್ಲಿ ಕೇಂದ್ರದ ಕಡೆ ಬೊಟ್ಟು ಮಾಡುವುದನ್ನು ಬಿಡಬೇಕು. ಕೇಂದ್ರ ತನ್ನ ಪಾಲಿನ ಬೆಂಬಲ ಬೆಲೆಯನ್ನು ಎಂದಿಗೂ ನೀಡುತ್ತಿದೆ. ರೈತ ಆತ್ಮಹತ್ಯೆ ಮಾಡಿಕೊಂಡರೆ, ಅವರ ಮನೆಗೆ ಹೋಗಿ ಸಾಂತ್ವನ ಹೇಳದ ಸರ್ಕಾರ, ಕೇಂದ್ರವನ್ನು ಟೀಕೆ ಮಾಡುವುದರಲ್ಲೇ ಕಾಲಹರಣ ಮಾಡುತ್ತಿದೆ ಎಂದು ಟೀಕಿಸಿದ ಅವರು, ಭತ್ತಕ್ಕೂ 3,500 ರೂ. ಬೆಂಬಲ ಬೆಲೆ ನಿಗದಿ ಮಾಡಿ ರೈತರಿಗೆ ನ್ಯಾಯ ಒದಗಿಸಿ, ಅವರನ್ನು ಕಷ್ಟದಿಂದ ಪಾರು ಮಾಡಿ ಎಂದು ಆಗ್ರಹಿಸಿದರು.
ಪ್ರತಿಭಟನೆ: ಮೆಕ್ಕೆಜೋಳ ಹಾಗೂ ಭತ್ತಕ್ಕೆ ವೈಜ್ಞಾನಿಕ ರೀತಿಯಲ್ಲಿ ಬೆಂಬಲ ಬೆಲೆ ನೀಡದೆ ಇದ್ದರೆ ಪ್ರಥಮ ಹಂತದಲ್ಲಿ ಹೊನ್ನಾಳಿ- ನ್ಯಾಮತಿ ತಾಲೂಕು ಬಂದ್ ಮಾಡಲಾಗುವುದು. ನಂತರ ದಿನಗಳಲ್ಲಿ ದಾವಣಗೆರೆ ಜಿಲ್ಲೆಯಾದ್ಯಂತ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲು ಪಕ್ಷದ ಮುಖಂಡರ ಜತೆ ಚರ್ಚಿಸಿ ದಿನಾಂಕ ಪ್ರಕಟಿಸಲಾಗುವುದು ಎಂದರು.
ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಪ್ರಧಾನ ಕಾರ್ಯದರ್ಶಿ ರಂಗನಾಥ್, ಪುರಸಭೆ ಮಾಜಿ ಅಧ್ಯಕ್ಷ ಬಾಬು ಹೋಬಳದಾರ್, ಪಕ್ಷದ ಮುಖಂಡರಾದ ನವೀನ್ ಇಂಚರಾ, ಮಹೇಶ್ ಹುಡೇದ್, ಪೇಟೆ ಪ್ರಶಾಂತ್, ಸುರೇಶ್, ಟಿ.ಬಿ. ಸರ್ಕಲ್ ಶ್ರೀನಿವಾಸ್ ಹಾಗೂ ರೈತರು ಇದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net