ಹರಿಹರ ಪತ್ರಿಕಾ ಭವನದಲ್ಲಿ ತಾಲೂಕು ಕಾನಿಪ ಘಟಕದಿಂದ ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಸದಸ್ಯರನ್ನು ಸನ್ಮಾನಿಸಲಾಯಿತು. ಶಾಸಕ ಬಿ.ಪಿ. ಹರೀಶ್, ಶಾಂಭವಿ ನಾಗರಾಜ್, ಕೀರ್ತಿಕುಮಾರ್, ಶೇಖರ್‌ಗೌಡ ಇದ್ದರು.Honorary program
ಜಿಲ್ಲಾ ಪತ್ರಕರ್ತರ ಸಂಘಕ್ಕೆ ನೂತನವಾಗಿ ಆಯ್ಕೆಯಾದ ಸದಸ್ಯರಿಗೆ ಸನ್ಮಾನ
ಹರಿಹರ ಪತ್ರಿಕಾ ಭವನದಲ್ಲಿ ಆಯೋಜನೆ
ಹರಿಹರ: ಇತ್ತೀಚೆಗೆ ಪತ್ರಕರ್ತರಲ್ಲದ ವ್ಯಕ್ತಿಗಳು ಪತ್ರಕರ್ತರೆಂದು ಬಿಂಬಿಸಿಕೊಳ್ಳುವ ಮೂಲಕ ಪತ್ರಿಕಾರಂಗವನ್ನು ಕಲುಷಿತ ಮಾಡುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದು ಶಾಸಕ ಬಿ.ಪಿ. ಹರೀಶ್ ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಶನಿವಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಕಾರ್ಯಕಾರಿಣಿ ಸದಸ್ಯರಾಗಿ ತಾಲೂಕಿನಿಂದ ಆಯ್ಕೆಯಾದ ಸದಸ್ಯರಿಗೆ ತಾಲೂಕು ಘಟಕದಿಂದ ಹಮ್ಮಿಕೊಂಡಿದ್ದ ಅಭಿನಂದನಾ ಸಭೆಯಲ್ಲಿ ಮಾತನಾಡಿದರು.
ನೈಜ ವರದಿಗಾರರು ತಮ್ಮದೇ ರೀತಿಯಲ್ಲಿ ಕರ್ತವ್ಯ ನಿರ್ವಹಿಸುತ್ತ ಸಮಾಜದ ಅಂಕುಡೊಂಕುಗಳನ್ನು ತಿದ್ದುತ್ತಾ ಇಲಾಖೆಗಳ ಕರ್ತವ್ಯಲೋಪಗಳನ್ನು ತಮ್ಮ ಬರವಣಿಗೆ ಮೂಲಕ ತಿಳಿಸುತ್ತಿದ್ದಾರೆ. ಆದರೆ ಇತ್ತೀಚೆಗೆ, ನಾವು ಪತ್ರಕರ್ತರು ಎಂದು ಹೇಳಿಕೊಂಡು ತಿರುಗಾಡುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಈ ಕುರಿತು ಸಂಬಂಧ ಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದರು.
ಹಿರಿಯ ಪತ್ರಕರ್ತ ಟಿ. ಇನಾಯತ್‌ವುಲ್ಲಾ ಮಾತನಾಡಿ, ಈ ಹಿಂದೆ ರಾಜ್ಯ ಪತ್ರಿಕೆಗಳಿಗೆ ಇಲಾಖೆಗಳಿಂದ ಸ್ಥಳೀಯವಾಗಿ ಜಾಹೀರಾತು ನೀಡುವ ಪರಿಪಾಠ ಇತ್ತು. ಆದರೆ ಇತ್ತೀಚಿಗೆ ಅದು ಇಲ್ಲವಾಗಿದೆ. ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ನೂತನ ಕಾರ್ಯಕಾರಿಣಿ ಸದಸ್ಯರು ಜಿಲ್ಲಾ ಸಭೆಗಳಲ್ಲಿ ಚರ್ಚಿಸಿ ರಾಜ್ಯ ಸಂಘದ ಗಮನಕ್ಕೆ ತರುವ ಕೆಲಸ ಮಾಡಬೇಕು ಎಂದರು.
ನಿಕಟಪೂರ್ವ ಅಧ್ಯಕ್ಷ ಶೇಖರಗೌಡ ಪಾಟೀಲ್, ತಾಲೂಕು ಘಟಕದ ಅಧ್ಯಕ್ಷೆ ಶಾಂಭವಿ ನಾಗರಾಜ್ ಮಾತನಾಡಿದರು.
ಇದೇ ವೇಳೆ ಜಿಲ್ಲಾ ಸಂಘದ ಕಾರ್ಯಕಾರಿ ಸಮಿತಿಗೆ ಆಯ್ಕೆಯಾದ ಆರ್.ಬಿ. ಪ್ರವೀಣ್, ಸುರೇಶ್ ಕುಣೆಬೆಳಕೆರೆ, ವಿಶ್ವನಾಥ್ ಮೈಲಾಳ ಹಾಗೂ ಹರ ವಿವಿಧೋದ್ದೇಶ ಸಹಕಾರಿ ಸಂಘದ ನಿರ್ದೇಶಕರಾಗಿ ಆಯ್ಕೆಯಾದ ತಾಲೂಕು ಘಟಕದ ಅಧ್ಯಕ್ಷೆ ಶಾಂಭವಿ ನಾಗರಾಜ್ ಅವರನ್ನು ಸಂಘದ ಪರವಾಗಿ ಸನ್ಮಾನಿಸಲಾಯಿತು.
ತಾಲೂಕು ಸಮಿತಿ ಖಜಾಂಚಿ ಬಿ.ಎಂ. ಚಂದ್ರಶೇಖರ್, ನಿರ್ದೇಶಕ ಎಚ್. ಶಿವಪ್ಪ, ಸದಸ್ಯರಾದ ಪಂಚಾಕ್ಷರಿ, ಮಂಜುನಾಥ್ ಪೂಜಾರ್, ಚಿದಾನಂದ ಕಂಚಿಕೇರಿ, ರಾಮಶೆಟ್ಟಿ, ಸದಾನಂದ, ಆರ್. ಮಂಜುನಾಥ್, ಎಚ್. ಮಂಜಾನಾಯಕ್, ಇರ್ಫಾನ್, ಚಂದ್ರಶೇಖರ್ ಕುಂಬಾರ್, ಕುಮಾರ್, ಶಕೀಲ್ ಅಹ್ಮದ್ ಇತರರಿದ್ದರು.