ದಾವಣಗೆರೆಯ ದುರ್ಗಾಂಬಿಕಾ ದೇವಿ ಜಾತ್ರೆ ನಿಮಿತ್ತ, ಇರಾನ್‌ನ ಮಿರ್ಜಾ -ಮಹಾರಾಷ್ಟ್ರದ ರವಿರಾಜ್ ಜೋಡಿ ನಡುವಿನ ಕೊನೇ ಕುಸ್ತಿ ಪಂದ್ಯಕ್ಕೆ ಚಾಲನೆ ನೀಡಿದ ಸಂದರ್ಭದಲ್ಲಿ ಮುಖಂಡರಾದ ಯಶವಂತರಾವ್ ಜಾಧವ್, ಮಾಲತೇಶ ಪೈಲ್ವಾನ್, ಬಿ. ವೀರಣ್ಣ, ರಾಜನಹಳ್ಳಿ ಶಿವಕುಮಾರ್, ರಾಕೇಶ್ ಜಾಧವ್ ಇದ್ದರು.
ದಾವಣಗೆರೆ: ದಾವಣಗೆರೆಯ ಶ್ರೀ ದುರ್ಗಾಂಬಿಕಾ ದೇವಿ ಜಾತ್ರೆ ಅಂಗವಾಗಿ ಮೂರು ದಿನಗಳಿಂದ ಇಲ್ಲಿನ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಕುಸ್ತಿ ಅಖಾಡದಲ್ಲಿ ಆಯೋಜಿಸಿದ್ದ ಕುಸ್ತಿ ಪಂದ್ಯಾವಳಿ ಭಾನುವಾರ ರಾತ್ರಿ ಸಂಪನ್ನವಾಯಿತು.
1.25 ಕೆಜಿ ತೂಕದ (3 ಲಕ್ಷ ರೂ. ಮೌಲ್ಯದ) ಬೆಳ್ಳಿ ಗದೆ ಗೆಲುವಿಗಾಗಿ ನಿಗದಿಯಾಗಿದ್ದ ಅಂತಿಮ ಪಂದ್ಯದಲ್ಲಿ ಇರಾನ್ ರಾಷ್ಟ್ರ ಮಿರ್ಜಾ ಹಾಗೂ ಮಹಾರಾಷ್ಟ್ರದ ರವಿರಾಜ್ ಇಬ್ಬರ ಸೆಣಸಿದರು. ಧಡೂತಿ ಕಾಯದ ಮಿರ್ಜಾ, ಸಾಧಾರಣ ಮೈಕಟ್ಟಿನ ರವಿರಾಜ್ ಸಮಬಲದ ಹೋರಾಟ ನಡೆಸಿದರು. 43 ನಿಮಿಷದ ಕಾದಾಟ ನಡೆಸಿದರೂ ಫಲ ನೀಡಲಿಲ್ಲ.
ಕಡೆಗೆ ದುರ್ಗಾಂಬಿಕಾ ದೇವಸ್ಥಾನ ಸಮಿತಿ ತೀರ್ಮಾನದಂತೆ ಡ್ರಾ ಎಂದು ಘೋಷಿಸಲಾಯಿತು. ಇಬ್ಬರೂ ಕುಸ್ತಿಪಟುಗಳಿಗೂ ತಲಾ ಒಂದು ಲಕ್ಷ ರೂ. ಬಹುಮಾನ ವಿತರಿಸಲಾಯಿತು. ಆದರೆ, ನಿರ್ದಿಷ್ಟ ಜಯಶಾಲಿ ಆಗದೇ ಇದ್ದರಿಂದ ಮೂರನೇ ಬಾರಿಗೆ ಬೆಳ್ಳಿ ಗದೆ ಸಮಿತಿ ವಶದಲ್ಲೇ ಉಳಿಯುವಂತಾಯಿತು.
ಅಂತಿಮ ಪಂದ್ಯಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಚಾಲನೆ ನೀಡಿದರು. ಸಾದಿಕ್ ಪೈಲ್ವಾನ್ ಡ್ರಾ ಘೋಷಣೆ ಮಾಡುತ್ತಿದ್ದಂತೆ ಮಿರ್ಜಾ ಅಖಾಡದಿಂದ ಇರಾನ್‌ಗೆ ಹೊರಡುವ ಅವಸರದಲ್ಲಿದ್ದರು. ಸ್ಪಷ್ಟ ಗೆಲುವು ಆಗದ್ದರಿಂದ ಕುಸ್ತಿಪ್ರಿಯರು ನಿರಾಸೆಗೆ ಒಳಗಾದರು. ಮೂರನೇ ಬಾರಿಗೂ ಗದೆ ಉಳಿದ ಬಗ್ಗೆ ಜನರು ನಾನಾ ವಿಶ್ಲೇಷಣೆ ಮಾಡುತ್ತಲೇ ಮನೆಯತ್ತ ಹೆಜ್ಜೆ ಹಾಕಿದರು.
ಇರಾನ್‌ನಿಂದ ಬಂದಿದ್ದ ಮತ್ತೊಬ್ಬ ಸ್ಪರ್ಧಿ ಜಲಾಲ್ ಹಾಗೂ ಲಕ್ಕಿ ಕೊಯಿಲಿ ನಡುವಿನ ಎರಡನೇ ಪಂದ್ಯ ಕೂಡ ಡ್ರಾನಲ್ಲಿ ಕೊನೆಗೊಂಡಿತು. ಹರಿಯಾಣಾದ ವಿಕ್ಕಿ-ಕರ್ನಾಟಕದ ಕಾರ್ತೀಕ್ ಕಾಟೆ ನಡುವಿನ ಆಟ ಕೂಡ ಸಮವಾಯಿತು. ಸ್ಥಳೀಯ ಪಟು ಕೆರೆಗರಡಿ ಅರ್ಜುನ, ಕೊಲ್ಲಾಪುರ ರಾಮು ಅವರನ್ನು ಮಣಿಸಿದರು. ಮತ್ತೊಂದು ಪಂದ್ಯದ್ಲಲಿ ಹರಿಯಾಣದ ದಿಪಾಂಶು ಗೆಲುವು ಸಾಧಿಸಿದರು.
ಕೊನೆಯ ದಿನವಾದ ಭಾನುವಾರ 135 ಪಂದ್ಯಗಳು ನಡೆದವು. 2 ಎಲ್‌ಇಡಿ ಪರದೆ ಮೇಲೆ ಬಿತ್ತರವಾಗುತ್ತಿದ್ದ ಹೊನಲು ಬೆಳಕಿನ ಪಂದ್ಯಾವಳಿಯನ್ನು ದಾವಣಗೆರೆ ಹಾಗೂ ಸುತ್ತಮುತ್ತಲ ಜಿಲ್ಲೆಯವರು ಕಣ್ತುಂಬಿಕೊಂಡರು. ವಿಶೇಷ ಗ್ಯಾಲರಿಯಲ್ಲಿ ಕೂತಿದ್ದ ಜನರು ಶಿಳ್ಳೆ, ಕೇಕೆ ಹಾಕುತ್ತ ಸಂಭ್ರಮಿಸಿದರು. ಆಗಾಗ್ಗೆ ತಮಟೆ, ವಾಲಗ ವಾದನದೊಂದಿಗೆ ಕಲಾವಿದರು ರಂಜಿಸಿದರು.
ನಗರಸಭೆ ಮಾಜಿ ಅಧ್ಯಕ್ಷ ಬಿ. ವೀರಣ್ಣ, ದೂಡಾ ಮಾಜಿ ಅಧ್ಯಕ್ಷ ಯಶವಂತರಾವ್ ಜಾಧವ್, ಮಾಲತೇಶ ಜಾಧವ್, ರಾಜನಹಳ್ಳಿ ಶಿವಕುಮಾರ್, ಗೋಣೆಪ್ಪ, ಉಮೇಶ್‌ರಾವ್ ಸಾಳಂಕಿ, ಕಳಸಪ್ಪರ ಸುರೇಶ್, ಶ್ರೀನಿವಾಸ ದಾಸಕರಿಯಪ್ಪ, ಸಿದ್ದಪ್ಪ ಮೊದಲಾದವರು ತೀರ್ಪಿನ ಜತೆಗೆ ಕಾರ್ಯಕ್ರಮ ನಿರ್ವಹಣೆ ಮಾಡಿದರು.
ಮಂಡಕ್ಕಿ, ಪಾನಿಪುರಿ, ಶೇಂಗಾ, ನೀರಿನ ಬಾಟಲು, ಚಾಟ್ಸ್ ಮಾರಾಟಗಾರರಿಗೆ ಪಂದ್ಯಾವಳಿ ಜೇಬು ತುಂಬಿಸಿತು. ಕಳೆದ ಮೂರು ದಿನದಿಂದ 450ಕ್ಕೂ ಹೆಚ್ಚು ಪಂದ್ಯಗಳನ್ನು ಕಣ್ತುಂಬಿಕೊಂಡ ಜನರು ‘ಇನ್ನು ಎರಡು ವರ್ಷದ ನಂತರವೇ ಅಖಾಡಕ್ಕೆ ಬರಬೇಕು’ ಎಂದು ಗೊಣಗುತ್ತಲೇ ಹೆಜ್ಜೆ ಹಾಕಿದರು.