ಕ್ಷಯರೋಗ ಮುಕ್ತ ಜಿಲ್ಲೆಯ ಸಂಕಲ್ಪ

ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಶೀಲವಂತ ಶಿವಕುಮಾರ್, ಡಾ. ಷಣ್ಮುಖಪ್ಪ, ಡಾ. ಮುರಳೀಧರ್ ಇದ್ದರು.
ದಾವಣಗೆರೆ ಜಿಲ್ಲಾಡಳಿತ ಭವನದಲ್ಲಿ ಗುರುವಾರ ನಡೆದ ಸಭೆಯಲ್ಲಿ ಶೀಲವಂತ ಶಿವಕುಮಾರ್, ಡಾ. ಷಣ್ಮುಖಪ್ಪ, ಡಾ. ಮುರಳೀಧರ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಎಡಿಸಿ ಶೀಲವಂತ ಶಿವಕುಮಾರ್ ಸೂಚನೆ
  • ರಕ್ತ ಕೇಂದ್ರಗಳ ಸಮನ್ವಯ ಸಭೆ
ದಾವಣಗೆರೆ : ಜಿಲ್ಲೆಯನ್ನು ಕ್ಷಯರೋಗ ಮುಕ್ತವಾಗಿಸಲು ಆರೋಗ್ಯ ಇಲಾಖೆಯ ವೈದ್ಯರು, ಅಧಿಕಾರಿಗಳು ಮತ್ತು ಸಿಬ್ಬಂದಿ ಸಂಕಲ್ಪ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ್ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಗುರುವಾರ ಆಯೋಜಿಸಿದ್ದ ರಕ್ತ ಕೇಂದ್ರಗಳ ಸಮನ್ವಯ ಸಭೆ, ಎಚ್.ಐ.ವಿ, ಏಡ್ಸ್ ನಿಯಂತ್ರಣ ಕುರಿತ ಸಮನ್ವಯ ಸಭೆ ಮತ್ತು ರಾಷ್ಟ್ರೀಯ ಕ್ಷಯರೋಗ ನಿರ್ಮೂಲನೆ ಕುರಿತ ಸಭೆಯಲ್ಲಿ ಮಾತನಾಡಿದರು.
ಜಿಲ್ಲೆಯ 61 ಗ್ರಾಮ ಪಂಚಾಯಿತಿಗಳನ್ನು ಕ್ಷಯರೋಗ ಮುಕ್ತವೆಂದು ಘೋಷಿಸಲಾಗಿದೆ. ಈ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಶ್ರಮ ವಹಿಸಿ ಕೆಲಸ ಮಾಡುವಂತೆ ಸೂಚಿಸಿದರು.
ಕ್ಷಯ ರೋಗವು ವಾಸಿಯಾಗುವಂತಹ ಕಾಯಿಲೆ. 2 ವಾರಕ್ಕಿಂತ ಹೆಚ್ಚು ಕಾಲ ಕೆಮ್ಮು, ರಕ್ತ ಮಿಶ್ರಿತ ಕಫ ಬರುವುದು, ಉಸಿರಾಡುವಾಗ ಎದೆ ನೋವು ಕಾಣಿಸಿಕೊಳ್ಳುವುದು, ಸಂಜೆ ಅಥವಾ ರಾತ್ರಿ ಜ್ವರ ಬರುವುದು, ರಾತ್ರಿ ಅತಿಯಾಗಿ ಬೆವರುವುದು, ತೂಕ ನಷ್ಟ, ಆಯಾಸವಾಗುವುದು, ಹಸಿವಾಗದಿರುವುದು ಕ್ಷಯ ರೋಗದ ಲಕ್ಷಣಗಳು ಎಂದು ತಿಳಿಸಿದರು.
ಆರಂಭಿಕ ಹಂತದಲ್ಲಿ ಹಾವೇರಿ, ಬಳ್ಳಾರಿ, ಚಿತ್ರದುರ್ಗ ಸೇರಿ ಸುತ್ತಮುತ್ತಲ ಜಿಲ್ಲೆಯ ರೋಗಿಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಗ್ಗೆ ದೂರುಗಳು ಬಂದಿವೆ. ಖಾಸಗಿ ಆಸ್ಪತ್ರೆಯವರು ರೋಗಿಗಳ ವಿವರಗಳನ್ನು ತಂತ್ರಾಂಶದಲ್ಲಿ ಅಥವಾ ಜಿಲ್ಲಾಸ್ಪತ್ರೆಗೆ ಹಂಚಿಕೆ ಮಾಡುವುದಿಲ್ಲ. ಆದ್ದರಿಂದ ಕ್ಷಯ ರೋಗಿಗಳ ಸಂಖ್ಯೆ ನಿಖರವಾಗಿ ತಿಳಿಯಲು ಸಾಧ್ಯವಾಗುತ್ತಿಲ್ಲ ಎಂದರು.
ಕ್ಷಯ ರೋಗಿಗಳಿಗೆ ಪ್ರತಿ ತಿಂಗಳು 1 ಸಾವಿರ ರೂ. ಗೌರವಧನ, ಉಚಿತವಾಗಿ ಚಿಕಿತ್ಸೆ ಮತ್ತು ಆಹಾರದ ಕಿಟ್ ನೀಡಲಾಗುತ್ತಿದೆ. ಇದುವರೆಗೆ 8991 ಆಹಾರ ಕಿಟ್ ವಿತರಿಸಲಾಗಿದೆ. ಈ ಸಾಲಿನಲ್ಲಿ 2080 ಪ್ರಕರಣಗಳು ಪತ್ತೆಯಾಗಿವೆ ಎಂದು ಕ್ಷಯರೋಗ ನಿರ್ಮೂಲನಾಧಿಕಾರಿ ಡಾ. ಮುರಳೀಧರ್ ಸಭೆಗೆ ತಿಳಿಸಿದರು.
ಡಿಎಚ್‌ಒ ಡಾ. ಷಣ್ಮುಖಪ್ಪ, ತಾಲೂಕು ವೈದ್ಯಾಧಿಕಾರಿಗಳು, ರಕ್ತ ಕೇಂದ್ರಗಳ ಮುಖ್ಯಸ್ಥರು, ವಿವಿಧ ಸಂಘ, ಸಂಸ್ಥೆಗಳ ಪದಾಧಿಕಾರಿಗಳು ಮತ್ತು ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

ಪರೀಕ್ಷಿಸದೇ ರಕ್ತ ಮಾರುವಂತಿಲ್ಲ

ಅನೇಕ ಖಾಸಗಿ ರಕ್ತ ಕೇಂದ್ರಗಳು ಸಾಮಾನ್ಯ ಜನರಿಂದ ಮತ್ತು ಎಚ್.ಐ.ವಿ ಬಾಧಿತರಿಂದ ರಕ್ತವನ್ನು ಪಡೆದು ನಂತರ ಪರೀಕ್ಷಿಸದೇ ನೇರವಾಗಿ ಮಾರಾಟ ಮಾಡುತ್ತಿರುವುದು ಮತ್ತು ಸರ್ಕಾರ ನಿಗದಿಪಡಿಸಿದ ದರಕ್ಕಿಂತ ಹೆಚ್ಚಾಗಿ ದರ ವಸೂಲಿ ಮಾಡುತ್ತಿರುವ ಬಗ್ಗೆ ದೂರುಗಳು ಬಂದಿವೆ ಎಂದು ಶೀಲವಂತ ಶಿವಕುಮಾರ್ ತಿಳಿಸಿದರು.
ರಕ್ತ ಕೇಂದ್ರಗಳಲ್ಲಿ ಪಡೆಯುವ ರಕ್ತವನ್ನು ಕಡ್ಡಾಯವಾಗಿ ಪರೀಕ್ಷಿಸಿ ಮಾರಾಟ ಮಾಡಬೇಕು. ಕೇಂದ್ರಗಳ ಮುಂದೆ ರಕ್ತದ ದರವನ್ನು ಕಡ್ಡಾಯವಾಗಿ ನಮೂದಿಸಬೇಕು. ಶಿಬಿರ ಆಯೋಜಿಸಿದ ಸಂದರ್ಭದಲ್ಲಿ ಶೇಖರಣೆಗೊಂಡ ಶೇ. 25ರಷ್ಟು ರಕ್ತವನ್ನು ಜಿಲ್ಲಾಸ್ಪತ್ರೆಗೆ ಕಡ್ಡಾಯವಾಗಿ ನೀಡಬೇಕು. ಬಿಪಿಎಲ್ ಕಾರ್ಡ್ ಹೊಂದಿದವರಿಗೆ ಉಚಿತವಾಗಿ ರಕ್ತವನ್ನು ನೀಡಬೇಕು ಎಂದು ತಾಕೀತು ಮಾಡಿದರು.

ಪ್ರತಿ ವರ್ಷ 200 ಎಚ್‌ಐವಿ ಪ್ರಕರಣ ಪತ್ತೆ

ಜಿಲ್ಲೆಯಲ್ಲಿ ಶೇ. 0.35ರಷ್ಟು ಎಚ್‌ಐವಿ ಸೋಂಕಿತರ ಪ್ರಮಾಣವಿದೆ. ಪ್ರತಿ ವರ್ಷ 200 ಪ್ರಕರಣಗಳು ಪತ್ತೆಯಾಗುತ್ತಿವೆ ಎಂದು ಏಡ್ಸ್ ನಿರ್ಮೂಲನಾಧಿಕಾರಿ ಡಾ. ಮುರಳೀಧರ್ ತಿಳಿಸಿದರು.
ಇಲಾಖೆಯು ಎಚ್‌ಐವಿ ಬಗೆಗಿರುವ ಕಳಂಕ ಮತ್ತು ತಾರತಮ್ಯವನ್ನು ಹೋಗಲಾಡಿಸಲು ಜನರಲ್ಲಿ ಅರಿವು ಮೂಡಿಸಲಾಗುತ್ತಿದೆ. ಇತ್ತೀಚೆಗೆ ಕಡ್ಡಾಯವಾಗಿ ಗರ್ಭಿಣಿಯರಿಗೆ ಎಚ್.ಐ.ವಿ ಪರೀಕ್ಷೆ ಮಾಡಿಸಲಾಗುತ್ತಿದೆ. ಸೋಂಕಿನ ಲಕ್ಷಣಗಳು ಕಂಡು ಬಂದರೆ ಗರ್ಭಿಣಿಯರಿಗೆ ವಿಶೇಷವಾಗಿ ಚಿಕಿತ್ಸೆಯನ್ನು ನೀಡಿ ತಾಯಿಯಿಂದ ಮಗುವಿಗೆ ಹರಡುವುದನ್ನು ನಿಯಂತ್ರಿಸಲು ಮತ್ತು ಎಚ್.ಐ.ವಿ ಮುಕ್ತ ಮಗು ಪಡೆಯಲು ಕ್ರಮ ವಹಿಸಲಾಗಿದೆ ಎಂದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net