ಉತ್ತರ ಕಾಣದ ದಕ್ಷಿಣ ಕ್ರೀಡಾಂಗಣ!

ದಾವಣಗೆರೆಯ ಎಸ್ಸೆಸ್ಸೆಂ ನಗರದ ನೂತನ ಕ್ರೀಡಾಂಗಣ.
ದಾವಣಗೆರೆಯ ಎಸ್ಸೆಸ್ಸೆಂ ನಗರದ ನೂತನ ಕ್ರೀಡಾಂಗಣ.
Published on

ಪ್ರಮುಖ ಮುಖ್ಯಾಂಶಗಳು

  • ಉದ್ಘಾಟನೆಗೂ ಮುನ್ನವೇ ಅನಾಥ ಸ್ಥಿತಿ
  • ಮೂಲಸೌಕರ್ಯ ಹಾಳುಗೆಡವಿದ ದುಷ್ಕರ್ಮಿಗಳು
  • ಎಲ್ಲ ಇದ್ದೂ ಇಲ್ಲದಂತಾಗಿರುವ ಹೊಸ ಮೈದಾನ
ದಾವಣಗೆರೆ: ದಾವಣಗೆರೆ ದಕ್ಷಿಣ ಕ್ಷೇತ್ರದಲ್ಲಿ ಎರಡು ವರ್ಷದ ಹಿಂದೆ ನಿರ್ಮಾಣಗೊಂಡ ನೂತನ ಕ್ರೀಡಾಂಗಣಕ್ಕಿನ್ನೂ ಉದ್ಘಾಟನೆ ಭಾಗ್ಯ ಮೊದಲೇ ಇಲ್ಲ. ವಾರಸುದಾರರಿಲ್ಲದೆ ನಿರ್ವಹಣೆ ಕೊರತೆಯ ಸವಾಲನ್ನೂ ಇದು ಎದುರಿಸುತ್ತಿದೆ.
ಇಲ್ಲಿನ ಎಸ್.ಎಸ್.ಮಲ್ಲಿಕಾರ್ಜುನ ನಗರದ ಬಿ ಬ್ಲಾಕ್‌ನಲ್ಲಿ, ಒಟ್ಟು 6 ಎಕರೆಯ ವಿಶಾಲ ಪ್ರದೇಶದಲ್ಲಿ ದಾವಣಗೆರೆ ಸ್ಮಾರ್ಟ್‌ಸಿಟಿ ಲಿಮಿಟೆಡ್ ವತಿಯಿಂದ 8 ಕೋಟಿ ರೂ. ವೆಚ್ಚದಲ್ಲಿ ಹೊಸ ಕ್ರೀಡಾಂಗಣ ತಲೆ ಎತ್ತಿದೆ. ದುರ್ದೈವವಶಾತ್ ದಕ್ಷಿಣ ಭಾಗದ ಯುವಜನರನ್ನು ಸೆಳೆಯಬೇಕಿದ್ದ ಈ ಕ್ರೀಡಾಂಗಣ ಸದ್ಯಕ್ಕೆ ಅದರಿಂದ ದೂರವೇ ಉಳಿದಿದೆ!
ನಿರ್ವಹಣಾ ಕೊಠಡಿ, ಕ್ರೀಡಾಪಟುಗಳ ಕೊಠಡಿ, ಅಡುಗೆ ಕೋಣೆ, ಅಡುಗೆ ಮನೆ, ಉಗ್ರಾಣ, ವಿಶಾಲವಾದ ವ್ಯಾಯಾಮ ಕೊಠಡಿಯ ಜತೆಗೆ ಎರಡು ವಿಭಾಗಗಳಲ್ಲೂ ಪುರುಷರು, ಮಹಿಳೆಯರು ಹಾಗೂ ವಿಕಲಾಂಗರಿಗೆ ಪ್ರತ್ಯೇಕ ಶೌಚಗೃಹ ನಿರ್ಮಿಸಲಾಗಿದೆ. ಮೇಲ್ಭಾಗದಲ್ಲಿ, ಒಂದು ಬದಿ ಕೂತು ನೋಡಲು ದೊಡ್ಡ ಪ್ರೇಕ್ಷಕರ ಗ್ಯಾಲರಿ ನಿರ್ಮಾಣವಾಗಿದೆ.
‘ಸಾರ್ವಜನಿಕ ಆಸ್ತಿ ಹಾಳು ಮಾಡಬಾರದು’, ‘ಕ್ರೀಡಾಂಗಣದಲ್ಲಿ ಗಲೀಜು ಮಾಡಬಾರದು’ ‘ಯಾರೂ ಮೇಲೆ ಹತ್ತುವ ಪ್ರಯತ್ನ ಮಾಡಬಾರದು’ ಎಂಬ ಗೋಡೆ ಬರಹಗಳು ಮಾತ್ರ ವ್ಯವಸ್ಥೆಯನ್ನು ಅಣಕಿಸುವಂತಿವೆ. ಅನೇಕ ಕಡೆಗಳಲ್ಲಿ ಕಬ್ಬಿಣದ ಗೇಟುಗಳಿಗೆ ಬೀಗ ಜಡಿಯಲಾಗಿದೆ. ಒಂದೆಡೆ ತೆರೆದಿದ್ದು ಅನೇಕ ಲೋಪಕ್ಕೆ ದಾರಿಮಾಡಿಕೊಟ್ಟಿದೆ.
ಕ್ರೀಡಾಂಗಣ ಕಾಯಲು ಒಬ್ಬ ವಾಚ್‌ಮನ್ ಕೂಡ ಇಲ್ಲ. ಹೀಗಾಗಿ ರಾತ್ರಿ ವೇಳೆ ಅನೈತಿಕ ಚಟುವಟಿಕೆಗೆ ಇದು ಮೂಕಸಾಕ್ಷಿಯಾಗಿದೆ. ಅಧಿಕಾರಿಗಳಿರಲಿ, ಪೊಲೀಸರೂ ಇತ್ತ ಕಣ್ಣು ಹಾಯಿಸಿಲ್ಲ. ಕೆಲ ಹುಡುಗರು ಹೇಳುವಂತೆ ಸಂಜೆ ನಂತರ ಗಾಂಜಾ, ಧೂಮವ್ಯಸನಿಗಳಿಗಿದು ಹೇಳಿಮಾಡಿಸಿದ ಜಾಗ!

ಸಲಕರಣೆಗಳೇ ಮಾಯ..!

ಇತ್ತೀಚೆಗೆ ದಕ್ಷಿಣ ವಿಧಾನಸಭೆ ಚುನಾವಣೆ ಸಂದರ್ಭದಲ್ಲಿ ಮತದಾನ ಕೇಂದ್ರವಾಗಿ ಈ ಕ್ರೀಡಾಂಗಣ ಬಳಕೆಯಾಗಿದ್ದು ಬಿಟ್ಟರೆ ಯಾವುದೇ ಕ್ರೀಡಾ ಚಟುವಟಿಕೆಗಳಿಲ್ಲದೆ ಸೊರಗಿದೆ. ಹೊರನೋಟದಿಂದ ಕಟ್ಟಡ ಅದ್ಭುತವಾಗಿ ಕಂಡರೂ ಕೊಠಡಿಗಳಲ್ಲಿ ಅಳವಡಿಸಿದ್ದ ಸೌಕರ್ಯಗಳ ಸ್ಥಿತಿ ಮಾತ್ರ ಚಿಂತಾಜನಕ!
ದುಷ್ಕರ್ಮಿಗಳ ದುಷ್ಟತನಕ್ಕೆ ಕೊಠಡಿಗಳಲ್ಲಿನ ಯಾವುದೇ ಕಿಟಕಿಗಳ ಗಾಜುಗಳು ಈಗ ಉಳಿದಿಲ್ಲ. ಎಲ್ಲೆಡೆ ಗಾಜಿನ ತುಂಡುಗಳು ಕಣ್ಣಿಗೆ ರಾಚುತ್ತಿವೆ. ಶೌಚಗೃಹದಲ್ಲಿನ ಸಿಂಕ್‌ಗಳು ನೆಲಕಚ್ಚಿವೆ. ಅಡುಗೆ ಕೋಣೆ ಸೇರಿ ವಿವಿಧೆಡೆ ಅಳವಡಿಸಿದ್ದ ನೀರಿನ ನಲ್ಲಿ, ಪೈಪ್‌ಗಳು ಕಳವಾಗಿವೆ. ಅಲ್ಲಲ್ಲಿ ವಿದ್ಯುತ್ ವೈರ್‌ಗಳು ಜೋತು ಬಿದ್ದಿವೆ.
ವಿದ್ಯುತ್ ಸಾಮಗ್ರಿಗಳು. ಅಗ್ನಿನಂದಕ ಯಂತ್ರದ ತಾಮ್ರವನ್ನೂ ಸಹ ಕಳ್ಳರು ದೋಚಿದ್ದಾರೆ. ಕೆಲವು ಕೊಠಡಿಗಳಿಗೆ ಅಳವಡಿಕೆಯಾಗಬೇಕಿದ್ದ ಕೆಲವು ಬಾಗಿಲುಗಳು ನೆಲಕ್ಕೊರಗಿ ಮಲಗಿವೆ. ಗುಟ್ಖಾ ಉಗುಳದ ಸ್ಥಳವೇ ಇಲ್ಲಿಲ್ಲ. ತಂಬಾಕು, ಸಿಗರೇಟು ಪ್ಯಾಕುಗಳು ಅಲ್ಲಲ್ಲಿ ಸಿಗುತ್ತವೆ. ಮೈದಾನದ ಸುತ್ತಲಿನ ಹೈಮಾಸ್ಟ್ ದೀಪಗಳು ನೇಪಥ್ಯಕ್ಕೆ ಸರಿದಿವೆ.

ಅಧಿಕಾರಿಗಳ ಸಮನ್ವಯ ಕೊರತೆ?

ಇಷ್ಟೆಲ್ಲ ಅದ್ವಾನ ನಡೆಯುತ್ತಿದ್ದರೂ ನಗರಪಾಲಿಕೆ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ. ವಿಚಿತ್ರ ಎಂದರೆ ಇದುವರೆಗೂ ಯಾರೊಬ್ಬರೂ ಇದರ ಸುಪರ್ದಿ ವಹಿಸಿಕೊಂಡಿಲ್ಲ!
ಜಿಲ್ಲಾಧಿಕಾರಿ ಆದೇಶದನ್ವಯ, 2025ರ ನವೆಂಬರ್ 6ರಂದೇ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ಅಧಿಕಾರಿಗಳಿಗೆ ಕ್ರೀಡಾಂಗಣವನ್ನು ಹಸ್ತಾಂತರಿಸಲಾಗಿತ್ತು. ಉಪಚುನಾವಣೆ ವೇಳೆ ನಾಲ್ಕು ಮತಗಟ್ಟೆಯ ಕೋಣೆಗೆ ಕೀಲಿಕೈ ಪಡೆಯಲಾಗಿತ್ತು. ಕೆಲವು ಬಾರದಿದ್ದರಿಂದ ಒಡೆಯಲಾಗಿತ್ತು. ಕ್ರೀಡಾ ಇಲಾಖೆಗೆ ಹೊಸ ಕೀಗಳನ್ನು ನೀಡಬೇಕಿದೆ ಎಂಬುದು ಪಾಲಿಕೆ ಅಧಿಕಾರಿಗಳ ಮಾತು.
ಯಾವುದೇ ಕ್ರೀಡಾಂಗಣಕ್ಕೆ ಮಾನವ ಸಂಪನ್ಮೂಲಗಳಿಲ್ಲದೆ ಹಸ್ತಾಂತರ ಪಡೆಯಕೂಡದು ಎಂಬುದಾಗಿ ಕ್ರೀಡಾ ಇಲಾಖೆ ಆಯುಕ್ತರ ಆದೇಶವಿದೆ. ಹಣಕಾಸು ಇಲಾಖೆಯಿಂದ ಮಂಜೂರಾದ ಬಳಿಕವೇ ಈ ಪ್ರಕ್ರಿಯೆ ನಡೆಸಬಹುದು. ಆದರೆ ಹಸ್ತಾಂತರ ಮಾಡಿಕೊಂಡಿಲ್ಲ ಎಂಬುದು ಕ್ರೀಡಾ ಇಲಾಖೆಯ ಸಮಜಾಯಿಷಿ.
2011ರಲ್ಲಿ ಪಾಲಿಕೆ ಸಾಮಾನ್ಯ ಸಭೆಯಲ್ಲಿ 6 ಎಕರೆ ಜಾಗವನ್ನು ಕ್ರೀಡಾಂಗಣಕ್ಕೆ ಮೀಸಲಿರಿಸಿ ಅಂಗೀಕರಿಸಲಾಗಿತ್ತು. ಈ ಜಾಗದಲ್ಲಿ ತಾತ್ಕಾಲಿಕ ಶೆಡ್ ಹಾಕಿದ್ದವರನ್ನು ತೆರವುಗೊಳಿಸಲು ಹೈಕೋರ್ಟ್ ಆದೇಶ ನೀಡಿತು. ಆಗಿನ ಸಂಸದ ಜಿ.ಎಂ.ಸಿದ್ದೇಶ್ವರ ಕ್ರೀಡಾಂಗಣ ನಿರ್ಮಾಣಕ್ಕೆ ಸ್ಮಾರ್ಟ್‌ಸಿಟಿಗೆ ಆದೇಶಿಸಿದರು.
ಈಗಾಗಲೆ ಕಟ್ಟಡ ಸೌಕರ್ಯಗಳು ಅಸ್ತವ್ಯಸ್ತವಾಗಿದ್ದರೂ ವಿವಿಧ ಕ್ರೀಡೆಗಳ ಅಂಕಣಗಳ ನಿರ್ಮಾಣಕ್ಕೆಂದು 40 ಲಕ್ಷ ರೂ. ದೂಡಾದಲ್ಲಿ ಅನುದಾನಕ್ಕೆ ಕ್ರೀಯಾಯೋಜನೆ ರೂಪಿತವಾಗಿತ್ತು. ಆದರೆ ಕ್ರೀಡಾ ಇಲಾಖೆ ಇದನ್ನು ಜಿಲ್ಲಾ ಕ್ರೀಡಾಂಗಣ ಅಭಿವೃದ್ಧಿಗೆ ಪಡೆಯುವ ಪ್ರಯತ್ನದಲ್ಲಿದೆ ಎಂದು ಮೂಲಗಳು ತಿಳಿಸಿವೆ. ಒಟ್ಟಾರೆ ಇಬ್ಬರ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಸ್ಥಿತಿ ಕ್ರೀಡಾಂಗಣದು.

ಸ್ಥಳ ಪರಿಶೀಲನೆ ನಡೆಸಿದಾಗ ಕ್ರೀಡಾಂಗಣ ಕಟ್ಟಡದ ಸೌಕರ್ಯಗಳು ಹಾಳಾಗಿದ್ದು ನಮ್ಮ ಗಮನಕ್ಕಿದೆ. ಕ್ರೀಡಾ ಇಲಾಖೆ ಆಯುಕ್ತರ ಆದೇಶಾನುಸಾರ ನೂತನ ಕ್ರೀಡಾಂಗಣವನ್ನು ನಮ್ಮ ಸುಪರ್ದಿಗೆ ಪಡೆದಿಲ್ಲ. ಸಿಬ್ಬಂದಿ ಇಲ್ಲದೆ ನಿರ್ವಹಣೆ ಮಾಡಲಾಗದು. ಎರಡು ತಿಂಗಳ ಹಿಂದೆಯೇ ಆಯಕ್ತರಿಗೆ ಪತ್ರ ಬರೆದಿದ್ದೇವೆ.

— ರೇಣುಕಾ, ಯುವ ಸಬಲೀಕರಣ, ಕ್ರೀಡಾ ಇಲಾಖೆ ಉಪನಿರ್ದೇಶಕಿ.

ಕ್ರೀಡಾಂಗಣ ಹಾಗೂ ಅದಕ್ಕೆ ಹೊಂದಿಕೊಂಡ ಕಟ್ಟಡ ಸುಸ್ಥಿತಿಗೆ ಅಲ್ಲಿನ ಸಾರ್ವಜನಿಕರ ಸಹಕಾರವೂ ಬೇಕಿದೆ. ಈ ಸಂಬಂಧ ಶೀಘ್ರವೇ ಸ್ಥಳೀಯರ ವಿಶ್ವಾಸಕ್ಕೆ ಪಡೆದು, ಸಭೆ ನಡೆಸಿ ಕ್ರೀಡಾ ಸಮಿತಿ ರಚನೆಗೆ ಕ್ರಮ ವಹಿಸಲಾಗುವುದು. ದುರಸ್ತಿ ಕಾಮಗಾರಿಗೆ ಗಮನ ಹರಿಸುವ ಜತೆಗೆ ಭದ್ರತಾ ಸಿಬ್ಬಂದಿ ನಿಯೋಜಿಸಲಾಗುವುದು.

— ಎನ್. ಮಹಾಂತೇಶ್, ನಗರಪಾಪಾಲಿಕೆ ಆಯುಕ್ತ.

ಈ ಭಾಗದಲ್ಲಿದ್ದ ಮಲಿನ ನೀರಿನ ತೆರೆದ ಗುಂಡಿಗಳನ್ನು ತೆರವುಗೊಳಿಸಿ ಕ್ರೀಡಾಂಗಣ ನಿರ್ಮಾಣಕ್ಕೆ ಹೋರಾಟ ಮಾಡಿದ್ದೆ. ಪಾಲಿಕೆ ಸಾಮಾನ್ಯ ಸಭೆಯಲ್ಲಿ ನಿರ್ಣಯವಾಗಿದ್ದರೂ ಕೆಲವರ ಅಡ್ಡಿ ಎದುರಾಯಿತು. ಹೈಕೋರ್ಟ್ ಆದೇಶದ ನಂತರದಲ್ಲಿ ಕ್ರೀಡಾಂಗಣ ನಿರ್ಮಾಣವಾಗಿದೆ. ಜನಪ್ರತಿನಿಧಿಗಳ ಇಚ್ಛಾಶಕ್ತಿ ಕೊರತೆಯಿಂದಾಗಿ ಕ್ರೀಡಾಪಟುಗಳ ಬಳಕೆಗೆ ಸಿಗದಂತಾಗಿದೆ.

— ಜೆ. ಅಮಾನುಲ್ಲಾಖಾನ್, ಸ್ಥಳೀಯ ಮುಖಂಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net