ಅಂಚೆ ಚೀಟಿಗಳ ಸರದಾರ ದಾವಣಗೆರೆಯ ನಂದಕಿಶೋರ

ದಾವಣಗೆರೆ ಪೋರ ಎಚ್.ಎಸ್. ನಂದಕಿಶೋರ ಸಂಗ್ರಹಿಸಿದ ಅಂಚೆಚೀಟಿ, ಕವರ್‌ಗಳ ಲೋಕ
ದಾವಣಗೆರೆ ಪೋರ ಎಚ್.ಎಸ್. ನಂದಕಿಶೋರ ಸಂಗ್ರಹಿಸಿದ ಅಂಚೆಚೀಟಿ, ಕವರ್‌ಗಳ ಲೋಕ
Published on

ಪ್ರಮುಖ ಮುಖ್ಯಾಂಶಗಳು

  • ದೀನ್ ದಯಾಳ್ ಸ್ಪರ್ಶ ಯೋಜನೆಯ ಸ್ಕಾಲರ್‌ಶಿಪ್ ಪಡೆದಿದ್ದ ವಿದ್ಯಾರ್ಥಿ
  • ಅಂತರ್ಜಾಲದಲ್ಲಿ ವಿದೇಶೀಯರ ಸ್ನೇಹ ಸಂಪಾದಿಸಿ ಸ್ಟಾೃಂಪ್ ಸಂಗ್ರಹ
  • ವಿಶೇಷಾಸಕ್ತಿಯ ಖಗೋಳಶಾಸ್ತ್ರದಲ್ಲಿ ಭೌತಶಾಸ್ತ್ರಜ್ಞನಾಗುವ ಮಹದಾಸೆ
ದಾವಣಗೆರೆ: ಆರರಿಂದ 9ನೇ ತರಗತಿ ಮಕ್ಕಳಿಗಾಗಿ ವಿದ್ಯಾರ್ಥಿವೇತನಕ್ಕೆಂದೇ ಭಾರತೀಯ ಅಂಚೆ ಇಲಾಖೆಯು ಪ್ರತಿವರ್ಷವೂ ದೀನ್ ದಯಾಳ್ ಸ್ಪರ್ಶ ಯೋಜನೆಯಡಿ ನಡೆಸುವ ಪರೀಕ್ಷೆಯೇ ಅನೇಕ ಪಾಲಕರಿಗಿನ್ನೂ ಅಪರಿಚಿತ. ಈ ಪರೀಕ್ಷೆಯನ್ನು ಎದುರಿಸಿ, ಕಳೆದ ವರ್ಷ ಆಯ್ಕೆಯಾಗಿದ್ದವರು ರಾಜ್ಯದ 40 ಮಕ್ಕಳು. ಇದರಲ್ಲಿ ದಾವಣಗೆರೆಯಿಂದ ಆಯ್ಕೆಯಾಗಿದ್ದ ಏಕೈಕ ವಿದ್ಯಾರ್ಥಿ ಎಚ್.ಎಸ್. ನಂದಕಿಶೋರ ಸ್ವತಃ ಅಂಚೆ ಚೀಟಿ, ಕವರ್‌ಗಳ ಸಂಗ್ರಹದಲ್ಲಿ ಛಾಪು ಮೂಡಿಸಿದ್ದಾನೆ.
ಜಿಲ್ಲಾವಾರು ಆಸಕ್ತ ಮಕ್ಕಳು, ಅಂಚೆಚೀಟಿಗಳ ಸಂಗ್ರಹಣಾ ಠೇವಣಿ ಖಾತೆ (200 ರೂ.) ಮಾಡಿಸಿ ಪರೀಕ್ಷೆಗೆ ಅರ್ಜಿ ಸಲ್ಲಿಸಬೇಕು. ಅಂಚೆ ಚೀಟಿ, ಪ್ರಚಲಿತ ವಿದ್ಯಮಾನ, ಕ್ರೀಡೆ, ವಿಜ್ಞಾನ, ಸಾಮಾನ್ಯ ಜ್ಞಾನ, ಪಠ್ಯಾಧಾರಿತ 50 ಅಂಕಗಳಿಗೆ ಬಹುಆಯ್ಕೆಯ ಪ್ರಶ್ನೆಗಳನ್ನು ನೀಡಲಾಗುತ್ತದೆ.
ಇಲ್ಲಿ ಆಯ್ಕೆಯಾದವರಿಗೆ ಇಲಾಖೆಯು ನಿಗದಿಪಡಿಸಿದ ಕೆಲವು ವಿಷಯಗಳಡಿ ಒಂದು ಪ್ರಾಜೆಕ್ಟನ್ನು ಅಂಚೆ ಮೂಲಕ ಸಲ್ಲಿಸಬೇಕು. ಪ್ರತಿ ತರಗತಿಗೆ 10 ರಂತೆ 40 ಯೋಜನೆ (ವಿದ್ಯಾರ್ಥಿ)ಗಳನ್ನು ಆಯ್ಕೆ ಮಾಡಲಾಗುತ್ತದೆ. ಪ್ರತಿ ವಿದ್ಯಾರ್ಥಿಗೆ (ತಿಂಗಳಿಗೆ 500 ರೂ.) ಒಟ್ಟು 6 ಸಾವಿರ ರೂ.ಗಳ ವಿದ್ಯಾರ್ಥಿವೇತನ ಅವರ ಅಂಚೆ ಖಾತೆಗೆ ಜಮೆಯಾಗಲಿದೆ.
ದಾವಣಗೆರೆ ಜಿಲ್ಲೆಯಿಂದ ಕಳೆದ ಬಾರಿ 400ಕ್ಕೂ ಹೆಚ್ಚು ಜನ ಪರೀಕ್ಷೆ ಬರೆದಿದ್ದು ಆರನೇ ತರಗತಿ ವಿಭಾಗದಿಂದ ದಾವಣಗೆರೆಯಿಂದ ಏಕೈಕ ವಿದ್ಯಾರ್ಥಿ ನಂದಕಿಶೋರ ಆಯ್ಕೆಯಾಗಿದ್ದ. ಈ ಬಾರಿಯೂ ಪರೀಕ್ಷೆ (ಅ. 30) ಬರೆದಿದ್ದು ಫಲಿತಾಂಶ ನಿರೀಕ್ಷೆಯಲ್ಲಿದ್ದಾನೆ. ಶ್ರೀಮತಿ ಶ್ರೀದೇವಿ ತಿಮ್ಮಾರೆಡ್ಡಿ ಇಂಟರ್‌ನ್ಯಾಷನಲ್ ಶಾಲೆಯಲ್ಲಿ ಏಳನೇ ತರಗತಿ ಓದುತ್ತಿದ್ದಾನೆ.
ಹರಿಹರ ತಾಲೂಕು ಬಿಳಸನೂರಲ್ಲಿ ಪಶು ವೈದ್ಯಕೀಯ ಪರೀಕ್ಷಕರಾಗಿರುವ ತಂದೆ ಎಚ್.ಎಸ್. ಸತೀಶ್‌ಬಾಬು, ತಾಯಿ ಎನ್.ಕೆ. ಪ್ರತಿಭಾ ಮಗನ ಹವ್ಯಾಸದ ಬೆನ್ನಿಗಿದ್ದಾರೆ. ದೇಶೀಯ ನಾಣ್ಯಗಳನ್ನು ಸಂಗ್ರಹಿಸುತ್ತಿದ್ದ ತಂದೆಯ ಖಯಾಲಿ ಮಗನಲ್ಲೂ ಅಂಕುರಿಸಿತು.
2 ಸಾವಿರ ಅಂಚೆ ಚೀಟಿ
ಐದನೇ ತರಗತಿಯಲ್ಲಿದ್ದಾಗಲೇ ಈ ಹುಚ್ಚು ಬೆಳೆಸಿಕೊಂಡ ನಂದಕಿಶೋರ, ನಂತರದಲ್ಲಿ ಅಂಚೆ ಚೀಟಿ, ಕವರ್‌ಗಳತ್ತಲೂ ಕಣ್ಣು ಹಾಕಿದ. ಗಣಿತ-ವಿಜ್ಞಾನ ಪ್ರದರ್ಶನಗಳಲ್ಲಿಯೂ ಬಹುಮಾನ ಗಿಟ್ಟಿಸುತ್ತಿದ್ದಾನೆ.ಈತ ಸಂಗ್ರಹಿಸಿದ ಅಂಚೆ ಚೀಟಿಗಳ ಸಂಖ್ಯೆ 2 ಸಾವಿರ ದಾಟಿದೆ. ತಲಾ 200 ಮಿನಿಯೇಚರ್ ಶೀಟ್‌ಗಳು, ಅಂಚೆ ಕಾರ್ಡುಗಳು ಈತನ ಬಳಿ ಇವೆ. 70 ವಿದೇಶಗಳ ನಾಣ್ಯ, ಕರೆನ್ಸಿ ನೋಟುಗಳಿವೆ. ಒಟ್ಟಾರೆ ಅಮೆರಿಕ, ಕೆನಡಾ, ಬೆಲ್ಜಿಯಂ, ಮಾರ್ಶಲ್ ದ್ವೀಪ, ಇಂಗ್ಲೆಂಡ್, ದಕ್ಷಿಣ ಆಫ್ರಿಕಾ, ಮಲೇಷಿಯಾ ಸೇರಿ ಸುಮಾರು 130 ದೇಶಗಳಿಗೆ ಸಂಬಂಧಿತ ಸಂಗ್ರಹಗಳಿವೆ.
ಖಗೋಳ ಮಾಹಿತಿ ಕಣ

ಮೊಬೈಲ್‌ನಲ್ಲಿ ನಿತ್ಯ 3-4 ತಾಸು ಖಗೋಳ ಸೇರಿ ಪ್ರಚಲಿತ ವಿದ್ಯಮಾನಗಳ ಬಗ್ಗೆ ತಿಳಿದುಕೊಳ್ಳುತ್ತೇನೆ. ವಿದೇಶೀ ಸ್ನೇಹಿತರಿಗೆ ಅಂಚೆಚೀಟಿ, ಕವರ್‌ಗಳನ್ನು ಕಳಿಸುವಂತೆ ಕೇಳುತ್ತೇನೆ. ಇಲ್ಲಿನ ಸ್ಟಾೃಂಪ್‌ಗಳನ್ನು ಅವರಿಗೆ ಕಳುಹಿಸುತ್ತೇನೆ. ಎಚ್.ಎಸ್.ನಂದಕಿಶೋರ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net