ಅಧಿಕಾರ ಹಿಡಿಯಲು ಒಗ್ಗಟ್ಟಿನ ಮಂತ್ರ

ದಾವಣಗೆರೆಯಲ್ಲಿ ಶನಿವಾರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಚಿವ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು 74ನೇ ಜನ್ಮದಿನವನ್ನು ಆಚರಿಸಿಕೊಂಡರು. ಗಾಯತ್ರಿ ಸಿದ್ದೇಶ್ವರ, ಸುನೀಲ್ ಕುಮಾರ್, ಎನ್. ರವಿಕುಮಾರ್, ಎಂ. ಚಂದ್ರಪ್ಪ, ಯಶವಂತರಾವ್ ಜಾಧವ್, ಎನ್. ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ವೀರೇಶ್ ಹನಗವಾಡಿ, ಜಿ.ಎಸ್. ಶ್ಯಾಮ್ ಇದ್ದರು.
ದಾವಣಗೆರೆಯಲ್ಲಿ ಶನಿವಾರ ಅಭಿಮಾನಿ ಬಳಗದಿಂದ ಆಯೋಜಿಸಿದ್ದ ಸಮಾರಂಭದಲ್ಲಿ ಮಾಜಿ ಸಚಿವ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರು 74ನೇ ಜನ್ಮದಿನವನ್ನು ಆಚರಿಸಿಕೊಂಡರು. ಗಾಯತ್ರಿ ಸಿದ್ದೇಶ್ವರ, ಸುನೀಲ್ ಕುಮಾರ್, ಎನ್. ರವಿಕುಮಾರ್, ಎಂ. ಚಂದ್ರಪ್ಪ, ಯಶವಂತರಾವ್ ಜಾಧವ್, ಎನ್. ರಾಜಶೇಖರ್, ರಾಜನಹಳ್ಳಿ ಶಿವಕುಮಾರ್, ವೀರೇಶ್ ಹನಗವಾಡಿ, ಜಿ.ಎಸ್. ಶ್ಯಾಮ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಮಾಜಿ ಸಚಿವ ಸುನೀಲ್ ಕುಮಾರ್ ಆಶಯ
  • ಜಿ.ಎಂ. ಸಿದ್ದೇಶ್ವರ ಜನ್ಮದಿನಾಚರಣೆ ಸಮಾರಂಭ
ದಾವಣಗೆರೆ : ಬಿಜೆಪಿಯ ನಾಯಕರು, ಕಾರ್ಯಕರ್ತರೆಲ್ಲ ಒಂದು ಧ್ವನಿಯಾಗಿ ಕೆಲಸ ಮಾಡುವ ಮೂಲಕ ರಾಜ್ಯದಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರಬೇಕಿದೆ ಎಂದು ಮಾಜಿ ಸಚಿವ, ಕಾರ್ಕಳ ಶಾಸಕ ಸುನೀಲ್ ಕುಮಾರ್ ಹೇಳಿದರು.
ಡಾ. ಜಿ.ಎಂ. ಸಿದ್ದೇಶ್ವರ ಅಭಿಮಾನಿ ಬಳಗದಿಂದ ನಗರದ ಅಭಿನವ ರೇಣುಕ ಮಂದಿರದಲ್ಲಿ ಶನಿವಾರ ಆಯೋಜಿಸಿದ್ದ, ಕೇಂದ್ರದ ಮಾಜಿ ಸಚಿವ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಅವರ 74ನೇ ಜನ್ಮದಿನ ಸಮಾರಂಭದಲ್ಲಿ ಮಾತನಾಡಿದರು.
ಈ ಹಿಂದೆ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದ್ದರ ಪರಿಣಾಮವಾಗಿ ಪಕ್ಷ ಅಧಿಕಾರಕ್ಕೆ ಬಂದಿತ್ತು. ರಾಜಕಾರಣದಲ್ಲಿ ಅಭಿಪ್ರಾಯ ಭೇದ ಬರುವುದು ಸಹಜ, ಅದನ್ನೆಲ್ಲ ಸರಿಪಡಿಸಿಕೊಂಡು ಹೆಜ್ಜೆ ಹಾಕಿದರೆ ಗುರಿ ತಲುಪುವುದು ನಿಶ್ಚಿತ ಎಂದು ಅಭಿಪ್ರಾಯಪಟ್ಟರು.
ಬಿಜೆಪಿ ಹಿಂದುತ್ವ, ರಾಷ್ಟ್ರೀಯತೆ, ಜನಪರ, ರೈತಪರ, ಹಿಂದುಳಿದವರ, ದಲಿತರ ಪರವಾದ ವಿಚಾರಧಾರೆಯೊಂದಿಗೆ ಕೆಲಸ ಮಾಡುತ್ತ ಬಂದಿದೆ. ಕಾಲ ಕಾಲಕ್ಕೆ ಅನೇಕರು ಅದರ ನೇತೃತ್ವ ವಹಿಸಿದ್ದಾರೆ. ಇಂಥ ವಿಚಾರಧಾರೆ ಹೊಂದಿರುವ ಕಾರ್ಯಕರ್ತರು ಹೆಚ್ಚಾಗಬೇಕು. ಸಿದ್ದೇಶ್ವರ ಅಂಥವರ ನೇತೃತ್ವ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಜಿ.ಎಂ. ಸಿದ್ದೇಶ್ವರ ಅವರ ಕೈ ಬಲಪಡಿಸಬೇಕು. ಅವರಿಗೆ ‘ಭೀಮಬಲ’ ದೊರೆತರೆ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಸಿದ್ದೇಶ್ವರ ಅವರ 76ನೇ ಜನ್ಮದಿನವನ್ನು ಬಿಜೆಪಿ ಆಡಳಿತದಲ್ಲಿರುವಾಗಲೇ ಆಚರಿಸೋಣ ಎಂದರು.
ಬಿಜೆಪಿಯ ಮತ್ತು ದಾವಣಗೆರೆ ಜಿಲ್ಲೆಯ ಬೆಆಳವಣಿಗೆಯಲ್ಲಿ ಸಿದ್ದೇಶ್ವರ ಅವರ ಪಾತ್ರ ದೊಡ್ಡದು. ಅವರು ಪಕ್ಷದಲ್ಲಿ ಹಿರಿಯಣ್ಣನಾಗಿ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಾಗಲೆಲ್ಲ ಸಿದ್ದೇಶ್ವರ ಅವರ ಪಾತ್ರವೂ ಇತ್ತು ಎಂದು ತಿಳಿಸಿದರು.
ಹರಿಹರ ಶಾಸಕ ಬಿ.ಪಿ. ಹರೀಶ್ ಮಾತನಾಡಿ, ಸಿದ್ದೇಶ್ವರ ಅವರು ಮತ್ತೆ ಸಂಸದರಾಗಿ, ಕೇಂದ್ರ ಸಚಿವರಾಗಲಿ ಎಂದು ಆಶಿಸಿದರು.
ಜಗಳೂರು ಮಾಜಿ ಶಾಸಕ ಎಸ್.ವಿ. ರಾಮಚಂದ್ರ ಮಾತನಾಡಿ, ನಮ್ಮ ಕ್ಷೇತ್ರಕ್ಕೆ 3500 ಕೋಟಿ ರೂ. ತಂದಿದ್ದು, ಭದ್ರಾ ಮೇಲ್ದಂಡೆ ಯೋಜನೆ, ಕೆರೆಗಳನ್ನು ತುಂಬಿಸುವ ಯೋಜನೆ ಎಲ್ಲದರ ಹಿಂದೆ ಸಿದ್ದೇಶ್ವರ ಅವರ ಕೊಡುಗೆ ಇದೆ ಎಂದು ಹೇಳಿದರು.
ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್ ಮಾತನಾಡಿ, ಹಿರಿಯರು ಪಕ್ಷವನ್ನು ಕಟ್ಟಿ ಹೋಗಿದ್ದಾರೆ. ನಮ್ಮಲ್ಲಿರುವ ವ್ಯತ್ಯಾಸಗಳನ್ನು ಮರೆತು ಗತ ವೈಭವ ಮರುಕಳಿಸುವಂತೆ ಮಾಡೋಣ ಎಂದರು.
ದೊಗ್ಗಳ್ಳಿ ವೀರೇಶ್ ಸ್ವಾಗತಿಸಿದರು, ವೀರೇಶ್ ಹನಗವಾಡಿ ವಂದಿಸಿದರು.

ಒಂದಾದರೆ ಬೇರೆಯವರಿಗೆ ಜಾಗವಿಲ್ಲ

ದಾವಣಗೆರೆ ಜಿಲ್ಲೆಯಲ್ಲಿ ಬಿಜೆಪಿಯ ಎಲ್ಲರೂ ಒಂದಾದರೆ ಬೇರೆ ಪಕ್ಷಗಳಿಗೆ ಇಲ್ಲಿ ಜಾಗವಿರುವುದಿಲ್ಲ. ನಾವು ಒಂದಾಗಿಲ್ಲ ಎಂಬ ಕಾರಣದಿಂದಲೇ ಬೇರೆಯವರು ಇಲ್ಲಿ ಕೇಕೆ ಹಾಕುತ್ತಿದ್ದಾರೆ ಎಂದು ವಿಧಾನ ಪರಿಷತ್ ವಿಪಕ್ಷ ಮುಖ್ಯ ಸಚೇತಕ ಎನ್. ರವಿಕುಮಾರ್ ಹೇಳಿದರು.
ರಾಜ್ಯದಲ್ಲಿ ಕಾರ್ಯಕರ್ತರು ಚೆನ್ನಾಗಿದ್ದಾರೆ, ನಾವೆಲ್ಲ ಒಗ್ಗಟ್ಟಾಗಬೇಕಿದೆ. ರಾಜ್ಯದಲ್ಲಿ ಪಕ್ಷದ ಸ್ಥಿತಿ ಸುಧಾರಿಸಬೇಕು. ಮತ್ತೆ ನಾವು ಅಧಿಕಾರಕ್ಕೆ ಬರಬೇಕು ಎಂದು ಆಶಿಸಿದರು.
ಎಲ್.ಕೆ. ಆಡ್ವಾಣಿ-ಅಟಲ್ ಬಿಹಾರಿ ವಾಜಪೇಯಿ ಅವರು ದೇಶದಲ್ಲಿ ಬಿಜೆಪಿಯನ್ನು ಬೆಳೆಸಿದಂತೆ, ರಾಜ್ಯದಲ್ಲಿ ಪಕ್ಷದ ಬೆಳವಣಿಗೆಯಲ್ಲಿ ಸಿದ್ದೇಶ್ವರ ಅವರ ಪಾತ್ರವೂ ಇದೆ. 2008ರಲ್ಲಿ ಬಿ.ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಪಕ್ಷ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಅವರು ಮಹತ್ವದ ಕೊಡುಗೆ ನೀಡಿದರು ಎಂದು ತಿಳಿಸಿದರು.
ಸಿದ್ದೇಶ್ವರ ಅವರ ಪ್ರಯತ್ನದಿಂದ ದಾವಣಗೆರೆಗೆ ಸ್ಮಾರ್ಟ್‌ಸಿಟಿ ಯೋಜನೆ ದೊರಕಿತು. ಕಾಂಗ್ರೆಸ್‌ನವರು ತಮ್ಮಿಂದ ಆಯಿತು ಎಂದು ಹೇಳಿಕೊಳ್ಳುತ್ತಾರೆ. ಆದರೆ ಕೇಂದ್ರದಲ್ಲಿರುವುದು ನರೇಂದ್ರ ಮೋದಿ ಅವರ ಸರ್ಕಾರ ಎಂದು ಸೂಚ್ಯವಾಗಿ ಹೇಳಿದರು.

ಸಿಆರ್‌ಸಿ ಕೇಂದ್ರ ತಂದ ತೃಪ್ತಿ

ಅಂಗವಿಕಲರ ಸಮಗ್ರ ಪುನರ್ವಸತಿ ಉದ್ದೇಶದ ಸಿಆರ್‌ಸಿ ಕೇಂದ್ರವನ್ನು ದಾವಣಗೆರೆಗೆ ತಂದಿದ್ದು ನನಗೆ ತೃಪ್ತಿ ಕೊಟ್ಟಿರುವ ಕೆಲಸ ಎಂದು, ಕೇಂದ್ರದ ಮಾಜಿ ಸಚಿವ, ಮಾಜಿ ಸಂಸದ ಜಿ.ಎಂ. ಸಿದ್ದೇಶ್ವರ ಹೇಳಿದರು.
ಈ ಕೇಂದ್ರಕ್ಕೆ ಕರ್ನಾಟಕ ಮತ್ತು ಗೋವಾ ರಾಜ್ಯಗಳ ವ್ಯಾಪ್ತಿ ಇದೆ. ಬೇರೆ ಜಿಲ್ಲೆಯ ಪಾಲಾಗಲಿದ್ದ ಈ ಕೇಂದ್ರವನ್ನು ಹಠದಿಂದ ಇಲ್ಲಿಗೆ ತಂದೆ.58 ಕೋಟಿ ರೂ.ಗಳ ಈ ಯೋಜನೆ ಇದಾಗಿದ್ದು 25 ಕೋಟಿ ರೂ. ಬಿಡುಗಡೆಯಾಯಿತು. ವಡ್ಡಿನಹಳ್ಳಿ ಬಳಿ 7 ಎಕರೆ ಜಾಗದಲ್ಲಿ ಕಟ್ಟಡ ನಿರ್ಮಿಸಲಾಗಿದೆ ಎಂದು ತಿಳಿಸಿದರು.
ಇನ್ನುಳಿದ ಹಣದಲ್ಲಿ ಇತರ ಅಭಿವೃದ್ಧಿ ಕೆಲಸಗಳಾಗಬೇಕಿದೆ. ಈಗಿನ ಸಂಸದರು ಆ ಕೆಲಸವನ್ನು ಮುಂದುವರಿಸಿದರೆ ಸಂತೋಷ. ನನ್ನಿಂದ ಏನಾದರೂ ಆಗಬೇಕಿದ್ದರೆ ಮಾಡಿಸಿಕೊಡಲು ಸಿದ್ಧ ಎಂದು ಹೇಳಿದರು.
ಅಂಗವಿಕಲ ಮಕ್ಕಳು ದೇವರ ಮಕ್ಕಳಿದ್ದಂತೆ. ಅವರ ಸೇವೆ ಮಾಡುವುದು ಪುಣ್ಯದ ಕೆಲಸ. 2017ರಲ್ಲಿ ಅಂಗವಿಕಲರಿಗೆ ಅಗತ್ಯ ಸಲಕರಣೆಗಳನ್ನು ನೀಡಿದ್ದು ಕೂಡ ಸಾರ್ಥಕ ಭಾವವನ್ನು ತಂದಿದೆ ಎಂದರು.
"

ಜಿ.ಎಂ. ಸಿದ್ದೇಶ್ವರ ಅವರು ಕೇಂದ್ರದಿಂದ ಸಾವಿರಾರು ಕೋಟಿ ರೂ. ಅನುದಾನ ತಂದು ದಾವಣಗೆರೆ ಜಿಲ್ಲೆಯನ್ನು ಅಭಿವೃದ್ಧಿಯಲ್ಲಿ ನಂ. 1 ಸ್ಥಾನಕ್ಕೆ ತೆಗೆದುಕೊಂಡು ಹೋದರು. ಅನೇಕರಿಗೆ ರಾಜಕೀಯ ಮತ್ತು ಆರ್ಥಿಕವಾಗಿ ಶಕ್ತಿ ತುಂಬಿದ್ದಾರೆ.

— ಎಂ. ಚಂದ್ರಪ್ಪ, ಹೊಳಲ್ಕೆರೆ ಶಾಸಕ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net