ಬೆಂಬಿಡದ ಭೂತವಾಗಿ ಕಾಡುತ್ತಿದೆ ಸರ್ವರ್ ಸಮಸ್ಯೆ

ನಾಡಕಚೇರಿಯ ಬಳಿ ಪ್ರಮಾಣಪತ್ರಗಳಿಗಾಗಿ ಮುಂಜಾನೆ 5 ಗಂಟೆಯಿಂದಲೇ ಸರತಿಯಲ್ಲಿ ಕಾಯುತ್ತಿರುವ ನಾಗರಿಕರು.server
ನಾಡಕಚೇರಿಯ ಬಳಿ ಪ್ರಮಾಣಪತ್ರಗಳಿಗಾಗಿ ಮುಂಜಾನೆ 5 ಗಂಟೆಯಿಂದಲೇ ಸರತಿಯಲ್ಲಿ ಕಾಯುತ್ತಿರುವ ನಾಗರಿಕರು.server
Published on

ಪ್ರಮುಖ ಮುಖ್ಯಾಂಶಗಳು

  • ಬೆಳಗ್ಗೆ 5 ಗಂಟೆಯಿಂದಲೇ ಸರತಿ ಸಾಲು
  • ಪ್ರಮಾಣ ಪತ್ರ ಪಡೆಯಲು ಸಾರ್ವಜನಿಕರ ಪರದಾಟ
ಬಸವಾಪಟ್ಟಣ: ಕಳೆದ ಒಂದು ವಾರದಿಂದ ಬಸವಾಪಟ್ಟಣ ನಾಡಕಚೇರಿಯಲ್ಲಿ ತಾಂತ್ರಿಕ ದೋಷ ಹಾಗೂ ಸರ್ವರ್ ಸಮಸ್ಯೆ ತಲೆದೋರಿದ್ದು, ಸಾರ್ವಜನಿಕರು ಸಂಕಷ್ಟ ಅನುಭವಿಸುವಂತಾಗಿದೆ. ಜಾತಿ, ಆದಾಯ, ನಿವಾಸ ಸೇರಿ ವಿವಿಧ ಪ್ರಮಾಣಪತ್ರಗಳು ಹಾಗೂ ಅಗತ್ಯ ದಾಖಲೆಗಳನ್ನು ಪಡೆಯಲು ಸುತ್ತಮುತ್ತಲಿನ ಹಳ್ಳಿಗಳಿಂದ ಬರುವ ನಾಗರಿಕರು, ತಮ್ಮ ದೈನಂದಿನ ಕೆಲಸ ಕಾರ್ಯಗಳನ್ನು ಬದಿಗೊತ್ತಿ ದಿನಗಟ್ಟಲೆ ಕಚೇರಿ ಮುಂದೆ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.
ನಾಡಕಚೇರಿಗೆ ಪ್ರತಿನಿತ್ಯ ನೂರಾರು ಜನರು ಆಗಮಿಸುತ್ತಿದ್ದು, ಸರ್ವರ್ ಕೈಕೊಡುತ್ತಿರುವ ಕಾರಣ ಅರ್ಜಿಗಳ ವಿಲೇವಾರಿ ಹಾಗೂ ದಾಖಲೆಗಳ ವಿತರಣೆ ಸಂಪೂರ್ಣ ವಿಳಂಬವಾಗುತ್ತಿದೆ. ಇದರಿಂದಾಗಿ ರೈತರು, ವಿದ್ಯಾರ್ಥಿಗಳು, ಕಾರ್ಮಿಕರು, ಮಹಿಳೆಯರು ಹಾಗೂ ವೃದ್ಧರು ತೊಂದರೆ ಎದುರಿಸುತ್ತಿದ್ದಾರೆ.
ಕೆಲವರು ತಮ್ಮ ಕೆಲಸ ಬೇಗ ಆಗಲಿ ಎಂಬ ಕಾರಣಕ್ಕೆ ಮುಂಜಾನೆ 5 ಗಂಟೆಯಿಂದಲೇ ನಾಡಕಚೇರಿ ಬಂದು ಸರದಿಯಲ್ಲಿ ನಿಲ್ಲುತ್ತಿದ್ದಾರೆ. ಕಚೇರಿಯ ಕಿಟಕಿಯ ಬಳಿ ಬ್ಯಾಗ್, ಟವೆಲ್ ಹಾಗೂ ಇತರ ವಸ್ತುಗಳನ್ನು ಸಾಲಾಗಿ ಇಟ್ಟು ಸರತಿ ಕಾಯುತ್ತಿರುವ ದೃಶ್ಯಗಳು ಇಲ್ಲಿ ಸಾಮಾನ್ಯವಾಗಿದೆ. ಆದರೆ ದಿನಪೂರ್ತಿ ಕಚೇರಿ ಆವರಣದಲ್ಲಿ ಕಾದು ಕುಳಿತರೂ ಕೆಲಸವಾಗದೆ ನಿರಾಸೆಯಿಂದ ಮನೆಗೆ ಮರಳುವ ಸ್ಥಿತಿ ಬಂದೊದಗಿದೆ. ವಿದ್ಯಾರ್ಥಿಗಳಿಗೆ ಶಾಲೆ-ಕಾಲೇಜು ಪ್ರವೇಶ, ವಿದ್ಯಾರ್ಥಿವೇತನ, ಉದ್ಯೋಗ ಅರ್ಜಿ ಹಾಗೂ ವಿವಿಧ ಸರ್ಕಾರಿ ಯೋಜನೆಗಳಿಗೆ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳು ತುರ್ತಾಗಿ ಬೇಕಾಗಿದ್ದು, ಸಕಾಲಕ್ಕೆ ದಾಖಲೆಗಳು ಸಿಗದೆ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಗ್ರಾಮೀಣ ಭಾಗದಿಂದ ಬರುವ ಜನರು ಸಮಯದ ಜತೆಗೆ ಪ್ರಯಾಣ ವೆಚ್ಚವನ್ನೂ ಕಳೆದುಕೊಂಡು ಕಂಗಾಲಾಗಿದ್ದಾರೆ.

ಟೋಕನ್ ವ್ಯವಸ್ಥೆಗೆ ಒತ್ತಾಯ

ಅನಗತ್ಯವಾಗಿ ದಿನವಿಡೀ ಕಚೇರಿ ಆವರಣದಲ್ಲಿ ಕಾಯುವುದನ್ನು ತಪ್ಪಿಸಲು ತಕ್ಷಣವೇ ಟೋಕನ್ ವ್ಯವಸ್ಥೆ ಜಾರಿಗೊಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ. ಸರ್ವರ್ ಸಮಸ್ಯೆ ಸಂಪೂರ್ಣವಾಗಿ ಬಗೆಹರಿಯುವವರೆಗೆ ತಾತ್ಕಾಲಿಕವಾಗಿ ಟೋಕನ್ ವಿತರಿಸಿದರೆ, ಸಾರ್ವಜನಿಕರು ತಮ್ಮ ಸರದಿಯ ಸಮಯಕ್ಕೆ ಅನುಗುಣವಾಗಿ ಬಂದು ಕೆಲಸ ಮುಗಿಸಿಕೊಳ್ಳಲು ಅನುಕೂಲವಾಗುತ್ತದೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
"

ಜಾತಿ ಹಾಗೂ ಆದಾಯ ಪ್ರಮಾಣಪತ್ರಕ್ಕಾಗಿ ಮೂರು ದಿನಗಳಿಂದ ನಾಡಕಚೇರಿಗೆ ಅಲೆದಾಡುತ್ತಿದ್ದೇವೆ. ಬೆಳಗ್ಗೆಯಿಂದ ಸಂಜೆವರೆಗೂ ಕಾಯುತ್ತಿದ್ದರೂ ಸರ್ವರ್ ಸಮಸ್ಯೆ ಎಂಬ ಉತ್ತರವೇ ಸಿಗುತ್ತಿದೆ. ಇದರಿಂದ ಕೃಷಿ ಕೆಲಸಗಳಿಗೂ ತೊಂದರೆಯಾಗುತ್ತಿದೆ.

— ಶಂಕರನಾಯ್ಕ, ರೈತ, ಯಲೋದಹಳ್ಳಿ.

ಮುಂಜಾನೆ 5 ಗಂಟೆಗೆ ಬಂದು ಸರತಿ ಸಾಲಿನಲ್ಲಿ ನಿಂತರೂ ಸಂಜೆವರೆಗೂ ಕೆಲಸ ಆಗುತ್ತಿಲ್ಲ. ಒಂದು ದಾಖಲೆಗಾಗಿ ದಿನಗಟ್ಟಲೆ ಅಲೆದಾಡಬೇಕಾದ ಪರಿಸ್ಥಿತಿ ಇದೆ. ಅಧಿಕಾರಿಗಳು ಕೂಡಲೇ ಈ ತಾಂತ್ರಿಕ ಸಮಸ್ಯೆ ಬಗೆಹರಿಸಿ ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕು.

— ಕಿರಣ್, ಸಿದ್ಧೇಶ್ ನಗರ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net