ಕೃತಕ ಬುದ್ಧಿಮತ್ತೆಗೆ ಭವಿಷ್ಯ

ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ, ಪಿ.ಜಿ. ವೈದ್ಯ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.  ಡಾ. ಎಚ್. ಸುದರ್ಶನ ಬಲ್ಲಾಳ್, ಡಾ. ಶುಕ್ಲಾ ಎಸ್. ಶೆಟ್ಟಿ ಇದ್ದರು.
ದಾವಣಗೆರೆಯ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ, ಪಿ.ಜಿ. ವೈದ್ಯ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು. ಡಾ. ಎಚ್. ಸುದರ್ಶನ ಬಲ್ಲಾಳ್, ಡಾ. ಶುಕ್ಲಾ ಎಸ್. ಶೆಟ್ಟಿ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿಕೆ
  • ಘಟಿಕೋತ್ಸವ ಸಮಾರಂಭ
  • 10,023 ಹೊಸ ವೈದ್ಯಕೀಯ ಸೀಟು ಲಭ್ಯ
ದಾವಣಗೆರೆ: ಟೆಲಿಮೆಡಿಸಿನ್ ಮತ್ತು ಕೃತಕ ಬುದ್ಧಿಮತ್ತೆ ಭವಿಷ್ಯದ ವೈದ್ಯಕೀಯ ಸೇವೆಯ ಕೇಂದ್ರ ವಾಗಲಿದೆ ಎಂದು ಸಂಸದೆ, ಬಾಪೂಜಿ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಸದಸ್ಯೆ ಡಾ.ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.
ನಗರದ ಜೆಜೆಎಂ ವೈದ್ಯಕೀಯ ಕಾಲೇಜಿನಲ್ಲಿ ಶನಿವಾರ, ಇದೇ ಪ್ರಥಮ ಬಾರಿಗೆ ಆಯೋಜಿಸಲಾಗಿದ್ದ ಪಿ.ಜಿ. ವೈದ್ಯ ವಿದ್ಯಾರ್ಥಿಗಳ ಘಟಿಕೋತ್ಸವ ಸಮಾರಂಭದಲ್ಲಿ ಮಾತನಾಡಿದರು.
ಕೇಂದ್ರ ಸಚಿವ ಸಂಪುಟವು 2028-29 ರೊಳಗೆ 10,023 ಹೊಸ ವೈದ್ಯಕೀಯ ಸೀಟು ಲಭ್ಯವಾಗುವಂತೆ ಕ್ರಮ ವಹಿಸಿದೆ. ಅದರಲ್ಲಿ 5,023 ಎಂಬಿಬಿಎಸ್ ಹಾಗೂ 5,000 ಪಿಜಿ ಸ್ಥಾಪನೆಗೆ 15,000 ಕೋಟಿ ಮಂಜೂರು ಮಾಡಿದೆ. ಇದು ದೇಶದ ಆರೋಗ್ಯ ಕ್ಷೇತ್ರಕ್ಕೆ ನೂತನ ಶಕ್ತಿ ನೀಡಲಿದೆ ಎಂದು ತಿಳಿಸಿದರು.
ವೈದ್ಯಕೀಯ ವೃತ್ತಿ ಕೇವಲ ಉದ್ಯೋಗವಲ್ಲ, ಅದು ದಯೆ, ನಿಷ್ಠೆ ಮತ್ತು ನಿಪುಣತೆಯ ಸೇವೆಯ ಧರ್ಮ. ಬಸವಣ್ಣ ಅವರು ಹೇಳಿದಂತೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ವೈದ್ಯರಿಗೆ ಸಮಾಜದಲ್ಲಿ ಗೌರವದ ಸ್ಥಾನವಿದೆ. ನಮಗೆ ನಾವು ಆತ್ಮಸಾಕ್ಷಿಗೆ ಬದ್ಧವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಜೆ.ಜೆ.ಎಂ ವೈದ್ಯಕೀಯ ಕಾಲೇಜು 1965 ರಿಂದ ವೈದ್ಯಕೀಯ ಶಿಕ್ಷಣ, ಸಂಶೋಧನೆ ಹಾಗೂ ಸಾಮಾಜಿಕ ಸೇವೆಯ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ವಿಶಿಷ್ಟ ಸ್ಥಾನವನ್ನು ಪಡೆದುಕೊಂಡಿದೆ. ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಆರೋಗ್ಯ ಶಿಬಿರಗಳು, ಕ್ಲಿನಿಕ್‌ಗಳು ಮತ್ತು ಔಟ್‌ರೀಚ್ ಕಾರ್ಯಕ್ರಮಗಳ ಮೂಲಕ ಸಮಾಜ ಸೇವೆ ಮಾಡುತ್ತಿದೆ. ವಿದ್ಯಾರ್ಥಿಗಳಿಗೆ ಅಂತಾರಾಷ್ಟ್ರೀಯ ಮಟ್ಟದ ಸಂಶೋಧನಾ ಅವಕಾಶಗಳನ್ನು ಕಲ್ಪಿಸಿದೆ ಎಂದರು.
‘ವೈದ್ಯರ ಗುರಿ ಕೇವಲ ಮರಣ ತಡೆಯುವುದಲ್ಲ, ಜೀವನದ ಗುಣಮಟ್ಟವನ್ನು ಸುಧಾರಿಸುವುದಾಗಿದೆ’ ಎಂಬ, ಅಮೆರಿಕದ ವೈದ್ಯ ಪ್ಯಾಚ್ ಆ್ಯಡಮ್ಸ್ ಅವರ ನುಡಿಗಳನ್ನು ಉಲ್ಲೇಖಿಸಿದರು. ನಿಮ್ಮ ಮುಂದಿನ ಪ್ರಯಾಣ ಶ್ರೇಷ್ಠತೆ ಮತ್ತು ಮಾನವೀಯತೆಯ ಮಾರ್ಗವಾಗಿರಲಿ. ಜೆ.ಜೆ.ಎಂ.ಎಂ.ಸಿ.ಯಿಂದ ಹೊರಟ ಪ್ರತಿಯೊಬ್ಬ ವೈದ್ಯರು ರೋಗಿಗಳಿಗೆ ಆಶಾಕಿರಣ, ಸಮಾಜಕ್ಕೆ ಸ್ಫೂರ್ತಿ ಮತ್ತು ರಾಷ್ಟ್ರಕ್ಕೆ ಆರೋಗ್ಯ ಭರವಸೆ ಆಗಲಿ ಎಂದು ಶುಭ ಹಾರೈಸಿದರು.
ಮಣಿಪಾಲ್ ಆಸ್ಪತ್ರೆಗಳ ಅಧ್ಯಕ್ಷ ಡಾ. ಎಚ್. ಸುದರ್ಶನ ಬಲ್ಲಾಳ್, ಕಾಲೇಜಿನ ಪ್ರಾಚಾರ್ಯೆ ಡಾ. ಶುಕ್ಲಾ ಎಸ್. ಶೆಟ್ಟಿ, ಬಾಪೂಜಿ ವಿದ್ಯಾ ಸಂಸ್ಥೆಯ ಕಿರುವಾಡಿ ಗಿರಿಜಮ್ಮ, ಡಾ.ಬಕ್ಕಪ್ಪ, ಡಾ. ಶ್ರೀನಿವಾಸ್ ಇದ್ದರು. ಘಟಿಕೋತ್ಸವದಲ್ಲಿ 15 ವಿಭಾಗಗಳ 173 ಸ್ನಾತಕೋತ್ತರ ವೈದ್ಯಕೀಯ ವಿದ್ಯಾರ್ಥಿಗಳಿಗೆ ಪದವಿಗಳನ್ನು ಪ್ರದಾನ ಮಾಡಲಾಯಿತು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net