ಹೊನ್ನಾಳಿ: ಪಂಚ ಗ್ಯಾರಂಟಿಗಳನ್ನು ಮುಂದುವರಿಸಲು ಸರ್ಕಾರದಲ್ಲಿ ಹಣವಿಲ್ಲ. ಈ ಕಾರಣದಿಂದ ಗೃಹಲಕ್ಷ್ಮೀ ಯೋಜನೆಗೆ ಮತ್ತೆ ಅರ್ಜಿ ಸಲ್ಲಿಸಿ ಎಂದು ಹೇಳುತ್ತಿದೆ. ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಲೇವಡಿ ಮಾಡಿದರು. Guarantee
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಬಡವರಿಗಾಗಿ ಅನುಷ್ಠಾನಗೊಂಡ ಯೋಜನೆಗಳು ಉಳ್ಳವರ ಪಾಲಾಗುತ್ತಿದೆ. ಪರಿಷ್ಕರಿಸದೇ ಯೋಜನೆ ಅನುಷ್ಠಾನ ಮಾಡಿದ್ದರಿಂದ ಸರ್ಕಾರ ದಿವಾಳಿಯಾಗಿದ್ದು ಈಗ ಯೋಜನೆಗಳ ಪರಿಷ್ಕರಣೆಗೆ ಹೊರಟಿರುವುದು ಹಾಸ್ಯಾಸ್ಪದ ಎಂದು ಸರ್ಕಾರದ ನಡೆಯನ್ನು ಟೀಕಿಸಿದರು.
ಸಾಮಾಜಿಕ ಭದ್ರತೆಯಡಿ ನೀಡುತ್ತಿದ್ದ ಸಂಧ್ಯಾಸುರಕ್ಷಾ ಯೋಜನೆಯಲ್ಲೂ ಪಿಂಚಣಿ ನೀಡುತ್ತಿಲ್ಲ. ಗ್ರಾಮೀಣ ಭಾಗದ ಜನ ಕರೆ ಮಾಡಿ ತಮ್ಮ ಅಳಲು ತೋಡಿಕೊಳ್ಳುತ್ತಿದ್ದಾರೆ. ಗ್ಯಾರಂಟಿ ಯೋಜನೆ ಕೇಳಿದವರಾರು? ಚುನಾವಣೆ ಗೆಲ್ಲಲು ಯೋಜನೆ ಜಾರಿ ಮಾಡಿ ಈಗ ಪರಿಷ್ಕರಣೆ ಎಂದು ಹೇಳುತ್ತಿದ್ದಿರಿ. ವಯೋವೃದ್ಧರಿಗೆ ಪಿಂಚಣಿ ಸಕಾಲಕ್ಕೆ ದೊರೆಯುತ್ತಿಲ್ಲ. ಹೀಗಾದರೆ ಜನ ಸಾಮಾನ್ಯರ ಕಥೆ ಏನು ಎಂದು ಪ್ರಶ್ನಿಸಿದರು. ಓಪಿಎಸ್ ಜಾರಿ ಮಾಡುವುದಾಗಿ ನೀಡಿದ ಭರವಸೆ ಅಧಿಕಾರಕ್ಕೆ ಬಂದು 3 ವರ್ಷ ಕಳೆದರೂ ಈಡೇರಿಸಿಲ್ಲ, ಸರ್ಕಾರ ಎಚ್ಚೆತ್ತುಕೊಂಡು ಸರ್ಕಾರಿ ನೌಕರರಿಗೆ ಓಪಿಎಸ್ ಜಾರಿ ಮಾಡುವಂತೆ ಸಿಎಂಗೆ ಒತ್ತಾಯಿಸುವುದಾಗಿ ತಿಳಿಸಿದರು.
ಅಧಿಕಾರಿಗಳಿಗೆ ಎಚ್ಚರಿಕೆ: ಮೃತಪಟ್ಟವರು, ದಾಖಲೆಯಲ್ಲಿ ದೋಷ ಅಥವಾ ವಲಸೆ ಬಂದವರ ಹೆಸರನ್ನುಮತದಾರರ ಪಟ್ಟಿಯಲ್ಲಿ ಡಿಲಿಟ್ ಮಾಡಬೇಕು. ಹೊರತಾಗಿ ರಾಜಕಾರಣಿಗಳ ಮಾತಿಗೆ ಮಣೆ ಹಾಕಿ ಸರಿಯಾದ ರೀತಿ ಕೆಲಸ ಮಾಡದ ಅಧಿಕಾರಿಗಳ ವಿರುದ್ಧ ಆಯೋಗಕ್ಕೆ ದೂರು ಸಲ್ಲಿಸಲಾಗುವುದು ಎಂದು ಎಚ್ಚರಿಸಿದರು.
ಕೃತಕ ಅಭಾವ ಸೃಷ್ಟಿ: ರಸಗೊಬ್ಬರಗಳ ಕೃತಕ ಅಭಾವ ಸೃಷ್ಟಿಸಿ ಬೆಲೆ ಏರಿಕೆ ಮಾಡಿದ್ದಾರೆ. ಇದರಿಂದ ರೈತರಿಗೆ ಅಪಾರ ಸಂಕಷ್ಟ ಎದುರಾಗುತ್ತಿದೆ. ರಾಜ್ಯ ಸರ್ಕಾರ ಕೇಂದ್ರದ ಕಡೆ ಬೊಟ್ಟು ಮಾಡಿ ತೋರಿಸುವುದನ್ನು ಬಿಡಬೇಕು. ಸಕಾಲಕ್ಕೆ ರೈತರಿಗೆ ಗೊಬ್ಬರ ದೊರೆಯದೇ ಹೋದರೆ ಅವಳಿ ತಾಲೂಕಿನಲ್ಲಿ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಇಂದು ವಿಷ್ಣು ಸಹಸ್ರನಾಮ ಯಾಗ: ಪ್ರಧಾನಿ ಮೋದಿ ಸುದೀರ್ಘ ಅವಧಿಯ ಅಧಿಕಾರ ನಡೆಸಿದ ಹಿನ್ನೆಲೆ ಹಾಗೂ ಲೋಕಕಲ್ಯಾಣಕ್ಕಾಗಿ ಹೊನ್ನಾಳಿಯ ರಾಘವೇಂದ್ರಸ್ವಾಮಿ ಮಠದಲ್ಲಿ ಮಂಗಳವಾರ ವಿಷ್ಣು ಸಹಸ್ರನಾಮ ಯಾಗವನ್ನು ಹಮ್ಮಿಕೊಳ್ಳಲಾಗಿದೆ. ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗಿಯಾಗುವಂತೆ ಮನವಿ ಮಾಡಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಅರಕೆರೆ ನಾಗರಾಜ್, ದೊಡ್ಡೇರಿ ರಾಜಣ್ಣ, ಸುರೇಶ್ ಜೆ.ಕೆ. ನೆಲಹೊನ್ನೆ ಮಂಜುನಾಥ್, ರಂಗನಾಥ್, ಎಸ್.ಎಸ್. ಬೀರಪ್ಪ, ಮಹೇಶ್ ಹುಡೇದ್, ಎಂ.ಎಸ್. ಪಾಲಾಕ್ಷಪ್ಪ ಇತರರಿದ್ದರು.