ದಾವಣಗೆರೆಯ ಎವಿಕೆ ಕಾಲೇಜಿನಲ್ಲಿ ಶನಿವಾರ, ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪಾ ಉದ್ಘಾಟಿಸಿದರು. ಡಾ. ವಿಜಯಕುಮಾರ ಎಚ್.ಜಿ, ಪ್ರೊ. ಜೆ. ಕರಿಯಪ್ಪ ಮಾಳಿಗೆ, ಜಿ.ಎಸ್. ಸುಶೀಲಾದೇವಿ ಆರ್. ರಾವ್, ಪ್ರೊ. ಕಮಲಾ ಸೊಪ್ಪಿನ್, ಅಂಜಿನಪ್ಪ ಡಿ. ಇದ್ದರು.
ದಾವಣಗೆರೆ :ಮಹಿಳಾ ಸಂವೇದನಾಶೀಲತೆ ಕಾಲದಿಂದ ಕಾಲಕ್ಕೆ ಬದಲಾವಣೆಯಾಗುತ್ತದೆ ಎಂದು ಕರ್ನಾಟಕ ಲೇಖಕಿಯರ ಸಂಘದ ಅಧ್ಯಕ್ಷೆ ಡಾ.ಎಚ್.ಎಲ್. ಪುಷ್ಪ ಹೇಳಿದರು.
ಬೇರು-ಚಿಗುರು ವೇದಿಕೆಯಿಂದ ನಗರದ ಎವಿಕೆ ಕಾಲೇಜಿನಲ್ಲಿ ಶನಿವಾರ ಆಯೋಜಿಸಿದ್ದ, ‘ಕನ್ನಡ ಸಾಹಿತ್ಯ ಮಹಿಳಾ ಸಂವೇದನೆಗಳು’ ಕುರಿತ ರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಹನ್ನೆರಡನೇ ಶತಮಾನದಲ್ಲಿ ಅನೇಕ ಮಹಿಳೆಯರು ವಚನಗಳನ್ನು ಬರೆದರು. ವಿವಿಧ ಕಾಯಕದಲ್ಲಿ ತೊಡಗಿದ್ದ ಅನಕ್ಷರಸ್ಥರಿಗೂ ಅಭಿವ್ಯಕ್ತಿಯ ಸ್ವಾತಂತ್ರ್ಯ ದೊರೆಯಿತು. ದಾಸರ ಕಾಲದಲ್ಲಿ ಕೀರ್ತನೆಗಳು ರಚನೆಯಾದವು. ಬ್ರಿಟಿಷರ ಆಳ್ವಿಕೆಯ ಅವಧಿಯಲ್ಲಿ ಅನೇಕ ಮಹಿಳೆಯರು ಪತ್ರಕರ್ತೆಯರಾಗಿದ್ದರು. ಹೀಗೆ ಆಯಾ ಕಾಲಘಟ್ಟಕ್ಕೆ ಅನುಗುಣವಾಗಿ ಸಂವೇದನಾಶಿಲತೆ ಬಿಚ್ಚಿಕೊಳ್ಳುತ್ತ ಹೋಯಿತು ಎಂದರು.
ನವ್ಯ, ದಲಿತ, ಬಂಡಾಯ ಹೀಗೆ ಆಯಾ ಕಾಲಘಟ್ಟದ ಸಂಕಟಗಳನ್ನು ಸಾಹಿತ್ಯದ ಮೂಲಕ ಕಟ್ಟಿಕೊಡುವ ಕೆಲಸವಾಯಿತು. ಸಮುದಾಯದ ನೋವುಗಳು ಬಿಂಬಿತವಾದವು ಎಂದು ವಿವರಿಸಿದರು.
ಹೆಣ್ಣು 2ನೇ ಪ್ರಜೆ ಎನ್ನುವ ಭಾವನೆ ಸಮಾಜದಲ್ಲಿತ್ತು. ಆಕೆಯನ್ನು ಅಡುಗೆ ಮನೆಗೆ ಸೀಮಿತವಾಗಿ ನೋಡಲಾಗುತ್ತಿತ್ತು. ವಾಕ್ ಸ್ವಾತಂತ್ರ್ಯ ಇರಲಿಲ್ಲ. ಈಗ ವಸ್ತ್ರ ಸಂಹಿತೆಯ ಕುರಿತು ಚರ್ಚೆಗಳಾಗುತ್ತಿವೆ. ಮರ್ಯಾದಾ ಹತ್ಯೆಗಳಾಗುತ್ತಿವೆ ಎಂದು ವಿಶ್ಲೇಷಿಸಿದರು.
ಮನುಷ್ಯತ್ವ ಉಳಿಸುವ ಸಾಹಿತ್ಯ
ಮನುಷ್ಯತ್ವ ಉಳಿಸುವುದೇ ಸಾಹಿತ್ಯ, ಅದು ಜನಜೀವನದ ಪ್ರತಿಬಿಂಬ ಎಂದು ಡಾ.ಎಚ್.ಎಲ್. ಪುಷ್ಪ ಹೇಳಿದರು.
ಲೇಖಕಿಯರು ಬರೆದರೆ ಮಾತ್ರ ಅದು ಮಹಿಳಾ ಸಾಹಿತ್ಯವೆ?, ಪುರುಷರು ಮಹಿಳಾಪರ ಕಾಳಜಿ ಇಟ್ಟು ಬರೆಯುವುದು ಮಹಿಳಾ ಸಾಹಿತ್ಯ ಅಲ್ಲವೆ ಎಂದು ಪ್ರಶ್ನಿಸಿದರು. ಮಾಸ್ತಿ ವೆಂಕಟೇಶ ಅಯ್ಯಂಗಾರ್, ಕುವೆಂಪು, ಶಿವರಾಮ ಕಾರಂತ್ ಅವರ ಕೃತಿಗಳಲ್ಲಿ ಮಹಿಳಾ ಪರವಾದ ಧ್ವನಿ ಇರುವುದನ್ನು ಪ್ರಸ್ತಾಪಿಸಿದರು.
ವಿಶ್ವವಿದ್ಯಾಲಯ ಮಾಡುವ ಕೆಲಸವನ್ನು ಬೇರು-ಚಿಗುರು ವೇದಿಕೆಯು ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಬೇರು ಭದ್ರವಾಗಿದ್ದಾಗ ಚಿಗುರೊಡೆಯುತ್ತದೆ. ಗುರು-ಶಿಷ್ಯ ಸಂಬಂಧ ಗಟ್ಟಿಯಾಗಿರಬೇಕು ಎಂದು ಹೇಳಿದರು.
ಬೇರು-ಚಿಗುರು ವೇದಿಕೆಯ ಅಧ್ಯಕ್ಷ ಡಾ. ವಿಜಯಕುಮಾರ ಎಚ್.ಜಿ, ಕುವೆಂಪು ಭಾಷಾ ಭಾರತಿ ಸದಸ್ಯ ಪ್ರೊ. ಜೆ. ಕರಿಯಪ್ಪ ಮಾಳಿಗೆ, ಹಿರಿಯ ಸಾಹಿತಿ ಜಿ.ಎಸ್. ಸುಶೀಲಾದೇವಿ ಆರ್. ರಾವ್, ಎವಿಕೆ ಕಾಲೇಜು ಪ್ರಾಚಾರ್ಯೆ ಪ್ರೊ. ಕಮಲಾ ಸೊಪ್ಪಿನ್ ಇದ್ದರು. ಡಾ. ರಣಧೀರ್ ಸ್ವಾಗತಿಸಿದರು. ಡಾ.ಕವಿತಾ ಆರ್.ಜಿ, ಡಾ. ಲೋಹಿತ್ ಎಚ್.ಎಂ. ನಿರೂಪಿಸಿದರು.
"
ಬೇರು-ಚಿಗುರು ಸಮಾನ ಮನಸ್ಕರು ಸೇರಿ ಕಟ್ಟಿದ ವೇದಿಕೆಯಾಗಿದೆ. ಚಿತ್ರದುರ್ಗ ಮತ್ತು ದಾವಣಗೆರೆ ಜಿಲ್ಲೆಯ ವ್ಯಾಪ್ತಿಯನ್ನು ಹೊಂದಿದೆ. ಸಾಹಿತ್ಯ ಮತ್ತು ಶೈಕ್ಷಣಿಕ ಪ್ರಸಾರದ ಉದ್ದೇಶವನ್ನು ಈ ವೇದಿಕೆ ಹೊಂದಿದೆ. ಕಳೆದ ಒಂದು ವರ್ಷದಲ್ಲಿ ಆನ್‌ಲೈನ್ ಮತ್ತು ಆಫ್‌ಲೈನ್ ವೇದಿಕೆಗಳ ಮೂಲಕ ವಿಶೇಷ ಉಪನ್ಯಾಸಗಳನ್ನು ಏರ್ಪಡಿಸಿ ವಿದ್ಯಾರ್ಥಿಗಳಲ್ಲಿ ಸಾಹಿತ್ಯಾಭಿರುಚಿ ಮೂಡಿಸಲಾಗಿದೆ. ಮುಂಬರುವ ದಿನಗಳಲ್ಲಿ ಈ ವೇದಿಕೆಯ ಚಟುವಟಿಕೆಗಳನ್ನು ರಾಜ್ಯಾದ್ಯಂತ ವಿಸ್ತರಿಸುವ ಉದ್ದೇಶವಿದೆ.