ಬಿಸಿಲಿನ ಬೇಗೆಯಿಂದ ಕಂಗೆಟ್ಟಿದ್ದ ಭೂಮಿಗೆ ತಂಪೆರೆದ ಮಳೆ Rain

ಮಾಯಕೊಂಡ ಸಮೀಪ ಜಮೀನಿನಲ್ಲಿ ಮಳೆಯಿಂದ ನಳನಳಿಸುತ್ತಿರುವ ಮೆಕ್ಕೆಜೋಳ ಬೆಳೆ. Rain
ಮಾಯಕೊಂಡ ಸಮೀಪ ಜಮೀನಿನಲ್ಲಿ ಮಳೆಯಿಂದ ನಳನಳಿಸುತ್ತಿರುವ ಮೆಕ್ಕೆಜೋಳ ಬೆಳೆ. Rain
Published on

ಪ್ರಮುಖ ಮುಖ್ಯಾಂಶಗಳು

  • ಮಾಯಕೊಂಡ ಹೋಬಳಿಯ ಹಲವೆಡೆ ಸಾಧಾರಣ ಮಳೆ
  • ಮುಂಗಾರಿನ ಮೆಕ್ಕೆಜೋಳ, ರಾಗಿ ಬೆಳೆಗಳಿಗೆ ಜೀವ ಕಳೆ
ಮಾಯಕೊಂಡ: ಹೋಬಳಿಯ ಹಲವಾರು ಗ್ರಾಮಗಳಲ್ಲಿ ಶನಿವಾರ ಸಂಜೆ, ಭಾನುವಾರ ಸಾಧಾರಣ ಮಳೆಯಾಗಿದ್ದು, ಹಲವು ದಿನಗಳಿಂದ ಮಳೆ ಇಲ್ಲದೆ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಭೂಮಿ ತಂಪಾಗಿದೆ. ಮುಂಗಾರು ಹಂಗಾಮಿನ ಮೆಕ್ಕೆಜೋಳ, ರಾಗಿ ಬೆಳೆಗಳಿಗೆ ಜೀವ ಕಳೆ ಬಂದಿದೆ. Rain
ಮಾಯಕೊಂಡ ಹೋಬಳಿಯ ಹುಚ್ಚವ್ವನಹಳ್ಳಿ, ಎಚ್. ಬಸವಾಪುರ, ನಲ್ಕುಂದ, ಹಿಂಡಿಸಕಟ್ಟಿ, ಕ್ಯಾತನಹಳ್ಳಿ, ದಿಂಡದಹಳ್ಳಿ, ದೊಡ್ಡಮಾಗಡಿ, ಬಳ್ಳಾಪುರ, ಎಚ್. ವಡ್ಡರಹಟ್ಟಿ, ರಾಂಪುರ, ಹೆದ್ನೇ ಸೇರಿದಂತೆ ಇನ್ನೂ ಹಲವಾರು ಗ್ರಾಮಗಳಲ್ಲಿ ಮಳೆಯಾಯಿತು.
ಒಂದೂವರೆ ತಿಂಗಳ ಹಿಂದೆ ಬಿತ್ತನೆ ಮಾಡಿದ್ದ ಮೆಕ್ಕೆಜೋಳದ ಎಳೆ ದಂಟುಗಳು ಮಳೆ ಇಲ್ಲದೆ ಬಾಡಿ ನಿಂತಿದ್ದವು. ಬೆಳವಣಿಗೆ ಕುಂಠಿತವಾಗಿ ಸಂಪೂರ್ಣ ವಿನಾಶವಾಗುವ ಅಂಚಿನಲ್ಲಿದ್ದ ಸಲು ಎರಡು ದಿನದ ಮಳೆಯಿಂದ ಚೇತರಿಕೆ ಕಂಡಿವೆ.
ಮೆಕ್ಕೆಜೋಳ ಬಿತ್ತನೆಗೆ ಈಗಾಗಲೇ ತಡವಾಗಿದೆ. ಮುಂದೆ ಮಳೆ ಬರುವ ಖಚಿತತೆ ಇಲ್ಲ. ಈಗ ಮೆಕ್ಕೆಜೋಳ ಬಿತ್ತಿದರೆ ಲದ್ದಿಹುಳು ಬಾಧೆ, ಸುಳಿರೋಗ ಹಾಗೂ ಇನ್ನಿತರ ರೋಗಗಳ ಭೀತಿ ಎದುರಿಸಬೇಕಾಗಬಹುದು. ಹೀಗಾಗಿ ರೈತರು ರಾಗಿಯನ್ನು ಹೆಚ್ಚಾಗಿ ಬಿತ್ತನೆ ಮಾಡುವ ಸಾಧ್ಯತೆ ಇದೆ. ರಾಗಿ ಕಡಿಮೆ ತೇವಾಂಶ ಬೇಡುತ್ತದೆ. ಉತ್ತಮ ಧಾರಣೆ ಜತೆಗೆ ಹುಲ್ಲಿಗೂ ಸಹ ಬೇಡಿಕೆ ಇರುವುದರಿಂದ ಉತ್ತಮ ಆದಾಯ ನಿರೀಕ್ಷೆಯಲ್ಲಿ ರೈತರಿದ್ದಾರೆ.
ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ತಾಲೂಕಿನಾದ್ಯಂತ ಸುಮಾರು 2 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ರಾಗಿ ಬಿತ್ತನೆ ನಿರೀಕ್ಷೆ ಇದೆ. ಜತೆಗೆ ಮುಂಗಾರು ಮಳೆ ಕೊರತೆಯಿಂದ ಭದ್ರಾ ಅಚ್ಚುಕಟ್ಟು ನೀರಾವರಿ ಪ್ರದೇಶದಲ್ಲಿ ಭತ್ತ ಬೆಳೆಯಲು ನೀರು ಸಿಗುವುದು ಕಷ್ಟಕರ. ಭತ್ತ ಬೆಳೆಯುವ ತಾಲೂಕಿನ 18 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಸುಮಾರು 5 ಸಾವಿರ ಹೆಕ್ಟೇರ್‌ನಲ್ಲಿ ರೈತರು ರಾಗಿ ಬಿತ್ತನೆ ಮಾಡುವ ಅಂದಾಜಿದೆ ಎಂದು ಎಡಿಎ ಶ್ರೀಧರಮೂರ್ತಿ ವಿಜಯವಾಣಿಗೆ ಮಾಹಿತಿ ನೀಡಿದರು.
ಕೆಲವು ವರ್ಷಗಳಿಂದ ದಾವಣಗೆರೆ ತಾಲೂಕಿನಲ್ಲಿ ರಾಗಿ ಬೆಳೆಯಲು ರೈತರು ಒಲವು ತೋರುತ್ತಿದ್ದು ಯಂತ್ರಗಳ ಬಳಕೆ ಹೆಚ್ಚಾಗಿದೆ. ಟ್ರ್ಯಾಕ್ಟರ್‌ನಲ್ಲಿ ನಡಕಟ್ಟಿನ ಕೂರಿಗೆಯನ್ನು ಬಳಸಿ ಬಿತ್ತನೆ ಮಾಡುವುದು, ಯಂತ್ರಗಳಿಂದ ಕಟಾವು, ಬೇಲರ್‌ಗಳಿಂದ ಹುಲ್ಲು ಪೆಂಡಿ ಕಟ್ಟುವುದು ಹೀಗೆ ಯಂತ್ರಗಳ ಸಹಾಯದಿಂದ ಕೃಷಿ ಚಟುವಟಿಕೆ ನಡೆಯುತ್ತಿದೆ.

ಮಾಯಕೊಂಡ, ಆನಗೋಡು, ಕಸಬಾ ಹೋಬಳಿಗಳ ರೈತ ಸಂಪರ್ಕ ಕೇಂದ್ರಗಳಲ್ಲಿ ರಾಗಿ ಬಿತ್ತನೆ ಬೀಜ ಹೇರಳವಾಗಿ ದಾಸ್ತಾನಿದ್ದು ರೈತರು ಬೆಳೆದಿಟ್ಟಿರುವ ಮನೆ ರಾಗಿ ಬಿತ್ತನೆ ಮಾಡುವುದಕ್ಕಿಂತ ಕೃಷಿ ಇಲಾಖೆ ಶಿಫಾರಸು ಮಾಡಿರುವ ಬರ ನಿರೋಧಕ ಸುಧಾರಿತ ತಳಿಯ ರಾಗಿ ಬೀಜಗಳನ್ನು ರಿಯಾಯಿತಿ ದರದಲ್ಲಿ ತಂದು ಬಿತ್ತನೆ ಮಾಡುವುದು ಸೂಕ್ತ.

— ಡಿ.ಎಂ. ಶ್ರೀಧರಮೂರ್ತಿ, ತಾಲೂಕು ಸಹಾಯಕ ಕೃಷಿ ನಿರ್ದೇಶಕ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net