ಸೆಕೆಯಲ್ಲೂ ತಂಪೆರೆದ ಸಂಗೀತದ ಮಳೆ ಗಾಳಿ

ಸಿನಿಮಾಸಿರಿ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಮಧುರ ಗೀತೆಗಳ ಸಂಭ್ರಮ ಕಾರ್ಯಕ್ರಮವನ್ನು ಚಿತ್ರನಟಿ ಮಲೈಕಾ ಟಿ. ವಸುಪಾಲ್ ಉದ್ಘಾಟಿಸಿದರು. ಅಧ್ಯಕ್ಷ ಅಂದನೂರು ಮುಪ್ಪಣ್ಣ,  ಡಾ. ಬಿ. ಎಸ್.ನಾಗಪ್ರಕಾಶ್, ಆರ್.ಟಿ. ಮೃತ್ಯುಂಜಯ, ಎನ್.ವಿ. ಬಂಡಿವಾಡ, ಸುರಭಿ ಶಿವಮೂರ್ತಿ ಇತರರಿದ್ದರು.

Published on

ಪ್ರಮುಖ ಮುಖ್ಯಾಂಶಗಳು

  • ಗಮನ ಸೆಳೆದ ಸಿನಿಮಾಸಿರಿ ಕಾರ್ಯಕ್ರಮ
  • ಪ್ರತಿಭೆಯಿಂದಲೇ ಸಾಧಿಸುವಾಸೆ- ಮಲೈಕಾ ವಸುಪಾಲ್
ದಾವಣಗೆರೆ: ಶಿವಯೋಗಾಶ್ರಮದಲ್ಲಿ ಶನಿವಾರ ಸಂಜೆ ಕನ್ನಡ- ಹಿಂದಿ ಹಾಡುಗಳ ಮಳೆ ಸುರಿಯಿತು. ಸೆಕೆಯ ವಾತಾವರಣದ ನಡುವೆಯೂ ಸೇರಿದ್ದ ಪ್ರೇಕ್ಷಕರಿಗೆ ಸುಮಧುರ ಹಾಡಿನ ತಂಗಾಳಿ ಕಿವಿ-ಮನಸ್ಸಿಗೆ ತಂಪೆರೆದವು.
ಓ ಪ್ರೇಮ ಕಾಶ್ಮೀರ, ಬೊಂಬೆ ಹೇಳುತೈತೆ, ಎಂದೋ ಕಂಡ ಕನಸು, ತುಂತುರು ಅಲ್ಲಿ ನೀರ ಹಾಡು, ಆನಂದ ಆನಂದ ನೀ ತಂದ ಪ್ರೀತಿಯಿಂದ. ನಾವಾಡುವ ನುಡಿಯೇ ಗಂಧದಗುಡಿ..ಮೊದಲಾದ ಗೀತೆಗಳು ಇಂಪು ನೀಡಿದರೆ, ಬಹುತ್ ಪ್ಯಾರ್ ಕರ‌್ತೇ ಹೈ, ಸತ್ಯಂ ಶಿವಂ ಸುಂದರಂ, ಗುಲಾಬಿ ಆಂಖೆ, ದಮ್ಮರೆ ದಂ.. ಮೊದಲಾದ ಹಾಡುಗಳು ಬೇರೆಯದೇ ಲೋಕಕ್ಕೆ ಕರೆದೊಯ್ದವು.
ಲೋಕನಾಥ್ ಅವರ ಭದ್ರಾವತಿ ಆರ್ಕೆಸ್ಟ್ರಾ, ಬೆಂಗಳೂರಿನ ಶಶಿ ಮೆಲೋಡಿಸ್‌ನ ಹಾಡುಗಾರರಾದ ಶಶಿ, ಸಂದೇಶ್, ಚೇತನ್, ಆದ್ಯಾ, ಸ್ಥಳೀಯ ಕಲಾವಿದರಾದ ಸಂಗೀತಾ ರಾಘವೇಂದ್ರ, ಜಗದೀಶ್, ಆರ್.ಟಿ.ಮೃತ್ಯುಂಜಯ ಮೊದಲಾದವರು 30ಕ್ಕೂ ಹೆಚ್ಚು ಗೀತೆಗಳನ್ನು ಹಾಡಿ ರಂಜಿಸಿದರು.
ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ- ಸಿನಿಮಾಸಿರಿ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷಾಚರಣೆ ಹಿನ್ನೆಲೆಯಲ್ಲಿ ಆಯೋಜಿಸಿದ್ದ
ಸುಮಧುರ ಗೀತೆಗಳ ಸಂಭ್ರಮ ಕಾರ್ಯಕ್ರಮವಿದು. ಸಂಗೀತ ದಿಗ್ಗಜರಾದ ಎಸ್.ಪಿ. ಬಾಲಸುಬ್ರಮಣ್ಯಂ, ಲತಾ ಮಂಗೇಶ್ಕರ್, ಕಿಶೋರ್‌ಕುಮಾರ್, ಡಾ. ರಾಜಕುಮಾರ್ ಹಾಗೂ ಇತ್ತೀಚೆಗೆ ನಿಧನರಾದ ಆಶಾ ಬೋಸ್ಲೆ ಮೊದಲಾದವರು ಹಾಡುಗಳ ಜತೆಗೆ ಬ್ಯಾಕ್‌ಟ್ರಾಪ್‌ನಲ್ಲಿ ಆಯಾ ಚಿತ್ರ ಸಂಗೀತದ ದೃಶ್ಯಾವಳಿಗಳನ್ನು ಪ್ರೇಕ್ಷಕರು ಕಣ್ತುಂಬಿಕೊಂಡರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಚಿತ್ರನಟಿ ಮಲೈಕಾ ಟಿ. ವಸುಪಾಲ್, ಇಲ್ಲಿಯೇ ಹುಟ್ಟಿ ಬೆಳೆದು ಇಲ್ಲಿನ ಇಂಜಿನಿಯರಿಂಗ್ ಕಾಲೇಜಿನಲ್ಲಿ ಓದಿದ ನಾನು ದಾವಣಗೆರೆ ಹುಡುಗಿ ಎನಿಸಿಕೊಳ್ಳಲು ಹೆಮ್ಮೆ ಆಗುತ್ತಿದೆ. ನಾನು ಬಿಟಿ ಕುಟುಂಬದ ಸದಸ್ಯೆ ಎಂಬುದಕ್ಕಿಂತಲೂ ಪ್ರತಿಭೆಯಿಂದ ಗುರುತಿಸಿಕೊಳ್ಳುವ ಆಸೆ ಇದೆ ಎಂದರು.
ಇಂಜಿನಿಯರಿಂಗ್ ಕಾಲೇಜು ಓದುವ ಹಂತದಲ್ಲೇ ನನ್ನಲ್ಲಿದ್ದ ನಟನಾ ಕೌಶಲವನ್ನು ಇತರರು ಗುರುತಿಸಿದರು. 2021ರಿಂದ ನಟನೆಯ ಜರ್ನಿ ಆರಂಭಿಸಿ ಆರು ವರ್ಷದ ನಂತರ ಗುರುತಿಸಿಕೊಳ್ಳುವ ಹಂತಕ್ಕೆ ಬಂದಿದ್ದೇನೆ. 3 ಕನ್ನಡ, 1ತೆಲುಗು ಚಿತ್ರದಲ್ಲಿ ನಟಿಸಿದ್ದೇನೆ. ಕಲ್ಟ್ ಸಿನಿಮಾ ಪ್ರಮೋಷನ್ ಬಿಟ್ಟರೆ ದಾವಣಗೆರೆ ವೇದಿಕೆ ಹಂಚಿಕೊಳ್ಳುತ್ತಿರುವುದು ಮೊದಲನೇ ಬಾರಿ ಎಂದು ಹೇಳಿಕೊಂಡರು.
ಸಂಸ್ಥೆಯ ಪರಿಕಲ್ಪನಾ ನಿರ್ದೇಶಕ ಸುರಭಿ ಶಿವಮೂರ್ತಿ ಮಾತನಾಡಿ 1998ರಲ್ಲಿ ದಾವಣಗೆರೆಯಲ್ಲಿ ನಡೆದ ಬೆಳ್ಳಿತೆರೆ ಕಾರ್ಯಕ್ರಮಕ್ಕೆ ನಟ ಡಾ. ರಾಜ್‌ಕುಮಾರ್ ಬಂದು ಹೋಗಿದ್ದರು. ನಂತರ ಕೆಲವೇ ಗೆಳೆಯರು ಸೇರಿ ಸಿನಿಮಾ ಸಂಗೀತದ ಸಂಸ್ಥೆ ಹುಟ್ಟಿ ಹಾಕುವ ಕನಸು ಚಿಗುರೊಡೆಯಿತು. ಟಿ.ಎಸ್.ನಾಗಾಭರಣ ಚಾಲನೆ ನೀಡಿದ ಸಂಸ್ಥೆ ಇದುವರೆಗೆ 50ಕ್ಕೂ ಹೆಚ್ಚು ಕಾರ್ಯಕ್ರಮ ನಡೆಸಿದೆ. ನಟ-ನಟಿಯರು, ನಿರ್ದೇಶಕರು, ತಂತ್ರಜ್ಞರು ಭಾಗಿಯಾಗಿದ್ದಾರೆ ಎಂದು ವಿವರಿಸಿದರು.
ಸಂಸ್ಥೆಯ ಅಧ್ಯಕ್ಷ ಅಂದನೂರು ಮುಪ್ಪಣ್ಣ, ಪ್ರಧಾನ ಕಾರ್ಯದರ್ಶಿ ಆರ್.ಟಿ. ಮೃತ್ಯುಂಜಯ, ಖಜಾಂಚಿ ಎನ್.ವಿ. ಬಂಡಿವಾಡ, ಎಚ್.ವಿ.ಮಂಜುನಾಥಸ್ವಾಮಿ , ಡಾ. ಬಿ. ಎಸ್.ನಾಗಪ್ರಕಾಶ್, ಉಮೇಶ್ ಗುಜ್ಜರ್, ಬಿ.ಎಂ. ಪಂಚಾಕ್ಷರಯ್ಯ ಇತರರಿದ್ದರು. ರಕ್ಷಾ ಬಂಡಿವಾಡ್ ಪ್ರಾರ್ಥನೆ ಗೀತೆ ಹಾಡಿದರು. ಸಾಲಿಗ್ರಾಮ ಗಣೇಶ ಶೆಣೈ ಕಾರ್ಯಕ್ರಮ ನಿರ್ವಹಣೆ ಮಾಡಿದರು.
---
ಸಿನಿಮಾಸಿರಿ ಸಂಸ್ಥೆಯ ಬೆಳ್ಳಿ ಹಬ್ಬದ ವರ್ಷಾಚರಣೆ ಹಿನ್ನೆಲೆಯಲ್ಲಿ ದಾವಣಗೆರೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಸುಮಧುರ ಗೀತೆಗಳ ಸಂಭ್ರಮ ಕಾರ್ಯಕ್ರಮವನ್ನು ಚಿತ್ರನಟಿ ಮಲೈಕಾ ಟಿ. ವಸುಪಾಲ್ ಉದ್ಘಾಟಿಸಿದರು. ಅಧ್ಯಕ್ಷ ಅಂದನೂರು ಮುಪ್ಪಣ್ಣ, ಡಾ. ಬಿ. ಎಸ್.ನಾಗಪ್ರಕಾಶ್, ಆರ್.ಟಿ. ಮೃತ್ಯುಂಜಯ, ಎನ್.ವಿ. ಬಂಡಿವಾಡ, ಸುರಭಿ ಶಿವಮೂರ್ತಿ ಇತರರಿದ್ದರು.
---
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net