ದೇಗುಲಗಳನ್ನು ಸಾಮಾಜಿಕ ಕೇಂದ್ರವಾಗಿಸುವ ಗುರಿ Training of Priests
ಹೊನ್ನಾಳಿ ಪಟ್ಟಣದ ಹಿರೇಕಲ್ಮಠದಲ್ಲಿ ಶನಿವಾರ ಆಯೋಜಿಸಿದ್ದ ಅರ್ಚಕರ ತರಬೇತಿ ಶಿಬಿರವನ್ನು ದೇವಾಲಯ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಮತ್ತು ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು. ಟಿ. ಶ್ರೀನಿವಾಸ್, ಮಾರುತಿ, ವಿದ್ವಾನ್ ಬೆನಕಯ್ಯ ಶಾಸ್ತ್ರಿ ಇದ್ದರುTraining of Priests
ಹೊನ್ನಾಳಿ:ಅರ್ಚಕರ ಜೀವನ ಪದ್ಧತಿಯಲ್ಲಿ ಬದಲಾವಣೆ ಮತ್ತು ದೇಗುಲಗಳನ್ನು ಸಾಮಾಜಿಕ ಕೇಂದ್ರಗಳನ್ನಾಗಿ ಮಾಡುವುದೇ ಅರ್ಚಕರ ತರಬೇತಿಯ ಉದ್ದೇಶ ಎಂದು ದೇವಾಲಯ ಸಂವರ್ಧನ ಸಮಿತಿ ರಾಜ್ಯ ಸಂಯೋಜಕ ಮನೋಹರ್ ಮಠದ್ ಹೇಳಿದರು.
ಪಟ್ಟಣದ ಹಿರೇಕಲ್ಮಠದಲ್ಲಿ ಶನಿವಾರ ದೇವಾಲಯ ಸಂವರ್ಧನ ಸಮಿತಿ, ಹೊನ್ನಾಳಿ ಹಿರೇಕಲ್ಮಠ ಹಾಗೂ ಚಂದ್ರಗಿರಿ ಸೇವಾ ಪ್ರತಿಷ್ಠಾನ ವತಿಯಿಂದ ಆಯೋಜಿಸಿದ್ದ ಅರ್ಚಕರ ಆರು ದಿನಗಳ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.
ದೇವಸ್ಥಾನಗಳು ದೊಡ್ಡ ಮಟ್ಟದಲ್ಲಿ ಪರಿವರ್ತನೆಯಾಗಬೇಕು ಮತ್ತು ಕೇವಲ ಧಾರ್ಮಿಕ ಕೇಂದ್ರಗಳಾಗಬಾರದು. ಜತೆಗೆ ಸಾಮಾಜಿಕ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕೇಂದ್ರಗಳಾಗಬೇಕು. ಹಸಿದವರಿಗೆ ಹಸಿವು ನೀಗಿಸುವ, ಸೇವೆ ಬಯಸಿದವರಿಗೆ ಸೇವೆ ನೀಡುವ, ಜೀವನದ ಜಂಜಾಟದಲ್ಲಿ ಸಿಲುಕಿದವರಿಗೆ ನೆಮ್ಮದಿ ನೀಡುವ ಕೇಂದ್ರವಾಗಬೇಕು. ಈ ದೂರದೃಷ್ಟಿಯಿಂದ ಸಂವರ್ಧನ ಸಮಿತಿ ರಾಜ್ಯದುದ್ದಕ್ಕೂ ಕೆಲಸ ಮಾಡುತ್ತಿದೆ. ದೇಗುಲಗಳಲ್ಲಿ ಈ ಎಲ್ಲ ಸೇವೆ ಸಿಗಬೇಕಾದರೆ ಮೊದಲು ಅರ್ಚಕರು ಪೂಜಾ ಪದ್ಧತಿ, ನಡೆನುಡಿ ಸೇರಿ ಎಲ್ಲವನ್ನು ಕಲಿತಿರಬೇಕು ಎನ್ನುವ ಕಾರಣ ತರಬೇತಿ ಆಯೋಜಿಸಲಾಗಿದೆ ಎಂದರು.
ಈಗಾಗಲೇ 24 ದೇವಸ್ಥಾನಗಳ ಕಮಿಟಿಯವರನ್ನು ಒಂದೆಡೆ ಸೇರಿಸಿ ದೇವಾಲಯಗಳು ಹೇಗಿರಬೇಕು. ಭಕ್ತರು ತಂಡೋಪ ತಂಡವಾಗಿ ದೇವಸ್ಥಾನಕ್ಕೆ ಬರಬೇಕಾದರೆ ಸಮಿತಿಗಳ ಜವಾಬ್ದಾರಿಗಳೇನು ಎಂದು ತಿಳಿಸಿದ್ದೇವೆ. ಅಂತಹ ದೇವಸ್ಥಾನಗಳ ಜತೆಗಿನ ಸಂಬಂಧವನ್ನು ಭಕ್ತರು ಕೊನೆಯವರೆಗೂ ಮುಂದುವರಿಸಿಕೊಂಡು ಹೋಗುತ್ತಾರೆ. ಅದಕ್ಕೆ ಮೊದಲು ನಾವು ದೇವಸ್ಥಾನದಲ್ಲಿ ನಡೆಯುವ ಆಚರಣೆಗಳು, ಸಂಪ್ರದಾಯಗಳನ್ನು ತಪ್ಪದೆ ಪಾಲಿಸಬೇಕು ಎಂದು ಹೇಳಿದರು.
ಹಿರೇಕಲ್ಮಠದ ಡಾ. ಒಡೆಯರ್ ಚನ್ನಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಅರ್ಚಕರಿಗೆ ತರಬೇತಿ ನೀಡುವುದು ಅತ್ಯವಶ್ಯಕ. ಒಂದು ವಾರ ಶ್ರೀಮಠದಲ್ಲಿ ತರಬೇತಿಗೆ ಅವಕಾಶ ಮಾಡಿಕೊಡಿ ಎಂದು ಕೇಳಿದಾಗ ನನಗಾದ ಸಂತಸ ಅಷ್ಟಿಸ್ಟಲ್ಲ. ಭಕ್ತನಲ್ಲಿ ದೇವರ ನಂಬಿಕೆ ಇರುವಿಕೆಯನ್ನು ಅರ್ಚಕ ಸಾದರಪಡಿಸಬಲ್ಲ. ಅಂತಹ ಶಕ್ತಿ ಅರ್ಚಕರ ನಡೆನುಡಿಯಲ್ಲಿ ಇರುತ್ತದೆ ಎಂದರು.
ಅರ್ಚಕಸ್ಯಃ ಪ್ರಭಾವೇನ ಶಿಲಾ ಭವತಿ ಶಂಕರಃ ಎಂಬಂತೆ ಅರ್ಚಕರು ಕಾಟಾಚಾರದ ಪೂಜೆ ಮಾಡಿದರೆ ಅಂಥ ಪೂಜೆ ಭಕ್ತರ ಮೇಲೆ ಪರಿಣಾಮ ಬೀರದು. ನಮ್ಮ ಪ್ರತಿಯೊಂದು ಪೂಜೆಯು ನೇರ ಭಗವಂತನಿಗೆ ಸ್ಪರ್ಶ ಆಗಬೇಕು. ಆಗ ಮಾತ್ರ ಶಿಲೆಯೂ ಶಂಕರ ಆಗುತ್ತಾನೆ ಎಂದು ತಿಳಿಸಿದರು.
ಆರ್‌ಎಸ್‌ಎಸ್‌ನ ಜಿಲ್ಲಾ ಕಾರ್ಯವಾಹ ಮಾರುತಿ, ವಿದ್ವಾನ್ ಬೆನಕಯ್ಯ ಶಾಸ್ತ್ರಿ ಉಪಸ್ಥಿತರಿದ್ದರು.
ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ, ಆರ್‌ಎಸ್‌ಎಸ್‌ನ ಅರುಣ್‌ಕುಮಾರ್, ಶ್ರೀನಿವಾಸ್, ಸಂತೋಷ್, ಬಿಜೆಪಿ ತಾಲೂಕಾಧ್ಯಕ್ಷ ಅರಕೆರೆ ನಾಗರಾಜ್, ಎ.ಬಿ. ಹನುಮಂತಪ್ಪ, ಪ್ರವೀಣ್ ರಾಂಪುರ, ಅರ್ಚಕರ ಸಂಘದ ತಾಲೂಕಾಧ್ಯಕ್ಷ ರಾಜು, ಸಂತೋಷ್, ಹನುಮಂತಚಾರ್, ಗಂಗಾಧರ್, ಸುರೇಶ್ ಇತರರು ಇದ್ದರು.