ಬಕ್ಕೇಶ್ವರ ಸ್ವಾಮಿಯ ವಿಜೃಂಭಣೆಯ ರಥೋತ್ಸವ

ದಾವಣಗೆರೆಯ ಚೌಕಿಪೇಟೆಯಲ್ಲಿ ಸೋಮವಾರ, ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ದಾವಣಗೆರೆಯ ಚೌಕಿಪೇಟೆಯಲ್ಲಿ ಸೋಮವಾರ, ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ ರಥೋತ್ಸವ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
Published on

ಪ್ರಮುಖ ಮುಖ್ಯಾಂಶಗಳು

  • ಉತ್ಸವದಲ್ಲಿ ಭಾಗಿಯಾದ ಅಪಾರ ಭಕ್ತರು
  • ಚೌಕಿಪೇಟೆಯಲ್ಲಿ ಕಳೆಗಟ್ಟಿದ ದೇಗುಲ
ದಾವಣಗೆರೆ : ನಗರದ ಚೌಕಿಪೇಟೆಯ ಶ್ರೀ ಗುರು ಶಿವಯೋಗಿ ಬಕ್ಕೇಶ್ವರ ಮಹಾಸ್ವಾಮಿಯ ರಥೋತ್ಸವ ಸೋಮವಾರ ಸಂಜೆ ಅಪಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.
ಬೆಳಗಿನ ಬ್ರಾಹ್ಮಿ ಮುಹೂರ್ತದಲ್ಲಿ ರುದ್ರಾಭಿಷೇಕ, ಈಶ್ವರಲಿಂಗ ಮತ್ತು ಬಕ್ಕೇಶ್ವರ ಸ್ವಾಮಿಯ ಪಾದುಕೆಗೆ ಬಿಲ್ವಾರ್ಚನೆ, ನಂತರ ಅಷ್ಟಾವಧಾನ, ನೈವೇದ್ಯ, ಮಂಗಳಾರತಿ ಮಾಡಲಾಯಿತು.
ಸ್ವಾಮಿಗೆ ವಿಶೇಷ ಹೂವುಗಳಿಂದ ಅಲಂಕಾರ ಮಾಡಲಾಗಿತ್ತು. ಭಕ್ತರು ಹಣ್ಣು, ಕಾಯಿ ಅರ್ಪಿಸಿದರು. ಕೆಲವರು ಹೋಳಿಗೆ, ಕರಿಗಡಬು, ಪಾಯಸ, ಚಿತ್ರಾನ್ನ, ಕೋಸಂಬರಿ, ಪಲ್ಯ, ಅನ್ನ ಎಡೆ ತಂದಿದ್ದರು.
ದೇವಸ್ಥಾನದ ಆವರಣ ಹೂವು ಮತ್ತು ವಿದ್ಯುದ್ದೀಪಗಳಿಂದ ಅಲಂಕೃತವಾಗಿತ್ತು. ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಕ್ಕೆ ಬಂದು ಸ್ವಾಮಿಯ ದರ್ಶನ ಪಡೆದರು. ನೆಂಟರು, ಆಪ್ತರು, ಸ್ನೇಹಿತರೊಂದಿಗೆ ಆಗಮಿಸಿ ರಥೋತ್ಸವದ ಸಂದರ್ಭಕ್ಕೆ ಸಾಕ್ಷಿಯಾದರು. ಅಲ್ಲಲ್ಲಿ ಕೆಲವರು ಮೊಬೈಲ್‌ನಲ್ಲಿ ಸೆಲ್ಫಿ ಪಡೆದುಕೊಳ್ಳುವ ದೃಶ್ಯ ಕಂಡುಬಂದಿತು.
ಸಮಾಳದ ಸದ್ದು ದೇಗುಲದ ಆವರಣವನ್ನು ತುಂಬಿಕೊಂಡಿತ್ತು. ನಂದಿಕೋಲು, ಕೀಲುಕುದುರೆ ಮುಂತಾದ ಕಲಾ ತಂಡಗಳು ಜಾತ್ರೆಯ ಕಳೆಯನ್ನು ಹೆಚ್ಚಿಸಿದ್ದವು.
ಹೆಬ್ಬಾಳು ಮಠದ ಶ್ರೀ ಮಹಾಂತ ರುದ್ರೇಶ್ವರ ಸ್ವಾಮೀಜಿ, ಉದ್ಯಮಿಗಳಾದ ಅಥಣಿ ವೀರಣ್ಣ, ಎಸ್.ಎಸ್. ಗಣೇಶ್, ಸಮರ್ಥ್ ಶಾಮನೂರು, ದೇವರಮನಿ ಶಿವಕುಮಾರ್ ಇತರರು ಪಾಲ್ಗೊಂಡಿದ್ದರು.
ರಥಾರೋಹಣ
ಸಂಜೆ ರಥಾರೋಹಣ ಪೂರ್ವದಲ್ಲಿ ರಥದ ತೇರುಗಡ್ಡೆ ಸುತ್ತ ಹೋಳಿಗೆ, ಅನ್ನದ ಬುತ್ತಿ ಉಂಡೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು. ಮೊದಲಿಗೆ ಪಲ್ಲಕ್ಕಿಯಲ್ಲಿ ಜಯದೇವ ಜಗದ್ಗುರುಗಳ ಭಾವಚಿತ್ರವನ್ನಿಟ್ಟು ದೀವಟಿಗೆ ಸಹಿತ ರಥಕ್ಕೆ ಮೂರು ಸುತ್ತು ಪ್ರದಕ್ಷಿಣೆ ಮಾಡಿ ನಂತರ ಗುರುಗಳ ಭಾವಚಿತ್ರದ ರಥಾರೋಹಣ ಮಾಡಲಾಯಿತು.
ಅದಾದ ನಂತರ ದೇವಸ್ಥಾನದ ಒಳಗಿನಿಂದ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ತಂದು ಮೂರು ಸುತ್ತು ಪ್ರದಕ್ಷಿಣೆ ಹಾಕಿಸಿ ರಥಾರೋಹಣ ಕಾರ್ಯ ನೆರವೇರಿಸಲಾಯಿತು. ಪದ್ಧತಿಯಂತೆ ನಿಶಾನಿ ಹರಾಜು ಮಾಡಲಾಯಿತು.
ಭಕ್ತರು ರಥದ ಮುಂದೆ ತೆಂಗಿನಕಾಯಿ ಒಡೆಯುವ ದೃಶ್ಯ ಕಂಡುಬಂದಿತು. ರಥೋತ್ಸವ ಆರಂಭವಾಗುತ್ತಿದ್ದಂತೆ ರಥದ ಕಳಶಕ್ಕೆ ಭಕ್ತರು ಬಾಳೆಹಣ್ಣು ತೂರುವ ಮೂಲಕ ಭಕ್ತಿಯ ಪ್ರಾರ್ಥನೆ ಸಲ್ಲಿಸಿದರು.
ಬಗೆ ಬಗೆಯ ಹೂವುಗಳಿಂದ ಸುಂದರವಾಗಿ ಅಲಂಕೃತಗೊಂಡಿದ್ದ ನೂತನ ರಥವು ಮೊದಲು ಪೂರ್ವ ದಿಕ್ಕಿನ ಕಡೆಗೆ ಸಾಗಿತು. ನಂತರ ಪಶ್ಚಿಮಾಭಿಮುಖವಾಗಿ ತೆರಳಿ ದೊಡ್ಡಪೇಟೆ ಬದವೇಶ್ವರ ದೇವಸ್ಥಾನದ ಬಳಿಯಿಂದ ಮತ್ತೆ ಬಕ್ಕೇಶ್ವರ ದೇವಸ್ಥಾನಕ್ಕೆ ವಾಪಸಾಯಿತು.
ತೇರು ಸಾಗಿದ ಮಾರ್ಗದಲ್ಲಿ ರಸ್ತೆಗೆ ನೀರು ಹಾಕಿ ಸ್ವಚ್ಛಗೊಳಿಸಲಾಗಿತ್ತು. ರಂಗೋಲಿ ಹಾಕಲಾಗಿತ್ತು. ಭಕ್ತರು ಹಣ್ಣು ಕಾಯಿ ಸಲ್ಲಿಸಿ ಸ್ವಾಮಿಗೆ ಭಕ್ತಿ ಸಮರ್ಪಿಸಿದರು.
‘ದಶಕಗಳ ಹಿಂದಿನ ವರೆಗೂ ಹೆಬ್ಬಾಳು ಮಠದ ಸ್ವಾಮಿಗಳೇ ರಥಾರೋಹಣ ಮಾಡುವ ಪದ್ಧತಿ ಇತ್ತು. ಅದಾದ ನಂತರ ಸ್ವಾಮಿಯ ಉತ್ಸವ ಮೂರ್ತಿ ರಥಾರೋಹಣ ಮಾಡಲಾಗುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಸ್ವಾಮಿಗಳ ಬದಲಾಗಿ ಜಯದೇವ ಜಗದ್ಗುರುಗಳ ಭಾವಚಿತ್ರದ ರಥಾರೋಹಣ ಮಾಡಲಾಗುತ್ತಿದೆ’ ಎಂದು ಹಿರಿಯ ಪತ್ರಕರ್ತ ಎಚ್.ಬಿ. ಮಂಜುನಾಥ್ ಮಾಹಿತಿ ನೀಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net