ಬೆಲೆ ಕಳೆದುಕೊಂಡ ಗುಲಾಬಿ ಸುಂದರಿ

ಮಾಯಕೊಂಡ ಗ್ರಾಮದ ರೈತ ಹನುಮಂತಪ್ಪ ಮರಡಿ ಅವರು ಬೆಳೆದಿರುವ ಡ್ರ್ಯಾಗನ್ ಫ್ರೂಟ್.pink beauty
ಮಾಯಕೊಂಡ ಗ್ರಾಮದ ರೈತ ಹನುಮಂತಪ್ಪ ಮರಡಿ ಅವರು ಬೆಳೆದಿರುವ ಡ್ರ್ಯಾಗನ್ ಫ್ರೂಟ್.pink beauty
Published on

ಪ್ರಮುಖ ಮುಖ್ಯಾಂಶಗಳು

  • ಡ್ರ್ಯಾಗನ್ ಫ್ರೂಟ್ ದರ ಕುಸಿತ
  • ಕಂಗಾಲಾದ ಮಾಯಕೊಂಡ ರೈತ
ಕೃಷ್ಣಮೂರ್ತಿ ಪಿ.ಎಚ್. ಮಾಯಕೊಂಡ
ಮಧ್ಯ ಕರ್ನಾಟಕದ ದಾವಣಗೆರೆ ಜಿಲ್ಲೆಯಲ್ಲಿ ಗುಲಾಬಿ ಸುಂದರಿ ಎಂದೇ ಹೆಸರಾದ ಡ್ರ್ಯಾಗನ್ ಫ್ರೂಟ್ ಕಲರವ ಹೆಚ್ಚುತ್ತಿದೆ. ಆದರೆ, ಈ ಬಾರಿ ಮಾರುಕಟ್ಟೆಯಲ್ಲಿ ದರ ತೀವ್ರ ಕುಸಿತ ಕಂಡಿದ್ದು, ಭಾರಿ ಬಂಡವಾಳ ಹೂಡಿ, ದುಬಾರಿ ಖರ್ಚು-ವೆಚ್ಚ ಮಾಡಿದ ರೈತ ಸಮೂಹ ಅಕ್ಷರಶಃ ಕಂಗಾಲಾಗಿದೆ.
ಮಾಯಕೊಂಡ ಗ್ರಾಮದ ಪ್ರಗತಿಪರ ರೈತ ಮರಡಿ ಹನುಮಂತಪ್ಪ ಮತ್ತು ಅವರ ಪುತ್ರ ನವೀನ್ ಅವರು ತಮ್ಮ ಜಮೀನಿನಲ್ಲಿ ಭರಪೂರ ಡ್ರ್ಯಾಗನ್ ಹಣ್ಣು ಬೆಳೆದಿದ್ದಾರೆ. ಆದರೆ, ಮಾರುಕಟ್ಟೆಯಲ್ಲಿ ಯೋಗ್ಯ ಬೆಲೆ ಸಿಗದೆ ಆತಂಕಕ್ಕೆ ಒಳಗಾಗಿದ್ದಾರೆ.
ಜಿಲ್ಲೆಯಲ್ಲಿ 12 ರಿಂದ 13 ವರ್ಷಗಳ ಹಿಂದಿನಿಂದ ಡ್ರ್ಯಾಗನ್ ಫ್ರೂಟ್ ಬೆಳೆ ಪರಿಚಯವಾಯಿತು. ಆರಂಭದಲ್ಲಿ ಅನೇಕರು ಇದರ ಕೃಷಿ ಲಾಭದಾಯಕ ಎಂಬುದನ್ನು ತೋರಿಸಿಕೊಟ್ಟಿದ್ದರು. ಅದೇ ಹಾದಿಯಲ್ಲಿ ನಡೆದ ಮಾಯಕೊಂಡ ಗ್ರಾಮದ ಅಪ್ಪ-ಮಗ, ಹಣ್ಣಿನ ಕೃಷಿಯಲ್ಲೂ ಉತ್ತಮ ಲಾಭಾಂಶ ಪಡೆಯಬಹುದು ಎಂಬುದನ್ನು ಸಾಬೀತು ಮಾಡಿದ್ದಾರೆ. ತಮ್ಮ 2 ಎಕರೆ ಜಮೀನಿನ ಪೈಕಿ, 1 ಎಕರೆ ಪ್ರದೇಶದಲ್ಲಿ ಡ್ರ್ಯಾಗನ್ ಬೆಳೆದಿದ್ದಾರೆ.
ಗದಗಿನ ಹೊರವಲಯದ ಹಳ್ಳಿಯಿಂದ 1,640 ಪೀಸ್‌ಗಳನ್ನು ಖರೀದಿಸಿ ತರಲಾಗಿತ್ತು. ನೀರು ಪೂರೈಕೆಗೆ ಬೋರ್‌ವೆಲ್ ಇದ್ದು, ಪ್ರತಿ ಕಂಬಕ್ಕೂ ಹನಿ ನೀರಾವರಿ ಮೂಲಕ ಸಮರ್ಪಕ ವ್ಯವಸ್ಥೆ ಕಲ್ಪಿಸಲಾಗಿದೆ ಎನ್ನುತ್ತಾರೆ ರೈತ ಹನುಮಂತಪ್ಪ ಮರಡಿ.
2022ರ ಮೇ ತಿಂಗಳಲ್ಲಿ ಡ್ರ್ಯಾಗನ್ ಫ್ರೂಟ್ ಕೃಷಿ ಪ್ರಾರಂಭಿಸಿದಾಗ 6 ಲಕ್ಷ ರೂ.ಗಳಿಗಿಂತ ಹೆಚ್ಚು ಹಣ ವ್ಯಯವಾಗಿತ್ತು. ಪ್ರತಿ ವರ್ಷ ಮಾರ್ಚ್ ಕೊನೆಯ ವಾರದಲ್ಲಿ ಹೂ ಬಿಡಲು ಪ್ರಾರಂಭವಾಗಿ, ಜೂನ್ ಕೊನೆಯ ವಾರದಲ್ಲಿ ಹಣ್ಣುಗಳು ಕಟಾವಿಗೆ ಬರುತ್ತವೆ. ಕಳೆದ ನಾಲ್ಕು ವರ್ಷಗಳಿಂದ ಪ್ರತಿ ವರ್ಷ 6 ರಿಂದ 7 ಟನ್ ಹಣ್ಣು ಸಿಗುತ್ತಿದೆ. ಸಾಕಷ್ಟು ನೀರು, ರಸಗೊಬ್ಬರ ಮತ್ತು ಕೀಟನಾಶಕ ಬಳಕೆಯಿಂದ ಪ್ರತಿ ವರ್ಷವೂ ಉತ್ತಮ ಇಳುವರಿ ಬರುತ್ತಿದೆ ಎಂದು ಯುವ ರೈತ ನವೀನ್ ಮಾಹಿತಿ ನೀಡಿದ್ದಾರೆ.

ದರ ಕುಸಿತದ ಆಘಾತ

ಪ್ರಸ್ತುತ ಹಣ್ಣಿನ ಮಾರುಕಟ್ಟೆಯಲ್ಲಿ ಡ್ರ್ಯಾಗನ್ ಫ್ರೂಟ್ ದರ ಕುಸಿದಿದೆ. ಹಿಂದೆ ಮುಂಬೈ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 130 ರಿಂದ 150 ರೂ. ಇರುತ್ತಿದ್ದ ದರ, ಸದ್ಯ 70 ರಿಂದ 80 ರೂ.ಗೆ ಇಳಿದಿದೆ. ನಾವು ಮುಂಬೈ ಮಾರುಕಟ್ಟೆಗೆ ಪ್ರತಿ ಬಾಕ್ಸ್‌ಗೆ 10 ಕೆಜಿ ಹಣ್ಣನ್ನು ತುಂಬಿ, ಖಾಸಗಿ ಬಸ್‌ಗಳು ಅಥವಾ ಲಾರಿಗಳ ಮೂಲಕ ರವಾನಿಸುತ್ತೇವೆ. ಆದರೆ ಈಗ ಅಲ್ಲಿಯೂ ಸೂಕ್ತ ಬೆಲೆಯಿಲ್ಲ. ಇನ್ನು ದಾವಣಗೆರೆ ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ ಕೇವಲ 50 ರಿಂದ 60 ರೂ., ಚೆನ್ನೈನಲ್ಲಿ 70 ರಿಂದ 80 ರೂ. ಹಾಗೂ ಬೆಂಗಳೂರಿನಲ್ಲಿ 80 ರೂ. ದರವಿದೆ ಎಂದು ನವೀನ್ ತಿಳಿಸಿದ್ದಾರೆ.
"

ಜಿಲ್ಲೆಯಲ್ಲಿ ಡ್ರ್ಯಾಗನ್ ಹಣ್ಣು ಬೆಳೆಯುವ ರೈತರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಪ್ರಸ್ತುತ ಜಿಲ್ಲೆಯಲ್ಲಿ 100 ಹೆಕ್ಟೇರ್‌ಗಿಂತ ಹೆಚ್ಚಿನ ಪ್ರದೇಶದಲ್ಲಿ ಈ ಬೆಳೆಯನ್ನು ಕಾಣಬಹುದು. ಉದ್ಯೋಗ ಖಾತ್ರಿ ಯೋಜನೆ ಮತ್ತು ನಮ್ಮ ತೋಟಗಾರಿಕಾ ಇಲಾಖೆಯಲ್ಲೂ ಡ್ರ್ಯಾಗನ್ ಫ್ರೂಟ್ ಬೆಳೆಯುವ ರೈತರಿಗೆ ಸಹಾಯಧನದ ಸೌಲಭ್ಯಗಳಿವೆ.

— ರಾಘವೇಂದ್ರ ಪ್ರಸಾದ್ ಉಪನಿರ್ದೇಶಕ, ತೋಟಗಾರಿಕಾ ಇಲಾಖೆ, ದಾವಣಗೆರೆ.

ಡ್ರಾೃಗನ್ ಹಣ್ಣನ್ನು ಕೆಲವೊಮ್ಮೆ ಸ್ಥಳೀಯ ಮಾರುಕಟ್ಟೆಯಲ್ಲೇ ಕಡಿಮೆ ದರಕ್ಕೆ ಮಾರಾಟ ಮಾಡಿದ್ದೇವೆ. ದೂರದ ಮಾರುಕಟ್ಟೆಗೆ ಕಳಿಸಿ ಸಾರಿಗೆ ವೆಚ್ಚ ಕಳೆದುಕೊಳ್ಳುವುದಕ್ಕಿಂತ ಸ್ಥಳೀಯವಾಗಿ ಮಾರುವುದು ವಾಸಿ ಎನಿಸಿದೆ. ಸರ್ಕಾರ ಹಣ್ಣು-ತರಕಾರಿ ಬೆಳೆಗಳಿಗೂ ಬೆಂಬಲ ಬೆಲೆ ನಿಗದಿ ಮಾಡಿದರೆ ರೈತರಿಗೆ ಅನುಕೂಲವಾಗುತ್ತದೆ.

— ನವೀನ್, ಪ್ರಗತಿಪರ ಯುವ ರೈತ, ಮಾಯಕೊಂಡ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net